ಮೀರಾ ನಾಯರ್ ಪುತ್ರ ನ್ಯೂಯಾರ್ಕ್ ನೂತನ ಮೇಯರ್; ವಿವಾದಿತ 'ಕಾಮಸೂತ್ರ' ಚಿತ್ರ ಮತ್ತೆ ಮುನ್ನೆಲೆಗೆ
ಜೊಹ್ರಾನ್ ಮಮ್ದಾನಿ ಅವರ ಗೆಲುವಿನ ಬೆನ್ನಲ್ಲೇ, ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗಿದೆ. ಇದು ಮೀರಾ ನಾಯರ್ ಅವರ 1996ರ 'ಕಾಮಸೂತ್ರ: ಎ ಟೇಲ್ ಆಫ್ ಲವ್' ಚಿತ್ರದ ಒಂದು ನೃತ್ಯದ ದೃಶ್ಯ.
ಅಮೆರಿಕದ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿರುವ ಜೊಹ್ರಾನ್ ಮಮ್ದಾನಿ, ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ, ಅವರ ತಾಯಿ, ವಿಶ್ವವಿಖ್ಯಾತ ಸಿನಿಮಾ ನಿರ್ದೇಶಕಿ ಭಾರತೀಯ ಮೂಲದ ಮೀರಾ ನಾಯರ್ ಅವರ ಸಿನಿಮಾಗಳು ಮತ್ತು ಅವುಗಳ ಸುತ್ತಲಿನ ವಿವಾದಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಮುಖವಾಗಿ ಅವರ ನಿರ್ದೇಶನದ ಕಾಮಸೂತ್ರ ಸಿನಿಮಾ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ.
ಜೊಹ್ರಾನ್ ಮಮ್ದಾನಿ ಅವರ ಗೆಲುವಿನ ಬೆನ್ನಲ್ಲೇ, ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ಎಕ್ಸ್ (ಹಿಂದಿನ ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗಿದೆ. ಇದು ಮೀರಾ ನಾಯರ್ ಅವರ 1996ರ 'ಕಾಮಸೂತ್ರ: ಎ ಟೇಲ್ ಆಫ್ ಲವ್' ಚಿತ್ರದ ಒಂದು ನೃತ್ಯದ ದೃಶ್ಯ. ಈ ಮೂಲಕ ಮಗನ ಗೆಲುವಿನ ಬಳಿಕ ಮೀರಾ ಅವರ ಸಿನಿಮಾ ಕಲೆಯ ಸಾಮರ್ಥ್ಯದ ಚರ್ಚೆ ಆರಂಭವಾಗಿದೆ.
ಮೀರಾ ನಾಯರ್: ಗಡಿಗಳನ್ನು ಮೀರಿದ ನಿರ್ದೇಶಕಿ
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮೀರಾ ನಾಯರ್, ಸಮಾಜದ ಕಟು ವಾಸ್ತವಗಳನ್ನು ಮತ್ತು ಸಂಕೀರ್ಣ ಮಾನವ ಸಂಬಂಧಗಳನ್ನು ತೆರೆಯ ಮೇಲೆ ತಂದವರು. ಅವರ ಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಸಾಮಾಜಿಕ ಮತ್ತು ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದ್ದವು. ಅಂಥ ಕೆಲವು ಸಿನಿಮಾಗಳ ಪಟ್ಟಿ ಈ ಕೆಳಗೆ ನೀಡಲಾಗಿದೆ.
ಸಲಾಮ್ ಬಾಂಬೆ! (1988): ಮುಂಬೈನ ಬೀದಿ ಮಕ್ಕಳ ಬದುಕಿನ ಕರಾಳ ವಾಸ್ತವವನ್ನು ಜಗತ್ತಿನ ಮುಂದೆ ಇಟ್ಟ ಈ ಚಿತ್ರ, ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಬಡತನ, ಮಾದಕ ವ್ಯಸನ ಮತ್ತು ಬಾಲಾಪರಾಧದಂತಹ ವಿಷಯಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿದ್ದ ಈ ಸಿನಿಮಾ, ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದರೂ, ಭಾರತದಲ್ಲಿ ಕೆಲವರಿಂದ "ದೇಶದ ಬಡತನವನ್ನು ಪ್ರದರ್ಶನಕ್ಕಿಟ್ಟಿದೆ" ಎಂಬ ಟೀಕೆಗೆ ಗುರಿಯಾಗಿತ್ತು.
