Darshan | ಜೈಲಿನಿಂದ ಬಂದ ಬಳಿಕ ಮೊದಲ ಬಾರಿಗೆ ಸಿನಿಮಾ ವೀಕ್ಷಿಸಿದ ದರ್ಶನ್
ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ.;
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಡಿ ಕೆಲ ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಗೆ ಬಂದಿರುವ ದರ್ಶನ್, ಯಾವುದೇ ಸಿನಿಮಾ ಸಮಾರಂಭದಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಅವರು ಸಿನಿಮಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಷ್ಟೇ ಅಲ್ಲ, ತಾಯಿ ಜೊತೆಗೆ ಕೂತು ಚಿತ್ರ ವೀಕ್ಷಿಸಿದ್ದಾರೆ.
ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್’ ಚಿತ್ರವು ಇದೇ ಜನವರಿ 24ರಂದು ಬಿಡುಗಡೆಯಾಗುತ್ತಿದೆ. ದಿನಕರ್ ನಿರ್ದೇಶನದ ಚಿತ್ರವೊಂದು ಸುಮಾರು ಆರು ವರ್ಷಗಳ ನಂತರ ಬಿಡುಗಡೆಯಾಗುತ್ತಿದೆ. 2018ರಲ್ಲಿ ದಿನಕರ್ ತೂಗುದೀಪ ನಿರ್ದೇಶನದ ‘ಲೈಫ್ ಜೊತೆಗೆ ಒಂದ್ ಸೆಲ್ಫಿ’ ಚಿತ್ರ ಬಿಡುಗಡೆಯಾಗಿತ್ತು. ಪ್ರಜ್ವಲ್ ದೇವರಾಜ್, ಹರಿಪ್ರಿಯಾ, ಪ್ರೇಮ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ವಿರಾಟ್ ಅಭಿನಯದ ‘ರಾಯಲ್’ ಚಿತ್ರವನ್ನು ಅವರು ನಿರ್ದೇಶಿಸಿದ್ದು, ಇತ್ತೀಚೆಗೆ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.
ಈ ವಿಶೇಷ ಪ್ರದರ್ಶನವನ್ನು ಮಲ್ಲೇಶ್ವರ 15ನೇ ಕ್ರಾಸ್‍ನಲ್ಲಿರುವ SRV Theaterನಲ್ಲಿ ಆಯೋಜಿಸಿದ್ದು, ಈ ಪ್ರದರ್ಶನದಲ್ಲಿ ದರ್ಶನ್ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಈ ಪ್ರದರ್ಶನಕ್ಕೆ ತಾಯಿ ಮೀನಾ ಮತ್ತು ಪತ್ನಿ ವಿಜಯಲಕ್ಷ್ಮೀ ಜೊತೆಗೆ ದರ್ಶನ್ ಬಂದು, ತಾಯಿ ಪಕ್ಕ ಕೂತು ಚಿತ್ರವನ್ನು ವೀಕ್ಷಿಸಿದರು. ಎಮೋಷನಲ್ ದೃಶ್ಯಗಳಲ್ಲಿ ದರ್ಶನ್ ಕಣ್ಣೀರು ಹಾಕಿದ ದೃಶ್ಯವೂ ಕಂಡುಬಂತು.
‘ರಾಯಲ್’ ಚಿತ್ರದಲ್ಲಿ ವಿರಾಟ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎ.ಪಿ. ಅರ್ಜುನ್ ನಿರ್ದೇಶದ ‘ಕಿಸ್’ ಮೂಲಕ ಚಿತ್ರರಂಗಕ್ಕೆ ಬಂದ ವಿರಾಟ್‍ಗಿದು ಮೂರನೇ ಚಿತ್ರ. ‘ಕಿಸ್’ ನಂತರ ‘ಅದ್ಧೂರಿ ಲವರ್’ ಎಂಬ ಚಿತ್ರದಲ್ಲಿ ವಿರಾಟ್ ನಟಿಸಿದ್ದು, ಆ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ವಿರಾಟ್‍ಗೆ ನಾಯಕಿಯಾಗಿ ಸಂಜನಾ ಆನಂದ್ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಮತ್ತು ಸಂಕೇತ್ ಅವರ ಛಾಯಾಗ್ರಹಣವಿದೆ.
‘ರಾಯಲ್’ ಚಿತ್ರವನ್ನು ಜಯಣ್ಣ ಫಿಲಂಸ್ ಬ್ಯಾನರ್‌ನಡಿ ಜಯಣ್ಣ ಮತ್ತು ಭೋಗೇಂದ್ರ ಜೊತೆಯಾಗಿ ನಿರ್ಮಿಸಿದ್ದಾರೆ.