ಹದಿನೆಂಟು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಹೆಮ್ಮೆ ತಂದಿದೆ: ಚಂಪಾ ಶೆಟ್ಟಿ
'ಕೋಳಿ ಎಸ್ರು' ಸಿನಿಮಾ ಹೆಣ್ಣುಮಗಳೊಬ್ಬಳು ಕುಡುಕನನ್ನು ಮದುವೆಯಾಗಿ, ಮನೆ, ಸಂಸಾರ, ಮಗಳಿಗೋಸ್ಕರ ಏನೆಲ್ಲಾ ಕಷ್ಟ ಅನುಭವಿಸುತ್ತಾಳೆ ಎಂಬ ವಿಷಯ ಒಳಗೊಂಡಿದೆ.;
ನಾಲ್ಕು ವರ್ಷಗಳ ಹಿಂದೆ 'ಅಮ್ಮಚ್ಚಿಯೆಂಬ ನೆನಪು' ಸಿನಿಮಾದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟ ರಂಗಕಲಾವಿದೆ, ನಟಿ, ಚಿತ್ರಕಥೆಗಾರ್ತಿ ಹಾಗೂ ವಾಯ್ಸ್ ಓವರ್/ಡಬ್ಬಿಂಗ್ ಕಲಾವಿದೆ ಚಂಪಾ ಶೆಟ್ಟಿ, ಮಹಿಳಾ ಪ್ರಧಾನ ಚಿತ್ರಗಳಿಗೆ ಹೆಸರುವಾಸಿ. ಕಾ ತ ಚಿಕ್ಕಣ್ಣ ಅವರ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯನ್ನು ಆಧರಿಸಿ 'ಕೋಳಿ ಎಸ್ರು' ಸಿನಿಮಾ ಮಾಡಿದ್ದಾರೆ.
ಬಡ ಗ್ರಾಮೀಣ ಹೆಣ್ಣು ಕುಡುಕನನ್ನು ಮದುವೆಯಾಗಿ ಮನೆ, ಸಂಸಾರ, ಮಗಳಿಗೋಸ್ಕರ ಏನೆಲ್ಲಾ ಕಷ್ಟ ಅನುಭವಿಸುತ್ತಾಳೆ ಮತ್ತು ಆಕೆ ಅದರಲ್ಲಿ ಹೇಗೆ ಗೆಲ್ಲುತ್ತಾಳೆ ಎನ್ನುವುದು ಕಥಾಹಂದರ. ಅಕ್ಷತಾ ಪಾಂಡವಪುರ ಅಭಿನಯಿಸಿದ್ದು, ಏಪ್ರನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿದೆ. ಸಿನಿಮಾ ಆಗಸ್ಟ್ ನಲ್ಲಿ ಆಸ್ಟ್ರೇಲಿಯದ 'ಮೆಲ್ಬೋರ್ನ್ ಇಂಡಿಯನ್ ಚಿತ್ರೋತ್ಸವ'ಕ್ಕೆ ಆಯ್ಕೆಗೊಂಡಿದ್ದು, ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ. ಐಶ್ವರ್ಯ ರೈ, ಆಲಿಯಾ ಭಟ್, ಕಾಜೊಲ್, ಸಾಯಿಪಲ್ಲವಿ, ನೀನಾಗುಪ್ತ, ರಾಣಿಮುಖರ್ಜಿ ಮುಂತಾದ ಖ್ಯಾತ ನಟಿಯರ ಜೊತೆ ಅಕ್ಷತಾ ಪಾಂಡವಪುರ ಅವರು ನಾಮನಿರ್ದೇಶನಗೊಂಡಿರುವುದು ಕನ್ನಡಕ್ಕೆ ಹೆಮ್ಮೆಯ ವಿಷಯ.
