71 ನೇ ವಸಂತಕ್ಕೆ ಕಾಲಿಟ್ಟ ಕಮನ್‌ ಹಾಸನ್‌| 'ಕೋಕಿಲ'ದಿಂದ 'ರಾಮ ಶಾಮ ಭಾಮ'ವರೆಗೆ ನಟನ ಹೆಜ್ಜೆಗುರುತು

ಕಮಲ್ ಹಾಸನ್ ಅವರು ಕೇವಲ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಕ್ಕೆ ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೂ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ದಶಕಗಳ ಹಿಂದೆ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಇಲ್ಲಿನ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

Update: 2025-11-07 07:09 GMT

೭೧ ನೇ ವಯಸ್ಸಿಗೆ ಕಾಲಿಟ್ಟ ನಟ ಕಮಲ್‌ ಹಾಸನ್‌ 

Click the Play button to listen to article

ಭಾರತೀಯ ಸಿನಿಮಾ ರಂಗದ ದಂತಕಥೆ, ಬಹುಮುಖ ಪ್ರತಿಭೆಯ ನಟ ಕಮಲ್ ಹಾಸನ್ ಅವರು ಇಂದು ತಮ್ಮ 71ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಈ ಕಲಾವಿದ, ತಮ್ಮ ನಟನೆ, ನಿರ್ದೇಶನದ ಮೂಲಕ ಚಲನಚಿತ್ರ ಉದ್ಯಮಕ್ಕೆ ಹೊಸ ದಿಕ್ಕು ನೀಡಿದ್ದಾರೆ.

'ನಾಯಕನ್' ಸಿನಿಮಾದಿಂದ ಹಿಡಿದು ಇತ್ತೀಚಿನ 'ವಿಕ್ರಮ್'ವರೆಗೂ ಅವರು ನಿರಂತರವಾಗಿ ಹೊಸ ವಿಷಯಗಳನ್ನು ನೀಡುತ್ತಲೇ ಬಂದಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲದೆ, ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ತಮ್ಮ ವಿಶಿಷ್ಟ ಪ್ರಯೋಗಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಕಮಲ್ ಹಾಸನ್ ಅವರು ಕೇವಲ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಕ್ಕೆ ಮಾತ್ರವಲ್ಲದೆ, ಕನ್ನಡ ಚಿತ್ರರಂಗಕ್ಕೂ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ದಶಕಗಳ ಹಿಂದೆ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿ, ಇಲ್ಲಿನ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.

ಕಮಲ್ ಹಾಸನ್ ಅವರು ಕನ್ನಡಕ್ಕೆ ಪದಾರ್ಪಣೆ ಮಾಡಿದ್ದು 1977ರಲ್ಲಿ ತೆರೆಕಂಡ 'ಕೋಕಿಲ' ಚಿತ್ರದ ಮೂಲಕ. ಬಾಲು ಮಹೇಂದ್ರ ಅವರ ನಿರ್ದೇಶನದ ಈ ಚಿತ್ರದಲ್ಲಿ ಅವರು ವಿಜಯ್‌ಕುಮಾರ್ ಪಾತ್ರವನ್ನು ನಿರ್ವಹಿಸಿದ್ದರು. ಕಮಲ್ ಅವರಿಗೆ ಜೋಡಿಯಾಗಿ ಶೋಭಾ ನಟಿಸಿದ್ದರು. ವಿಶೇಷವೆಂದರೆ, ಕನ್ನಡ ಭಾಷೆ ಪೂರ್ಣವಾಗಿ ತಿಳಿದಿಲ್ಲದಿದ್ದರೂ, ಅವರು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಈ ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ಲಭಿಸಿದ್ದವು. 