ಮಾನ್ಸೂನ್ ವೆಡ್ಡಿಂಗ್ (2001): ದೆಹಲಿಯ ಒಂದು ಪಂಜಾಬಿ ಕುಟುಂಬದ ಮದುವೆಯ ಸಂಭ್ರಮದ ಹಿನ್ನೆಲೆಯಲ್ಲಿ, ಲೈಂಗಿಕ ದೌರ್ಜನ್ಯ, ಕುಟುಂಬದ ರಹಸ್ಯಗಳಂತಹ ಗಂಭೀರ ವಿಷಯಗಳನ್ನು ಈ ಚಿತ್ರ ಅನಾವರಣಗೊಳಿಸಿತ್ತು. ಹಾಸ್ಯ, ಪ್ರೇಮ ಮತ್ತು ನೋವಿನ ಸಂಮಿಶ್ರಣದಂತಿದ್ದ ಈ ಚಿತ್ರ, ವೆನಿಸ್ ಚಲನಚಿತ್ರೋತ್ಸವದಲ್ಲಿ 'ಗೋಲ್ಡನ್ ಲಯನ್' ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತ್ತು.
ದಿ ನೇಮ್‌ಸೇಕ್ (2006): ಜುಂಬಾ ಲಾಹಿರಿ ಅವರ ಕಾದಂಬರಿ ಆಧಾರಿತ ಈ ಚಿತ್ರ, ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ವಲಸಿಗರ ಗುರುತಿನ ಬಿಕ್ಕಟ್ಟು, ತಲೆಮಾರುಗಳ ಸಂಘರ್ಷ ಮತ್ತು ಸಾಂಸ್ಕೃತಿಕ ಬೇರುಗಳ ಹುಡುಕಾಟವನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟಿತು. ಇರ್ಫಾನ್ ಖಾನ್ ಮತ್ತು ಟಬು ಅವರ ಅದ್ಭುತ ನಟನೆ ಈ ಚಿತ್ರದ ಯಶಸ್ಸಿಗೆ ಕಾರಣವಾಗಿತ್ತು.
ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ (2012): 9/11ರ ನಂತರ ಅಮೆರಿಕದಲ್ಲಿ ಮುಸ್ಲಿಮರು ಎದುರಿಸುವ ತಾರತಮ್ಯ ಮತ್ತು ಜಾಗತಿಕ ರಾಜಕೀಯದ ಸಂಕೀರ್ಣತೆಯನ್ನು ಈ ಚಿತ್ರದಲ್ಲಿ ವ್ಯಕ್ತಪಡಿಸಲಾಗಿತ್ತು. ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧಗಳ ಸೂಕ್ಷ್ಮತೆಯನ್ನು ನಿರೂಪಿಸಿದ್ದರಿಂದ, ಈ ಚಿತ್ರವು ಪಾಕಿಸ್ತಾನದಲ್ಲಿ ನಿರ್ಬಂಧಗಳನ್ನು ಎದುರಿಸಬೇಕಾಯಿತು ಮತ್ತು ಭಾರತದಲ್ಲೂ ಚರ್ಚೆಗೆ ಗ್ರಾಸವಾಗಿತ್ತು..
