ಕನ್ನಡದ ಮೊದಲ ಕೃತಕ ಬುದ್ಧಿಮತ್ತೆಯ ಚಿತ್ರ ‘ಲವ್ ಯು’ ಬಿಡುಗಡೆಗೆ ಸಿದ್ಧ …

ರವಿಚಂದ್ರನ್‍ ಅವರು ತಮ್ಮ ಮುಂದಿನ ಚಿತ್ರಕ್ಕೆ ವ್ಯಾಪಕವಾಗಿ AI ಬಳಸಿಕೊಳ್ಳುತ್ತಿರುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ, ಅವರಿಗಿಂತ ಮೊದಲೇ AI ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಚಿತ್ರ ಮಾಡಲಾಗಿದೆ.;

Update: 2025-04-18 01:30 GMT

ಕನ್ನಡ ಎಐ ಸಿನಿಮಾದ ಚಿತ್ರ.

ಸುಮಾರು ಎರಡು ವರ್ಷಗಳ ಹಿಂದೆ ಡಾ. ಮಹೇಶ್‍ ಬಾಬು ಎನ್ನುವವರು ಎಐ ತಂತ್ರಜ್ಞಾನ (Artificial Intelligence) ಬಳಸಿ ‘COZ I LUV U’ ಎಂಬ ಹಾಡು ಮಾಡಿದ್ದರು. ಈ ಹಾಡಿನ ವಿಶೇಷತೆಯೆಂದರೆ, ಈ ಹಾಡನ್ನು ಯಾವ ಗಾಯಕ-ಗಾಯಕಿಯೂ ಹಾಡಿಲ್ಲ. ಸಾಹಿತ್ಯವನ್ನು ಸಾಫ್ಟ್​ವೇರ್​ ಫೀಡ್ ಮಾಡಿ, ಗಂಡು ಮತ್ತು ಹೆಣ್ಣಿನ ಧ್ವನಿಯನ್ನು ಹೊರಹೊಮ್ಮಿಸಲಾಗಿತ್ತು. ಈಗ AI ತಂತ್ರಜ್ಞಾನದ ಮೂಲಕವೇ ಇಡೀ ಚಿತ್ರವನ್ನು ಸೃಷ್ಟಿಸಲಾಗಿದೆ. ಅದೇ ‘ಲವ್‍ ಯೂ’.

ರವಿಚಂದ್ರನ್‍ ಅವರು ತಮ್ಮ ಮುಂದಿನ ಚಿತ್ರಕ್ಕೆ ವ್ಯಾಪಕವಾಗಿ AI ಬಳಸಿಕೊಳ್ಳುತ್ತಿರುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ, ಅವರಿಗಿಂತ ಮೊದಲೇ AI ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಚಿತ್ರ ಮಾಡಲಾಗಿದ್ದು, ಈಗಾಗಲೇ ಸೆನ್ಸಾರ್‍ ಸಹ ಆಗಿದೆ. ಚಿತ್ರಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದ್ದು, ಭಾರತದ ಮೊದಲ AI ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 

ಕ್ಯಾಮೆರಾ ಬಳಸದೆ ಸೃಷ್ಟಿಯಾದ ಚಿತ್ರ ಇದು

‘ಲವ್ ಯೂ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತವರು ಎಸ್‍. ನರಸಿಂಹಮೂರ್ತಿ. ಇನ್ನು, ಈ ಚಿತ್ರವನ್ನು AIನಲ್ಲಿ ಮೂಲಕ ಸೃಷ್ಟಿಸಿರುವುದು ನೂತನ್‍. ವಿಶೇಷವೆಂದರೆ, ಈ ಚಿತ್ರಕ್ಕೆ ಕ್ಯಾಮೆರಾ ಬಳಸದೆ, ಕಂಪ್ಯೂಟರ್‍ನಲ್ಲೇ ಸೃಷ್ಟಿ ಮಾಡಲಾಗಿದೆ. ಚಿತ್ರದಲ್ಲಿ ಬರುವ ಪ್ರತಿ ಪಾತ್ರ, ಅವುಗಳ ಸಂಭಾಷಣೆ, ಸಂಗೀತ ಸಂಯೋಜನೆ, ಛಾಯಾಗ್ರಹಣ, ಸೌಂಡ್ ಡಿಸೈನ್, ಹಿನ್ನೆಲೆಯಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ AI ತಂತ್ರಜ್ಞಾನ ಬಳಕೆ ಮಾಡಿ, ಚಿತ್ರವನ್ನು ಸೃಷ್ಟಿ ಮಾಡಲಾಗಿದೆ.

