ಸು ಫ್ರಮ್‍ ಸೋ: ಒಂದು ಸುಳ್ಳನ್ನು ನಗಿಸುತ್ತಲೇ ನಿಜವಾಗಿಸುವ ‘ಸುಲೋಚನಾ’

‘ಸು ಫ್ರಮ್‍ ಸೋ’ ಯಾರೋ ಒಬ್ಬನ ಅಥವಾ ಒಬ್ಬಳ ಕಥೆಯಲ್ಲ. ಇದು ಒಂದು ಹಳ್ಳಿಯ ಕಥೆ. ಹಾಗೆಯೇ, ಇದು ಯಾರೋ ಒಬ್ಬರ ಸಮಸ್ಯೆಯೂ ಅಲ್ಲ. ಇಡೀ ಹಳ್ಳಿಯ ಸಮಸ್ಯೆ.;

Update: 2025-07-27 01:00 GMT

ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಹಾರರ್ ಕಾಮಿಡಿಗಳು ಬಂದಿವೆ. ಈ ಪೈಕಿ ಬಹಳಷ್ಟು ಚಿತ್ರಗಳು ಹೆದರಿಸುವುದೂ ಇಲ್ಲ, ನಗಿಸುವುದೂ ಇಲ್ಲ ಎನ್ನುವಂತಿರುತ್ತವೆ. ಹಾರರ್ ಕಾಮಿಡಿ ಎಂಬ ಹಣೆಪಟ್ಟಿಯೊಂದಿಗೆ ಈ ವಾರ ಬಿಡುಗಡೆಯಾಗಿರುವ ‘ಸು ಫ್ರಮ್‍ ಸೋ’ ಚಿತ್ರ ಖಂಡಿತಾ ಹೆದರಿಸುವುದಿಲ್ಲ. ಆದರೆ, ಹೊಟ್ಟೆ ತುಂಬಾ ನಗುವಂತೆ ಮಾಡುತ್ತದೆ.

ಅದೊಂದು ಹಳ್ಳಿ. ಅಲ್ಲಿ ಎಲ್ಲಾ ರೀತಿಯ ಚಿತ್ರ-ವಿಚಿತ್ರ ಜನರಿದ್ದಾರೆ. ಅವರ ಪೈಕಿ ಅದೊಂದು ದಿನ ಪೇಂಟರ್ ಅಶೋಕನಿಗೆ (ಜೆ.ಪಿ. ತುಮಿನಾಡು) ದೆವ್ವ ಮೆಟ್ಟಿಕೊಂಡಿದೆ ಎಂಬ ಸುದ್ದಿಯೊಂದು ಹಳ್ಳಿಯಲ್ಲಿ ಹರಡುತ್ತದೆ. ದೆವ್ವ ಬಿಡಿಸುವ ಅನೇಕ ಪ್ರಯತ್ನಗಳು ನಡೆಯುತ್ತವೆ. ಹೀಗಿರುವಾಗಲೇ, ಅಶೋಕನಲ್ಲಿರುವುದು ಸೋಮೇಶ್ವರದ ಸುಲೋಚನಾಳ ಆತ್ಮ ಎಂಬ ಸುದ್ದಿ ಊರಲ್ಲೆಲ್ಲಾ ಹರಡುತ್ತದೆ. ಸರಿ ಆ ಸೋಮೇಶ್ವರದ ಸುಲೋಚನಾ ಯಾರು? ಅದ್ಯಾಕೆ ಎಲ್ಲಾ ಬಿಟ್ಟು ಅಶೋಕನ ದೇಹದಲ್ಲಿ ಸುಲೋಚನಾ ಹೊಕ್ಕಳು? ಎಂದು ಗೊತ್ತಾಗಬೇಕಿದ್ದರೆ ‘ಸು ಫ್ರಮ್‍ ಸೋ’ ಚಿತ್ರವನ್ನು ನೋಡಬೇಕು.