'ಕಾಮಸೂತ್ರ' ಮತ್ತು ವಿವಾದಗಳು
ಮೀರಾ ನಾಯರ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ವಿವಾದಕ್ಕೆ ಕಾರಣವಾದ ಚಿತ್ರ 'ಕಾಮಸೂತ್ರ: ಎ ಟೇಲ್ ಆಫ್ ಲವ್' (1996). 16ನೇ ಶತಮಾನದ ಭಾರತದ ಹಿನ್ನೆಲೆಯಲ್ಲಿ ಪ್ರೀತಿ, ದ್ವೇಷ, ಅಧಿಕಾರ ಮತ್ತು ಲೈಂಗಿಕತೆಯನ್ನು ಈ ಚಿತ್ರ ಅನಾವರಣಗೊಳಿಸಿತ್ತು. ರೇಖಾ, ಇಂದಿರಾ ವರ್ಮಾ ಮತ್ತು ಸರಿತಾ ಚೌಧರಿ ಪ್ರಮುಖ ಪಾತ್ರಗಳಲ್ಲಿದ್ದರು. ಚಿತ್ರದ ದಿಟ್ಟ ಲೈಂಗಿಕ ದೃಶ್ಯಗಳಿಂದಾಗಿ, ಭಾರತದಲ್ಲಿ ಸೆನ್ಸಾರ್ ಮಂಡಳಿಯು ಇದನ್ನು ನಿಷೇಧಿಸಿತ್ತು.
ಈ ಚಿತ್ರವು ಭಾರತೀಯ ಸಂಸ್ಕೃತಿಯನ್ನು ತಪ್ಪಾಗಿ ನಿರೂಪಿಸುತ್ತಿದೆ ಮತ್ತು ಕೇವಲ ಪಾಶ್ಚಿಮಾತ್ಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ನಿರ್ಮಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ, ಮೀರಾ ನಾಯರ್ ಅವರು "ಈ ಚಿತ್ರವು ಮಹಿಳೆಯರ ಲೈಂಗಿಕ ಸ್ವಾತಂತ್ರ್ಯ ಮತ್ತು ಅಧಿಕಾರದ ರಾಜಕಾರಣವನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ಶರೀರದ ಆಚರಣೆಯಲ್ಲ, ಅದೊಂದು ಕಲೆ ಮತ್ತು ಶಕ್ತಿ" ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು.
ಮಗನ ಗೆಲುವಿನ ಬಳಿಕ ಮತ್ತೆ ಸುದ್ದಿಯಾದ ಮೀರಾ
ಜೊಹ್ರಾನ್ ಮಮ್ದಾನಿ ಅವರ ಗೆಲುವಿನ ನಂತರ, ಮೀರಾ ನಾಯರ್ ಅವರ ಹಿಂದಿನ ಹೇಳಿಕೆಗಳು ಮತ್ತು ನಿಲುವುಗಳು ಮತ್ತೆ ಚರ್ಚೆಗೆ ಬಂದಿವೆ. 2013ರಲ್ಲಿ, "ನನ್ನ ಮಗ ಯಾವುದೇ ಅಮೆರಿಕನ್ ಅಲ್ಲ" ಎಂದು ಅವರು ನೀಡಿದ್ದ ಹೇಳಿಕೆ ಈಗಿನ ಸಂದರ್ಭದಲ್ಲಿ ಹೊಸ ಅರ್ಥಗಳನ್ನು ಪಡೆಯುತ್ತಿದೆ. ಮಮ್ದಾನಿ ತಮ್ಮ ವಿಜಯೋತ್ಸವದ ಭಾಷಣದಲ್ಲಿ, "ನ್ಯೂಯಾರ್ಕ್ ವಲಸಿಗರಿಂದ ನಿರ್ಮಿಸಲ್ಪಟ್ಟ, ವಲಸಿಗರಿಂದ ನಡೆಸಲ್ಪಡುವ ಮತ್ತು ಇಂದಿನಿಂದ ಒಬ್ಬ ವಲಸಿಗನಿಂದ ಮುನ್ನಡೆಸಲ್ಪಡುವ ನಗರ" ಎಂದು ಹೇಳುವ ಮೂಲಕ, ತಮ್ಮ ತಾಯಿಯ ಚಿಂತನೆಗಳನ್ನು ಪ್ರತಿಧ್ವನಿಸಿದ್ದರು.