ಭಾರತದ ಮೊದಲ ಪೂರ್ಣಪ್ರಮಾಣದ AI ಚಿತ್ರ ಆಗುವ ಸಾಧ್ಯತೆ

ಪಂಜಾಬಿ ಭಾಷೆಯಲ್ಲಿ ಈಗಾಗಲೇ ‘ಮಹಾರಾಜ ಎಂಬ ಡೆನಿಮ್ಸ್’ ಎಂಬ ಸಂಪೂರ್ಣ AI ಮೂಲಕ ಸೃಷ್ಟಿಯಾದ ಚಿತ್ರವು ತಯಾರಾಗಿದ್ದು, ಕಳೆದ ವರ್ಷ ಚಿತ್ರದ ಟ್ರೇಲರ್‍ ಸಹ ಬಿಡುಗಡೆಯಾಗಿತ್ತು. ಈ ಚಿತ್ರವು ಖುಷ್ವಂತ್‍ ಸಿಂಗ್‍ ಅವರ ಅದೇ ಹೆಸರಿನ ಕಾದಂಬರಿಯನ್ನಾಧರಿಸಿದ ಚಿತ್ರವಾಗಿದ್ದು, ಈ ಚಿತ್ರವು ಜೂನ್‍ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕೂ ಮೊದಲೇ ಕನ್ನಡದ ‘ಲವ್‍ ಯೂ’ ಚಿತ್ರ ಸೆನ್ಸಾರ್‍ ಮಂಡಳಿಯಿಂದ ಪ್ರಮಾಣ ಪತ್ರವನ್ನೂ ಪಡೆದಿದ್ದು, ಮೇ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ‘ಲವ್ ಯೂ’ ಮೊದಲು ಬಿಡುಗಡೆಯಾದರೆ, ಭಾರತದ ಮೊದಲ ಪೂರ್ಣಪ್ರಮಾಣದ AI ಚಿತ್ರ ಎಂಬಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

 

ಇದು ಬರೀ ಚಿತ್ರವಲ್ಲ, ಹೊಸ ಕ್ರಾಂತಿ

ಈ ಚಿತ್ರದ ಕುರಿತು ಮಾತನಾಡುವ ನರಸಿಂಹಮೂರ್ತಿ, ‘ಕಥೆ, ಸಾಹಿತ್ಯ, ಸಂಭಾಷಣೆ ಹೊರತುಪಡಿಸಿದರೆ, ಮಿಕ್ಕೆಲ್ಲವನ್ನೂ AI ತಂತ್ರಜ್ಞಾನದ ಮೂಲಕವೇ ಮಾಡಲಾಗಿದೆ. ಇದು ಕೇವಲ ಸಿನಿಮಾ ಅಲ್ಲ, ಇದೊಂದು ಕ್ರಾಂತಿ. ಕಥೆಯ ನಿರೂಪಣೆ ಮತ್ತು ತಂತ್ರಜ್ಞಾನ ಸರಾಗವಾಗಿ ಬೆರೆಯುವ ಹೊಸ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ. ಕನ್ನಡ ಸಿನಿಮಾ ಜಾಗತಿಕ ಮಟ್ಟದಲ್ಲಿ ಇಂಥದ್ದೊಂದು ಬದಲಾವಣೆಗೆ ಉದಾಹರಣೆಯಾಗಿದೆ’ ಎನ್ನುತ್ತಾರೆ.

ಒಂದು ಕೋಣೆಯೊಳಗೆ ಇಡೀ ಚಿತ್ರ ಸೃಷ್ಟಿ

ಈ ಚಿತ್ರವನ್ನು ಒಂದು ರೂಮಿನಲ್ಲಿ, ಒಂದು ಕಂಪ್ಯೂಟರ್‍ ಇಟ್ಟುಕೊಂಡು, 20ಕ್ಕೂ ಹೆಚ್ಚು ಸಾಫ‍್ಟ್ವೇರ್‍ಗಳನ್ನು ಬಳಸಿ ಸೃಷ್ಟಿಸಲಾಗಿದೆಯಂತೆ. ಈ ಕುರಿತು ಮಾತನಾಡುವ AI ಇಂಜಿನಿಯರ್ ನೂತನ್‍, ‘ಇಡೀ ಚಿತ್ರವನ್ನು ಒಂದು ಕೋಣೆಯೊಳಗೆ ಸೃಷ್ಟಿ ಮಾಡಿದ್ದೇವೆ. ಯಾವುದೇ ಕ್ಯಾಮೆರಾದ ಸಹಾಯವಿಲ್ಲದೆ, ಬರೀ ಒಂದು ಕಂಪ್ಯೂಟರ್‍ನಲ್ಲಿ, ಹಲವು ಸಾಫ್ಟ್ವೇರ್‍ಗಳನ್ನು ಬಳಸಿಕೊಂಡು ಈ ಚಿತ್ರ ಮಾಡಿದ್ದೇವೆ. ಇದು ನಮಗೆ ಒಂದು ದೊಡ್ಡ ಕಲಿಕೆ. ಕಲಿಯುತ್ತಾ ಕಲಿಯುತ್ತಾ ಈ ಚಿತ್ರ ಮಾಡಿದ್ದೇವೆ. ಚಿತ್ರದಲ್ಲಿ 12 ಹಾಡುಗಳಿವೆ. ಒಂದು ಸಣ್ಣ ಗನ್‍ಫೈಟ್‍ ಸಹ ಇದೆ’ ಎನ್ನುತ್ತಾರೆ.

ಕಡಿಮೆ ವೆಚ್ಚದಲ್ಲಿ ದೊಡ್ಡ ಚಿತ್ರಗಳ ನಿರ್ಮಾಣ ಸಾಧ್ಯತೆ

ನಾವಿನ್ನೂ AIನ ಬಾಲ್ಯಾವಸ್ಥೆಯಲ್ಲಿ ಇದ್ದೇವೆ ಎನ್ನುವ ನೂತನ್‍, ‘ಇನ್ನೊಂದು ಆರು ತಿಂಗಳಲ್ಲಿ ಈ ತಂತ್ರಜ್ಞಾನ ಇನ್ನಷ್ಟು ಬೆಳೆಯಲಿದ್ದು, ಕಡಿಮೆ ವೆಚ್ಚದಲ್ಲಿ ಯಾರಿಗೂ ಕಾಯದೇ ದೊಡ್ಡದೊಡ್ಡ ಚಿತ್ರಗಳನ್ನು ಮಾಡಿ ಮುಗಿಸಬಹುದು. ‘ಬಾಹುಬಲಿ’ ತರಹದ ಚಿತ್ರಗಳನ್ನು ಲಕ್ಷಗಳಲ್ಲಿ ಮಾಡಿ ಮುಗಿಸಬಹುದು. ಬೇರೆ ಚಿತ್ರಗಳಿಗೆ ಹೋಲಿಸಿದರೆ ಸ್ವಲ್ಪ ಸಮಯ ಹೆಚ್ಚು ಬೇಕಾಗಬಹುದು ಎಂಬುದನ್ನು ಬಿಟ್ಟರೆ, ಕಡಿಮೆ ಬಜೆಟ್‍ನಲ್ಲಿ ಮಾಡಬಹುದು. ನಮ್ಮ ಚಿತ್ರದ ಅವಧಿ 95 ನಿಮಿಷಗಳಾದರೂ, ಸುಮಾರು ಸಾವಿರ ಗಂಟೆಯ ವೇಸ್ಟೇಜ್‍ ಇದೆ. ನಾವು ಕೇಳಿದ್ದನ್ನೆಲ್ಲಾ ಅದು ಕೊಡುವುದಿಲ್ಲ. ಅದು ಕೊಟ್ಟಿದ್ದರಲ್ಲ ನಾವು ಅತ್ಯುತ್ತಮವಾದುದನ್ನು ಬಳಸಿಕೊಳ್ಳಬೇಕು. ಹಾಗಾಗಿ, ಸಮಯ ಜಾಸ್ತಿಯಾಗುತ್ತದೆ’ ಎನ್ನುತ್ತಾರೆ.

‘ಲವ್‍ ಯೂ’ ಚಿತ್ರದಲ್ಲಿ 15 ಪಾತ್ರಗಳಿದ್ದು, ಎಲ್ಲಾ ಪಾತ್ರಧಾರಿಗಳನ್ನು AI ಮೂಲಕ ಸೃಷ್ಟಿ ಮಾಡಲಾಗಿದೆ. ಚಿತ್ರದ ನಾಯಕ-ನಾಯಕಿಗೆ ನೂತನ್‍ AI ಮತ್ತು ಅಶ್ವಿನಿ AI ಎಂಬ ಹೆಸರು ಇಡಲಾಗಿದ್ದು, ನೂತನ್‍ ಮತ್ತು ಅಶ್ವಿನಿ ಇಬ್ಬರೂ ಕನ್ನಡದ ಮೊದಲ AI ನಾಯಕ-ನಾಯಕಿಯರೆನಿಸಿಕೊಂಡಿದ್ದಾರೆ.

Tags:    

Similar News