ಮಲ್ಟಿಪ್ಲೆಕ್ಸ್‌ಗಳಲ್ಲಿ ಗರಿಷ್ಠ ಟಿಕೆಟ್ ದರ: ಇದರಿಂದ ಯಾರಿಗೆ ಲಾಭ?
ಮಲ್ಟಿಪ್ಲೆಕ್ಸ್‌ಗಳಲ್ಲಿ ಗರಿಷ್ಠ 200 ರೂ. ನಿಗದಿಪಡಿಸಿರುವುದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆ ಸಹಜವೇ. ಹಾಗೆ ನೋಡಿದರೆ, ಕನ್ನಡ ಚಿತ್ರಗಳಿಗೆ ಇದರಿಂದ ದೊಡ್ಡ ಲಾಭವೇನೂ ಇಲ್ಲ.;
ಮಲ್ಟಿಪ್ಲೆಕ್ಸ್
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿರುವ ದುಬಾರಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡುವುದರ ಜೊತೆಗೆ ಪಕ್ಕದ ರಾಜ್ಯಗಳಲ್ಲಿರುವಂತೆ ಗರಿಷ್ಠ ಟಿಕೆಟ್ ದರ ನಿಗದಿಪಡಿಸಬೇಕು ಎಂದು ಚಿತ್ರರಂಗ ಕೆಲವು ವರ್ಷಗಳಿಂದ ಬೇಡಿಕೆ ಇಟ್ಟಿತ್ತು. ಇದಕ್ಕೆ ಸ್ಪಂದಿಸಿರುವ ಸರ್ಕಾರ ಮನರಂಜನಾ ತೆರಿಗೆ ಸೇರಿ 200 ರೂ. ಗರಿಷ್ಠ ಟಿಕೆಟ್ ದರ ನಿಗದಿಪಡಿಸಿದೆ.
ಈ ಕುರಿತಾಗಿ ಬಜೆಟ್‍ನಲ್ಲೇ ಘೋಷಿಸಲಾಗಿತ್ತು. ಆದರೆ, ಬಜೆಟ್ ಮಂಡನೆಯಾಗಿ ಐದು ತಿಂಗಳಾದರೂ ಇದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಸರ್ಕಾರವು ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಸಾರ್ವಜನಿಕ ಆಕ್ಷೇಪ, ಸಲಹೆಗಳಿಗೆ 15 ದಿನಗಳ ಕಾಲಾವಕಾಶ ನೀಡಿದೆ. ಒಂದು ಪಕ್ಷ ಯಾವುದೇ ಆಕ್ಷೇಪಣೆ ವ್ಯಕ್ತವಾಗದಿದ್ದರೆ, ಮುಂದಿನ ತಿಂಗಳಿನಿಂದಲೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಏಕರೂಪ ಟಿಕೆಟ್ ದರ ಜಾರಿಯಾಗಲಿದೆ.
