ಕನ್ನಡ ಸಿನಿಮಾಗಳಿಗೆ ಅನಾವೃಷ್ಟಿಯೇ? ಅತಿವೃಷ್ಟಿಯೇ? 15 ದಿನಗಳಲ್ಲಿ ಮೂರು ಸ್ಟಾರ್‌ ಚಿತ್ರಗಳು

ವರ್ಷ ಮುಗಿಯುತ್ತಾ ಬಂದಂತೆ ಬಿಡುಗಡೆಯಾಗುವ ನಿರೀಕ್ಷಿತ ಚಿತ್ರಗಳ ಸಂಖ್ಯೆ ಹೆಚ್ಚಾಗಿದ್ದು, ಡಿಸೆಂಬರ್ ತಿಂಗಳೊಂದರಲ್ಲೇ 15 ದಿನಗಳಲ್ಲಿ ಐವರು ಜನಪ್ರಿಯ ನಟರ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.;

Update: 2025-08-31 00:30 GMT

ಈ ವರ್ಷದ ಮೊದಲ ಎಂಟು ತಿಂಗಳು ಕನ್ನಡ ಚಿತ್ರರಂಗದಲ್ಲಿ 175ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ ಯಾವುದೇ ನಟರ, ದೊಡ್ಡ ಬಜೆಟ್‍ನ, ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಲಿಲ್ಲ. ಈಗ ವರ್ಷ ಮುಗಿಯುತ್ತಾ ಬಂದಂತೆ ಬಿಡುಗಡೆಯಾಗುವುದಕ್ಕೆ ನಿಂತಿರುವ ನಿರೀಕ್ಷಿತ ಚಿತ್ರಗಳ ಸಂಖ್ಯೆ ಹೆಚ್ಚಾಗಿದ್ದು, ಡಿಸೆಂಬರ್ ತಿಂಗಳೊಂದರಲ್ಲೇ 15 ದಿನಗಳಲ್ಲಿ ಐವರು ಜನಪ್ರಿಯ ನಟರ, ಮೂರು ನಿರೀಕ್ಷಿತ ಚಿತ್ರಗಳು ಬಿಡಗುಡೆಯಾಗುವುದಕ್ಕೆ ಸಜ್ಜಾಗಿವೆ.

ಈ ವರ್ಷದ ಮೊದಲ ಆರು ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ಅನಾವೃಷ್ಟಿ ಎಂದರೆ ತಪ್ಪಿಲ್ಲ. ಚಿತ್ರಗಳೇನೋ ಹೇರಳವಾಗಿ ಬಿಡುಗಡೆಯಾದವು. ಆದರೆ, ಸಣ್ಣ ಮತ್ತು ಮೀಡಿಯಂ ಹೀರೋಗಳ ಚಿತ್ರಗಳು ಬಿಡುಗಡೆಯಾದವೇ ಹೊರತು, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ದೊಡ್ಡ ಮಟ್ಟದಲ್ಲಿ ಕರೆತರುವ ಯಾವುದೇ ಸ್ಟಾರ್ ನಟರ ಚಿತ್ರಗಳು ಈ ಆರು ತಿಂಗಳಲ್ಲಿ ಬಿಡುಗಡೆಯಾಗಲೇ ಇಲ್ಲ.

