ಪ್ರಭಾಸ್‌ ಅಭಿನಯದಲ್ಲಿ ಹೊಂಬಾಳೆ ಫಿಲಂಸ್‍ ಮೂರು ಸಿನಿಮಾ ನಿರ್ಮಾಣ; 1000 ಕೋಟಿ ಹೂಡಿಕೆ

Update: 2024-11-11 11:30 GMT

ಮುಂದಿನ ಐದು ವರ್ಷಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮೂರು ಸಾವಿರ ಕೋಟಿ ಹೂಡುವುದಾಗಿ ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು, ಕಳೆದ ವರ್ಷದ ಆರಂಭದಲ್ಲಿ ಘೋಷಿಸಿದ್ದರು. ಈ ನಿಟ್ಟಿನಲ್ಲಿ ಅವರು ಪ್ಯಾನ್‍ ಇಂಡಿಯಾ ಸ್ಟಾರ್ ಪ್ರಭಾಸ್‍ ಅಭಿನಯದಲ್ಲಿ ‘ಸಲಾರ್ 2’ ಸೇರಿದಂತೆ ಮೂರು ಚಿತ್ರಗಳನ್ನು ಘೋಷಿಸಿದ್ದು, ಈ ಮೂರು ಚಿತ್ರಗಳಿಗೆ ಒಂದು ಸಾವಿರಕ್ಕೂ ಹೆಚ್ಚು ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.

ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾದ ಹೊಂಬಾಳೆ ಫಿಲಂಸ್‍ ನಿರ್ಮಾಣದ, ಶ್ರೀಮುರಳಿ ಅಭಿನಯುದ ‘ಬಘೀರ’ ಚಿತ್ರವು ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರವು ಮೊದಲ ವಾರ 20 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ. ‘ಬಘೀರ’ವಲ್ಲದೆ ಹೊಂಬಾಳೆ ಫಿಲಂಸ್‍, ರಿಷಭ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ – ಅಧ್ಯಾಯ 1’ ಚಿತ್ರವನ್ನು ನಿರ್ಮಿಸುತ್ತಿದೆ. ಈ ಚಿತ್ರವನ್ನು ಹೊರತುಪಡಿಸಿದರೆ, ಮಿಕ್ಕಂತೆ ಸಂಸ್ಥೆ ಯಾವೊಂದು ಚಿತ್ರವನ್ನೂ ಹೊಸದಾಗಿ ಘೋಷಣೆ ಮಾಡಿರಲಿಲ್ಲ. ಕಳೆದ ವರ್ಷವಷ್ಟೇ, ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ಮುಂದಿನ ಐದು ವರ್ಷಗಳಲ್ಲಿ ಮೂರು ಸಾವಿರ ಕೋಟಿ ರೂ.ಗಳನ್ನು ಮನರಂಜನಾ ಕ್ಷೇತ್ರದಲ್ಲಿ ಹೂಡುವುದಾಗಿ ಘೋಷಿಸಿದ್ದರು. ಆದರೆ, ಈಗ ನೋಡಿದರೆ ಸಂಸ್ಥೆ ಯಾವೊಂದು ಹೊಸ ಚಿತ್ರವನ್ನು ಘೋಷಿಸದಿರುವುದು, ಹೊಂಬಾಳೆ ಫಿಲಂಸ್ ಕ್ರಮೇಣ ಚಿತ್ರ ನಿರ್ಮಾಣದಿಂದೇನಾದರೂ ಹಿಂದೆ ಸರಿಯುತ್ತಿದೆಯಾ ಎಂಬ ಪ್ರಶ್ನೆ ಹಲವರನ್ನು ಕಾಡಿದ್ದು ಸುಳ್ಳಲ್ಲ.

ಅದಕ್ಕೆ ಉತ್ತರವಾಗಿ ವಿಜಯ್‍ ಕಿರಗಂದೂರು, ಇತ್ತೀಚೆಗೆ ಪ್ಯಾನ್‍ ಇಂಡಿಯಾ ನಟ ಪ್ರಭಾಸ್‍ ಅಭಿನಯದಲ್ಲಿ ಮೂರು ಹೊಸ ಚಿತ್ರಗಳನ್ನು ಘೋಷಿಸಿದೆ. ಹೊಂಬಾಳೆ ಫಿಲಂಸ್‍ ಸಂಸ್ಥೆಯು ಈಗಾಗಲೇ ಪ್ರಭಾಸ್‍ ಜೊತೆಗೆ ‘ಸಲಾರ್‍’ ಚಿತ್ರವನ್ನು ನಿರ್ಮಿಸಿದೆ. ‘ಸಲಾರ್‍ 2 – ಶೌರ್ಯಂಗ ಪರ್ವಂ’ ಘೋಷಣೆಯೂ ಆಗಿದೆ. ಇದಲ್ಲದೆ ಇನ್ನೂ ಎರಡು ಹೊಸ ಚಿತ್ರಗಳನ್ನು ಪ್ರಭಾಸ್‍ ಅಭಿನಯದಲ್ಲಿ ಸಂಸ್ಥೆಯು ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಒಟ್ಟಾರೆ ‘ಸಲಾರ್‍ 2’ ಸೇರಿದಂತೆ ಒಟ್ಟು ಮೂರು ಚಿತ್ರಗಳನ್ನು ನಿರ್ಮಿಸುತ್ತಿದೆ.

ಭಾರತದ ಬಹುಬೇಡಿಕೆಯ ನಟ ಪ್ರಭಾಸ್‍

ಪ್ರಭಾಸ್ ಸದ್ಯ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ. ಸದ್ಯ ಮಾರುತಿ ನಿರ್ದೇಶನದ ‘ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‍ ನಟಿಸುತ್ತಿದ್ದು, ಆ ಚಿತ್ರವು 2025ರ ಏಪ್ರಿಲ್‍ 10ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಮುಂಚೆ ಇದೇ ದಿನ ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರವು ಬಿಡಗಡೆಯಾಗಬೇಕಿತ್ತು. ಆ ‘ಟಾಕ್ಸಿಕ್‍’ ಮುಂಡೂಡಲ್ಪಟ್ಟ ಕಾರಣ, ಅದೇ ದಿನ ಈಗ ‘ದಿ ರಾಜಾ ಸಾಬ್‍’ ಬಿಡುಗಡೆಯಾಗುತ್ತಿದೆ. ಇದಲ್ಲದೆ ಸಂದೀಪ್‍ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’, ನಾಗ್‍ ಅಶ್ವಿನ್‍ ನಿರ್ದೇಶನದ ‘ಕಲ್ಕಿ 2’, ಪ್ರಶಾಂತ್‍ ನೀಲ್‍ ನಿರ್ದೇಶನದ ‘ಸಲಾರ್‍ 2 – ಶೌರ್ಯಂಗ ಪರ್ವಂ’ ಮತ್ತು ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಸೇರಿದಂತೆ ಒಂದಿಷ್ಟು ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳೆಲ್ಲವೂ ಮುಂದಿನ ವರ್ಷದಿಂದ ಒಂದರ ಹಿಂದೊಂದು ಪ್ರಾರಂಭವಾಗಲಿದೆ. ಹೀಗಿರುವಾಗಲೇ, ಈ ಪಟ್ಟಿಗೆ ಹೊಂಬಾಳೆ ಫಿಲಂಸ್‍ ನಿರ್ಮಾಣದ ಇನ್ನೂ ಎರಡು ಹೊಸ ಸಿನಿಮಾಗಳು ಸೇರ್ಪಡೆಯಾಗಲಿವೆ.

ಕನ್ನಡದ ‘ಉಗ್ರಂ’ ಆಧರಿಸಿದ ಪ್ರಶಾಂತ್‍ ನೀಲ್‍ ನಿರ್ದೇಶನದ ‘ಸಲಾರ್‍’ ಚಿತ್ರವು ಕಳೆದ ವರ್ಷ ಬಿಡುಗಡೆಯಾಗಿತ್ತು. ಮೊದಲೇ ಈ ಚಿತ್ರದ ಇನ್ನೊಂದು ಭಾಗ ಬರುತ್ತದೆ ಎಂಬ ಸುದ್ದಿ ಇತ್ತಾದರೂ, ಚಿತ್ರದ ಅಂತ್ಯದಲ್ಲಿ ಅದನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಅದರಂತೆ ‘ಸಲಾರ್‍ 2’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿವೆ. ಇದರ ಜೊತೆಗೆ ಪ್ರಭಾಸ್‍ ಜೊತೆಗೆ ಇನ್ನೂ ಎರಡು ಸಿನಿಮಾ ಮಾಡಲು ಹೊಂಬಾಳೆ ನಿರ್ಧರಿಸಿದೆ. ಈ ಚಿತ್ರಗಳು ಯಾವಾಗ ಪ್ರಾರಂಭವಾಗಲಿವೆ ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಏಕೆಂದರೆ, ಪ್ರಭಾಸ್‍ ಸದ್ಯದ ಮಟ್ಟಿಗೆ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟ. ಈಗಾಗಲೇ ಅವರ ಅಭಿನಯದ ಒಂದಿಷ್ಟು ಚಿತ್ರಗಳು ಘೋಷಣೆಯಾಗಿದ್ದು, ಆ ಚಿತ್ರಗಳ ಚಿತ್ರೀಕರಣವೇ ಇನ್ನೂ ಶುರುವಾಗಿಲ್ಲ. ಹಾಗಿರುವಾಗ, ಒಪ್ಪಿರುವ ಚಿತ್ರಗಳನ್ನು ಮುಗಿಸಿ, ಪ್ರಭಾಸ್‍ ಈ ಚಿತ್ರಗಳಲ್ಲಿ ಯಾವಾಗ ನಟಿಸುತ್ತಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ.

