Thug Life| 'ಥಗ್ ಲೈಫ್ʼ ಸಿನಿಮಾ ವೀಕ್ಷಿಸಲು ಗಡಿ ದಾಟಿ ಹೋದ ಕರ್ನಾಟಕದ ಅಭಿಮಾನಿಗಳು

ಕರ್ನಾಟಕದಲ್ಲಿ 'ಥಗ್ ಲೈಫ್ʼ ಸಿನಿಮಾ ಬಿಡುಗಡೆಗೆ ತಡೆ ಹಾಕಿರುವ ಬೆನ್ನಲ್ಲೇ ನಟನ ಅಭಿಮಾನಿಗಳು ಹೊಸೂರು ದಾಟಿ ತಮಿಳುನಾಡಿಗೆ ಹೋಗಿ ಸಿನಿಮಾ ನೋಡಿದ್ದಾರೆ.;

Update: 2025-06-07 11:31 GMT

ಹೊಸೂರಿನಲ್ಲಿ ಥಗ್‌ ಲೈಫ್‌ ಸಿನಿಮಾ

ಕನ್ನಡ ಭಾಷೆಯ ಕುರಿತ ನಟ ಕಮಲ್‌ ಹಾಸನ್‌ ನೀಡಿದ್ದ ವಿವಾದಿತ ಹೇಳಿಕೆಯಿಂದಾಗಿ ಕರ್ನಾಟಕದಲ್ಲಿ ʼಥಗ್‌ ಲೈಫ್‌ʼ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಇದರಿಂದ ಬೇಸರಗೊಂಡಿರುವ ಕಮಲ್‌ ಹಾಸನ್‌ ಅಭಿಮಾನಿಗಳು ಥಗ್‌ ಲೈಫ್‌ ಚಿತ್ರ ವೀಕ್ಷಣೆಗಾಗಿ ಗಡಿಭಾಗವಾದ ಹೊಸೂರು ದಾಟಿ ತಮಿಳುನಾಡಿಗೆ ಹೋಗಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದ್ದಾರೆ. 

 ಗಡಿ ದಾಟಿ ಸಿನಿಮಾ ವೀಕ್ಷಿಸಿದ ಅಭಿಮಾನಿಗಳು 

ಕರ್ನಾಟಕದಲ್ಲಿ ಸಾಕಷ್ಟು ಮಂದಿ ನಟ ಕಮಲ್‌ ಹಾಸನ್‌ ಅವರ ಅಭಿಮಾನಿಗಳಿದ್ದಾರೆ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಹೊಸೂರು ದಾಟಿ ತಮಿಳುನಾಡಿಗೆ ಹೋಗಿ ಸಿನಿಮಾ ನೋಡಿದ್ದಾರೆ. ಬೆಂಗಳೂರಿನಿಂದ ಬರೀ 42 ಕಿಮೀ ದೂರದಲ್ಲಿರುವ ತಮಿಳುನಾಡು-ಹೊಸೂರು ಗಡಿ ದಾಟಿ ʼಥಗ್ ಲೈಫ್ʼ ಚಿತ್ರ ವೀಕ್ಷಿಸಿ ಬಂದಿದ್ದಾರೆ. 

ಹೊಸೂರಿನ ಚಿತ್ರಮಂದಿರದ ಹೊರಭಾಗದಲ್ಲಿ ಕಮಲ್ ಹಾಸನ್ ಅಭಿಮಾನಿಗಳು ಸಿಡಿಮದ್ದು ಸಿಡಿಸಿ ಸಂಭ್ರಮಿಸಿರುವುದು ಕಂಡು ಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ʼಥಗ್ ಲೈಫ್ʼ ಚಿತ್ರ ಬಿಡುಗಡೆಯನ್ನು ಕರ್ನಾಟಕದಲ್ಲಿ ನಿರ್ಬಂಧಿಸಲಾಗಿದೆ. ಆದರೆ, ಕಮಲ್ ಹಾಸನ್ ಮೇಲಿನ ನಮ್ಮ ಪ್ರೀತಿಯನ್ನು ಯಾರೂ ತಡೆಯಲಾಗದು. ಬೆಂಗಳೂರಿನ ಎಲ್ಲ ಅಭಿಮಾನಿಗಳು ಹೊಸೂರಿನಲ್ಲಿ ಸೇರಿದ್ದೇವೆ ಎಂದು ಉಲ್ಲೇಖಿಸಿ ವಿಡಿಯೋ ಶೇರ್ ಮಾಡಲಾಗಿದೆ.

ಕ್ಷಮೆ ಕೇಳದ ಕಮಲ್‌ ಹಾಸನ್‌ 

ಕಮಲ್ ಹಾಸನ್ ಅವರು ಥಗ್ ಲೈಫ್ ಸಿನಿಮಾದ ಆಡಿಯೋ ಬಿಡುಗಡೆ ವೇಳೆ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಈ ವೇಳೆ ಅಲ್ಲಿ ನಟ  ಶಿವರಾಜ್​ಕುಮಾರ್ ಕೂಡ ಇದ್ದರು. ಕಮಲ್‌ ಹಾಸನ್‌ ಹೇಳಿಕೆ ಬಹಳಷ್ಟು ಚರ್ಚೆಗೆ ಕಾರಣವಾಯಿತು. 

ಕರ್ನಾಟಕದಲ್ಲಿ ಸಾಕಷ್ಟು ವಿರೋಧಕ್ಕೆ ಕಾರಣವಾದರೂ ಕಮಲ್ ಹಾಸನ್ ವಿಷಾದ ವ್ಯಕ್ತಪಡಿಸುವುದಾಗಲಿ, ಕ್ಷಮೆ ಕೇಳುವುದಾಗಲಿ ಮಾಡಲಿಲ್ಲ. ಬದಲಾಗಿ ಇದು ನನ್ನ ಜೀವನಶೈಲಿ, ಕನ್ನಡಿಗರ ಮೇಲಿನ ಪ್ರೀತಿಯಿಂದ ಹಾಗೆ ಹೇಳಿದೆ. ಇದು ನನ್ನ ಸ್ಟೈಲ್ ಎಂದು ಹೇಳಿದ್ದರು. ಇದು ಕನ್ನಡಿಗರ ಕೋಪವನ್ನು ಮತ್ತಷ್ಟು ಹೆಚ್ಚಿಸಿತ್ತು.  ʼಥಗ್‌ ಲೈಫ್‌ʼ ಚಿತ್ರ ಬಿಡುಗಡೆಗೆ ಹೇರಿರುವ ನಿರ್ಬಂಧ ತೆರವು ಮಾಡುವಂತೆ ಕೋರಿ ಕಮಲ್‌ ಹಾಸನ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯ ಕೂಡ ಕಮಲ್‌ ಹಾಸನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಿಚಾರಣೆ ಜೂನ್ 10ಕ್ಕೆ ಮುಂದೂಡಿತ್ತು.

ʼಕ್ಷಮೆ ಕೇಳಲ್ಲʼ ಬರಹದ ಟೀ ಶರ್ಟ್‌  

ಕೊಯಂಬತ್ತೂರಿನಲ್ಲಿ ಕೆಲ ಅಭಿಮಾನಿಗಳು ನಾವು ಕ್ಷಮೆ ಕೇಳಲ್ಲ ಎಂಬ ಬರಹ ಇರುವ ಟಿ- ಶರ್ಟ್ ಧರಿಸುವ ಮೂಲಕ ಕಮಲ್ ಹಾಸನ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವುದು ಕಂಡುಬಂತು. 

ಹೇಗಿದೆ 'ಥಗ್ ಲೈಫ್' ಸಿನಿಮಾದ ಮೊದಲ ದಿನದ ಕಲೆಕ್ಷನ್‌?

