ಎಸ್. ನಾರಾಯಣ್ ನಿರ್ದೇಶನದ 'ಮಾರುತ'ನ ಓಟಕ್ಕೆ ಬ್ರೇಕ್: ಹೊಸ ದಿನಾಂಕ ಘೋಷಿಸಿದ ಚಿತ್ರತಂಡ
ʻಮಾರುತʼ ಚಿತ್ರವು ಹೊಸ ದಿನಾಂಕವಾದ ನವೆಂಬರ್ 21 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.
ದುನಿಯಾ ವಿಜಯ್
ಕಲಾಸಾಮ್ರಾಟ್ ಡಾ. ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಕನ್ನಡ ಚಿತ್ರ ʻಮಾರುತʼದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಚಿತ್ರಮಂದಿರಗಳ ಅಭಾವದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ತಿಳಿಸಿದೆ.
ಕೆ. ಮಂಜು ಮತ್ತು ರಮೇಶ್ ಯಾದವ್ ಅವರ 'ಈಶಾ ಪ್ರೊಡಕ್ಷನ್ಸ್' ಲಾಂಛನದಲ್ಲಿ ನಿರ್ಮಿಸಲಾಗಿರುವ ʻಮಾರುತʼ ಸಿನಿಮಾ ಅಕ್ಟೋಬರ್ 31 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿತ್ತು. ಆದರೆ, ಪ್ರಸ್ತುತ ಚಿತ್ರಮಂದಿರಗಳ ಕೊರತೆಯಿಂದಾಗಿ ಚಿತ್ರದ ಬಿಡುಗಡೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.
ಹೊಸ ಬಿಡುಗಡೆ ದಿನಾಂಕ
ಇದೀಗ ʻಮಾರುತʼ ಚಿತ್ರವು ಹೊಸ ದಿನಾಂಕವಾದ ನವೆಂಬರ್ 21 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ. ಅಭಿಮಾನಿಗಳು ಈವರೆಗೂ ನೀಡಿದ ಪ್ರೋತ್ಸಾಹಕ್ಕೆ ಧನ್ಯವಾದ ತಿಳಿಸಿರುವ ತಂಡ, ಮುಂದೆಯೂ ಇದೇ ಪ್ರೀತಿ-ಪ್ರೋತ್ಸಾಹ ನಿರಂತರವಾಗಿರಲಿ ಎಂದು ಮನವಿ ಮಾಡಿಕೊಂಡಿದೆ.
ʻಮಾರುತʼ ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯುವ ನಟ ಶ್ರೇಯಸ್ ಕೆ. ಮಂಜು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬೃಂದಾ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ವಿಶೇಷ ಪಾತ್ರ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಸಾಧುಕೋಕಿಲ, ನಿಶ್ವಿಕಾ ನಾಯ್ಡು, ರಂಗಾಯಣ ರಘು, ತಾರಾ ಅನುರಾಧ, ಶರತ್ ಲೋಹಿತಾಶ್ವ, ಪ್ರಮೋದ್ ಶೆಟ್ಟಿ, ಮಂಜು ಪಾವಗಡ, ಚಿತ್ರಾ ಶೆಣೈ, ಸುಜಯ್ ಶಾಸ್ತ್ರಿ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಎಸ್. ನಾರಾಯಣ್ ಅವರೇ ಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ವಿನೋದ್ ಹಾಗೂ ಅರ್ಜುನ್ ಸಾಹಸ ನಿರ್ದೇಶನ ಮತ್ತು ಮೋಹನ್ ಕುಮಾರ್, ಸಂತು ಅವರ ನೃತ್ಯ ನಿರ್ದೇಶನವಿದೆ. ಎಸ್. ನಾರಾಯಣ್ ಮತ್ತು ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ.