ಕ್ಯಾಮೆರಾ ಹಿಂದೆ ಸಕ್ಸಸ್, ಈಗ ಕ್ಯಾಮೆರಾ ಮುಂದೆ: ನಾಯಕನಾದ 'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್

ಈ ಮಹತ್ವಾಕಾಂಕ್ಷೆಯ ಯೋಜನೆಗೆ ಅಕ್ಟೋಬರ್ 23 ರಂದು ಚೆನ್ನೈನಲ್ಲಿ ಸಾಂಪ್ರದಾಯಿಕ 'ಪೂಜೆ'ಯೊಂದಿಗೆ ಚಾಲನೆ ನೀಡಿ ಚಿತ್ರೀಕರಣವೂ ಆರಂಭಗೊಂಡಿದೆ.

Update: 2025-10-24 11:42 GMT

ಲೋಕೇಶ್ ಕನಕರಾಜ್ ಮತ್ತು ಅರುಣ್ ಮಾಥೇಶ್ವರನ್.

Click the Play button to listen to article

'ಕೈದಿ', 'ವಿಕ್ರಮ್', 'ಲಿಯೋ'ದಂತಹ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿ, ತಮ್ಮದೇ ಆದ 'LCU' (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಕಟ್ಟಿದ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಇದೀಗ ಅಚ್ಚರಿಯ ರೀತಿಯಲ್ಲಿ ನಾಯಕ ನಟನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್' ಖ್ಯಾತಿಯ ನಿರ್ದೇಶಕ ಅರುಣ್ ಮಾಥೇಶ್ವರನ್ ಅವರ ಆ್ಯಕ್ಷನ್ ಚಿತ್ರದ ಮೂಲಕ ಲೋಕೇಶ್ ಹೀರೋ ಆಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಈ ಬಹುನಿರೀಕ್ಷಿತ ಚಿತ್ರಕ್ಕೆ ಅಕ್ಟೋಬರ್ 23ರಂದು ಚೆನ್ನೈನಲ್ಲಿ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಗಿದ್ದು, ಚಿತ್ರೀಕರಣವೂ ಆರಂಭಗೊಂಡಿದೆ. ಕಾಲಿವುಡ್‌ನ ಇಬ್ಬರು ಸ್ಟೈಲಿಶ್ ಕಥೆಗಾರರು ಒಂದಾಗಿರುವುದು ಸಿನಿರಸಿಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

ಹೀರೋ ಆಗಲು ಭರ್ಜರಿ ತಯಾರಿ

ಈ ಚಿತ್ರಕ್ಕಾಗಿ ಲೋಕೇಶ್ ಕನಕರಾಜ್ ತಮ್ಮನ್ನು ತಾವು ಸಂಪೂರ್ಣವಾಗಿ ಸಜ್ಜುಗೊಳಿಸಿದ್ದಾರೆ. ಪಾತ್ರಕ್ಕಾಗಿ ವಿದೇಶದಲ್ಲಿ ಮಾರ್ಷಲ್ ಆರ್ಟ್ಸ್ ತರಬೇತಿ ಪಡೆದು, ತೂಕ ಇಳಿಸಿಕೊಂಡಿದ್ದಾರೆ. ಉದ್ದವಾದ ಗಡ್ಡ ಮತ್ತು ಖಡಕ್ ಲುಕ್‌ನೊಂದಿಗೆ ಒರಟು-ಠೀವಿಯ ದೈಹಿಕ ರೂಪವನ್ನು ಅಳವಡಿಸಿಕೊಂಡಿರುವ ಅವರ ಹೊಸ ಅವತಾರವು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರವನ್ನು ಪ್ರತಿಷ್ಠಿತ ಸನ್ ಪಿಕ್ಚರ್ಸ್ ಸಂಸ್ಥೆ ಅದ್ದೂರಿಯಾಗಿ ನಿರ್ಮಿಸುತ್ತಿದೆ.

ನಾಯಕಿಯಾಗಿ 'ಡಿಂಪಲ್ ಕ್ವೀನ್'?

ಈ ಆ್ಯಕ್ಷನ್-ಥ್ರಿಲ್ಲರ್ ಚಿತ್ರದಲ್ಲಿ ಲೋಕೇಶ್ ಕನಕರಾಜ್ ಅವರಿಗೆ ನಾಯಕಿಯಾಗಿ ಕನ್ನಡದ 'ಡಿಂಪಲ್ ಕ್ವೀನ್' ರಚಿತಾ ರಾಮ್ ಅವರು ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಹೊರಬೀಳಬೇಕಿದೆ.

ನಿರ್ದೇಶನಕ್ಕೆ ತಾತ್ಕಾಲಿಕ ವಿರಾಮ

ರಜನಿಕಾಂತ್ ಅಭಿನಯದ 'ಕೂಲಿ' ಚಿತ್ರದ ನಂತರ ಲೋಕೇಶ್ ಅವರು ನಿರ್ದೇಶನದಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡಿದ್ದಾರೆ. ಈ ಸಮಯವನ್ನು ಅವರು ನಟನೆಗೆ ಮೀಸಲಿಟ್ಟಿದ್ದಾರೆ. ಇದೇ ವೇಳೆ, ಅವರ ತಂಡವು 'ಕೈದಿ 2' ಹಾಗೂ ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್, ಕಮಲ್ ಹಾಸನ್ ಮತ್ತು ತೆಲುಗಿನ ಪ್ರಮುಖ ನಟರಿಗಾಗಿ ಹೊಸ ಸ್ಕ್ರಿಪ್ಟ್‌ಗಳನ್ನು ಸಿದ್ಧಪಡಿಸುತ್ತಿದೆ.

ಈ ಹಿಂದೆ ಕಮಲ್ ಹಾಸನ್ ನಿರ್ಮಾಣದ 'ಇನಿಮೆಲ್' ಮ್ಯೂಸಿಕ್ ವಿಡಿಯೋದಲ್ಲಿ ಶ್ರುತಿ ಹಾಸನ್ ಜೊತೆ ನಟಿಸಿ ಗಮನ ಸೆಳೆದಿದ್ದ ಲೋಕೇಶ್, ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಡುತ್ತಿದ್ದಾರೆ. ಈ ಚಿತ್ರವು ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡುವ ನಿರೀಕ್ಷೆಯಿದೆ. 

Tags:    

Similar News