'ಉಳಿದವರು ಕಂಡಂತೆ' ಸಿನಿಮಾಗೆ ದಶಕದ ಸಂಭ್ರಮ; ರಕ್ಷಿತ್‌ ಫ್ಯಾನ್ಸ್‌ಗೆ ನಿರಾಸೆ

ಬರೋಬ್ಬರಿ 8 ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಘೋಷಿಸಿದ್ದರು. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಿಸಲು ಮುಂದೆ ಬಂದಿತ್ತು.

Update: 2024-03-28 14:16 GMT
ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ
Click the Play button to listen to article

ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದ ಗ್ಯಾಂಗ್‌ಸ್ಟರ್ ಸಿನಿಮಾ 'ಉಳಿದವರು ಕಂಡಂತೆ' 10 ವರ್ಷ ಪೂರೈಸಿದೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತರೂ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

2014 ಮಾರ್ಚ್ 28ರಂದು ತೆರೆಕಂಡ ಈ ಸಿನಿಮಾದಲ್ಲಿ ಕಿಶೋರ್, ತಾರಾ, ಯಜ್ಞಾ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. 'ಉಳಿದವರು ಕಂಡಂತೆ' ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಆಗಿತ್ತು. ಕರಾವಳಿ ಸಂಸ್ಕೃತಿ, ಅಲ್ಲಿನ ಭಾಷೆ ಎಲ್ಲವನ್ನು ತೆರೆಗೆ ತರಲಾಗಿತ್ತು. ಇನ್ನು ರಿಚರ್ಡ್ ಆಂಟನಿ ಅಲಿಯಾಸ್ ರಿಚ್ಚಿ ಆಗಿ ರಕ್ಷಿತ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದರು. ಸಿಂಪಲ್ ಸ್ಟಾರ್ ಗೆಟಪ್, ಮ್ಯಾನರಿಸಂ, ಹುಲಿ ಕುಣಿತ ಎಲ್ಲವೂ ಪ್ರೇಕ್ಷಕರಿಗೆ ಮಜಾ ಕೊಟ್ಟಿತ್ತು. ಅಂದೇ ಸಿನಿ ಪ್ರೇಕ್ಷಕರು ಅದರ ಪ್ರೀಕ್ವೆಲ್ ನೋಡಬೇಕು ಎಂದು ಆಸೆಪಟ್ಟಿದ್ದರು.

ಬರೋಬ್ಬರಿ 8 ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾ ಘೋಷಿಸಿದ್ದರು. ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಿಸಲು ಮುಂದೆ ಬಂದಿತ್ತು. ಸಣ್ಣ ಟೀಸರ್ ರಿಲೀಸ್ ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಲಾಗಿತ್ತು. 'ಉಳಿದವರು ಕಂಡಂತೆ' ದಶಕದ ಸಂಭ್ರಮದಲ್ಲೇ ಪ್ರೀಕ್ವೆಲ್ ಅಪ್‌ಡೇಟ್ ಸಿಗುತ್ತದೆ ಎಂದು ಬಹಳ ಜನ ಕಾಯುತ್ತಿದ್ದರು. ಆದರೆ ಜನರಿಗೆ ನಿರಾಸೆಯುಂಟಾಗಿದೆ.

"ಕಾಲಾನಂತರದಲ್ಲಿ, ಪ್ರತಿಯೊಂದು ಸೃಷ್ಟಿಯು ಅಸ್ತಿತ್ವದಲ್ಲಿ ತನ್ನ ಸರಿಯಾದ ಸ್ಥಾನವನ್ನು ಕಂಡುಕೊಳ್ಳುತ್ತದೆ. 'ಉಳಿದವರು ಕಂಡಂತೆ' ಚಿತ್ರ 10 ವರ್ಷ ಪೂರೈಸಿದೆ. ವರ್ಷಗಳು ಕಳೆದಂತೆ ಚಿತ್ರದ ಮೇಲಿನ ಪ್ರೀತಿ ಮತ್ತು ಮನ್ನಣೆ ಹೆಚ್ಚಾಗುತ್ತಿದೆ. 'ರಿಚರ್ಡ್ ಆಂಟನಿ' ಸಿನಿಮಾ ಪೈಪ್‌ಲೈನ್‌ನಲ್ಲಿದೆ. ಅಪ್‌ಡೇಟ್ ಘೋಷಣೆಗೆ ಇದು ಒಳ್ಳೆಯ ದಿನ ಎಂದು ನನಗೆ ಅನಿಸುತ್ತದೆ. ಆದರೆ ನಾನು ಅದನ್ನು ಇನ್ನೊಂದು ದಿನಕ್ಕೆ ಉಳಿಸುತ್ತಿದ್ದೇನೆ. ಏಕೆಂದರೆ ನಾವು ಆಯ್ಕೆ ಮಾಡಿಕೊಂಡಿರುವ ದಿನವು ಇದಕ್ಕಿಂತ ಹೆಚ್ಚು ದೊಡ್ಡದಾಗಿದೆ, ಇನ್ನಷ್ಟು ವಿಶೇಷವಾಗಿದೆ. ಲವ್ ಯು ಆಲ್" ಎಂದು ಟ್ವೀಟ್ ಮಾಡಿದ್ದಾರೆ.

ಹಲವು ತಿಂಗಳ ಹಿಂದೆಯೇ 'ರಿಚರ್ಡ್ ಆಂಟನಿ' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಘೋಷಣೆ ಮಾಡಿತ್ತು.ರಕ್ಷಿತ್ ಶೆಟ್ಟಿ ನಟನೆಯಲ್ಲೇ ಬ್ಯುಸಿಯಾಗಿದ್ದರಿಂದ ಮುಹೂರ್ತಕ್ಕೆ ತಡವಾಗಿತ್ತು. ಸಪ್ತ ಸಾಗರದಾಚೆ ಶೂಟಿಂಗ್ ಮತ್ತು ಬಿಡುಗಡೆಯ ಎಲ್ಲ ಕೆಲಸಗಳನ್ನು ಮುಗಿಸಿ, ಸ್ಕ್ರಿಪ್ಟ್ ನಲ್ಲಿ ತೊಡಗಿದ್ದರು ರಕ್ಷಿತ್ ಶೆಟ್ಟಿ. ಈಗ ಸ್ಕ್ರಿಪ್ಟ್ ಕೆಲಸ ಕೂಡ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆಯಂತೆ.

Tags:    

Similar News