ಅಕ್ಟೋಬರ್ 02ರಂದು ‘ಕಾಂತಾರ – ಚಾಪ್ಟರ್ 1’ ಬಿಡುಗಡೆ

ಈ ವರ್ಷದ ಮೊದಲ ಬಿಗ್‍ ಬಜೆಟ್‍ ಮತ್ತು ಸ್ಟಾರ್ ಚಿತ್ರವಾಗಿ ‘45’ ಬಿಡುಗಡೆ ಆಗಬೇಕಿತ್ತು. ಆ ಚಿತ್ರವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡದವರು ಆರು ತಿಂಗಳ ಮೊದಲು ಘೋಷಿಸಿದ್ದರು. ಆದರೆ, ಗ್ರಾಫಿಕ್ಸ್ ಕೆಲಸ ಮುಗಿಯದ ಕಾರಣ ಚಿತ್ರವನ್ನು ಅಂದುಕೊಂಡಂತೆ ಬಿಡುಗಡೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ವಿಚಿತ್ರವೆಂದರೆ, ವರ್ಷದ ಮೊದಲ ನಿರೀಕ್ಷಿತ ಚಿತ್ರವೇ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ನಿಗದಿಯಾಗಿತ್ತು. ಆ ನಂತರ ಅಕ್ಟೋಬರ್ 02ರಂದು ‘ಕಾಂತಾರ – ಚಾಪ್ಟರ್ 1’ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಯ್ತು. ಇದಾದ ಮೇಲೆ ಒಂದಿಷ್ಟು ಚಿತ್ರಗಳು ಇದ್ದವಾದರೂ, ಅದು ಇಂಥದ್ದೇ ದಿನಾಂಕ ನಿಶ್ಚಿತವಾಗಿ ಬಿಡುಗಡೆಯಾಗುತ್ತದೆ ಎಂದು ಹೇಳುವುದು ಕಷ್ಟವಾಗಿತ್ತು.

ಸ್ಟಾರ್ ನಟರಿಗೆ ಪ್ರೇಕ್ಷಕರ ಮೊದಲ ಪ್ರಾಶಸ್ತ್ಯ

ಒಂದು ಕಡೆ ಬೇರೆ ಭಾಷೆಯ ಹಲವು ದೊಡ್ಡ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದರೆ, ಕನ್ನಡದಲ್ಲಿ ಮಾತ್ರ ಕೊರತೆ ಎದ್ದು ಕಾಣುತ್ತಿತ್ತು. ಇದರಿಂದ ಚಿತ್ರರಂಗದ ಮೇಲೆ ನೇರ ಪರಿಣಾಮ ಬೀರುತ್ತಿತ್ತು. ಕನ್ನಡದಲ್ಲಿ ಚಿತ್ರಗಳಿಗೇನೂ ಕೊರತೆ ಇಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಚಿತ್ರಗಳೇನೋ ಬರುತ್ತಿವೆ. ಇದೊಂದೇ ವಾರ ಎಂಟು ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇಲ್ಲಿ ಬರೀ ಚಿತ್ರಗಳು ಮುಖ‍್ಯವಲ್ಲ. ಅದರಲ್ಲಿ ಯಾರಿದ್ದಾರೆ ಎಂಬುದು ಸಹ ಮುಖ್ಯ ಪಾತ್ರ ವಹಿಸುತ್ತದೆ. ಚಿತ್ರಗಳ ಸಂಖ್ಯೆ ಹೆಚ್ಚಾಗಿ, ಹೊಸಬರಿಂದ ಭ್ರಮನಿರಸನಗೊಂಡಿರುವ ಜನ ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟರ, ದೊಡ್ಡ ಬಜೆಟ್‍ನ ಚಿತ್ರಗಳಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ಒಂದು ಪಕ್ಷ ತುಂಬಾ ಒಳ್ಳೆಯ ಪ್ರತಿಕ್ರಿಯೆ ಬಂದರೆ ಮಾತ್ರ, ಚಿತ್ರದಲ್ಲಿ ಯಾರಿದ್ದಾರೆ ಎಂಬ ವಿಷಯವನ್ನು ಪಕ್ಕಕ್ಕಿಟ್ಟು ಚಿತ್ರ ನೋಡುತ್ತಿದ್ದಾರೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ಸ್ಪಷ್ಟವಾಗಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಸು ಫ್ರಮ್‍ ಸೋ’. ಇದೊಂದು ಚಿತ್ರ ಬಿಟ್ಟರೆ, ಇತ್ತೀಚೆಗೆ ಯಾವ ಚಿತ್ರಕ್ಕೂ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ನೋಡಿರಲಿಲ್ಲ.