‘ಸು ಫ್ರಮ್‍ ಸೋ’ ಯಾರೋ ಒಬ್ಬನ ಅಥವಾ ಒಬ್ಬಳ ಕಥೆಯಲ್ಲ. ಇದು ಒಂದು ಹಳ್ಳಿಯ ಕಥೆ. ಹಾಗೆಯೇ, ಇದು ಯಾರೋ ಒಬ್ಬರ ಸಮಸ್ಯೆಯೂ ಅಲ್ಲ. ಇಡೀ ಹಳ್ಳಿಯ ಸಮಸ್ಯೆ. ಸಾಮಾನ್ಯವಾಗಿ ಹಾರರ್‍ ಚಿತ್ರಗಳೆಂದರೆ, ಒಂದು ಒಂಟಿ ಮನೆಯಲ್ಲಿ ಕತ್ತಲಲ್ಲಿ ಕಥೆ ಸಾಗುತ್ತದೆ. ಆದರೆ, ಇಲ್ಲಿ ಊರಿನ ಮಧ್ಯೆಯ ಮನೆಯೊಂದರಲ್ಲಿ, ಬೆಳ್ಳಂಬೆಳಿಗ್ಗೆಯೇ ಹಲವು ಸನ್ನಿವೇಶಗಳು ನಡೆಯುತ್ತವೆ. ಆ ಸನ್ನಿವೇಶಗಳೇ ಚಿತ್ರದ ಹೈಲೈಟ್‍ ಎಂದರೆ ತಪ್ಪಿಲ್ಲ. ಇಲ್ಲಿ ಯಾರೋ ಒಬ್ಬರು ಕಾಮಿಡಿ ಮಾಡುವುದಿಲ್ಲ, ಯಾರೋ ಒಬ್ಬರು ಮಾತ್ರ ನಗಿಸುವುದಕ್ಕೆ ಸೀಮಿತವಾಗುವುದಿಲ್ಲ. ಇಲ್ಲಿ ಎಲ್ಲರೂ ತಮಾಷೆ ಮಾಡುತ್ತಾರೆ, ಎಲ್ಲರೂ ನಗಿಸುತ್ತಾರೆ. ಇಲ್ಲಿ ಪ್ರತಿ ಪಾತ್ರಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಕೆಲವರು ತೆರೆಯ ಮೇಲೆ ಹೆಚ್ಚು ಹೊತ್ತು ಇರಬಹುದು, ಕೆಲವರು ಕಡಿಮೆ ಸಮಯ ಕಾಣಿಸಿಕೊಳ‍್ಳಬಹುದು. ಆದರೆ, ಇರುವಷ್ಟು ಸಮಯದಲ್ಲೇ ಎಲ್ಲರೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಒಟ್ಟಾರೆ ಎರಡೂಕಾಲು ತಾಸು, ಪ್ರತಿ ದೃಶ್ಯಗದಲ್ಲೂ ಪ್ರೇಕ್ಷಕರು ನಕ್ಕು ನಲಿಯುವಂತೆ ಚಿತ್ರ ಮೂಡಿಬಂದಿದೆ.


ಚಿತ್ರದ ಹೈಲೈಟ್‍ ಎಂದರೆ ಅದು ಕಥೆ ಮತ್ತು ಚಿತ್ರಕಥೆ. ಇಲ್ಲಿ ಕಥೆಯೇ ವಿಭಿನ್ನವಾಗಿದೆ. ಒಂದು ಸಣ್ಣ ಗೊಂದಲಕ್ಕೆ ಮೂಡನಂಭಿಕೆಗಳು ಸೇರುತ್ತಾ ಹೋದರೆ ಏನೆಲ್ಲಾ ಆಗುತ್ತದೆ ಎಂದು ಕಥೆ ಬರೆದು ನಿರ್ದೇಶನ ಮಾಡಿರುವ ಜೆ.ಪಿ. ತುಮ ಹೇಳುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಅವರು ಹಾಸ್ಯವನ್ನು ತುರುಕಿಲ್ಲ. ಸನ್ನಿವೇಶಗಳು ಮತ್ತು ಪಾತ್ರಗಳು ಸೇರಿ ಸಹಜವಾಗಿಯೇ ನಗು ತರಿಸುತ್ತವೆ. ನಗುವಿನ ಜೊತೆಗೆ ಇಲ್ಲೊಂದು ಗಂಭೀರವಾದ ವಿಷಯವೂ ಇದೆ. ಅದನ್ನು ಭಾವನಾತ್ಮಕವಾಗಿಯೂ ತೋರಿಸಲಾಗಿದೆ. ಆದರೆ, ಎಲ್ಲೂ ತುರುಕಿದಂತೆ ಭಾಸವಾಗುವುದಿಲ್ಲ. ಆ ನಿಟ್ಟಿನಲ್ಲಿ ಬಹಳ ಜಾಣ‍್ಮೆಯಿಂದ ಬರೆದರು ನಿರೂಪಿಸಿದ್ದಾರೆ ಜೆ.ಪಿ. ತುಮಿನಾಡು.