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ, ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಅತ್ಯುತ್ತಮ ನಿರ್ದೇಶಕಿ/ ಅತ್ಯುತ್ತಮ ನಟಿ, ಅಜಂತಾ ಎಲ್ಲೋರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಅತ್ಯುತ್ತಮ ನಟಿ ಹಾಗೂ ಬಾಲ ನಟಿ ಅಪೇಕ್ಷಾ ಚೋರನಹಳ್ಳಿ ಪಾತ್ರರಾಗಿದ್ದಾರೆ. ನಿರ್ದೇಶಕಿ ಚಂಪಾ ಶೆಟ್ಟಿಯವರೊಡನೆ ದಿ ಫೆಡರಲ್ ಕರ್ನಾಟಕ ನಡೆಸಿದ ಸಂದರ್ಶನ ಇಲ್ಲಿದೆ.,
18 ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದೆ; ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಹೇಗೆ ಅನಿಸುತ್ತಿದೆ?
ನಮ್ಮ ಸಿನಿಮಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಬಹಳ ಸಂತೋಷ ಕೊಟ್ಟಿದೆ. ಸಿನಿಮಾ ಫಿಲ್ಮ್ ಫೆಸ್ಟಿವಲ್ ಗಳಿಗಾಗಿಯೇ ಮಾಡಿರುವಂಥದ್ದು. ಮೊದಲು ಗುರುತಿಸಲ್ಪಟ್ಟಿದ್ದು ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ.ಆನಂತರ ಹದಿನೆಂಟಕ್ಕೂ ಹೆಚ್ಚು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡು, ಸಾಕಷ್ಟು ಪ್ರಶಸ್ತಿ ಕೂಡ ಪಡೆದುಕೊಂಡಿದೆ. ತುಂಬಾ ಹೆಮ್ಮೆ ಅನಿಸುತ್ತಿದೆ.
ಕಾದಂಬರಿ ಆಧರಿತ ಸಿನಿಮಾಗಳೇ ಏಕೆ?
ಬಾಲ್ಯದಿಂದಲೇ ಕನ್ನಡ ಸಾಹಿತ್ಯದಲ್ಲಿ ನನಗೆ ಬಹಳ ಆಸಕ್ತಿ. ಕಥೆ, ಕಾದಂಬರಿ ಓದುವ ಹವ್ಯಾಸ ಇದೆ. ರಂಗಭೂಮಿಯಲ್ಲಿ ತೊಡಗಿರುವುದರಿಂದ ಇಂಥ ಕಥೆಗಳ ಮೇಲೆ ಆಸಕ್ತಿ ಹೆಚ್ಚು. ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದೆ.
ಈ ಕಥೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿರಿ?
30 ವರ್ಷ ಹಿಂದೆ ಈ ಕಥೆಯಾಧಾರಿತ ನಾಟಕವನ್ನು ಮಾಡಿದ್ದೆ. ಆಗಿನಿಂದ ಹುಚ್ಚೇರಿ ಎಂಬ ಪಾತ್ರ ನನ್ನನ್ನು ಬಹಳವಾಗಿ ಕಾಡುತ್ತಲೇ ಇತ್ತು. ಹಾಗಾಗಿ ಈ ಸಿಸಿಮಾ ಮಾಡಿದೆ.
ಹುಚ್ಚೇರಿ ಪಾತ್ರದ ಮೂಲಕ ಮಹಿಳೆಯರಿಗೆ ಯಾವ ಸಂದೇಶ ಕೊಡುತ್ತೀರಿ?