ಮೀರಾ ಆರಂಭಿಕ ಜೀವನ ಮತ್ತು ಶಿಕ್ಷಣ
ಮೀರಾ ನಾಯರ್ ಅವರು 1957ರ ಅಕ್ಟೋಬರ್ 15ರಂದು ಒಡಿಶಾದ ರೂರ್ಕೆಲಾದಲ್ಲಿ ಪಂಜಾಬಿ ಹಿಂದೂ ಕುಟುಂಬದಲ್ಲಿ ಜನಿಸಿದ್ದರು ಅವರ ತಂದೆ ಅಮೃತ್ ಲಾಲ್ ನಾಯರ್, ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದರು ಮತ್ತು ತಾಯಿ ಪ್ರವೀಣ್ ನಾಯರ್, ಸಮಾಜ ಸೇವಕಿಯಾಗಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪದವಿ ಪಡೆದ ನಂತರ, ಮೀರಾ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಪಡೆದರು. ಅಲ್ಲಿಯೇ ಅವರ ಸಿನಿಮಾ ಪಯಣ ಆರಂಭವಾಯಿತು. ಆರಂಭದಲ್ಲಿ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಮೀರಾ, ನಂತರ ಮುಖ್ಯವಾಹಿನಿಯ ಸಿನಿಮಾಗಳಿಗೆ ಪ್ರವೇಶ ಮಾಡಿದ್ದರು.
ಮೀರಾ ನಾಯರ್ ಅವರು ಎರಡು ಬಾರಿ ವಿವಾಹವಾಗಿದ್ದಾರೆ. ಅವರ ಮೊದಲ ಪತಿ ಛಾಯಾಗ್ರಾಹಕ ಮಿಚ್ ಎಪ್ಸ್ಟೀನ್. ನಂತರ ಅವರು ಉಗಾಂಡಾದ ಖ್ಯಾತ ಅಂಕಣಕಾರ ಮತ್ತು ರಾಜಕೀಯ ವಿಶ್ಲೇಷಕ ಮಹಮೂದ್ ಮಮ್ದಾನಿ ಅವರನ್ನು ವಿವಾಹವಾದರು. ಮಹಮೂದ್ ಮಮ್ದಾನಿ (ಏಪ್ರಿಲ್ 23, 1946) ಅವರು ಉಗಾಂಡಾ ಮೂಲದವರಾಗಿದ್ದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ವಸಾಹತುಶಾಹಿ, ಉತ್ತರ-ವಸಾಹತುಶಾಹಿ ಮತ್ತು ಆಫ್ರಿಕಾದ ರಾಜಕೀಯದ ಬಗ್ಗೆ ತಮ್ಮ ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. 1972ರಲ್ಲಿ ಉಗಾಂಡಾದ ಸರ್ವಾಧಿಕಾರಿ ಈದಿ ಅಮೀನ್‌ನಿಂದ ಜನಾಂಗೀಯ ಕಾರಣಗಳಿಗಾಗಿ ದೇಶದಿಂದ ಹೊರಹಾಕಲ್ಪಟ್ಟಿದ್ದರು. ನಂತರ ಅವರು ಮತ್ತೆ ಉಗಾಂಡಾಗೆ ಮರಳಿ, ಅಲ್ಲಿನ ಮಕೆರೆರೆ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಜೊಹ್ರಾನ್ ಮಮ್ದಾನಿ ಈಗ ವಿಶ್ವ ಪ್ರಸಿದ್ಧ
ಪುತ್ರ ಜೊಹ್ರಾನ್ ಕ್ವಾಮೆ ಮಮ್ದಾನಿ ಉಗಾಂಡಾದ ಕಂಪಾಲಾದಲ್ಲಿ ಜನಿಸಿದ ಅವರು, 7ನೇ ವಯಸ್ಸಿನಲ್ಲಿ ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್‌ಗೆ ತೆರಳಿದ್ದರು. ರಾಜಕೀಯಕ್ಕೆ ಬರುವ ಮುನ್ನ, ಅವರು ಸಂಗೀತಗಾರರಾಗಿ ಮತ್ತು ವಸತಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ನ್ಯೂಯಾರ್ಕ್ ರಾಜ್ಯ ಅಸೆಂಬ್ಲಿಗೆ ಆಯ್ಕೆಯಾದ ಅವರು, ಡೆಮಾಕ್ರಟಿಕ್ ಸಮಾಜವಾದಿ ವಿಚಾರಧಾರೆಗಳಿಗೆ ಹೆಸರುವಾಸಿಯಾಗಿದ್ದಾರೆ.