ʼಕಾಂತಾರ : ಚಾಪ್ಟರ್ -1ʼ ಪ್ರಿ-ರಿಲೀಸ್ ಇವೆಂಟ್| ಕನ್ನಡದಲ್ಲಿ ರಿಷಬ್ ಮಾತು; ತೆಲುಗು ಭಾಷಿಕರ ಬೇಸರ, ಬಾಯ್ಕಾಟ್ ಅಭಿಯಾನ
ಪ್ರೇಕ್ಷಕರು ಹೆಚ್ಚುವರಿ ಹಣ ಕೊಟ್ಟು ಸಿನಿಮಾ ನೋಡಬೇಕಾದರೆ ಭಾಷೆಗೆ ಕನಿಷ್ಠ ಗೌರವ ತೋರಿಸಬೇಕು ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆಯುತ್ತಿದೆ. ಈಗ ಇದೇ ವಿವಾದವು #BoycottKantaraChapter1 ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ.
ಕಾಂತಾರ ಸಿನಿಮಾ
ಹೈದರಾಬಾದ್‌ನಲ್ಲಿ ನಡೆದ 'ಕಾಂತಾರ: ಚಾಪ್ಟರ್ -1ʼ ತೆಲುಗು ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಕನ್ನಡದಲ್ಲಿ ಮಾತನಾಡುವ ಮೂಲಕ ಭಾಷಾಭಿಮಾನ ಮೆರೆದಿದ್ದಾರೆ. ನಟರ ಭಾಷಾ ಆಯ್ಕೆಯು ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ತಂದಿದೆ. ಮನಸಿನಿಂದ ಮಾತನಾಡಲು ತಮ್ಮ ಮಾತೃಭಾಷೆ ಬಳಸುವುದರಲ್ಲಿ ತಪ್ಪಿಲ್ಲ ಎಂದು ಕೆಲವರು ಹೇಳಿದರೆ, ಕೆಲ ತೆಲುಗು ಪ್ರೇಕ್ಷಕರು ನಿಮ್ಮ ಮೊದಲ ಕಾಂತಾರ ಸಿನಿಮಾ ಯಶಸ್ಸಿಗೆ ತೆಲುಗು ಭಾಷಿಕರು ದೊಡ್ಡ ಕೊಡುಗೆ ನೀಡಿದ್ದಾರೆ. ಸೌಜನ್ಯಕ್ಕಾದರೂ ಕನಿಷ್ಠ ಒಂದು ವಾಕ್ಯ ತೆಲುಗಿನಲ್ಲಿ ಮಾತನಾಡಿದ್ದರೆ ಗೌರವ ತೋರಿಸಿದಂತಾಗುತ್ತಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರೇಕ್ಷಕರು ಹೆಚ್ಚುವರಿ ಹಣ ಕೊಟ್ಟು ಸಿನಿಮಾ ನೋಡಬೇಕಾದರೆ, ಕನಿಷ್ಠ ಅವರವರ ಭಾಷೆಗಾದರೂ ಗೌರವ ತೋರಿಸಬೇಕು ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅಲ್ಲದೇ #BoycottKantaraChapter1 ಹ್ಯಾಶ್‌ಟ್ಯಾಗ್ ಕೂಡ ಟ್ರೆಂಡ್ ಆಗುತ್ತಿದೆ.
ರಿಷಬ್ ಶೆಟ್ಟಿ ಅವರು ಮಾತನಾಡುವಾಗ, "ಮನಸಿನಿಂದ ಮಾತನಾಡಬೇಕಾದರೆ ಕನ್ನಡದಲ್ಲಿಯೇ ಮಾತನಾಡುತ್ತೇನೆ, ಅರ್ಥವಾಗದಿದ್ದರೆ ಜೂನಿಯರ್ ಎನ್‌ಟಿಆರ್ ಭಾಷಾಂತರ ಮಾಡುತ್ತಾರೆ" ಎಂದು ತೆಲುಗು ಪ್ರೀ-ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಹಾಸ್ಯಾತ್ಮಕವಾಗಿ ಹೇಳಿದ್ದರು. ಕಾಂತಾರ ಸಿನಿಮಾ ತೆಲುಗು ರಾಜ್ಯಗಳಲ್ಲಿ ಭಾರೀ ಯಶಸ್ಸು ಗಳಿಸಿತ್ತು. ಪ್ಯಾನ್-ಇಂಡಿಯಾ ಸಿನಿಮಾವಾಗಿರುವ ಕಾಂತಾರ: ಚಾಪ್ಟರ್-1 ಗೂ ಅಭಿಮಾನಿಗಳ ನಿರೀಕ್ಷೆ ದೊಡ್ಡದಾಗಿದೆ.
