ಕಣ್ಮಣಿ ಅನ್ಬೋಡು ಕಾದಲನ್… ವೈರಲ್‌ ಆಗಿದ್ದು ಆ ಒಂದು ಸಿನಿಮಾದಿಂದ

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದ ಗಳಿಕೆ ಮಿತಿ ಮೀರಿದೆ. ಇದೀಗ ಈ ಸಿನಿಮಾ 200 ಕೋಟಿ ಕ್ಲಬ್‌ ಸೇರಿದೆ.;

Update: 2024-03-22 10:20 GMT
Click the Play button to listen to article

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕರಿಮಣಿ ಹಾಡು ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಕಣ್ಮಣಿ ಹಾಡಿನ ಸರದಿ. 1991ರಲ್ಲಿ ರಿಲೀಸ್ ಆದ ಕಮಲ್ ಹಾಸನ್ ನಟನೆಯ ‘ಗುಣ’ ಚಿತ್ರದ ‘ಕಣ್ಮಣಿ ಅನ್ಬೋದು ಕಾದಲನ್’ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸುತ್ತಿದೆ.

ಕ್ರೀಯೇಟರ್ಸ್‌ಗಳು ತಮ್ಮ ರೀಲ್ಸ್‌ಗಳಿಗೆ ಈ ಹಾಡನ್ನೇ ಅಪ್ಲೋಡ್‌ ಮಾಡಿ ವಿವಿಧ ರೀಲ್ಸ್‌ಗಳನ್ನು ಕ್ರಿಯೇಟ್‌ ಮಾಡುತ್ತಿದ್ದಾರೆ. ಆದ್ರೆ ಈ ಹಾಡು ಟ್ರೆಂಡ್‌ ಆಗಲು ಕಾರಣ ಮಲಯಾಳಂನ ಆ ಒಂದು ಸಿನಿಮಾ. ಅದುವೇ ʼಮಂಜುಮ್ಮೇಲ್ ಬಾಯ್ಸ್ʼ.

ಇತ್ತೀಚೆಗೆ (ಫೆ. 22) ತೆರೆಕಂಡ ‘ಮಂಜುಮ್ಮೇಲ್ ಬಾಯ್ಸ್’ ಎಂಬ ಮಲಯಾಳಂ ಸಿನಿಮಾ ಸೂಪರ್‌ಹಿಟ್‌ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ಯಾವುದೇ ಹೀರೋಯಿನ್‌ ಇಲ್ಲದೆ ಇರುವುದು ಇನ್ನೊಂದು ವಿಶೇಷ. ಸಿಂಪಲ್‌ ಆಗಿ ನೈಜ ಕಥೆಯನ್ನು ಆಧಾರಿಸಿ ಮಾಡಿರುವ ಈ ಸಿನಿಮಾ ಮಲಯಾಳಂ ಚಿತ್ರರಂಗದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಹೊರ ಹೊಮ್ಮಿದೆ. ಈ ಚಿತ್ರವನ್ನು ಚಿದಂಬರಂ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಮೈನವಿರೇಳುವ ರೀತಿಯಲ್ಲಿ ಕಟ್ಟಿಕೊಡಲಾಗಿದೆ. ಅಡ್ವೆಂಚರ್‌ ಥ್ರಿಲ್ಲರ್‌ ಆಗಿರುವ ಈ ಸಿನಿಮಾ ಪ್ರೇಕ್ಷಕರನ್ನು ಒಮ್ಮೆಗೆ ಮೂಕವಿಸ್ಮಿತರನ್ನಾಗಿ ಮಾಡುವುದು ಸುಳ್ಳಲ್ಲ.

ಮಂಜುಮ್ಮೇಲ್ ಬಾಯ್ಸ್‌ ಸಿನಿಮಾ ತಂಡ 

ಸಿನಿಮಾ ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಇಂದಿಗೂ ಹೌಸ್‌ಫುಲ್‌ ಎನಿಸಿಕೊಂಡಿದೆ. ಇನ್ನೊಂದು ವಿಶೇಷತೆ ಎಂದರೆ, ಬೆಂಗಳೂರಿನಲ್ಲಿ ಈ ಸಿನಿಮಾಗೆ ಯಾವುದೇ ರೀತಿಯ ಸುದ್ದಿಗೋಷ್ಠಿ, ತಂಡದವರ ಪ್ರಚಾರ ಯಾವುದೂ ಸಿಕ್ಕಿರಲಿಲ್ಲ. ಕೇವಲ ಸಿನಿಮಾಗೆ ಬಾಯಿ ಮಾತಿನ ಪ್ರಚಾರ ಸಿಗುತ್ತಿದ್ದು, ಬೆಂಗಳೂರಿನ ಟಿಯೇಟರ್‌ಗಳು ಹೌಸ್‌ಫುಲ್‌ ಆಗಿವೆ. ಬೆಂಗಳೂರಿನಲ್ಲಿ ಈ ಚಿತ್ರಕ್ಕೆ 180ಕ್ಕೂ ಅಧಿಕ ಶೋಗಳು ಸಿಕ್ಕಿವೆ.

ಸಿನಿಮಾದ ಕಥೆ ಏನು?

