ಸಿನಿಮಾಕ್ಕೆ ಗರಿಷ್ಠ 200 ರೂ. ಟಿಕೆಟ್ ದರ: ಕೋರ್ಟ್​ ಮೆಟ್ಟಿಲೇರಿದ 'ಹೊಂಬಾಳೆ' ಸಂಸ್ಥೆ

ಮಲ್ಟಿಪ್ಲೆಕ್ಸ್ ಒಕ್ಕೂಟದ ಜೊತೆಗೆ, 'ಕಾಂತಾರ' ಖ್ಯಾತಿಯ ಹೊಂಬಾಳೆ ಫಿಲ್ಮ್ಸ್, ವಿಕೆ ಫಿಲ್ಮ್ಸ್, ಮತ್ತು ಕೀಸ್ಟೋನ್ ಎಂಟರ್‌ಟೈನ್‌ಮೆಂಟ್‌ನಂತಹ ಸಂಸ್ಥೆಗಳು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.;

Update: 2025-09-15 16:11 GMT
Click the Play button to listen to article

ರಾಜ್ಯದಾದ್ಯಂತ ಸಿನಿಮಾ ಟಿಕೆಟ್ ದರವನ್ನು 200 ರೂಪಾಯಿಗೆ ಸೀಮಿತಗೊಳಿಸಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಏಕರೂಪ ದರ ನೀತಿಯು, ಇದೀಗ ಕಾನೂನು ಸಮರಕ್ಕೆ ಕಾರಣವಾಗಿದೆ. ಸರ್ಕಾರದ ಈ ನಿಯಮವನ್ನು ವಿರೋಧಿಸಿ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಹಾಗೂ 'ಹೊಂಬಾಳೆ ಫಿಲ್ಮ್ಸ್' ಸೇರಿದಂತೆ ಹಲವು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ಮಂಗಳವಾರ (ಸೆಪ್ಟೆಂಬರ್ 16) ನಡೆಯಲಿದೆ.

ಸೆಪ್ಟೆಂಬರ್ 12, 2025 ರಿಂದ ಜಾರಿಗೆ ಬಂದಿರುವ ಕರ್ನಾಟಕ ಸಿನೆಮಾ (ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2025ರ ಅನ್ವಯ, ರಾಜ್ಯದ ಎಲ್ಲಾ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಲನಚಿತ್ರಗಳ ಟಿಕೆಟ್‌ನ ಮೂಲಬೆಲೆಯನ್ನು 200 ರೂಪಾಯಿಗೆ ಮಿತಿಗೊಳಿಸಲಾಗಿದೆ. ಶೇ.18ರಷ್ಟು ಜಿಎಸ್‌ಟಿ ಸೇರಿ, ಟಿಕೆಟ್‌ನ ಅಂತಿಮ ದರವು 236 ರೂಪಾಯಿಗಳನ್ನು ಮೀರುವಂತಿಲ್ಲ. ಆದಾಗ್ಯೂ, 75 ಅಥವಾ ಅದಕ್ಕಿಂತ ಕಡಿಮೆ ಆಸನಗಳಿರುವ 'ಪ್ರೀಮಿಯಂ' ಅಥವಾ 'ಗೋಲ್ಡ್ ಕ್ಲಾಸ್' ಸೌಲಭ್ಯಗಳಿಗೆ ಈ ದರ ಮಿತಿಯಿಂದ ವಿನಾಯಿತಿ ನೀಡಲಾಗಿದೆ.

ಕೋರ್ಟ್ ಮೆಟ್ಟಿಲೇರಿದ್ದೇಕೆ?

ಸರ್ಕಾರದ ಈ ನಿರ್ಧಾರವು ಸಿನಿಮಾ ಉದ್ಯಮದ, ವಿಶೇಷವಾಗಿ ದೊಡ್ಡ ಬಜೆಟ್ ಚಿತ್ರಗಳ ಮತ್ತು ಮಲ್ಟಿಪ್ಲೆಕ್ಸ್‌ಗಳ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ನಿರ್ಮಾಪಕರು ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರು ವಾದಿಸಿದ್ದಾರೆ. ಬಾಕ್ಸ್ ಆಫೀಸ್ ಗಳಿಕೆಯನ್ನು ಚಿತ್ರದ ನಿರ್ಮಾಪಕರು ಮತ್ತು ಪ್ರದರ್ಶಕರು ಹಂಚಿಕೊಳ್ಳುವುದರಿಂದ, ಟಿಕೆಟ್ ದರವನ್ನು ಮಿತಿಗೊಳಿಸುವುದು ತಮ್ಮ ಆದಾಯಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬುದು ಅವರ ಆತಂಕ.

ಈ ಹಿನ್ನೆಲೆಯಲ್ಲಿ, ಮಲ್ಟಿಪ್ಲೆಕ್ಸ್ ಒಕ್ಕೂಟದ ಜೊತೆಗೆ, 'ಕಾಂತಾರ' ಖ್ಯಾತಿಯ ಹೊಂಬಾಳೆ ಫಿಲ್ಮ್ಸ್, ವಿಕೆ ಫಿಲ್ಮ್ಸ್, ಮತ್ತು ಕೀಸ್ಟೋನ್ ಎಂಟರ್‌ಟೈನ್‌ಮೆಂಟ್‌ನಂತಹ ಸಂಸ್ಥೆಗಳು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.

'ಕಾಂತಾರ: ಚಾಪ್ಟರ್ 1' ಮೇಲೆ ಪರಿಣಾಮ?

ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ 'ಕಾಂತಾರ: ಚಾಪ್ಟರ್ 1' ಚಿತ್ರದ ಮೇಲೆ ಈ ಹೊಸ ನಿಯಮವು ಪರಿಣಾಮ ಬೀರುವ ಆತಂಕ ಎದುರಾಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿರುವ ಈ ಚಿತ್ರವು, ಮೊದಲ ದಿನವೇ ದಾಖಲೆ ಗಳಿಕೆ ಮಾಡುವ ನಿರೀಕ್ಷೆಯಲ್ಲಿದೆ. ಆದರೆ, ಟಿಕೆಟ್ ದರ ಮಿತಿಯಿಂದಾಗಿ, ಚಿತ್ರದ ಒಟ್ಟಾರೆ ಕಲೆಕ್ಷನ್‌ಗೆ ಹೊಡೆತ ಬೀಳಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ 2017ರಲ್ಲಿಯೂ ಸಿದ್ದರಾಮಯ್ಯನವರ ಸರ್ಕಾರವು ಇದೇ ರೀತಿಯ ದರ ಮಿತಿಯನ್ನು ಜಾರಿಗೆ ತಂದಿತ್ತು. ಆಗಲೂ ಮಲ್ಟಿಪ್ಲೆಕ್ಸ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿ, ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೊಮ್ಮೆ ಸರ್ಕಾರ ಮತ್ತು ಸಿನಿಮಾ ಉದ್ಯಮದ ನಡುವಿನ ಈ ಸಂಘರ್ಷವು ನ್ಯಾಯಾಲಯದ ಅಂಗಳ ತಲುಪಿದ್ದು, ಹೈಕೋರ್ಟ್ ನೀಡುವ ತೀರ್ಪು ಕುತೂಹಲ ಕೆರಳಿಸಿದೆ. 

Tags:    

Similar News