‘ಕಾಂತಾರ’ ಹಾದಿಯಲ್ಲಿ ‘ಸು ಫ್ರಮ್ ಸೋ’; ಕನ್ನಡದ ಚಿತ್ರ ಪ್ಯಾನ್‍ ಇಂಡಿಯಾ ಚಿತ್ರವಾದ ಬಗೆ

‘ಸು ಫ್ರಮ್‍ ಸೋ’ ‘ಕಾಂತಾರ’ ಹಾದಿಯಲ್ಲಿ ನಡೆದಿದೆ. ಚಿತ್ರವು ಇಷ್ಟು ದೊಡ್ಡ ಹಿಟ್‍ ಆಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಚಿತ್ರವು ಕೇವಲ ಐದು ದಿನಗಳಲ್ಲಿ 13 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿದೆ.;

Update: 2025-07-31 04:23 GMT

ಒಂದು ಚಿತ್ರವನ್ನು ಐದು ಭಾಷೆಗಳಲ್ಲಿ ಡಬ್‍ ಮಾಡಿ, ಏಕಕಾಲಕ್ಕೆ ಪ್ಯಾನ್‍ ಇಂಡಿಯಾ ಹೆಸರಿನಲ್ಲಿ ಬಿಡುಗಡೆ ಮಾಡುವುದು ಸಹಜ. ಆದರೆ, ಅದನ್ನು ಮೊದಲಿಗೆ ಮುರಿದಿದದ್ದು ಕನ್ನಡದ ‘ಕಾಂತಾರ’.

2022ರಲ್ಲಿ ಬಿಡುಗಡೆಯಾದ ಈ ಚಿತ್ರವು ಮೊದಲ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದ ಪ್ರೇರಿತರಾದ ಚಿತ್ರತಂಡ, ಚಿತ್ರ ಬಿಡುಗಡೆಯ ಕೆಲವೇ ದಿನಗಳಲ್ಲಿ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಿಗೆ ಡಬ್‍ ಮಾಡಿ ಬಿಡುಗಡೆ ಮಾಡಿತು. ಚಿತ್ರ ಎಲ್ಲಾ ಭಾಷೆಗಳಲ್ಲಿ ಯಶಸ್ವಿಯಾಗಿದ್ದಷ್ಟೇ ಅಲ್ಲ, ಹೊಸ ದಾಖಲೆಯನ್ನೇ ರಚಿಸಿತು.

ಕಳೆದ ಶುಕ್ರವಾರ (ಜುಲೈ 25) ಬಿಡುಗಡೆಯಾದ ‘ಸು ಫ್ರಮ್‍ ಸೋ’ ಚಿತ್ರ ಸಹ ಇದೀಗ ‘ಕಾಂತಾರ’ ಹಾದಿಯಲ್ಲಿ ನಡೆದಿದೆ. ಚಿತ್ರವು ಇಷ್ಟು ದೊಡ್ಡ ಹಿಟ್‍ ಆಗಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಚಿತ್ರವು ಕೇವಲ ಐದು ದಿನಗಳಲ್ಲಿ 13 ಕೋಟಿ ರೂ. ಗಳಿಕೆ ಮಾಡಿ


ಹೊಸ ದಾಖಲೆಯನ್ನೇ ನಿರ್ಮಿಸಿದೆ. ದೊಡ್ಡ ಗಳಿಕೆ ಮಾಡಿರುವ ಸ್ಟಾರ್ ಚಿತ್ರಗಳೇನೋ ಹಲವು ಸಿಗುತ್ತವೆ. ಆದರೆ, ಹೊಸಬರ ಚಿತ್ರವೊಂದು, ಇಷ್ಟು ಕಡಿಮೆ ಸಮಯದಲ್ಲಿ ಇಂಥದ್ದೊಂದು ಗಳಿಕೆ ಮಾಡಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು. ಆ ನಿಟ್ಟಿನಲ್ಲಿ ‘ಸು ಫ್ರಮ್‍ ಸೋ’ ಹೊಸ ದಾಖಲೆ ನಿರ್ಮಿಸಿದೆ.