ಹುಚ್ಚೇರಿ ಮಾತ್ರವಲ್ಲ; ಅದು ಕಾರ್ಪೊರೇಟ್ ಕಂಪೆನಿ, ಐಟಿ-ಬಿಟಿ ಹಾಗೂ ಸ್ಕೂಲ್ ಟೀಚರ್ ಅಥವಾ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆ ಇರಬಹುದು.ಮನೆ ಮತ್ತು ಹೊರಗಡೆ ಎರಡೂ ಕಡೆ ಕೆಲಸ ಮಾಡುವ ಅವರಿಗೆ ಗೌರವ ಸಿಗದಿದ್ದಾಗ, ಪ್ರಾಮುಖ್ಯತೆ ಸಿಗದೇ ಇದ್ದಾಗ ಹೇಗೆ ಅವರು ಸಂಘರ್ಷಕ್ಕೆ ಒಳಗಾಗುತ್ತಾಳೆ ಅನ್ನುವುದನ್ನು ಹುಚ್ಚೇರಿ ಪಾತ್ರ ತೋರಿಸುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಅನುಭವಿಸುವ ಸಂಘರ್ಷ, ಹೋರಾಟಗಳನ್ನು ಹುಚ್ಚೇರಿ ಪಾತ್ರ ಪ್ರತಿಬಿಂಬಿಸುತ್ತದೆ.
ಸಿನಿಮಾ ಮಾಡುವಾಗ ಎದುರಿಸಿದ ಸವಾಲುಗಳು ಏನು?
ನನಗೆ ಬಹಳ ಒಳ್ಳೆಯ ನಟರು ಸಿಕ್ಕಿರುವುದರಿಂದ ಯಾವುದೇ ಗಂಭೀರ ಸವಾಲು ಎದುರಾಗಲಿಲ್ಲ. ರಾತ್ರಿ ಚಿತ್ರೀಕರಣ ಇದ್ದುದರಿಂದ, ಬೆಳಕು ಕುರಿತ ಸವಾಲು ಎದುರಿಸಬೇಕಾಯಿತು.
ಸಿನಿಮಾ ಮತ್ತು ರಂಗಭೂಮಿಯ ಅನುಭವಗಳು ಹೇಗೆ? ರಂಗಭೂಮಿ ನಿಮಗೆ ಹೇಗೆ ಸಹಾಯಕವಾಗಿದೆ?
ರಂಗಭೂಮಿ ಮತ್ತು ಸಿನಿಮಾ ನಡುವೆ ಬಹಳ ವ್ಯತ್ಯಾಸಗಳೇನಿಲ್ಲ. ಏಕೆಂದರೆ ನಟ-ನಟಿಯರು ಅಲ್ಲೂ ನಟನೆ ಮಾಡಬೇಕು, ಇಲ್ಲೂ ನಟನೆ ಮಾಡಬೇಕು. ಸಣ್ಣ ವ್ಯತ್ಯಾಸ ಅಂದ್ರೆ ಕೆಮರಾ ಎದುರಿಸುವುದು. ನನಗೆ ಸಿನಿಮಾ ಮತ್ತು ರಂಗಭೂಮಿಯಲ್ಲಿ ಅನುಭವ ಇರುವುದರಿಂದ, ರಂಗಭೂಮಿಯ ಅನುಭವ ನನಗೆ ಸಿನಿಮಾದಲ್ಲಿ ಬಹಳ ಸಹಾಯ ಮಾಡಿದೆ.
ಲೇಖಕರಿಂದ ಏನಾದರೂ ಸಲಹೆ ಪಡೆದುಕೊಂಡ್ರಾ?
ವೈದೇಹಿ ಅವರ ಕಥೆಯಾಧಾರಿತ ಸಿನಿಮಾ ಮಾಡಿದಾಗ, ಸಂಭಾಷಣೆ ಬರೆದು ಕೊಟ್ಟು ಬಹಳ ನೆರವು ನೀಡಿದ್ರು. ಚಿಕ್ಕಣ್ಣ ಅವರ ಕಥೆಯ ಎಳೆಯನ್ನು ತೆಗೆದುಕೊಂಡು ಸ್ಪಲ್ಪ ಭಿನ್ನವಾಗಿ ಮಾಡಿದೆ. ಮಹಿಳೆಯಾಧಾರಿತ ಸಿನಿಮಾದ ಸ್ಕ್ರೀನ್ ಪ್ಲೇ, ಡೈಲಾಗ್ ಕೇಳಿ ತುಂಬಾ ಸಂತೋಷ ಪಟ್ಟರು. ಸಿನಿಮಾ ನೋಡಿ ತುಂಬಾ ಖುಷಿ ಪಟ್ರು.
