‘ಸು ಫ್ರಮ್ ಸೋ’ ಎಫೆಕ್ಟ್: ಕನ್ನಡ ಚಿತ್ರಗಳ ಬಿಡುಗಡೆ ಮುಂದಕ್ಕೆ

ಕಳೆದ ಏಳು ತಿಂಗಳಿನಿಂದ ಸಾಕಷ್ಟು ಸೋಲು ಮತ್ತು ನಷ್ಟ ಕಂಡಿದ್ದ ಕನ್ನಡ ಚಿತ್ರರಂಗಕ್ಕೆ ‘ಸು ಫ್ರಮ್‍ ಸೋ’ ಹೊಸ ಶಕ್ತಿ ನೀಡಿದೆ.;

Update: 2025-07-30 09:46 GMT

ಸು ಫ್ರಮ್ ಸೋ

ಕಳೆದ ವಾರ ಬಿಡುಗಡೆಯಾದ ‘ಸು ಫ್ರಮ್‍ ಸೋ’ ಚಿತ್ರವು ಅಕ್ಷರಶಃ ಕನ್ನಡ ಚಿತ್ರರಂಗದ ನಿದ್ದೆಗೆಡಿಸಿದೆ. ಒಂದು ಕಡೆ ಯಾವುದೇ ಪ್ರಚಾರವಿಲ್ಲದೆ ಬಿಡುಗಡೆಯಾದ ಚಿತ್ರವು, ಅಷ್ಟೊಂದು ಗಳಿಕೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಚಿತ್ರದ ಗಳಿಕೆ ಜೋರಾಗಿರುವುದರಿಂದ, ಬೇರೆ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದೂಡುತ್ತಿದ್ದಾರೆ.

‘ಸು ಫ್ರಮ್‍ ಸೋ’ ಚಿತ್ರದ ಗಳಿಕೆ ಜೋರಾಗಿರುವುದರಿಂದ ಮೊದಲು ಪೆಟ್ಟು ಬಿದ್ದಿದ್ದು ‘ಎಕ್ಕ’ ಮತ್ತು ‘ಜೂನಿಯರ್’ ಚಿತ್ರಗಳಿಗೆ. ಜುಲೈ 18ರಂದು ಯುವ ರಾಜಕುಮಾರ್ ಅಭಿನಯದ ‘ಎಕ್ಕ’ ಮತ್ತು ಕಿರೀಟಿ ಅಭಿನಯದ ‘ಜೂನಿಯರ್’ ಚಿತ್ರಗಳು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಎರಡೂ ಚಿತ್ರಗಳ ಮೊದಲ ವಾರದ ಗಳಿಕೆ ಅತ್ಯುತ್ತಮವಾಗಿತ್ತು. ‘ಎಕ್ಕ’ ಮೊದಲ ವಾರದ ಗಳಿಕೆ ಸುಮಾರು ಆರು ಕೋಟಿಯಷ್ಟಾಗಿತ್ತು. ಇನ್ನು, ‘ಜೂನಿಯರ್‍’ ಚಿತ್ರ ಮೊದಲ ವಾರು ಮೂರ್ನಾಲ್ಕು ಕೋಟಿ ಗಳಿಕೆ ಮಾಡಿತ್ತು ಎಂದು ಹೇಳಲಾಗಿದೆ.

ಎರಡನೆಯ ವಾರ ಈ ಎರಡೂ ಚಿತ್ರಗಳ ಗಳಿಕೆ ತುಸು ಹೆಚ್ಚಬಹುದು ಎಂದುಕೊಂಡರೆ, ಲೆಕ್ಕಾಚಾರ ಸುಳ್ಳಾಗಿದೆ. ಎರಡನೆಯ ವಾರದ ಹೊತ್ತಿಗೆ ‘ಸು ಫ್ರಮ್‍ ಸೋ’ ಚಿತ್ರ ಬಿಡುಗಡೆಯಾಗಿತ್ತು. ಮೊದಲ ಚಿತ್ರ ಕೇವಲ 88 ಲಕ್ಷ ಗಳಿಕೆ ಮಾಡಿದ್ದ ಚಿತ್ರವು, ಕ್ರಮೇಣ ಐದು ದಿನಗಳಲ್ಲಿ 13 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಆ ಕಡೆ ‘ಸು ಫ್ರಮ್‍ ಸೋ’ ಗಳಿಕೆ ಹೆಚ್ಚಾಗುತ್ತಿದ್ದಂತೆಯೇ, ಈ ಕಡೆ ‘ಎಕ್ಕ’ ಮತ್ತು ‘ಜೂನಿಯರ್‍’ ಚಿತ್ರಗಳನ್ನು ನೋಡುವವರ ಸಂಖ್ಯೆ ಸಹ ಕಡಿಮೆಯಾಗಿದೆ.