ಸ್ಟಾರ್ ಚಿತ್ರಗಳಿಲ್ಲದೆ ಚಿತ್ರಮಂದಿರಗಳು ಖಾಲಿ

ಹಾಗಾಗಿ, ಈ ವರ್ಷದ ಹಲವು ವಾರಗಳ ಕಾಲ ಚಿತ್ರಮಂದಿರಗಳು ಪ್ರೇಕ್ಷಕರ ಕೊರತೆಯನ್ನು ಎದುರಿಸಿವೆ. ಇದೇ ಮುಂದುವರೆದರೆ, ಹಲವು ಚಿತ್ರಮಂದಿರಗಳಿಗೆ ಬೀಗ ಹಾಕಬೇಕಾದೀತು ಎಂದು ಹಲವು ಪ್ರದರ್ಶಕರು, ವಿತರಕರು ಮತ್ತು ನಿರ್ಮಾಪಕರು ಭಯ ವ್ಯಕ್ತಪಡಿಸಿದ್ದೂ ಇದೆ. ಚಿತ್ರಮಂದಿರಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ಟಾರ್ ನಟರು ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡಬೇಕು, ಯಾವಾಗಲೋ ಒಂದು ಚಿತ್ರ ಬರುವುದಲ್ಲ, ನಿರಂತರವಾಗಿ ಸ್ಟಾರ್ ಚಿತ್ರಗಳು ಬರುತ್ತಿರಬೇಕು ಎಂದು ಹಿರಿಯ ಪ್ರದರ್ಶಕ ಕೆ.ವಿ. ಚಂದ್ರಶೇಖರ್‍ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ.

ಇದೀಗ ಸಿನಿಮಾಗಳ ಅತಿವೃಷ್ಟಿಯ ಸಮಯ

ಕನ್ನಡ ಚಿತ್ರರಂಗದಲ್ಲಿ ಅನಾವೃಷ್ಟಿಯ ಅವಧಿ ಮುಗಿದಿದ್ದು, ಇದೀಗ ಅತೀವೃಷ್ಟಿಯ ಸಮಯ ಬಂದಿರುವಂತೆ ಕಾಣುತ್ತಿದೆ. ಒಂದೊಂದೇ ಚಿತ್ರತಂಡಗಳು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿದ್ದು, ಮೊದಲು ‘ಕಾಂತಾರ – ಚಾಪ್ಟರ್ 1’ ಬಿಡುಗಡೆಯಾಗಲಿದೆ. ಆ ನಂತರ ನವೆಂಬರ್ 14ರಂದು ಶಶಾಂಕ್‍ ನಿರ್ದೇಶನದ ‘ಬ್ರ್ಯಾಟ್‍’ ಚಿತ್ರ ಬರಲಿದೆ. ಡಿಸೆಂಬರ್ ತಿಂಗಳಲ್ಲಿ, ಕೇವಲ 15 ದಿನಗಳ ಅಂತರದಲ್ಲಿ ಕನ್ನಡದ ಮೂರು ಬಿಗ್‍ ಬಜೆಟ್‍ನ, ಸ್ಟಾರ್ ನಟರ ಮತ್ತು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ, ದರ್ಶನ್‍ ಅಭಿನಯದ ‘ದಿ ಡೆವಿಲ್‍’ ಚಿತ್ರವು ಡಿಸೆಂಬರ್ 12ರಂದು ಬಿಡುಗಡೆಯಾದರೆ, ಅದಾಗಿ ಎರಡೇ ವಾರಕ್ಕೆ ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್‍ ಬಿ. ಶೆಟ್ಟಿ ಅಭಿನಯದ ‘45’ ಹಾಗೂ ಸುದೀಪ್‍ ಅಭಿನಯದ 47ನೇ ಚಿತ್ರವಾದ ‘ಕಿಚ್ಚ 47’ ಚಿತ್ರವು ಕ್ರಿಸ್ಮಸ್‍ ಪ್ರಯುಕ್ತ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ.

ಇದೆಲ್ಲದರ ಜೊತೆಗೆ ‘ಜೋಗಿ’ ಪ್ರೇಮ್‍ ನಿರ್ದೇಶನದ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆಡಿ – ದಿ ಡೆವಿಲ್‍’ ಬಿಡುಗಡೆ ಯಾವಾಗ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಚಿತ್ರವನ್ನು ಅಕ್ಟೋಬರ್‍ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ಪ್ರೇಮ್‍ ಹೇಳಿಕೊಂಡಿದ್ದರು. ಆದರೆ, ಇದುವರೆಗೂ ಬಿಡುಗಡೆಯ ಸುದ್ದಿ ಇಲ್ಲ. ಡಿಸೆಂಬರ್ ತಿಂಗಳಲ್ಲಿ ಮೂರು ದೊಡ್ಡ ಚಿತ್ರಗಳು ಬಿಡುಗಡೆಗೆ ಸಜ್ಜಾಗಿರುವುದರಿಂದ ಡಿಸೆಂಬರ್ ತಿಂಗಳಲ್ಲಿ ‘ಕೆಡಿ’ ಬರುವುದಿಲ್ಲ. ಹಾಗಾಗಿ, ಅದಕ್ಕೂ ಮೊದಲೇ ಬರಬೇಕು? ಆದರೆ, ಯಾವಾಗ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಕನ್ನಡ ಚಿತ್ರರಂಗದ ಪಾಲಿಗೆ ಮೂರು ಮಹತ್ವದ ಚಿತ್ರಗಳು

ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಹೇಳುವುದಾದರೆ, ಮೂರೂ ಚಿತ್ರಗಳು ಕನ್ನಡ ಚಿತ್ರರಂಗದ ಪಾಲಿಗೆ ಮಹತ್ವದ ಚಿತ್ರಗಳು. ಏಕೆಂದರೆ, ಕನ್ನಡ ಚಿತ್ರರಂಗದ ಐವರು ಜನಪ್ರಿಯ ನಟರು ಈ ಚಿತ್ರಗಳ ಭಾಗವಾಗಿದ್ದಾರೆ. ಇದೊಂದು ಕಡೆಯಾದರೆ, ‘ಸು ಫ್ರಮ್ ಸೋ’ ಹೊರತುಪಡಿಸಿದರೆ, ಈ ವರ್ಷ ಯಾವೊಂದು ಚಿತ್ರ ಸಹ ಪ್ರೇಕ್ಷಕರನ್ನು ಚಿತ್ರಮಂದರಿಗಳಿಗೆ ದೊಡ್ಡ ಮಟ್ಟದಲ್ಲಿ ಸೆಳೆದೂ ಇಲ್ಲ, ದೊಡ್ಡ ಗಳಿಕೆಯನ್ನೂ ಮಾಡಿಲ್ಲ. ಈ ಮೂರೂ ಚಿತ್ರಗಳಿಗೆ ಜನರನ್ನು ಸೆಳೆಯುವ ಮತ್ತು ದೊಡ್ಡ ಗಳಿಕೆ ಮಾಡುವ ಸಾಮರ್ಥ್ಯವಿದೆ. ಈ ಚಿತ್ರಗಳು ಗೆದ್ದರೆ, ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಹೊಸ ಚೈತನ್ಯ ಬಂದಂತಾಗುತ್ತದೆ. ಹಾಗಾಗಿ, ಈ ಚಿತ್ರಗಳ ಮೇಲೆ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.

ಸಾಲುಸಾಲು ರಜೆಗಳಿಂದಾಗಿ ಆ ಸಮಯವೇ ಸೂಕ್ತ

15 ದಿನಗಳಲ್ಲಿ ಮೂರು ನಿರೀಕ್ಷೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಷಯವೇನೋ ಹೌದು. ಆದರೆ, ಈ ಕ್ಲಾಶ್‍ ಅವಶ್ಯಕವೇ ಎಂಬ ಪ್ರಶ್ನೆ ಸಹಜವೇ. ಇಲ್ಲಿ ಕ್ಲಾಶ್‍ ಎನ್ನುವುದಕ್ಕಿಂತ ಕ್ರಿಸ್ಮಸ್‍ ಸಮಯದಲ್ಲೇ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿರುವುದಕ್ಕೆ ಕಾರಣವಿದೆ. ಈ ಕುರಿತು ಮಾತನಾಡಿರುವ ‘45’ ಚಿತ್ರದ ನಿರ್ದೇಶಕ ಅರ್ಜುನ್‍ ಜನ್ಯ, ‘ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಆಗಸ್ಟ್‌ 15ರಂದು ನಮ್ಮ ಚಿತ್ರ ಬಿಡುಗಡೆ ಆಗಬೇಕಾಗಿತ್ತು. ಚಿತ್ರದ ಗ್ರಾಫಿಕ್ಸ್ ಕೆಲಸ ಮುಗಿಯದ ಕಾರಣ ಚಿತ್ರ ವಿಳಂಬವಾಗಿದೆ. ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬ ಹಾಗೂ ಕ್ರಿಸ್ಮಸ್ ರಜೆಯ ಸಮಯವಾದ್ದರಿಂದ ಸಾಲುಸಾಲು ರಜೆ ಸಿಗುತ್ತದೆ. ಇದರಿಂದ ಜನರು ಕುಟುಂಬ ಸಮೇತ ಚಿತ್ರ ನೋಡಲು‌ ಬರುವುದಕ್ಕೆ ಸಮಯ ಸಿಗುತ್ತದೆ. ಹಾಗಾಗಿ, ಆ ದಿವಸ ನಮ್ಮ ಚಿತ್ರವನ್ನು ಬಿಡುಗಡೆ‌ ಮಾಡುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.