ಬೇರೆ ಭಾಷೆಗಳ ಡಬ್ಬಿಂಗ್‍ ಹಕ್ಕುಗಳಿಗೆ ಹೆಚ್ಚಿದ ಬೇಡಿಕೆ

ಇನ್ನು, ಚಿತ್ರವು ಬರೀ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಇದೀಗ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಯಶಸ್ಸು ನೋಡಿ, ಚಿತ್ರದ ಬೇರೆ ಭಾಷೆಗಳ ಡಬ್ಬಿಂಗ್‍ ಹಕ್ಕುಗಳಿಗೆ ಸಾಕಷ್ಟು ಬೇಡಿಕೆ ಉಂಟಾಗಿದೆ. ಅದಕ್ಕೆ ಪೂರಕವಾಗಿ ಚಿತ್ರತಂಡದವರು ಸಹ ಚಿತ್ರವನ್ನು ಬೇರೆಬೇರೆ ಭಾಷೆಗಳಿಗೆ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

ಇದರ ಮೊದಲ ಹಂತವಾಗಿ ಚಿತ್ರವು ಮೊದಲು ಆಗಸ್ಟ್ 01ರಂದು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ‘ಸು ಫ್ರಮ್‍ ಸೋ’ ಚಿತ್ರವು ಮಲಯಾಳಂಗೆ ಡಬ್‍ ಆಗಿ ಬಿಡುಗಡೆಯಾಗುತ್ತದೆ ಎಂಬ ಮಾತು ಕೆಲವು ದಿನಗಳಿಂದಲೇ ಕೇಳಿಬರುತ್ತಿತ್ತು. ಅದೀಗ ನಿಜವಾಗಿದ್ದು, ಚಿತ್ರವು ಮಲಯಾಳಂಗೆ ಡಬ್‍ ಆಗಿದೆಯಂತೆ. ಇದೇ ಆಗಸ್ಟ್ 01ರಂದು ಕೇರಳದಲ್ಲಿ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ಮಲಯಾಳಂನ ಜನಪ್ರಿಯ ನಟ ದುಲ್ಕರ್ ಸಲ್ಮಾನ್‍ ಒಡೆತನದ ವೇಫೇರರ್ ಸಿನಿಮಾಸ್‍ ಸಂಸ್ಥೆಯು ಕೇರಳಾದ್ಯಂತ ಬಿಡುಗಡೆ ಮಾಡುತ್ತಿದೆ.


ಮಲಯಾಳಂ, ತೆಲುಗು, ಹಿಂದಿ ಡಬ್ಬಿಂಗ್‍ ಹಕ್ಕುಗಳ ಮಾರಾಟ

ಇದಾದ ಮರುವಾರವೇ, ಅಂದರೆ ಆಗಸ್ಟ್ 08ರಂದು ಚಿತ್ರವು ತೆಲುಗಿಗೂ ಚಿತ್ರ ಡಬ್‍ ಆಗಿ ಬಿಡುಗಡೆ ಆಗಲಿದೆ. ಇತ್ತೀಚಿನ ವರ್ಷಗಳಲ್ಲಿ ‘ಭೈರತಿ ರಣಗಲ್‍’, ‘ಹಾಸ್ಟಲ್‍ ಹುಡುಗರು ಬೇಕಾಗಿದ್ದಾರೆ’ ಸೇರಿದಂತೆ ಕೆಲವು ಚಿತ್ರಗಳು ತೆಲುಗಿಗೆ ಡಬ್‍ ಆಗಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಬಿಡುಗಡೆಯಾಗಿವೆ. ಆ ಸಾಲಿಗೆ ‘ಸು ಫ್ರಮ್‍ ಸೋ’ ಸಹ ಸೇರಿದೆ.


ಇನ್ನು, ‘ಸು ಫ್ರಮ್‍ ಸೋ’ ಚಿತ್ರದ ಡಬ್ಬಿಂಗ್‍ ಹಕ್ಕುಗಳು ಈಗಾಗಲೇ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಹಿಂದಿಯ ಜನಪ್ರಿಯ ವಿತರಕ ಅನಿಲ್‍ ಥಡಾನಿ ಈ ಚಿತ್ರದ ಹಿಂದಿ ಡಬ್ಬಿಂಗ್‍ ಹಕ್ಕುಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಅನಿಲ್‍ ಇದಕ್ಕೂ ಮೊದಲು ಕನ್ನಡದ ‘ಕೆಜಿಎಫ್‍’, ‘ಕಾಂತಾರ’ ಮುಂತಾದ ಕೆಲವು ಚಿತ್ರಗಳನ್ನು ತಮ್ಮ ಎಎ ಫಿಲಮ್ಸ್ ಸಂಸ್ಥೆಯ ಮೂಲಕ ಉತ್ತರ ಭಾರತದಲ್ಲಿ ಬಿಡುಗಡೆ ಮಾಡಿದ್ದರು. ‘ಸು ಫ್ರಮ್‍ ಸೋ’ ಚಿತ್ರದ ಹಿಂದಿ ಅವತರಣಿಕೆಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ. ಆದರೆ, ಸದ್ಯಕ್ಕೆ ಬಿಡುಗಡೆ ದಿನಾಂಕ ಇನ್ನೂ ಅಂತಿಮವಾಗಿಲ್ಲ.