'ಥಗ್ ಲೈಫ್' ಸಿನಿಮಾದ ಪ್ರಚಾರದ ಸಮಯದಲ್ಲಿ ಪ್ರೇಕ್ಷಕರು ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದರು. ಆದರೆ ಅಭಿಮಾನಿಗಳ ನಿರೀಕ್ಷೆಯಂತೆ ಸಿನಿಮಾ ಮೂಡಿ ಬಂದಿಲ್ಲ. ಕಮಲ್ ಹಾಸನ್ ಅವರ ನಿಲುವಿಗೆ ಹೋಲಿಸಿದರೆ ಚಿತ್ರವು ಆರಂಭದ ದಿನವೇ ಕಳಪೆ ಕಲೆಕ್ಷನ್‌ ಮಾಡಿದೆ. ಚಿತ್ರದ ಬಜೆಟ್ 180-200 ಕೋಟಿ ರೂ.. ಆದರೆ ಚಿತ್ರ ಇಲ್ಲಿಯವರೆಗೆ 17 ಕೋಟಿ ರೂ. ಮಾತ್ರ ಕಲೆಕ್ಷನ್‌ ಮಾಡಿದೆ.

ಮಣಿರತ್ನಂ-ಕಮಲ್ ಹಾಸನ್ ಜೋಡಿ ಯಶಸ್ವಿಯಾಗಲಿಲ್ಲ

ಸುಮಾರು 37 ವರ್ಷಗಳ ಹಿಂದೆ ನಿರ್ದೇಶಕ ಮಣಿರತ್ನಂ ಮತ್ತು ನಟ ಕಮಲ್ ಹಾಸನ್ 'ನಾಯಕನ್' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಇಬ್ಬರೂ ಹಲವು ವರ್ಷಗಳ ನಂತರ 'ಥಗ್ ಲೈಫ್' ಗಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

'ಥಗ್ ಲೈಫ್' ಚಿತ್ರವು ಮೊದಲ ದಿನದ ಕಲೆಕ್ಷನ್ ಮಾಡಿದ ರೀತಿ ನೋಡಿದರೆ, ಈ ಮಹಾನ್ ನಿರ್ದೇಶಕ ಮತ್ತು ನಟ ಜೋಡಿ ಪ್ರೇಕ್ಷಕರಿಗೆ ಅವರು ನಿರೀಕ್ಷಿಸಿದ ರೀತಿಯ ಚಿತ್ರ ನೀಡಲು ಅವರಿಗೆ ಸಾಧ್ಯವಾಗಲಿಲ್ಲ.

 ಥಗ್ ಲೈಫ್ ಕಥೆ ಏನು?

'ಥಗ್ ಲೈಫ್' ಸಿನಿಮಾವು ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ ಸಿನಿಮಾವಾಗಿದೆ. ಈ ಚಿತ್ರದ ಚಿತ್ರಕಥೆಯನ್ನು ಮಣಿರತ್ನಂ ಅವರೊಂದಿಗೆ ಕಮಲ್ ಹಾಸನ್ ಬರೆದಿದ್ದಾರೆ. ಇದರಲ್ಲಿ ಕಮಲ್ ಹಾಸನ್ ಒಬ್ಬ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ ಅಪರಾಧ ಮತ್ತು ದ್ರೋಹದ ಸುತ್ತ ಹೆಣೆಯಲ್ಪಟ್ಟಿದೆ. ಚಿತ್ರದಲ್ಲಿ ಕಮಲ್ ಹಾಸನ್ ಶಕ್ತಿವೇಲ್ ಎಂಬ ಮಾಫಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ

‘ಥಗ್ ಲೈಫ್’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಇದರಲ್ಲಿ ಬಾಲಿವುಡ್ ನಟರಾದ ಅಲಿ ಫಜಲ್, ಸನ್ಯಾ ಮಲ್ಹೋತ್ರಾ ಮತ್ತು ದಕ್ಷಿಣ ಚಿತ್ರಗಳ ಅನೇಕ ಪ್ರಸಿದ್ಧ ನಟರು ಇದ್ದಾರೆ.

ತ್ರಿಶಾ ಕೃಷ್ಣನ್, ಸಿಲಂಬರಸನ್, ನಾಸರ್, ಅಶೋಕ್ ಸೆಲ್ವನ್, ಅಭಿರಾಮಿ, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಸಂಜನಾ ಕೃಷ್ಣಮೂರ್ತಿ ಮತ್ತು ಮಹೇಶ್ ಮಂಜ್ರೇಕರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Tags:    

Similar News