ವೀಕ್ಷಕರ ಕುರಿತು ನೀವು ಏನು ಹೇಳುತ್ತೀರಿ?
ಸಿನಿಮಾವನ್ನು ಇಂಥವರೇ ನೋಡಬೇಕು ಅಂದುಕೊಂಡು ಮಾಡಿದರೆ ಅದು ಕಮರ್ಶಿಯಲ್ ಗೆ ಹೋಗಬೇಕಾಗುತ್ತದೆ. ಕಂಟೆಟ್ ಏನಿದೆ, ಅದು ಏನು ಹೇಳುತ್ತದೆ ಅದನ್ನು ಸಿನಿಮಾ ಮಾಡಿ, ಜನರು ನೋಡುವ ಹಾಗೆ ಮಾಡಬೇಕು. ಇತ್ತೀಚೆಗೆ ಕಂಟೆಂಟ್ ಇರುವ ಸಿನಿಮಾಗಳನ್ನು ಹಿರಿಯರು ಮಾತ್ರವಲ್ಲ, ಯುವಪೀಳಿಗೆ ಕೂಡ ನೋಡುತ್ತದೆ. ಆದರೆ, ರೀಚ್ ಮಾಡುವುದು ಒಂದು ಸವಾಲು. ವಿವಿಧ ಕಡೆ ಹೋಗಿ, ಪರ್ಸನಲ್ ಆಗಿ ಮಾತನಾಡಿ ರೀಚ್ ಮಾಡುವ ಕೆಲಸ ಮಾಡಿದ್ದೇವೆ. ಇದರಿಂದಾಗಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಪ್ರೇಕ್ಷಕರು ಮತ್ತು ವಿಮರ್ಶಕರ ಅಭಿಪ್ರಾಯ ಏನಿದೆ?
ಪ್ರೇಕ್ಷಕರು ಮತ್ತು ವಿಮರ್ಶಕರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೇ ನಕಾರಾತ್ಮಕ ವಿಮರ್ಶೆ ಬಂದಿಲ್ಲ. ಟಿ.ಎನ್. ಸೀತಾರಾಮ್, ಜೋಗಿ ಸರ್, ಹರಿ ಸೇರಿದಂತೆ ಎಲ್ಲಾ ವಿಮರ್ಶಕರು ಸಿನಿಮಾವನ್ನು ನೋಡಿ ಮೆಚ್ಚಿ ಬರೆದಿರುವುದು ಸಂತಸ ತಂದಿದೆ. ದೊಡ್ಡ ನಿರ್ದೇಶಕರಿಗೆ ಹೋಲಿಸಿದ್ದಾರೆ. ನನ್ನ ಮೇಲೆ ಬಹಳಷ್ಟು ಭರವಸೆ ಇಟ್ಟುಕೊಂಡಿದ್ದಾರೆ.
ಕಂಟೆಟ್ ಆಧರಿತ ಸಿನಿಮಾಗಳನ್ನು ಹೇಗೆ ನಿರೂಪಿಸುತ್ತೀರಿ?
