ಮಣಿಪುರ ಹಿಂಸಾಚಾರ: ಮೋದಿ ಮೌನ ಪ್ರಶ್ನಿಸಿದ ನಟ ಕಿಶೋರ್‌

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಬಹುಭಾಷಾ ನಟ ಕಿಶೋರ್‌ ಪ್ರಶ್ನಿಸಿದ್ದಾರೆ.;

Update: 2024-02-05 06:30 GMT

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಬಹುಭಾಷಾ ನಟ ಕಿಶೋರ್‌ ಪ್ರಶ್ನಿಸಿದ್ದಾರೆ.

ಮಣಿಪುರ ಹಿಂಸಾಚಾರ ದೇಶದಲ್ಲೇ ದೊಡ್ಡಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಈ ವಿಚಾರವಾಗಿ ಸಿನಿಮಾ ಉದ್ಯಮದ ನಾಸಿರುದ್ದೀನ್ ಷಾ, ಪ್ರಕಾಶ್ ರೈ, ಜಾವೇದ್ ಅಖ್ತರ್, ಸ್ವರಾ ಭಾಸ್ಕರ್ ಸೇರಿದಂತೆ ಕೆಲವರು ಆ ಬಗ್ಗೆ ಮಾತನಾಡಿದ್ದು, ಇದೀಗ ನಟ ಕಿಶೋರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಮಣಿಪುರ ಹಿಂಸಾಚಾರದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

“ಮಣಿಪುರದಲ್ಲಿ ನಮ್ಮವರೇ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಆದರೆ ನಮ್ಮ ಹಣದಿಂದ ಜೀವನ ಸಾಗಿಸುವವರು ನಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಇತರರನ್ನು ಟೀಕಿಸಿ, ಅಪಹಾಸ್ಯ ಮಾಡುವುದರಲ್ಲೇ ಸಂತೋಷ ಪಡುತ್ತಿದ್ದಾರೆ. ಅಷ್ಟೇ ಅಲ್ಲದೆ, ತಮ್ಮದೇ ಆದ ಹೊಗಳಿಕೆ ಮತ್ತು ಸುಳ್ಳುಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಕೊಳಕು ರಾಜಕೀಯ ವ್ಯವಸ್ಥೆ ಮತ್ತು ನ್ಯಾಯಾಂಗ ನಿದ್ರೆಗೆ ಜಾರಿರುವುದೇ ಈ ಬೆಳವಣಿಗೆಗೆ ಕಾರಣ” ಎಂದು ಕಿಶೋರ್‌ ಮೋದಿಯವರನ್ನು ಕಟುವಾಗಿ ಟೀಕಿಸಿದ್ದಾರೆ.

ನಟನಾದ ಸಾಮಾಜಿಕ ಪ್ರಜ್ಞೆಯುಳ್ಳ ಶಿಕ್ಷಕ

ನಟ ಕಿಶೋರ್‌ ಒಬ್ಬ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿದ್ದರು. 19 ವರ್ಷಗಳ ಹಿಂದೆ ಕನ್ನಡದ ಕಂಠಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಖ್ಯಾತ ನಟರಾಗಿ ಗುರುತಿಸಲ್ಪಟ್ಟರು. ಇವರು ಕನ್ನಡ, ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು 135 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಆರು ಪ್ರಮುಖ ವೆಬ್-ಸರಣಿಗಳಲ್ಲಿ ನಟಿಸಿದ್ದಾರೆ. 2013 ರಲ್ಲಿ ತೆರೆಕಂಡ ತಮಿಳಿನ ʼವನಯುದ್ಧಂʼನಲ್ಲಿ ಕಾಡುಗಳ್ಳ ವೀರಪ್ಪನ್ ಪಾತ್ರ ಕಿಶೋರ್‌ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು.

ಪೊನ್ನಿಯಿನ್ ಸೆಲ್ವನ್ ಭಾಗ I ಮತ್ತು ಭಾಗ II, ದಿ ಫ್ಯಾಮಿಲಿ ಮ್ಯಾನ್ ಮತ್ತು ಕಾಂತಾರ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ಯಾನ್-ಇಂಡಿಯನ್ ಮನ್ನಣೆಯನ್ನು ಪಡೆದರು. ಇತ್ತೀಚೆಗೆ ಬಿಡುಗಡೆಯಾದ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದಲ್ಲಿ ಜಾಫರ್ ಪಾತ್ರದಲ್ಲಿ ಅವರ ಅಭಿನಯವು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿತ್ತು. ಇವರು ಕೇವಲ ನಟರಾಗಿ ಮಾತ್ರ ಗುರುತಿಸಿಕೊಳ್ಳದೆ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಷಯಗಳ ಬಗ್ಗೆ ಯಾವಾಗಲೂ ಧ್ವನಿ ಎತ್ತುವಲ್ಲಿ ಮೊದಲಿಗರಾಗಿದ್ದಾರೆ.

ಕಿಶೋರ್ ಟ್ವಿಟರ್ ಖಾತೆ ಅಮಾನತು

ಈ ಮೊದಲು ದೆಹಲಿಯಲ್ಲಿ ನಡೆಯುತ್ತಿದ್ದ, ರೈತರ ಸಮಸ್ಯೆಗಳ ಕುರಿತಂತೆ ನಟ ಕಿಶೋರ್‌ ತಮ್ಮ ಟ್ಟಿಟ್ಟರ್‌ ಖಾತೆಯಲ್ಲಿ ಟ್ವೀಟ್ ಮಾಡಿದ್ದರು. ಇದರಿಂದಾಗಿ ನಟನ ಟ್ವಿಟ್ಟರ್‌ ಖಾತೆಯನ್ನು ಒಂದು ವರ್ಷಗಳ ಕಾಲ ಅಮಾನತುಗೊಳಿಸಲಾಗಿತ್ತು. ಕಿಶೋರ್ ಅವರ ಮಾತುಗಳನ್ನು ರಾಜಕೀಯ ಪಕ್ಷಗಳಿಗೆ ಒಂದು ಎಚ್ಚರಿಕೆಯ ಸಂದೇಶವಾಗಿದ್ದರಿಂದಲೇ, ನಟನ ವಿನಂತಿಯ ಹೊರತಾಗಿಯೂ ಟ್ವಿಟರ್ ಅನ್ನು ಇನ್ನೂ ಅಮಾನುತುಗೊಳಿಸಲಾಗಿದೆ. ಹಾಗಾಗಿ ನಟ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಲು ಈಗ ಇನ್‌ಸ್ಟಾಗ್ರಾಮ್ ಅನ್ನು ಆಶ್ರಯಿಸುತ್ತಿದ್ದಾರೆ.

Tags:    

Similar News