ʼಎಲ್ಟು ಮುತ್ತಾ' ಆಗಸ್ಟ್ 1 ರಂದು ಬಿಡುಗಡೆ: ಎಸ್.ಎ. ಚಿನ್ನೇಗೌಡರಿಂದ ಟ್ರೇಲರ್ ಅನಾವರಣ

ಚಲನಚಿತ್ರದ ಟ್ರೇಲರ್‌ ಅನ್ನು ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಅವರು ಇತ್ತೀಚೆಗೆ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.;

Update: 2025-07-18 07:21 GMT

ಎಲ್ಟು ಮುತ್ತಾ ಚಿತ್ರದ ಟ್ರೇಲರ್ ಅನಾವರಣ ಮಾಡಲಾಗಿದೆ. 

ಬಹುನಿರೀಕ್ಷಿತ 'ಎಲ್ಟು ಮುತ್ತಾ' ಸಿನಿಮಾ ಆಗಸ್ಟ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಶ್ರೀಧರ್ ಕೃಪಾ ಎಂಟರ್‌ಪ್ರೈಸಸ್ ಅಧಿಕೃತವಾಗಿ ಘೋಷಿಸಿದೆ. ಈ ಚಲನಚಿತ್ರದ ಟ್ರೇಲರ್‌ ಅನ್ನು ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರು ಇತ್ತೀಚೆಗೆ ಅನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ಚಿತ್ರದ ಪ್ರಚಾರಕ್ಕಾಗಿ "ಎಲ್ಟು ಮುತ್ತಾ" ಸಂಚಾರ ಆರಂಭ

ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ, ಸಿನಿಮಾ ನಿರ್ಮಾಪಕ ಸತ್ಯ ಶ್ರೀನಿವಾಸನ್ "ನಮ್ಮ ಚಿತ್ರದ ಎರಡು ಹಾಡುಗಳು ಮತ್ತು ಟೀಸರ್‌ಗೆ ದೊರೆತ ಪ್ರಶಂಸೆಗೆ ನಾವು ಸಂತೋಷಪಟ್ಟಿದ್ದೇವೆ. ವಿಶೇಷವಾಗಿ ಕೊಡವ ಭಾಷೆಯ ಹಾಡು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆ ಕಂಡಿದೆ. ಇಂದು ಗಣ್ಯರಿಂದ ಟ್ರೇಲರ್ ಬಿಡುಗಡೆಯಾಗಿದ್ದು, ಈಗ 'ಎಲ್ಟು ಮುತ್ತಾ' ಚಿತ್ರದ ಪ್ರಚಾರಕ್ಕಾಗಿ ರಾಜ್ಯದ ವಿವಿಧ ಊರುಗಳಿಗೆ ಚಿತ್ರತಂಡ ಭೇಟಿ ನೀಡಲಿದೆ" ಎಂದು ತಿಳಿಸಿದರು. 

Full View

ಸಾವಿಗೆ ಡೋಲು ಬಡಿಯುವವರ ಸುತ್ತ ಹೆಣೆದ ಕಥೆ 'ಎಲ್ಟು ಮುತ್ತಾ'

ಚಿತ್ರದ ನಿರ್ದೇಶಕ ಹಾಗೂ 'ಎಲ್ಟು' ಪಾತ್ರದಲ್ಲಿ ನಟಿಸಿರುವ ರಾ. ಸೂರ್ಯ, "ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದಿರುವ ನಮ್ಮ ಚಿತ್ರ ಆಗಸ್ಟ್ 1 ರಂದು ತೆರೆ ಕಾಣಲಿದೆ.

'ಎಲ್ಟು ಮುತ್ತಾ' ಎರಡು ಪ್ರಮುಖ ಪಾತ್ರಗಳ ಹೆಸರು. ಇದು ಸಾವಿಗೆ ಡೋಲು ಬಡಿಯುವವರ ಸುತ್ತ ಹೆಣೆದಿರುವ ಕೊಡಗು ಪ್ರಾಂತ್ಯದ ಕಥೆ. ಚಿಕ್ಕವಯಸ್ಸಿನಿಂದ ನಾನು ಕಂಡ ಕೆಲವು ಸನ್ನಿವೇಶಗಳನ್ನು ಚಿತ್ರದ ಮೂಲಕ ತರುತ್ತಿದ್ದೇನೆ. ನಿಮಗೆ ಚಿತ್ರ ಇಷ್ಟವಾಗುವ ಭರವಸೆ ಇದೆ. ನಾನು ನಿರ್ದೇಶನದ ಜೊತೆಗೆ 'ಎಲ್ಟು' ಪಾತ್ರದಲ್ಲೂ ಅಭಿನಯಿಸಿದ್ದು, 'ಮುತ್ತಾ' ಪಾತ್ರದಲ್ಲಿ ಶೌರ್ಯ ಪ್ರತಾಪ್ ನಟಿಸಿದ್ದಾರೆ" ಎಂದು ವಿವರಿಸಿದರು.

ಚಿತ್ರ ಗೆಲ್ಲುವ ನಿರೀಕ್ಷೆಯಲ್ಲಿ ನಾಯಕ ಶೌರ್ಯ ಪ್ರತಾಪ್

'ಮುತ್ತಾ' ಪಾತ್ರದಲ್ಲಿ ನಟಿಸಿರುವ ಶೌರ್ಯ ಪ್ರತಾಪ್, "ನಾನು ಚಿತ್ರದ ಬರವಣಿಗೆ ಹಂತದಿಂದಲೂ ತಂಡದ ಜೊತೆಗಿದ್ದೇನೆ. ಇದು ನನ್ನ ಮೊದಲ ಚಿತ್ರ. ನಮ್ಮ ಚಿತ್ರದ ಟೀಸರ್, ಹಾಡುಗಳು ಮತ್ತು ಇಂದು ಬಿಡುಗಡೆಯಾಗಿರುವ ಟ್ರೇಲರ್‌ಗೆ ಸಿಗುತ್ತಿರುವ ಪ್ರಶಂಸೆ ನೋಡಿದರೆ, ಚಿತ್ರ ಖಂಡಿತಾ ಗೆಲ್ಲುವ ನಿರೀಕ್ಷೆ ಇದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. ರುಹಾನ್ ಆರ್ಯ ಅವರು ನಟನೆಯ ಜೊತೆಗೆ ಕಾರ್ಯಕಾರಿ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.

ಸಂಗೀತ ನಿರ್ದೇಶಕ ಮತ್ತು ಗಾಯಕ ಪ್ರಸನ್ನ ಕೇಶವ ಅವರು ಹಾಡುಗಳು ಹಿಟ್ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ನಾಯಕಿ ಪ್ರಿಯಾಂಕ ಮಳಲಿ ಹಾಗೂ ಅನುಭವಿ ಕಲಾವಿದರಾದ ಕಾಕ್ರೋಜ್ ಸುಧಿ, ನವೀನ್ ಡಿ. ಪಡೀಲ್ ಮತ್ತು ಯಮುನಾ ಶ್ರೀನಿಧಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಸಮಾರಂಭದಲ್ಲಿ ನಟ ಕಿಶೋರ್ ಕುಮಾರ್, ಮನೋರಂಜನ್ ರವಿಚಂದ್ರನ್, ಜಿ.ಬಿ. ವಿನಯ್ ಕುಮಾರ್, ಪೊಲೀಸ್ ಅಧಿಕಾರಿ ರಾಜೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು. ಶೌರ್ಯ ಪ್ರತಾಪ್, ರಾ. ಸೂರ್ಯ, ಪ್ರಿಯಾಂಕ ಮಳಲಿ, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Tags:    

Similar News