 ಬಳಿಕ ಕೆ. ಬಾಲಚಂದರ್ ನಿರ್ದೇಶನದ 'ತಪ್ಪಿದ ತಾಳ' (1978) ಚಿತ್ರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆಗೆ ಅಮ್ರಿತ್ ಲಾಲ್ ಎಂಬ ಸಣ್ಣ ಪಾತ್ರದಲ್ಲಿ ಕಮಲ್‌ ಹಾಸನ್‌ ಕಾಣಿಸಿಕೊಂಡಿದ್ದರು.ಇದರಲ್ಲಿ ರಜನಿಕಾಂತ್‌ ಹೀರೋ, ಸರಿತಾ ನಾಯಕಿಯಾಗಿ ಅಭಿನಯಿಸಿದ್ದರು. 70ರ ದಶಕದಲ್ಲಿ ಕಮಲ್‌ ಸ್ಟಾರ್ ನಟ. ಹೀಗಿದ್ದರೂ ಈ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ನಿಭಾಯಿಸಿದ್ದು ವಿಶೇಷ.

1980 ರಲ್ಲಿ ತೆರೆಕಂಡ ದ್ವಿಭಾಷಾ ಚಿತ್ರ 'ಮರಿಯಾ ಮೈ ಡಾರ್ಲಿಂಗ್'ನಲ್ಲಿ ಅವರು ದ್ವಿಪಾತ್ರದಲ್ಲಿ ಮಿಂಚಿದ್ದರು. ದುರೈ ನಿರ್ದೇಶನ ಮಾಡಿದ್ದ ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ಗೆ ಜೋಡಿಯಾಗಿ ಶ್ರೀಪ್ರಿಯಾ ನಟಿಸಿದ್ದರು.  

 ಸುಹಾಸಿನಿ ಮುಖ್ಯಭೂಮಿಕೆಯಲ್ಲಿದ್ದ ಕೆ. ಬಾಲಚಂದರ್ ಅವರ ಮತ್ತೊಂದು ಚಿತ್ರ 'ಬೆಂಕಿಯಲ್ಲಿ ಅರಳಿದ ಹೂವು'ದಲ್ಲಿ (1983) ಕಮಲ್ ಹಾಸನ್ ಅವರು ಬಸ್ ಕಂಡಕ್ಟರ್ ಪಾತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದು, "ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ.." ಎಂಬ ಹಾಡು ಇಂದಿಗೂ ಜನಪ್ರಿಯವಾಗಿದೆ.

 ತಮ್ಮ ಮೊದಲ ಕನ್ನಡ ಸಿನಿಮಾ ನಂತರ ಸುದೀರ್ಘ 22 ವರ್ಷಗಳ ಬಳಿಕ ಕಮಲ್ ಹಾಸನ್ ಅವರು ರಮೇಶ್ ಅರವಿಂದ್ ಅವರ ನಿರ್ದೇಶನದ ಚೊಚ್ಚಲ ಹಾಸ್ಯಮಯ ಚಿತ್ರ 'ರಾಮ ಶಾಮ ಭಾಮ' (2005) ಮೂಲಕ ಕನ್ನಡಕ್ಕೆ ಭವ್ಯ ಪುನರಾಗಮನ ಮಾಡಿದರು. ತಮಿಳಿನ 'ಸತಿ ಲೀಲಾವತಿ' ಚಿತ್ರದ ರಿಮೇಕ್ ಆಗಿದ್ದರೂ, ಈ ಚಿತ್ರದಲ್ಲಿ ಅವರ ಕಾಮಿಡಿ ಟೈಮಿಂಗ್ ಮತ್ತು ಶ್ರುತಿ ಅವರೊಂದಿಗಿನ ಜೋಡಿ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿತು.

 ಕಮಲ್ ಹಾಸನ್ ಅವರು ತಮ್ಮ ನಟನೆಯ ಮೂಲಕ ಕನ್ನಡ ಸಿನಿಮಾರಂಗದ ಮೇಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಅವರ ಈ ಚಿತ್ರಗಳ ಕೊಡುಗೆಯನ್ನು ಕನ್ನಡಿಗರು ಸ್ಮರಿಸುತ್ತಾರೆ. 

