Goa Film Festival 2024 | ಭಾರತೀಯ ಪನೋರಮಾ ವಿಭಾಗಕ್ಕೆ ʼಕೆರೆಬೇಟೆʼ ಸಿನಿಮಾ ಆಯ್ಕೆ
ಗೌರಿ ಶಂಕರ್ ನಾಯಕನಾಗಿ ನಟಿಸಿರುವ ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ 'ಕೆರೆಬೇಟೆ', ಗೋವಾದ 55ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗದ ಪ್ರದರ್ಶನಕ್ಕೆ ಆಯ್ಕೆಯಾಗಿದೆ;
ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗಕ್ಕೆ ಕನ್ನಡದ ‘ಕೆರೆಬೇಟೆ’ ಸಿನಿಮಾ ಆಯ್ಕೆಯಾಗಿದೆ.
ಗೌರಿ ಶಂಕರ್ ನಾಯಕನಾಗಿ ನಟಿಸಿರುವ ಅಪ್ಪಟ ಗ್ರಾಮೀಣ ಸೊಗಡಿನ ಸಿನಿಮಾ 'ಕೆರೆಬೇಟೆ', 55ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿರುವ ಎರಡು ಕನ್ನಡ ಸಿನಿಮಾಗಳಲ್ಲಿ ಒಂದಾಗಿದೆ.
ಗೋವಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ‘ಭಾರತೀಯ ಪನೋರಮಾ’ ವಿಭಾಗ ಮುಖ್ಯವಾಗಿದ್ದು, ಅದರಲ್ಲಿ 25 ಚಲನಚಿತ್ರ ಹಾಗೂ 20 ನಾನ್-ಫೀಚರ್ ಸಿನಿಮಾಗಳು ಪ್ರದರ್ಶನ ಕಾಣಲಿವೆ. ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ ಬಾಲಿವುಡ್‌ನ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಪ್ರದರ್ಶನ ಕಾಣಲಿದೆ. ಎರಡನೇ ಸಿನಿಮಾವಾಗಿ ಕನ್ನಡದ ‘ಕೆರೆಬೇಟೆ’ ಆಯ್ಕೆ ಆಗಿದೆ. ʼಕೆರೆಬೇಟೆʼ ಅಲ್ಲದೆ, ಕನ್ನಡದ ‘ವೆಂಕ್ಯಾ’ ಸಿನಿಮಾ ಕೂಡ ಪನೋರಮಾ ವಿಭಾಗದಲ್ಲಿ ಪ್ರದರ್ಶನ ಕಾಣಲಿದೆ. ʼವೆಂಕ್ಯಾʼ ಸಿನಿಮಾಗೆ ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ.
ವಿಭಿನ್ನ ಸಿನಿಮಾ ʼಕೆರೆಬೇಟೆʼ
ಈ ಸಿನಿಮಾ ಶಿವಮೊಗ್ಗದ ಮಲೆನಾಡು ಭಾಗದ ಜನಜೀವನ, ಭಾಷೆ, ಸಂಸ್ಕೃತಿ, ಆಚರಣೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಶಿವಮೊಗ್ಗ, ಸಾಗರ, ಸೊರಬ ಭಾಗದಲ್ಲಿ ಮೀನು ಬೇಟೆಯಾಡುವ ಪದ್ಧತಿಯನ್ನು 'ಕೆರೆಬೇಟೆ' ಎನ್ನುವ ಹೆಸರಿನಲ್ಲಿ ಕರೆಯುತ್ತಾರೆ. ನಿರ್ದೇಶಕ ಗುರುರಾಜ್ ಅವರು ನಟ ಗೌರಿ ಶಂಕರ್ ಅವರ ಅಪ್ಪಟ ಮಲೆನಾಡು ಜನರ ಆಡುಮಾತಿನ ಸಂಭಾಷಣೆಯೊಂದಿಗೆ ಈ ಸಿನಿಮಾವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
'ಕೆರೆಬೇಟೆ' ಚಿತ್ರ ಇದೇ ವರ್ಷದ ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಗೌರಿ ಶಂಕರ್ ಅವರ ಜನಮನ ಸಿನಿಮಾ ಸಂಸ್ಥೆಯಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಮಲೆನಾಡಿನ ಮೀನು ಬೇಟೆಯ ಪದ್ಧತಿಯನ್ನು ಈ ಸಿನಿಮಾದಲ್ಲಿ ಪರಿಚಯ ಮಾಡಲಾಗಿತ್ತು. ಗೌರಿಶಂಕರ್, ನಾಯಕಿ ಬಿಂದು ಗೌಡ, ಪೋಷಕ ಪಾತ್ರದಲ್ಲಿ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.