ಕನ್ನಡ ಚಿತ್ರರಂಗಕ್ಕೆ ದೊಡ್ಡ ಲಾಭವೇನೂ ಇಲ್ಲ
ಮಲ್ಟಿಪ್ಲೆಕ್ಸ್‌ಗಳಲ್ಲಿ ಗರಿಷ್ಠ 200 ರೂ. ನಿಗದಿಪಡಿಸಿರುವುದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆ ಸಹಜವೇ. ಹಾಗೆ ನೋಡಿದರೆ, ಕನ್ನಡ ಚಿತ್ರಗಳಿಗೆ ಇದರಿಂದ ದೊಡ್ಡ ಲಾಭವೇನೂ ಇಲ್ಲ. ಆದರೆ, ಇದರಿಂದ ಪರಭಾಷಾ ಚಿತ್ರಗಳಿಗೆ ದೊಡ್ಡ ಏಟು ಬೀಳಲಿದೆ. ಏಕೆಂದರೆ, ಕನ್ನಡದಲ್ಲಿ ಕೆಲವು ಜನಪ್ರಿಯ ಸ್ಟಾರ್ ನಟರ ಚಿತ್ರಗಳನ್ನು ಹೊರತುಪಡಿಸಿದರೆ ಟಿಕೆಟ್ ದರ 200 ರೂ.ಗಳಿಗಿಂತ ಕಡಿಮೆಯೇ ಇದೆ. ಕೆಲವು ಸ್ಟಾರ್ ನಟರ ನಿರೀಕ್ಷಿತ ಚಿತ್ರಗಳಿಗೆ ಮಾತ್ರ ಟಿಕೆಟ್ ದರವನ್ನು ಏರಿಸಲಾಗುತ್ತದೆ. ಹೆಚ್ಚೆಂದರೆ, ಕನ್ನಡದ ಸ್ಟಾರ್ ನಟರ ನಿರೀಕ್ಷಿತ ಚಿತ್ರಗಳ ಟಿಕೆಟ್ ದರ ಗರಿಷ್ಠ 500 ರೂ.ವರೆಗೂ ಏರಿಕೆಯಾಗುತ್ತದೆ. ಮಿಕ್ಕಂತೆ ಬಿಡುಗಡೆಯಾಗುತ್ತಿರುವ ಎಲ್ಲಾ ಕನ್ನಡ ಚಿತ್ರಗಳ ಟಿಕೆಟ್ ಬೆಲೆ 200 ರೂ.ಗಳಿಗಿಂತ ಕಡಿಮೆಯೇ ಇದೆ. ವಾರಂತ್ಯದಲ್ಲಿ ಕೆಲವು ಚಿತ್ರಗಳ ಟಿಕೆಟ್ ಏರಿಕೆಯಾಗಬಹುದು. ಮಿಕ್ಕಂತೆ ಶೇ. 90ರಷ್ಟು ಕನ್ನಡ ಚಿತ್ರಗಳ ಟಿಕೆಟ್ ಬೆಲೆ ಕಡಿಮೆಯೇ ಇದೆ. ಆದರೆ, ಕಡಿಮೆ ಇದ್ದರೂ ಕಾರಣಾಂತರಗಳಿಂದ ನೋಡುವವರ ಸಂಖ್ಯೆ ಕಡಿಮೆ ಇದೆ.
ಗರಿಷ್ಠ ಟಿಕೆಟ್ ದರದಿಂದ ಪರಭಾಷಾ ಚಿತ್ರಗಳಿಗೆ ದೊಡ್ಡ ನಷ್ಟ
ಆದರೆ, ಇದೇ ವಿಷಯವನನು ಪರಭಾಷೆಯ ಚಿತ್ರಗಳಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಪರಭಾಷೆಯ ದೊಡ್ಡ ಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕದ ಮಲ್ಟಿಪ್ಲೆಕ್ಸ್‌ಗಳಲ್ಲಿ ಕಳೆದ ಕೆಲವು ವರ್ಷಗಳಿಂದ ದುಬಾರಿ ಬೆಲೆ ನಿಗದಿಪಡಿಸಲಾಗುತ್ತಿದೆ. ಅದರಲ್ಲೂ ರಜನಿಕಾಂತ್, ಪ್ರಭಾಸ್, ವಿಜಯ್ ಮುಂತಾದ ಸ್ಟಾರ್ ನಟರ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗುವ ಸಂದರ್ಭದಲ್ಲಿ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ವಿಪರೀತ ಏರಿಸಲಾಗುತ್ತದೆ. ಹಾಗೆ ನೋಡಿದರೆ, ತೆಲುಗು, ತಮಿಳು ಚಿತ್ರಗಳ ಟಿಕೆಟ್ ದರ ಆ ರಾಜ್ಯಗಳಲ್ಲೇ 150 ರೂ. ಮೇಲೆ ಏರಿಸುವಂತಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಇದಕ್ಕೊಂದು ಇತಿಮಿತಿಯೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇತ್ತು.