ಅಮ್ಮಚ್ಚಿಯೆಂಬ ನೆನಪು ಸಿನಿಮಾ ನೋಡಿದವರು ಕಣ್ಣಲ್ಲಿ ನೀರು ಹಾಕಿಕೊಂಡು ಹೋಗಿದ್ದಾರೆ. ಎಷ್ಟೋ ಜನರು ಸಿನಿಮಾವನ್ನು ತಮಗೆ ರಿಲೇಟ್ ಮಾಡಿಕೊಂಡ್ರು. ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಗಂಡು ಮಕ್ಕಳು ಹೇಳಿದರು. ಈ ಸಿನಿಮಾದಲ್ಲಿ ಹಳ್ಳಿಗಳಲ್ಲಿ ಇರುವ ಬಡತನ, ಹಸಿವು ಕುರಿತು ಸಂದೇಶ ಕೊಟ್ಟಿದ್ದೇವೆ. ಒಬ್ಬೊಬ್ಬರು ಒಂದೊಂದು ಸಮಸ್ಯೆಗೆ ಸಿಲುಕಿರುತ್ತಾರೆ. ಆ ಸಮಸ್ಯೆಗಳಿಗೆ ಪರಿಹಾರ ಅವರೇ ಕಂಡುಕೊಳ್ಳಬೇಕಾಗುತ್ತದೆ. ಸಿನಿಮಾದ ಮೂಲಕ ನನಗೆ ಅನಿಸಿದ ಸಮಸ್ಯೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದೇನೆ. ಪರಿಹಾರವನ್ನು ನಾವೆಲ್ಲ ಸೇರಿ ಕಂಡುಕೊಳ್ಳಬೇಕು.
ನಿರ್ಮಾಣ ಹಾಗೂ ವಿತರಣೆ ಸಮಯದಲ್ಲಿ ಏನಾದ್ರು ಸಮಸ್ಯೆ ಎದುರಿಸಿದ್ರಾ?
ಇಬ್ಬರು ನಿರ್ಮಾಪಕರೂ ಬಹಳಷ್ಟು ಪ್ರೋತ್ಸಾಹ ನೀಡಿದರು. ಹಾಕಿದ ಬಂಡವಾಳ ಬರುವುದಿಲ್ಲ ಅಂತಾ ಗೊತ್ತಿದ್ರೂ ನಿರ್ಮಾಣ ಮಾಡಿದ್ದಾರೆ. ಸಿನಿಮಾ ರಿಲೀಸ್ ಮಾಡುವಾಗ ಕಡಿಮೆ ಥಿಯೇಟರ್ ಸಿಕ್ಕಿದವು. ಸಿಕ್ಕಿದನ್ನೇ ಬಳಸಿಕೊಂಡೆವು.
ಚಾಮರಾಜ ಜಿಲ್ಲೆಯ ಅಕ್ಕಪಕ್ಕ ಚಿತ್ರೀಕರಣ ಮಾಡಲಾಗಿದೆ. ಈ ಪ್ರದೇಶದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಬಡತನ ಇದೆ. ಕಥೆಯ ಪ್ರಾದೇಶಿಕತೆ, ಭಾಷೆಗೆ ಬದ್ಧರಾಗಿರಬೇಕು. ಅಲ್ಲಿಯ ಜನರೊಡನೆ ಬೆರೆತ ಅನುಭವ ಒಂದು ಜೀವಮಾನಕ್ಕೆ ಸಾಕಾಗುವಷ್ಟು ಇದೆ. ಜನರು ಶೂಟಿಂಗ್ ಸಮಯದಲ್ಲಿ ತುಂಬಾ ಸಪೋರ್ಟ್ ಮಾಡಿದ್ರು. ಸಿನಿಮಾದ ಶೇ.೫೦ರಷ್ಟು ಕಲಾವಿದರನ್ನು ಅಲ್ಲೇ ಆಯ್ಕೆ ಮಾಡಿಕೊಂಡೆವು.
ಎಲ್ಲರೂ ಪಾತ್ರವನ್ನೇ ಆವರಿಸಿಕೊಂಡು ನಟಿಸಿದ್ದಾರೆ. 80ರ ದಶಕದ ಕಥೆಯನ್ನು ಇಂದಿಗೆ ಒಗ್ಗುವಂತೆ ಸಿನಿಮಾ ಮಾಡಲಾಗಿದೆ. ಸಿನಿಮಾವನ್ನು ಥಿಯೇಟರ್ ಅಥವಾ ಒಟಿಟಿಯಲ್ಲಿ ನೋಡಿ, ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೋರುತ್ತೇನೆ.