ಕಟ್ಟುನಿಟ್ಟಿನ ಆಧ್ಯಾತ್ಮಿಕ ನಿಯಮ ಪಾಲಿಸಿದ್ದ ರಿಷಬ್
ಮೂರು ವರ್ಷಗಳಿಂದ ತಯಾರಾದ ಕಾಂತಾರ: ಚಾಪ್ಟರ್-1 ಚಿತ್ರ ಅ.2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಶತಮಾನಗಳ ಹಿಂದಿನ ಕಥೆಯೇ ಚಿತ್ರದ ಕಥಾವಸ್ತುವಾಗಿದೆ. ಅರಣ್ಯ ಪುರಾಣ, ಆಚರಣೆ, ನಂಬಿಕೆಗಳನ್ನು ಆಳವಾಗಿ ತೋರಿಸುವ ಈ ಚಿತ್ರ 2022ರಲ್ಲಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. ಈಗ ಕಾಂತಾರಾ ಅಧ್ಯಾಯ-1 ಮೂಲ ಚಿತ್ರದ ಲೋಕವನ್ನು ಇನ್ನಷ್ಟು ವಿಸ್ತರಿಸಲಿದೆ. ಮೊದಲ ಚಿತ್ರದ ವಾತಾವರಣ ಮತ್ತು ನೈಜ ಭಾವನೆಗಳನ್ನೇ ಈ ಚಿತ್ರ ಒಳಗೊಂಡಿದೆ. ಚಿತ್ರದ ಮುನ್ನೋಟವು ಭವ್ಯ ದೃಶ್ಯಾವಳಿ, ಸಾವಿರಾರು ಕಲಾವಿದರು ಭಾಗವಹಿಸಿದ ಯುದ್ಧ ದೃಶ್ಯಗಳನ್ನು ಒಳಗೊಂಡಿದೆ. ಬಲ್ಗೇರಿಯಾ, ಕನ್ನಡ ಮತ್ತು ತಮಿಳು ಸ್ಟಂಟ್ ತಜ್ಞರು ಸೇರಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಮೊದಲ ಚಿತ್ರ ಕಾಂತಾರ ಚಿತ್ರದಲ್ಲಿ ಭೂತ ಕೋಲ ದೃಶ್ಯಗಳಲ್ಲಿ ಅವರು ವಿಶೇಷ ಕ್ರಮ ಪಾಲಿಸಿದ್ದರು. ಶೂಟಿಂಗ್ ಮುಂಚಿನ 20–30 ದಿನ ಮಾಂಸಾಹಾರ ಬಿಟ್ಟು, ವೇಷದಲ್ಲಿ ಇರುವಾಗ ತೆಂಗಿನಕಾಯಿ ನೀರು ಮಾತ್ರ ಸೇವಿಸಿ, ಚಿತ್ರೀಕರಣದ ಮೊದಲು ಮತ್ತು ನಂತರ ಪ್ರಸಾದ ಸ್ವೀಕರಿಸಿದ್ದರು. ಅಲ್ಲದೆ ಆ ದೃಶ್ಯಗಳಿಗೆ ಅತಿ ಕಡಿಮೆ ಸಿಬ್ಬಂದಿ ಮಾತ್ರ ಹಾಜರಾಗುವಂತೆ ನೋಡಿಕೊಂಡಿದ್ದರು. ಈ ಸಿನಿಮಾಕ್ಕೂ ರಿಷಬ್ ಕಟ್ಟುನಿಟ್ಟಿನ ವೃತ ಪಾಲಿಸಿದ್ದರು.
ಅಕ್ಟೋಬರ್ 2ರಂದು ಚಿತ್ರ ತೆರೆಗೆ
'ಕಾಂತಾರ: ಚಾಪ್ಟರ್ 1' ಚಿತ್ರವು 2022ರಲ್ಲಿ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ 'ಕಾಂತಾರ' ಸಿನಿಮಾದ ಪ್ರೀಕ್ವೆಲ್ ಆಗಿದೆ. ಈ ಚಿತ್ರ ಅಕ್ಟೋಬರ್ 2, 2025ರಂದು ಗಾಂಧಿ ಜಯಂತಿಯ ಪ್ರಯುಕ್ತ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ಮತ್ತು ಖ್ಯಾತ ಬಾಲಿವುಡ್ ನಟ ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್, ದೃಶ್ಯ ವೈಭವ, ಅದ್ಧೂರಿತನ ಮತ್ತು ನಿಗೂಢ ಕಥಾಹಂದರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.