ಈ ಸಿನಿಮಾವನ್ನು ಕೇರಳದಲ್ಲಿ ನಡೆದ ನೈಜ ಕಥೆಯನ್ನಾಧರಿ ಮಾಡಲಾಗಿದೆ. 2006ರಲ್ಲಿ ನಡೆದ ಘಟನೆ. ಕೇರಳದಿಂದ ತಮಿಳುನಾಡಿನ ಕೊಡೈಕೆನಲ್​ಗೆ ಫ್ರೆಂಡ್ಸ್ ಗ್ರೂಪ್ ಒಂದು ಟ್ರಿಪ್ ತೆರಳುತ್ತದೆ. ಇಲ್ಲಿ ಗುಣ ಕೇವ್​​ನಲ್ಲಿ ಡೆವಿಲ್ಸ್ ಕಿಚನ್ ಹೆಸರಿನ ದೊಡ್ಡ ಹೊಂಡ ಇದೆ. ಇದು ತುಂಬಾನೇ ಆಳ ಇರುತ್ತದೆ. ಇದರಲ್ಲಿ ಸುಭಾಷ್ ಎಂಬಾತ ಬೀಳುತ್ತಾನೆ. ಆತನ ಹೊರ ತೆಗೆಯುವ ಸಾಹಸದ ಕಥೆಯೇ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ. 

2006 ರಲ್ಲಿ ಗುಣ ಕೇವ್‌ಗೆ ತೆಳಿದ ರಿಯಲ್‌ ಮಂಜುಮ್ಮೇಲ್ ಬಾಯ್ಸ್‌ ಗ್ಯಾಂಗ್‌ 

 ‘ಮಂಜುಮ್ಮೇಲ್ ಬಾಯ್ಸ್’ ಚಿತ್ರಕ್ಕೂ ‘ಗುಣ’ ಚಿತ್ರಕ್ಕೂ ಏನು ಲಿಂಕ್‌

1991ರಲ್ಲಿ ಕಮಲ್ ಹಾಸನ್, ರೇಖಾ ನಟನೆಯ ಸನಾತನ ಭಾರತಿ ನಿರ್ದೇಶನದಲ್ಲಿ ‘ಗುಣ’ ತಮಿಳು ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾದ ಚಿತ್ರೀಕರಣ ನಡೆದಿದ್ದು, ಕೊಡೈಕೆನಲ್​ನ ‘ಗುಣ ಕೇವ್‌ʼ ನಲ್ಲಿ. ಈ ಚಿತ್ರ ಶೂಟ್ ಆದ ಕಾರಣದಿಂದಲೇ ಇದಕ್ಕೆ ಗುಣ ಕೇವ್ ಎನ್ನುವ ಹೆಸರು ಬಂತು. ಈ ಚಿತ್ರದ ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡು ಚಿತ್ರೀಕರಣಗೊಂಡಿದ್ದು, ಈ ಗುಣ ಕೇವ್ ನಲ್ಲೇ. ಈ ಹಾಡು ಆಗಿನ ಕಾಲದಲ್ಲಿಯೇ ಸಾಕಷ್ಟು ಗಮನ ಸೆಳೆದಿತ್ತು.

ಮಂಜುಮ್ಮೇಲ್ ಬಾಯ್ಸ್ ಸಿನಿಮಾದಲ್ಲಿ ಬರುವ ಬಾಯ್ಸ್ ಗ್ಯಾಂಗ್‌ಗೆ ‘ಗುಣ’ ಗುಹೆ ಪ್ರದೇಶಕ್ಕೆ ಹೋಗಬೇಕು ಎಂದು ಅನಿಸುವುದೇ ‘ಗುಣ’ ಚಿತ್ರದಿಂದ. ಹಾಗಾಗಿ ಈ ಸಿನಿಮಾದಲ್ಲಿ ಬರುವ ‘ಕಣ್ಮಣಿ..’ ಹಾಡು ‘ಮಂಜುಮ್ಮೇಲ್ ಬಾಯ್ಸ್’ ಚಿತ್ರದುದ್ದಕ್ಕೂ ಆಗಾಗ ಬರುತ್ತಿರುತ್ತದೆ. ಈ ಕಾರಣದಿಂದಲೇ ಇನ್​ಸ್ಟಾಗ್ರಾಮ್​ನಲ್ಲಿ ಈ ಹಾಡು ಮತ್ತೆ ಟ್ರೆಂಡ್ ಆಗುತ್ತಿದೆ. ಹೊಸ ಹೊಸ ರೀಲ್ಸ್​ಗಳಿಗೆ ಈ ಹಾಡು ಬಳಕೆ ಆಗುತ್ತಿದೆ.

 4-5 ಕೋಟಿ ಬಜೆಟ್ ಸಿನಿಮಾ ೨೦೦ ಕೋಟಿ ಗಳಿಕೆ

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದ ಬಜೆಟ್ 4-5 ಕೋಟಿ ರೂಪಾಯಿ ಇದೆ ಎಂದು ಅಂದಾಜಿಸಲಾಗಿದೆ. ಆದರೆ, ಸಿನಿಮಾದ ಗಳಿಕೆ ಮಿತಿ ಮೀರಿದೆ. ಇದೀಗ ಈ ಸಿನಿಮಾ 200 ಕೋಟಿ ಕ್ಲಬ್‌ ಸೇರಿದೆ. ಸೌಬಿನ್ ಶಹೀರ್‌, ಶ್ರೀನಾತ್ ಭಾಶಿ, ಬಾಲು ವರ್ಗೀಶ್ ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲಿ ಸೌಬಿನ್ ಶಬೀರ್ ಅವರದ್ದು ದೊಡ್ಡ ಪಾಲಿದೆ.

ಈ ಚಿತ್ರ ಕೇರಳ ಮಾತ್ರವಲ್ಲದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ನೈಜ ಕಥೆಯನ್ನು ಬಹಳ ನವಿರಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಚಿದಂಬರಂ ಚಿತ್ರದ ಕೊನೆಯವರೆಗೂ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸುತ್ತಾರೆ. ಸಿನಿಮಾ ಮುಗಿದ ಬಳಿಕವೂ ಆ ಪಾತ್ರಗಳು ನಿಮ್ಮನ್ನು ಕಾಡದೇ ಇರಲಾರವು.

Tags:    

Similar News