ಕೆಲವು ನಿರೀಕ್ಷಿತ ಪರಭಾಷಾ ಚಿತ್ರಗಳ ಟಿಕೆಟ್ ದರ 2000ದವರೆಗೂ ಏರಿಕೆ
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಕೆಲವು ನಿರೀಕ್ಷಿತ ಚಿತ್ರಗಳ ಪ್ರದರ್ಶನ ಸಂಖ್ಯೆಯನ್ನು ಏರಿಸುವುದರ ಜೊತೆಗೆ ಟಿಕೆಟ್ ದರವನ್ನು 1500ರಿಂದ 2000 ರೂ.ವರೆಗೂ ಏರಿಸಲಾಗುತ್ತದೆ. ಕರ್ನಾಟಕದ ಪ್ರೇಕ್ಷಕರ ಹಣ ಪರರಾಜ್ಯಗಳ ಮತ್ತು ಪರಭಾಷಾ ನಿರ್ಮಾಪಕರ ಪಾಲಾಗುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಇದರಿಂದ ಕನ್ನಡ ಚಿತ್ರಗಳಿಗೂ ಪರೋಕ್ಷವಾಗಿ ಸಮಸ್ಯೆ ಎದುರಾಗುತ್ತಿತ್ತು. ಒಂದು ಚಿತ್ರಕ್ಕೆ ಅಷ್ಟೊಂದು ಹಣ ಖರ್ಚು ಮಾಡುವುದರಿಂದ, ಸಾಮಾನ್ಯ ಕನ್ನಡ ಪ್ರೇಕ್ಷಕರ ಜೇಬಿಗೆ ಹೊರೆಯಾಗುತ್ತಿತ್ತು. ಇದರಿಂದ ಬೇರೆ ಚಿತ್ರಗಳನ್ನು ನೋಡದಂತಾಗುತ್ತಿತ್ತು.
2017ರಲ್ಲೇ ಏಕರೂಪ ಟಿಕೆಟ್ ಮತ್ತು ಗರಿಷ್ಠ ಟಿಕೆಟ್ ದರ ಜಾರಿಗೆ ಯತ್ನ
ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಧ್ವನಿ ಎತ್ತುತ್ತಲೇ ಇದ್ದರು. ಮಾಧ್ಯಮದವರು ಮತತು ಪ್ರೇಕ್ಷಕರು ಸಹ ಸಾಕಷ್ಟು ಬಾರಿ ಧ್ವನಿಗೂಡಿಸಿದ್ದರು. ಸಿದ್ದರಾಮಯ್ಯ ಅವರು ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಈ ಏಕರೂಪ ಟಿಕೆಟ್ ಬೆಲೆ ಬಗ್ಗೆ ಗಮನಸೆಳೆಯಲಾಗಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ಬಿಡುಗಡೆಯಾದ ‘ಬಾಹುಬಲಿ 2’ ಚಿತ್ರವನ್ನು ನಗರದ ಒರಾಯನ್ ಮಾಲ್‍ನಲ್ಲಿರುವ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಅವರು ಚಿತ್ರ ನೋಡಿ, ರಾಜ್ಯದ ಮಲ್ಟಿಪ್ಲೆಕ್ಸ್ ಹಾಗೂ ಏಕಪರದೆಯ ಚಿತ್ರಮಂದಿರಗಳಲ್ಲಿ ಕನ್ನಡ ಸೇರಿದಂತೆ ಯಾವುದೇ ಭಾಷೆಯ ಟಿಕೆಟ್ ದರ 200 ರೂ. ಮೀರುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು.
