'ಥಗ್ ಲೈಫ್' ಚಿತ್ರ ಬಿಡುಗಡೆಗೆ ನಿಷೇಧವಿಲ್ಲ; ಸುಪ್ರೀಂಕೋರ್ಟ್ಗೆ ನಿಲುವು ತಿಳಿಸಿದ ಕರ್ನಾಟಕ ಸರ್ಕಾರ
ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ʼಥಗ್ ಲೈಫ್ʼ ಚಿತ್ರ ಬಿಡುಗಡೆಗೆ ನಿರ್ಮಾಪಕರು ಮುಂದಾಗಿದ್ದಾರೆ. ರಾಜ್ಯ ಸರ್ಕಾರವು ಚಿತ್ರ ಬಿಡುಗಡೆಗೆ ಅಗತ್ಯವಾದ ಸಹಕಾರ ನೀಡಲು ಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ಗೆ ಭರವಸೆ ನೀಡಿದೆ.;
ನಟ ಕಮಲ್ ಹಾಸನ್
ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾ ಪ್ರದರ್ಶನಕ್ಕೆ ಯಾವುದೇ ನಿಷೇಧ ಅಥವಾ ನಿರ್ಬಂಧ ವಿಧಿಸಿಲ್ಲ ಎಂದು ಕರ್ನಾಟಕ ಸರ್ಕಾರ ಗುರುವಾರ ಸುಪ್ರೀಂಕೋರ್ಟ್ಗೆ ತನ್ನ ಪ್ರತಿಕ್ರಿಯೆ ಸಲ್ಲಿಸಿದೆ.
ಕರ್ನಾಟಕದಲ್ಲಿ ಕಮಲ್ ಹಾಸನ್ ಅಭಿನಯದ ಚಿತ್ರ ʼಥಗ್ ಲೈಫ್ʼ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರವು ಚಿತ್ರ ಬಿಡುಗಡೆಗೆ ಸಹಕರಿಸಲಿದೆ ಎಂದು ತಿಳಿಸಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಈ ಹಿಂದೆ ಕಮಲ್ ಹಾಸನ್ ಅವರಿಗೆ ಪತ್ರ ಬರೆದು, ಕನ್ನಡ ಭಾಷೆಯ ಕುರಿತ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸುವಂತೆ ಒತ್ತಾಯಿಸಿತ್ತು ಎಂದೂ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದೆ.
ʼಕನ್ನಡ ತಮಿಳಿನಿಂದ ಹುಟ್ಟಿದೆʼ ಎಂಬ ಕಮಲ್ ಹಾಸನ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಚಿತ್ರ ಬಿಡುಗಡೆ ಮಾಡಿದರೆ ಥಿಯೇಟರ್ಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದವು. ಹೈಕೋರ್ಟ್ ಕೂಡ ಕಮಲ್ ಹಾಸನ್ ಕ್ಷಮಾಪಣೆಗೆ ಸಲಹೆ ನೀಡಿತ್ತು.
ಚಿತ್ರ ಬಿಡುಗಡೆ ನಿರ್ಬಂಧಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಗುಂಪುಗಳ ಬೆದರಿಕೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಚಿತ್ರ ಬಿಡುಗಡೆಯನ್ನು ತಡೆಯಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತ್ತು.
ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್ ಶೆಟ್ಟಿ ಬುಧವಾರ ತಮ್ಮ ಸಂಘಟನೆಯು ʼಥಗ್ ಲೈಫ್ʼ ಬಿಡುಗಡೆ ವಿರೋಧಿಸುವುದಿಲ್ಲ. ಹೈಕೋರ್ಟ್ ಸಲಹೆಯಂತೆ ಕಮಲ್ ಹಾಸನ್ ಕ್ಷಮೆಯಾಚಿಸಬೇಕಿತ್ತು ಎಂದು ಹೇಳಿದ್ದರು.
ಸುಪ್ರೀಂಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ, ಪೊಲೀಸರನ್ನು ಮನೆಯ ಬಳಿ ನಿಯೋಜಿಸುವ ಮೂಲಕ ವ್ಯಕ್ತಿಸ್ವಾತಂತ್ರ್ಯ ನಿಗ್ರಹಿಸುವುದು ಸಂವಿಧಾನ ಬಾಹಿರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಚಿತ್ರ ಬಿಡುಗಡೆಗೆ ಯಾವುದೇ ಅಡೆತಡೆಯಿಲ್ಲದಂತೆ ನೋಡಿಕೊಳ್ಳಲಾಗುವುದು. ಎಲ್ಲರೂ ಸುಪ್ರೀಂಕೋರ್ಟ್ ನಿರ್ದೇಶನ ಗೌರವಿಸಬೇಕು ಎಂದು ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದರು.