ಮತ್ತೆ ಲಾಯರ್ ಸಿಎಸ್‌ಪಿ ಆಗಿ ವಾಪಸ್ಸಾಗಲಿದ್ದಾರೆ ಟಿ.ಎನ್‍. ಸೀತಾರಾಂ

Update: 2024-12-09 11:22 GMT

ತಮ್ಮ ಧಾರಾವಾಹಿಗಳಲ್ಲಿ ಲಾಯರ್ ಸಿ.ಎಸ್‍.ಪಿಯಾಗಿ ಮನೆಮನೆಗೂ ಪರಿಚಿತರಾದವರು ಟಿ.ಎನ್‍. ಸೀತಾರಾಂ. ಬರೀ ಆ ಪಾತ್ರದ ಮೂಲಕ ಅವರು ಜನಪ್ರಿಯರಾಗಿದ್ದಷ್ಟೇ ಅಲ್ಲ, ಕೋರ್ಟ್ ಪ್ರಕ್ರಿಯೆಗಳು ಹೇಗೆ ನಡೆಯುತ್ತದೆ ಎಂದು ಜನಸಾಮಾನ್ಯರಿಗೂ ಅರ್ಥವಾಗುವಂತೆ ತಿಳಿಸಿಕೊಟ್ಟರು ಅವರು.

ದೂರದರ್ಶದಲ್ಲಿ ಎರಡೂವರೆ ದಶಕಗಳ ಹಿಂದೆ ಪ್ರಾರಂಭವಾದ ‘ಮನ್ವಂತರ’ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಲಾಯರ್ ಪಾತ್ರದ ಮಾಡಿ, ತುಳಿತಕ್ಕೊಳಗಾದವರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದ ಸೀತಾರಾಂ, ಆ ಪಾತ್ರದಿಂದ ಸಾಕಷ್ಟು ಜನಪ್ರಿಯವಾದರು. ಆ ನಂತರ ಅವರು ‘ಮುಕ್ತ’, ‘ಮುಕ್ತ ಮುಕ್ತ’, ‘ಮತ್ತೆ ಮಾಯಾಮೃಗ’, ‘ಮಗಳು ಜಾನಕಿ’ ಮುಂತಾದ ಧಾರಾವಾಹಿಗಳಲ್ಲಿ ಅವರು ಲಾಯರ್ ಪಾತ್ರವನ್ನು ಮುಂದುವರೆಸಿದರು. ಅದರಲ್ಲೂ ಕೆಲವು ಧಾರಾವಾಹಿಗಳಲ್ಲಿ ಅವರು ಲಾಯರ್ ಸಿ.ಎಸ್‍.ಪಿ (ಚಂದ್ರಶೇಖರ್ ಪ್ರಸಾದ್‍) ಮಾಡಿ ದೊಡ್ಡ ಜನಪ್ರಿಯತೆ ಗಳಿಸಿದರು. ಕಲರ್ಸ್ ಕನ್ನಡದಲ್ಲಿ 2020ರವರೆಗೂ ಪ್ರಸಾರವಾದ ‘ಮಗಳು ಜಾನಕಿ’ವರೆಗೂ ಅವರು ಲಾಯರ್‍ ಸಿ.ಎಸ್‍.ಪಿಯಾಗಿ ಕಾಣಿಸಿಕೊಂಡಿದ್ದರು.

ಇದೀಗ ಅವರು ಪುನಃ ಲಾಯರ್ ಸಿ.ಎಸ್‍.ಪಿಯಾಗಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಧಾರಾವಾಹಿಯೊಂದರಲ್ಲಿ ಅವರು ನಟಿಸುತ್ತಿದ್ದು, ಇತ್ತೀಚೆಗೆ ಪ್ರೋಮೋ ಶೂಟ್‍ ಸಹ ಆಗಿದೆ. ಪುನಃ ಲಾಯರ್‍ ಸಿ.ಎಸ್‍.ಪಿ ಪಾತ್ರದಲ್ಲಿ ನಟಿಸುತ್ತಿರುವ ಕುರಿತು ಟಿ.ಎನ್.ಎಸ್‍ ತಮ್ಮ ಫೇಸ್ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

‘ಪ್ರೀತಿಯ ಗೆಳೆಯ ಕಲರ್ಸ್ ಮುಖ್ಯರಾದ ಪರಮ್ ಕೆಲವು ದಿನಗಳ ಹಿಂದೆ ಫೋನ್ ಮಾಡಿ ನನ್ನ ಸ್ವಂತ ಧಾರಾವಾಹಿ ಶುರು ಮಾಡುತ್ತಿದ್ದೇನೆ, ನೀವು ಪಾತ್ರ ಮಾಡಬೇಕು ಎಂದರು. ಏನು ಕಥೆ, ಏನು ಪಾತ್ರ ಎಂದೆ. ಕೋರ್ಟ್ ಕಥೆ, ನಿಮ್ಮದು ಸಿ.ಎಸ್.ಪಿ. ಪಾತ್ರ ಎಂದರು. ಒಂದು ಕ್ಷಣ ನನ್ನ ಮನಸ್ಸು ಆಕಾಶದಲ್ಲಿ ಹಾರಿ ವಾಪಸ್ ಬಂತು. ನನ್ನ ಇಷ್ಟದ ಪಾತ್ರ, ತಿಂಗಳಗೊಮ್ಮೆ ಕನಸಿನಲ್ಲಿ ಬರುವ ಪಾತ್ರ. ಎರಡು ತಿಂಗಳಿಗೊಮ್ಮೆ ಕನಸಿನಲ್ಲಿ ಪಾಟೀಸವಾಲು ಬರುತ್ತದೆ. ಅರ್ಧ ಸೆಕೆಂಡಿನಲ್ಲಿ ಹೂ ಎಂದೆ. ಮೊನ್ನೆ ಗುರುವಾರ ಪ್ರೊಮೋ ಶೂಟಿಂಗ್ ಆಗಿಯೇ ಹೋಯಿತು. ಎಷ್ಟು ದಿನ ಬರುತ್ತಾರೆ ಎಂದು ಗೊತ್ತಿಲ್ಲ. ಕೆಲವು ದಿನವಾದರೂ ಸಿ.ಎಸ್‍.ಪಿ ನಿಮ್ಮ ಮುಂದೆ ಬರುತ್ತಾನೆ’ ಎಂದು ಬರೆದುಕೊಂಡಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಬಿಡಗಡೆಯಾದ ಧನಂಜಯ್‍ ಅಭಿನಯದ ‘ಕೋಟಿ’ ಚಿತ್ರವನ್ನು ಪರಮೇಶ್‍ ಗುಂಡ್ಕಲ್‍ ನಿರ್ದೇಶನ ಮಾಡಿದ್ದರು. ಇದೀಗ ಅವರು ಧಾರಾವಾಹಿ ನಿರ್ಮಾಣಕ್ಕಿಳಿದಿದ್ದು, ಯಾವ ಧಾರಾವಾಹಿ, ಯಾರೆಲ್ಲಾ ನಟಿಸುತ್ತಿದ್ದಾರೆ ಎಂಬ ವಿಷಯಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಸದ್ಯ ‘ಬಿಗ್‍ ಬಾಸ್‍’ ಕಾರ್ಯಕ್ರಮ ಇನ್ನೊಂದು ತಿಂಗಳಲ್ಲಿ ಮುಗಿಯಲಿದ್ದು, ಆ ಕಾರ್ಯಕ್ರಮ ಮುಗಿದ ನಂತರ ಕಲರ್ಸ್ ಕನ್ನಡದಲ್ಲಿ ಪರಮೇಶ್ವರ್‍ ಗುಂಡ್ಕಲ್‍ ನಿರ್ಮಾಣದ ಮತ್ತು ಟಿ.ಎನ್‍. ಸೀತಾರಾಂ ಅಭಿನಯದ ಧಾರಾವಾಹಿ ಪ್ರಾರಂಭವಾಗುವ ಸಾಧ್ಯತೆ ಇದೆ.

Tags:    

Similar News