ಲಾಬಿಯಿಂದ ಏಕರೂಪ ಟಿಕೆಟ್ ದರಕ್ಕೆ ತಡೆ
ಅಲ್ಲಿಗೆ ಪರಭಾಷೆಯ ಚಿತ್ರಗಳ ದುಬಾರಿ ಟಿಕೆಟ್ ದರಕ್ಕೆ ಕಡಿವಾಣ ಬಿದ್ದಿತು ಅಂದುಕೊಳ್ಳುತ್ತಿರುವಾಗಲೇ, ಆಗಿದ್ದೇ ಬೇರೆ. ಟಿಕೆಟ್ ದರ ಕಡಿಮೆಯಾಗಬೇಕೆಂಬುದು ಬಹುಜನರ ಒತ್ತಾಯ ಒಂದು ಕಡೆಯಾದರೆ, ಟಿಕೆಟ್ ದರ ಕಡಿಮೆಯಾಗುವುದು ಒಂದು ವಲಯಕ್ಕೆ ಬೇಕಾಗಿರಲಿಲ್ಲ. ಟಿಕೆಟ್ ದರ ಕಡಿಮೆಯಾಗದಂತೆ ಒಂದು ದೊಡ್ಡ ಲಾಬಿ ಸದ್ದಿಲ್ಲದೆ ಕೆಲಸ ಮಾಡಿತ್ತು. ಹಾಗಾಗಿ, ಕೆಲವು ಮಲ್ಟಿಪ್ಲೆಕ್ಸ್ನವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಹಾಗಾಗಿ, ಕೆಲವು ವರ್ಷಗಳ ಕಾಲ ಟಿಕೆಟ್ ದರ ಪರಿಷ್ಕರಣೆಯ ವಿಷಯವಾಗಿ ಸುದ್ದಿಯೇ ಇರಲಿಲ್ಲ. ಈ ನಡುವೆ ಹಲವು ಪರಭಾಷಾ ಚಿತ್ರಗಳು ಕರ್ನಾಟಕದಲ್ಲಿ ಪ್ರೇಕ್ಷಕರನ್ನು ದೋಚಿದವು.
ಈ ವರ್ಷದ ಬಜೆಟ್‍ನಲ್ಲಿ ಏಕರೂಪ ಟಿಕೆಟ್ ದರ ಘೋಷಣೆ
ಕೆಲವು ವರ್ಷಗಳ ಕಾಲ ನೆನೆಗುದಿಗೆ ಬಿದ್ದಿದ್ದ ಏಕರೂಪ ಟಿಕೆಟ್ ದರ ವಿಷಯ, ಈ ವರ್ಷ ಮತ್ತೆ ಮುನ್ನಲೆಗೆ ಬಂತು. ಅದಕ್ಕೆ ಸರಿಯಾಗಿ ಬಜೆಟ್‍ನಲ್ಲಿ ರಾಜ್ಯ ಸರ್ಕಾರವು ಮನರಂಜನಾ ತೆರಿಗೆ ಸೇರಿ, ಗರಿಷ್ಠ ಟಿಕೆಟ್ ದರ 200 ರೂ. ನಿಗದಿಪಡಿಸಿತ್ತು. ಬಜೆಟ್‍ನಲ್ಲಿ ಘೋಷಣೆಯೇನೋ ಆಯಿತು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಮಲ್ಟಿಪ್ಲೆಕ್ಸ್ ಲಾಬಿಗೆ ಸರ್ಕಾರ ಮಣಿಯಿತು ಎಂದು ಎಲ್ಲರೂ ಭಾವಿಸುವಷ್ಟರಲ್ಲೇ, ಮಂಗಳವಾರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಸಾರ್ವಜನಿಕ ಆಕ್ಷೇಪ, ಸಲಹೆಗಳಿಗೆ 15 ದಿನಗಳ ಕಾಲಾವಕಾಶ ನೀಡಿದೆ.
ಈ ಅಧಿಸೂಚನೆಗೆ ಒಂದು ಪಕ್ಷ ಯಾವುದೇ ಆಕ್ಷೇಪಣೆ ವ್ಯಕ್ತವಾಗದಿದ್ದರೆ, ಮುಂದಿನ ತಿಂಗಳಿನಿಂದಲೇ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಏಕರೂಪ ಟಿಕೆಟ್ ದರ ಜಾರಿಯಾಗಲಿದೆ. ಆದರೆ, ಇದಕ್ಕೆ ಇನ್ನೂ ಏನೇನು ಅಡಚಣೆ ಎದುರಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.