ಇನ್ನು, ಕಳೆದ ವರ್ಷ ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರ ಕ್ರಿಸ್ಮಸ್‍ ದಿನದಂದು ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿಯಾಗಿದ್ದು ಒಂದು ಕಡೆಯಾದರೆ, ಸಾಲು ರಜೆ ಇರುವುದರಿಂದ ಆ ಸಮಯದಲ್ಲೇ ಚಿತ್ರ ಬಿಡುಗಡೆ ಮಾಡುವುದಕ್ಕೆ ಸುದೀಪ್‍ ಮುಂದಾಗಿದ್ದಾರೆ. ಕ್ರಿಸ್ಮಸ್‍ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಅವರು ಜುಲೈನಲ್ಲೇ ಒಮ್ಮೆ ಹೇಳಿದ್ದರು. ಈಗ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಅವರು ಅಧಿಕೃತವಾಗಿ ಘೋಷಿಸಲಿದ್ದಾರೆ.

ಆ ನಂತರ ಮತ್ತೆ ಒಂದಿಷ್ಟು ಸಮಯ ಶೂನ್ಯ

ಒಟ್ಟೊಟ್ಟಿಗೆ ಚಿತ್ರಗಳೇನೋ ಬಿಡುಗಡೆಯಾಗುತ್ತವೆ. ಆ ನಂತರವೇನು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಮೊದಲಿಗೆ ಹೀಗೆ ಮೂರ್ಮೂರು ದೊಡ್ಡ ಚಿತ್ರಗಳು ಬಿಡುಗಡೆಯಾದರೆ, ಸಹಜವಾಗಿಯೇ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಒಂದು ಚಿತ್ರ ಯಶಸ್ವಿಯಾದರಂತೂ, ಇನ್ನೊಂದು ಚಿತ್ರಕ್ಕೆ ಚಿತ್ರಮಂದಿರಗಳ ಕೊರತೆ ಕಾಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಮಧ್ಯೆ, ಯುದ್ಧವೇ ನಡೆಯುತ್ತದೆ. ಆ ನಂತರದ ಬಗ್ಗೆ ಯೋಚಿಸಿದರೆ, ಹೀಗೆ ಒಂದರಹಿಂದೊಂದು ಚಿತ್ರಗಳು ಬಿಡುಗಡೆಯಾಗಿ, ಮತ್ತೆ ಒಂದಿಷ್ಟು ತಿಂಗಳುಗಳ ಕಾಲ ಯಾವುದೇ ಚಿತ್ರಗಳೇ ಇರುವುದಿಲ್ಲ. ಆಗ ಮತ್ತೆ ಅದೇ ಹೊಸಬರ ಚಿತ್ರಗಳ ಬಿಡುಗಡೆ, ಇದರಿಂದ ಚಿತ್ರಮಂದಿರಗಳು ಖಾಲಿಯಾಗುವ ಪರಿಸ್ಥಿತಿ ಎದುರಾಗುತ್ತದೆ. ಅದರ ಬದಲು ನಿಯಮಿತವಾಗಿ ತಿಂಗಳು, ಎರಡು ತಿಂಗಳಿಗಳಿಗೆ ಒಬ್ಬ ಸ್ಟಾರ್‍ ನಟರ ಚಿತ್ರವಾದರೂ ಬಿಡುಗಡೆಯಾದರೆ ಯಾವುದೇ ಸಮಸ್ಯೆ ಇರುವುದಿಲ್ಲ.

Tags:    

Similar News