ಮೂರೂ ಚಿತ್ರಗಳಿಂದ 1000 ಕೋಟಿ ರೂ. ಹೂಡಿಕೆ

ವಿಶೇಷವೆಂದರೆ, ಈ ಮೂರೂ ಚಿತ್ರಗಳ ಮೇಲೆ ಹೊಂಬಾಳೆ 1000 ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್‍ ಹೂಡಿಕೆ ಮಾಡುತ್ತಿದೆ. ‘ಸಲಾರ್‍’ ಚಿತ್ರಕ್ಕೆ ಸುಮಾರು 270 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗಿತ್ತು. ಅದರ ಮುಂದಿನ ಭಾಗ ಇನ್ನಷ್ಟು ದೊಡ್ಡದಾಗಿರುತ್ತದೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಸಹಜವಾಗಿಯೇ ಬಜೆಟ್‍ ಹೆಚ್ಚಿರಲಿದೆ. ಇನ್ನು, ಉಳಿದ ಎರಡು ಚಿತ್ರಗಳನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬ ಮಾಹಿತಿಯನ್ನು ಚಿತ್ರ ನಿರ್ಮಾಣ ಸಂಸ್ಥೆ ಬಿಟ್ಟುಕೊಟ್ಟಿಲ್ಲ. ಈ ಎರಡೂ ಚಿತ್ರಗಳು ದೊಡ್ಡ ಬಜೆಟ್‍ನಲ್ಲಿ, ದೊಡ್ಡ ಕ್ಯಾನ್ವಾಸ್‍ನಲ್ಲಿ, ಪ್ಯಾನ್‍ ಇಂಡಿಯಾ ಚಿತ್ರಗಳಾಗಿ ನಿರ್ಮಾಣವಾಗಲಿವೆಯಂತೆ. ಒಟ್ಟಾರೆ ಈ ಮೂರು ಚಿತ್ರಗಳಿಂದ ಸಾವಿರ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಕನ್ನಡ ಮೂಲದ ನಿರ್ಮಾಣ ಸಂಸ್ಥೆಯೊಂದು ಚಿತ್ರ ನಿರ್ಮಾಣದಲ್ಲಿ, ಅದೂ ಒಬ್ಬ ನಟನ ಚಿತ್ರ ನಿರ್ಮಾಣದಲ್ಲಿ ಇಷ್ಟೊಂದು ಹಣ ಹೂಡಿಕ ಮಾಡುತ್ತಿರುವುದು ಇದೇ ಮೊದಲು ಎಂದರೆ ತಪ್ಪಿಲ್ಲ.

ಪ್ರಭಾಸ್‍ ಅಭಿನಯದಲ್ಲಿ ಕಾಲಾತೀತ ಚಿತ್ರಗಳ ನಿರ್ಮಾಣ

ಪ್ರಭಾಸ್‍ ಅವರೊಂದಿಗಿನ ಸಹಯೋಗದ ಕುರಿತು ಮಾತನಾಡಿರುವ ವಿಜಯ್ ಕಿರಗಂದೂರು, ‘ಹೊಂಬಾಳೆ ಫಿಲಂಸ್‌ ಮೂಲಕ ನಾವು ಗಡಿಗಳನ್ನು ಮೀರಿದ ಕಥೆ ಹೇಳುವ ಪ್ರಯತ್ನದಲ್ಲಿದ್ದೇವೆ. ಪ್ರಭಾಸ್ ಅವರೊಂದಿಗಿನ ನಮ್ಮ ಸಹಯೋಗವು ಕಾಲಾತೀತವಾದ ಚಿತ್ರವನ್ನು ರೂಪಿಸುವತ್ತ ಒಂದು ಹೆಜ್ಜೆಯಾಗಿದ್ದು, ಅದು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂಬ ನಂಬಿಕೆ ಇದೆ’ ಎಂದು ಹೇಳಿದ್ದಾರೆ.

ಇದಲ್ಲದೆ, ಹೊಂಬಾಳೆ ಫಿಲಂಸ್‍ ಸಂಸ್ಥೆಯು ಕನ್ನಡದಲ್ಲಿ ರಕ್ಷಿತ್‍ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ರಿಚರ್ಡ್ ಆ್ಯಂಟೋನಿ’ ಮತ್ತು ಮಲಯಾಳಂನಲ್ಲಿ ಪೃಥ್ವಿರಾಜ್‍ ಸುಕುಮಾರನ್‍ ಅಭಿನಯದ ಮತ್ತು ನಿರ್ದೇಶನದ ‘ಟೈಸನ್‍’ ಚಿತ್ರಗಳನ್ನು ನಿರ್ಮಿಸುವುದಾಗಿ ಹೊಂಬಾಳೆ ಫಿಲಂಸ್‍ ಸಂಸ್ಥೆಯು ಈಗಾಗಲೇ ಕೆಲವು ವರ್ಷಗಳ ಹಿಂದೆಯೇ ಘೋಷಿಸಿದ್ದು, ಆ ಚಿತ್ರಗಳು ಮುಂದಿನ ದಿನಗಳಲ್ಲಿ ಇನ್ನಷ್ಟೇ ಪ್ರಾರಂಭವಾಗಬೇಕಿದೆ.

Tags:    

Similar News