ಇನ್ನೊಂದು ಗಮನಾರ್ಹ ವಿಷಯವೆಂದರೆ, ‘ಸು ಫ್ರಮ್‍ ಸೋ’ ಅಬ್ಬರ ನೋಡಿ, ಬೇರೆ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಶುಕ್ರವಾರ (ಆಗಸ್ಟ್ 01) ಒಟ್ಟು ಏಳು ಕನ್ನಡ ಚಿತ್ರಗಳು ಬಿಡುಗಡೆ ಆಗಬೇಕಿತ್ತು. ಆದರೆ, ಈ ಪೈಕಿ ‘ಕಮರೊ2’ ಮತ್ತು ‘ಲವ್‍ ಮ್ಯಾಟ್ರು’ ಚಿತ್ರಗಳನ್ನು ಮುಂದೂಡಲಾಗಿದೆ. ಅಷ್ಟೇ ಅಲ್ಲ, ಮುಂದಿನ ಶುಕ್ರವಾರ (ಆಗಸ್ಟ್ 08) ಬಿಡುಗಡೆ ಆಗಬೇಕಿದ್ದ ‘ಸೆಪ್ಟೆಂಬರ್ 10’ ಚಿತ್ರವನ್ನು ಸಹ ಸೆಪ್ಟೆಂಬರ್ ತಿಂಗಳಿಗೆ ಮುಂದೂಡಲಾಗಿದೆ.

 ಈ ಕುರಿತು ಮಾತನಾಡಿರುವ ಸಾಯಿಪ್ರಕಾಶ್‍, ‘ಇಷ್ಟು ದಿನ ನಾವು ಕನ್ನಡ ಚಿತ್ರಗಳಿಗೆ ಜನ ಬರುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದೆವು. ಭಗವಂತನ ಆಶೀರ್ವಾದದಿಂದ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ‘ಎಕ್ಕ’, ‘ಜೂನಿಯರ್’ ಮತ್ತು ‘ಸು ಫ್ರಮ್‍ ಸೋ’ ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಆಗಸ್ಟ್ 08ರಂದು ನನ್ನ ನಿರ್ದೇಶನದ ‘ಸೆಪ್ಟೆಂರ್‍ 10’ ಚಿತ್ರ ಬಿಡುಗಡೆ ಮಾಡಬೇಕು ಎಂದು ಹಲವು ಚಿತ್ರಮಂದಿರಗಳನ್ನು ಬುಕ್‍ ಮಾಡಿದ್ದೆ. ಆದರೆ, ಹಲವರು ಫೋನ್‍ ಮಾಡಿ, ಚಿತ್ರಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿರುವುದರಿಂದ ಚಿತ್ರಮಂದಿರಗಳನ್ನು ಕೊಡೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ, ನಾನು ಚಿತ್ರವನ್ನು ಮುಂದೂಡಿ ಸೆಪ್ಟೆಂಬರ್ ಮೊದಲ ವಾರ ಬಿಡುಗಡೆ ಮಾಡುತ್ತಿದ್ದೇನೆ. ಬೇರೆ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ, ಆ ಚಿತ್ರಮಂದಿರಗಳನ್ನು ಕೊಡಿ ಎಂದು ಕೇಳುವುದು ಸೌಜನ್ಯವಲ್ಲ. ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣಬೇಕು ಎಂದು ಆಸೆಪಟ್ಟವನು ನಾನೂ ಒಬ್ಬ. ಹಾಗಾಗಿ, ಚಿತ್ರವನ್ನು ಮುಂದೂಡುತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಕಳೆದ ಏಳು ತಿಂಗಳಿನಿಂದ ಸಾಕಷ್ಟು ಸೋಲು ಮತ್ತು ನಷ್ಟ ಕಂಡಿದ್ದ ಕನ್ನಡ ಚಿತ್ರರಂಗಕ್ಕೆ ‘ಸು ಫ್ರಮ್‍ ಸೋ’ ಹೊಸ ಶಕ್ತಿ ನೀಡಿದೆ. ಜುಲೈ ತಿಂಗಳವರೆಗೂ ಬೆರಳಣಿಕೆಯಷ್ಟು ಕನ್ನಡ ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆದಿದ್ದವು. ಆದರೆ, ‘ಸು ಫ್ರಮ್‍ ಸೋ’ ಚಿತ್ರ ಒಂದೇ ವಾರದಲ್ಲಿ ದೊಡ್ಡ ಲಾಭದಲ್ಲಿದೆ. ಚಿತ್ರದ ಸ್ಯಾಟಿಲೈಟ್‍ ಮತ್ತು ಡಿಜಿಟಲ್‍ ಹಕ್ಕುಗಳಿಗೆ ಬೇಡಿಕೆ ಹೆಚ್ಚಿದ್ದು, ಅದರಿಂದಲೂ ಒಳ್ಳೆಯ ಲಾಭ ಸಿಗುವ ನಿರೀಕ್ಷೆ ಇದೆ.

‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್‍ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಜೆ.ಪಿ. ತುಮಿನಾಡು ನಿರ್ದೇಶನ ಮಾಡಿದ್ದು, ಲೈಟರ್‍ ಬುದ್ಧ ಫಿಲ್ಮ್ಸ್ ನಿರ್ಮಾಣ ಮಾಡಿದೆ.

Tags:    

Similar News