ಆಗಸ್ಟ್ 01ರಿಂದ ವಿದೇಶದಲ್ಲೂ ಚಿತ್ರ ಬಿಡುಗಡೆ

‘ಸು ಫ್ರಮ್‍ ಸೋ’ ಮೊದಲ ವಾರ ಬರೀ ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು. ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯಿಂದಾಗಿ, ಬೇರೆ ಭಾಷೆಗಳಿಗೆ ಡಬ್‍ ಆಗಿ ಬಿಡುಗಡೆ ಆಗುವುದರ ಜೊತೆಗೆ, ಚಿತ್ರವು ಆಗಸ್ಟ್ 01ರಂದು ವಿದೇಶದಲ್ಲಿ ಬಿಡುಗಡೆ ಆಗಲಿದೆ. ಫಾರ್ಸ್ ಫಿಲಂಸ್‍ ಸಂಸ್ಥೆಯು ಚಿತ್ರವನ್ನು ಆಸ್ಟ್ರೇಲಿಯಾ, ಅಮೇರಿಕಾ, ಜರ್ಮನಿ, ದುಬೈ ಮುಂತಾದ ಕಡೆ ಬಿಡುಗಡೆ ಮಾಡಲಿದೆ.

‘ಕಾಂತಾರ’ ಚಿತ್ರ ಸಹ ಇದೇ ರೀತಿ ಆಗಿತ್ತು. ಮೊದಲು ಕನ್ನಡದಲ್ಲಿ ಬಿಡುಗಡೆಯಾದ ಚಿತ್ರವು ಸಾಕಷ್ಟು ಜನಪ್ರಿಯವಾಯಿತು. ಕ್ರಮೇಣ ಬೇರೆ ಭಾಷೆಗಳಿಗೆ ಡಬ್‍ ಆಗಿ ಪ್ಯಾನ್‍ ಇಂಡಿಯಾ ಚಿತ್ರವಾಯಿತು. ಆ ನಂತರ ವಿದೇಶಗಳಲ್ಲೂ ಚಿತ್ರವು ಬಿಡುಗಡೆಯಾಗಿ ಯಶಸ್ವಿಯಾಯಿತು. ಈಗ ‘ಸು ಫ್ರಮ್‍ ಸೋ’ ಚಿತ್ರವು, ‘ಕಾಂತಾರ’ ಹಾದಿಯನ್ನೇ ಹಿಡಿದಿದೆ. ಇದಕ್ಕೂ ಮೊದಲು ಚಿತ್ರವನ್ನು ‘ಕಾಂತಾರ’ ಶೈಲಿಯಲ್ಲೇ ಬಿಡುಗಡೆಗೂ ಮುನ್ನ paid premiere ಹೆಸರಿನಲ್ಲಿ ಬೆಂಗಳೂರು, ಮಂಗಳೂರು, ಮೈಸೂರು ಮತ್ತು ಶಿವಮೊಗ್ಗದಲ್ಲಿ ಪ್ರದರ್ಶನ ಮಾಡಲಾಗಿತ್ತು. ಆ paid premiereಗಳಿಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತವಾಗಿರುವುದಷ್ಟೇ ಅಲ್ಲ, ಬಾಯ್ಮಾತಿನ ಪ್ರಚಾರದಿಂದ ಚಿತ್ರ ಬಿಡುಗಡೆ ಆದಾಗ, ಸಾಕಷ್ಟು ಸಹಾಯವಾಯಿತು. ಈಗ ‘ಸು ಫ್ರಮ್‍ ಸೋ’ ಚಿತ್ರ ಸಹ ‘ಕಾಂತಾರ’ ಹಾದಿಯಲ್ಲೇ ಹೆಜ್ಜೆ ಇಟ್ಟಿದೆ.

‘ಸು ಫ್ರಮ್ ಸೋ’ ಚಿತ್ರವನ್ನು ಜೆ.ಪಿ. ತುಮಿನಾಡು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಮುಂತಾದವರು ನಟಿಸಿದ್ದಾರೆ.


Tags:    

Similar News