ಬಹುಶಃ ಪ್ರತಿಭಾವಂತ ಕಲಾವಿದರು ಇಲ್ಲಿದಿದ್ದರೆ, ಇಂಥದ್ದೊಂದು ಕಥೆಗೆ ಜೀವ ತುಂಬುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಚಿತ್ರದಲ್ಲಿ ರವಿಯಣ್ಣ, ಮೇಸ್ತ್ರಿ ಸತೀಶಣ್ಣ, ಆಟೋ ಚಂದ್ರಣ್ಣ, ಗುರೂಜಿ, ಪೇಂಟರ್‍ ಅಶೋಕ, ಬಾವ … ಸೇರಿದಂತೆ ಹಲವು ಪಾತ್ರಗಳಿವೆ. ಒಂದಕ್ಕಿಂತ ಒಂದು ವಿಚಿತ್ರ ಮತ್ತು ಮಜವಾದ ಪಾತ್ರಗಳು. ಈ ನಗೆಯ ಹಾಯಿದೋಣಿಯನ್ನು ಆ ದಡದಿಂದ ಈ ದಡದವರೆಗೂ ಸಾಗಿಸುವುದೇ ಈ ನಾವಿಕರು. ಆ ನಿಟ್ಟಿನಲ್ಲಿ ಈ ಪಾತ್ರಗಳನ್ನು ನಿರ್ವಹಿಸಿರುವ ಶನೀಲ್‍ ಗೌತಮ್, ಪ್ರಕಾಶ್‍ ತುಮಿನಾಡು, ದೀಪಕ್ ರೈ ಪಣಾಜೆ, ಜೆ.ಪಿ. ತುಮಿನಾಡು ಮುಂತಾದವರು ತಮ್ಮ ಅಭಿನಯದಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಇವರೆಲ್ಲಾ ಅಭಿನಯಿಸಿದ್ದಾರೆ ಎನ್ನುವುದಕ್ಕಿಂತ, ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ಹಾಗಾಗಿಯೇ, ಇದು ಅಭಿನಯ ಎಂದನಿಸದಂತೆ ಚಿತ್ರ ಬಹಳ ನೈಜವಾಗಿ ಮೂಡಿಬಂದಿದೆ.


ಬರೀ ಕಥೆ, ನಿರೂಪಣೆ ಮತ್ತು ಅಭಿನಯವಷ್ಟೇ ಅಲ್ಲ, ತಾಂತ್ರಿಕ ತಂಡ ಪೂರಕವಾಗಿ ಕೆಲಸ ಮಾಡಿರುವುದರಿಂದ ಚಿತ್ರ ಎಲ್ಲೂ ಬೋರಾಗದಂತೆ ಮೂಡಿಬಂದಿದೆ. ಈ ಪೈಕಿ ಮೊದಲ ಸ್ಥಾನ ಸಂಕಲನಕಾರ ನಿತಿನ್‍ ಶೆಟ್ಟಿಗೆ ಸಲ್ಲುತ್ತದೆ. ಚಂದ್ರಶೇಖರನ್‍ ಛಾಯಾಗ್ರಹಣ ಮತ್ತು ಸುಮೇಧ್‍ ಸಂಗೀತ ಸಹ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿಲ್ಲ ಎಂದು ದೂರುವವರು ಮತ್ತು ಕೊರಗುವವರು ಈ ಚಿತ್ರವನ್ನು ನೋಡಬೇಕು.

ಚಿತ್ರ: ಸು ಫ್ರಮ್‍ ಸೋ

ನಿರ್ಮಾಣ: ಲೈಟರ್ ಬುದ್ಧ ಫಿಲ್ಮ್ಸ್

ನಿರ್ದೇಶನ: ಜೆ.ಪಿ. ತುಮಿನಾಡು

ತಾರಾಗಣ: ಶನೀಲ್‍ ಗೌತಮ್, ಪ್ರಕಾಶ್‍ ತುಮಿನಾಡು, ದೀಪಕ್ ರೈ ಪಣಾಜೆ, ಜೆ.ಪಿ. ತುಮಿನಾಡು, ಚಿತ್ರ ವಿಮರ್ಶೆ, ಸಂಧ್ಯಾ ಅರಕೆರೆ, ಮೈಮ್‍ ರಾಮದಾಸ್‍, ರಾಜ್‍ ಬಿ ಶೆಟ್ಟಿ ಮುಂತಾದವರು

Tags:    

Similar News