Max Movie | ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ʼಮ್ಯಾಕ್ಸ್ʼ ನಾಳೆ ತೆರೆಗೆ
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರಕ್ಕೆ ಕಪಿಲ್ ದೇವ್ ಸಪೋರ್ಟ್ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿರುವ ಅವರು, ನಾಳೆ(ಡಿ.25) ಮ್ಯಾಕ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಹೋಗಿ ನೋಡಿ ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ನಾಳೆ (ಡಿ.೨೫) ಬುಧವಾರ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಚಿತ್ರದ ಬಗ್ಗೆ ವ್ಯಾಪಕ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದ್ದು, ಈ ವರ್ಷದ ದೊಡ್ಡ ಸಿನಿಮಾಗಳಲ್ಲಿ ಈ ಸಿನಿಮಾವು ಒಂದಾಗಿದೆ.
ಮ್ಯಾಕ್ಸ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ನಟ ಕೃಷ್ಣ, ಧನಂಜಯ್, ವಿನಯ್ ರಾಜ್‌ಕುಮಾರ್, ಯುವ ರಾಜಕುಮಾರ್, ನಿರ್ದೇಶಕ ಎಪಿ ಅರ್ಜುನ್ ಸೇರಿದಂತೆ ಅವರ ಕುಟುಂಬ ಮತ್ತು ಉದ್ಯಮದ ಸಹೋದ್ಯೋಗಿಗಳು ಭಾಗಿಯಾಗಿದ್ದರು.
ಬೇರೆ ಭಾಷೆ ಸಿನಿಮಾಗಳಂತೆ ಕನ್ನಡ ಸಿನಿಮಾವನ್ನೂ ಬೆಂಬಲಿಸಿ
ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕನ್ನಡನಾಡಿದ ಜನತೆಗೆ ಮನವಿಯೊಂದನ್ನು ಮಾಡಿದ್ದು, ಚಿತ್ರಪ್ರೇಮಿಗಳು ಒಗ್ಗಟ್ಟಾಗಿ ನಿಲ್ಲಬೇಕು. ಬೇರೆ ಭಾಷೆಯ ಚಿತ್ರಗಳಿಗೆ ನೀಡುವ ಬೆಂಬಲವನ್ನು ಕನ್ನಡ ಚಿತ್ರಗಳಿಗೂ ನೀಡಬೇಕು. ನಿಮ್ಮ ಬೆಂಬಲವಿಲ್ಲದಿದ್ದರೆ ಚಿತ್ರಮಂದಿರ ಇರಲ್ಲ, ಕನ್ನಡ ಚಿತ್ರಗಳು ಬರಲ್ಲ. ಕನ್ನಡದ ನಟರು ಮತ್ತು ತಂತ್ರಜ್ಞರು ಅಪಾರವಾದ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ, ಒಗ್ಗಟ್ಟು ಮತ್ತು ಪ್ರೇಕ್ಷಕರು ನೀಡುವ ಬೆಂಬಲದಿಂದ ಮಾತ್ರ ಕನ್ನಡ ಚಿತ್ರರಂಗವು ನಿಜವಾಗಿಯೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದ್ದಾರೆ.
ಮ್ಯಾಕ್ಸ್ ಬುಧವಾರ ರಿಲೀಸ್ ಯಾಕೆ
ಸಾಮಾನ್ಯವಾಗಿ ಸಿನಿಮಾಗಳು ಶುಕ್ರವಾರದಂದು ತೆರೆಕಾಣುತ್ತವೆ. ಆದರೆ ಮ್ಯಾಕ್ಸ್ ಸಿನಿಮಾ ಬುಧವಾರ ರಿಲೀಸ್ ಆಗುತ್ತಿದೆ. ಇದಕ್ಕೆ ಕಾರಣವನ್ನು ಸ್ವತಃ ಕಿಚ್ಚ ಸುದೀಪ್ ನೀಡಿದ್ದಾರೆ. ಸಿನಿಮಾವನ್ನು ಬುಧವಾರ ರಿಲೀಸ್ ಮಾಡಬೇಕು ಎಂದು ಇರಲಿಲ್ಲ. ಆದರೆ ರಜೆಗಳನ್ನು ಲೆಕ್ಕಹಾಕಿದಾಗ ಬುಧವಾರವೇ ಅದು ಬಂದಿತು. ವಿಶೇಷವಾಗಿ ಬುಧವಾರ 25 ರಂದು ಕ್ರಿಸ್ಮಸ್ ಹಬ್ಬವೂ ಇದೆ. ಕ್ರಿಸ್ಮಸ್ ಹಬಕ್ಕೆ ರಜೆ ಇರುತ್ತದೆ. ಮುಂದೆ ಬರೋ ದಿನಗಳಲ್ಲೂ ರಜೆಗಳೇ ಇವೆ. ಈ ಕಾರಣಕ್ಕೇನೆ ಮ್ಯಾಕ್ಸ್ ಚಿತ್ರ ಬುಧವಾರ ತೆರೆಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮ್ಯಾಕ್ಸ್ ಚಿತ್ರಕ್ಕೆ ಕಪೀಲ್ ದೇವ್ ಸಪೋರ್ಟ್
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರಕ್ಕೆ ಕ್ರಿಕೆಟಿಗ ಕಪಿಲ್ ದೇವ್ ಸಪೋರ್ಟ್ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿರುವ ಅವರು, ನಾಳೆ ಮ್ಯಾಕ್ಸ್ ಚಿತ್ರ ರಿಲೀಸ್ ಆಗುತ್ತಿದೆ. ಹೋಗಿ ನೋಡಿ ಎಂದು ಕನ್ನಡದಲ್ಲಿಯೇ ಹೇಳಿದ್ದಾರೆ.
ಹೌಸ್‌ಫುಲ್ ಬುಕಿಂಗ್
ಮ್ಯಾಕ್ಸ್ ಸಿನಿಮಾಗೆ ಈಗಾಗಲೇ ಹೌಸ್‌ಫುಲ್ ಬುಕಿಂಗ್‌ಗಳು ಆಗಿವೆ. ಮುಂಜಾನೆ ಶೋಗಳು 6.30ಕ್ಕೆ ಪ್ರಾರಂಭವಾಗಲಿವೆ. ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.
ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ವರಲಕ್ಷ್ಮಿ ಶರತ್‌ಕುಮಾರ್, ಉಗ್ರಂ ಮಂಜು ಸೇರಿದಂತೆ ಹೆಚ್ಚಿನ ತಾರಾಗಣವಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಶೇಖರ್ ಚಂದ್ರು ಅವರ ಛಾಯಾಗ್ರಹಣವಿದೆ. ಕಿಚ್ಚ ಸುದೀಪ್ ಅವರ 46ನೇ ಸಿನಿಮಾ ಇದಾಗಿದೆ.