ಬಾಲ ನಟನಾಗಿ ವೃತ್ತಿಜೀವನದ ಆರಂಭ

ಕಮಲ್ ಹಾಸನ್ ಅವರು ಕೇವಲ ನಾಲ್ಕು ವರ್ಷ ವಯಸ್ಸಿನವರಿದ್ದಾಗ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1960 ರ ಚಲನಚಿತ್ರ 'ಕಲತೂರ್ ಕಣ್ಣಮ್ಮ'ದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದರ್ಪಣೆ ಮಾಡಿದ ಅವರು, ತಮ್ಮ ಮೊದಲ ಚಿತ್ರಕ್ಕೇ ರಾಷ್ಟ್ರಪತಿ ಪ್ರಶಸ್ತಿಯನ್ನು ಪಡೆದರು. ಇದು ಅವರ ವೃತ್ತಿಜೀವನದ ಮೊದಲ ಪ್ರಮುಖ ಸಾಧನೆಯಾಗಿದೆ.

ಕಮಲ್‌ ವಿಶೇಷವಾದ ಚಲನಚಿತ್ರಗಳು

1980 ರ ದಶಕದಲ್ಲಿ, ಕಮಲ್ ಹಾಸನ್ ತಮ್ಮ ನಟನಾ ಮಾಂತ್ರಿಕತೆಯಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದರು. 'ಸಾಗರ್ ಸಂಗಮ್', 'ನಾಯಕನ್', 'ಪುಷ್ಪಕ ವಿಮಾನ' ಮತ್ತು 'ಅಪೂರ್ವ ಸಾಗೋಧರರ್ಗಲ್'ನಂತಹ ಚಿತ್ರಗಳ ಮೂಲಕ ಬಾಲಿವುಡ್ ಮತ್ತು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಟ್ಟಿಗೊಳಿಸಿಕೊಂಡರು. 1981 ರಲ್ಲಿ 'ಏಕ್ ದುಜೆ ಕೆ ಲಿಯೇ' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದರು. ಅಷ್ಟೇ ಅಲ್ಲದೆ, ಹಾಲಿವುಡ್ ಚಲನಚಿತ್ರ 'ಮಿಸೆಸ್ ಡೌಟ್‌ಫೈರ್'ನಿಂದ ಪ್ರೇರಿತವಾದ 'ಅವ್ವೈ ಷಣ್ಮುಗಿ' ಮತ್ತು ಹಿಂದಿಯಲ್ಲಿ ಅದರ ರಿಮೇಕ್ ಆದ 'ಚಾಚಿ 420' ನಂತಹ ಚಲನಚಿತ್ರಗಳು ಅವರ ಪ್ರಯೋಗಶೀಲತೆಗೆ ಸಾಕ್ಷಿಯಾಗಿವೆ.

 ಇತ್ತೀಚೆಗೆ ಕಮಲ್ ಹಾಸನ್ ಅವರು 'ಥಗ್ ಲೈಫ್', ಬ್ಲಾಕ್‌ಬಸ್ಟರ್ 'ವಿಕ್ರಮ್' ಮತ್ತು ಪ್ರಭಾಸ್ ಜೊತೆಗಿನ 'ಕಲ್ಕಿ 2989 AD' ಚಿತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಅವರ ನಿವ್ವಳ ಮೌಲ್ಯ ಸುಮಾರು  450 ಕೋಟಿ ರೂ.ಎಂದು ಅಂದಾಜಿಸಲಾಗಿದೆ. ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಅವರ ಮುಂದಿನ ಚಿತ್ರವಾದ 'KH 237' ಅನ್ನು ಘೋಷಿಸಿದೆ. ಜೊತೆಗೆ, ಅವರು ಪ್ರಭಾಸ್ ಜೊತೆಗೆ 'ಕಲ್ಕಿ 2' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. 

ಸದ್ಯ ಇಂದು ತಮ್ಮ 71ನೇ ಜನ್ಮದಿನವನ್ನು ಆಚರಿಸುತ್ತಿರುವ ನಟನಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರ ಶುಭಾಶಯಗಳ ಮಹಪೂರವೇ ಹರಿದು ಬರುತ್ತಿದೆ. 

Tags:    

Similar News