ಭೈರತಿ ರಣಗಲ್‌ vs ಕಂಗುವ: ಅನಾವಶ್ಯಕ ಸ್ಪರ್ಧೆ ಗೊಂದಲಕ್ಕೆ ಶಿವಣ್ಣ, ಸೂರ್ಯ ತೆರೆ

ನವೆಂಬರ್‍ 14ರಂದು ತಮಿಳು ಸ್ಟಾರ್‌ ಸೂರ್ಯ ಅಭಿನಯದ ‘ಕಂಗುವ’ ಹಾಗೂ ಮರುದಿನ ಶಿವರಾಜಕುಮಾರ್‌ ಅವರ ‘ಭೈರತಿ ರಣಗಲ್‍’ ಬಿಡುಗಡೆಯಾಗುತ್ತಿವೆ. ಅನಾವಶ್ಯಕ ಸ್ಪರ್ಧೆಯೇ ಎಂಬ ಪ್ರಶ್ನೆಗೆ ಸ್ಟಾರ್‌ ನಟರಿಬ್ಬರ ಉತ್ತರ ಇಲ್ಲಿದೆ.;

Update: 2024-11-08 01:40 GMT

ಚಂದನವನದಲ್ಲಿ  ಒಂದಕ್ಕಿಂತ ಒಂದು  ಹೆಚ್ಚು ನಿರೀಕ್ಷಿತ, ದೊಡ್ಡ ಬಜೆಟ್‍ನ, ದೊಡ್ಡ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗಲಿವೆ.  ನವೆಂಬರ್‍ 14ರಂದು ತಮಿಳು ಸ್ಟಾರ್‌  ಸೂರ್ಯ ಅಭಿನಯದ ‘ಕಂಗುವ’ ಎಂಬ ಪ್ಯಾನ್‍ ಇಂಡಿಯಾ ಚಿತ್ರ ಬಿಡುಗಡೆಯಾದರೆ, ಅದರ ಮರುದಿನವೇ ಶಿವರಾಜಕುಮಾರ್‍ ಅಭಿನಯದ ‘ಭೈರತಿ ರಣಗಲ್‍’ ಬಿಡುಗಡೆಯಾಗುತ್ತಿವೆ.  ಎರಡು ದೊಡ್ಡ  ಬಜೆಟ್‌ ಸಿನಿಮಾಗಳ ಅನಾವಶ್ಯಕ ಸ್ಪರ್ಧೆ ಏಕೆ? ಎಂಬ ಪ್ರಶ್ನೆ ಚಿತ್ರರಂಗದಲ್ಲಿ ಉದ್ಭವವಾಗಿದೆ. 

ಹಾಗಾದರೆ, ಕನ್ನಡ ಮತ್ತು ತಮಿಳು ಸಿನಿಮಾಗಳ ಸ್ಪರ್ಧೆ ಏರ್ಪಟ್ಟಿದೆಯೇ? ಕನ್ನಡ ಸ್ಟಾರ್‌ ನಟರ ಚಿತ್ರಗಳ ಬಿಡುಗಡೆ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ತಮಿಳಿನ ಪ್ಯಾನ್‌ ಇಂಡಿಯಾ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗಿ ಮೊದಲೇ ಸಂಕಷ್ಟದಲ್ಲಿರುವ ಕನ್ನಡ ಚಿತ್ರೋದ್ಯಮಕ್ಕೆ ಸಂಕಷ್ಟ ಒಡ್ಡಿದೆಯೆ? 

ಈ ವರ್ಷದ ಆರಂಭದ ಕಥೆ ಇದು. ಸಂಕ್ರಾಂತಿಗೆ ಹಬ್ಬದ ಸಂದರ್ಭದಲ್ಲಿ ದೊಡ್ಡದೊಡ್ಡ ಚಿತ್ರಗಳ ಪೈಪೋಟಿಯೇ ನಡೆಯಿತು. ಧನುಶ್‍ ಅಭಿನಯದ ತಮಿಳಿನ ‘ಕ್ಯಾಪ್ಟನ್‍ ಮಿಲ್ಲರ್‍’, ರಜನಿಕಾಂತ್‍ ಅತಿಥಿ ಪಾತ್ರದಲ್ಲಿ ಅಭಿನಯಿಸಿದ ‘ಲಾಲ್‍ ಸಲಾಂ’, ಶಿವಕಾರ್ತಿಕೇಯನ್‍ ಅಭಿನಯದ ‘ಆಯಲಾನ್‍’, ಮಹೇಶ್‍ ಬಾಬು ಅಭಿನಯದ ತೆಲುಗು ಚಿತ್ರ ‘ಗುಂಟೂರು ಖಾರಂ’, ನಾಗಾರ್ಜುನ ಅಭಿನಯದ ‘ನಾ ಸಾಮಿ ರಂಗ’, ವೆಂಕಟೇಶ್‍ ಅಭಿನಯದ ‘ಸೈಂಧವ’, ಚಿತ್ರಗಳು ಬಿಡುಗಡೆಯಾದವು. ಹೀಗೆ ದೊಡ್ಡದೊಡ್ಡ ಚಿತ್ರಗಳು ಬಿಡುಗಡೆಯಾದರೆ, ಎಲ್ಲಾ ಚಿತ್ರಗಳಿಗೂ ಸಮಸ್ಯೆ ಆಗುತ್ತವೆ, ಪ್ರೇಕ್ಷಕರು ಹರಿದು ಹಂಚಿಹೋಗುತ್ತಾರೆ, ಅರ್ಹ ಚಿತ್ರಗಳಿಗೆ ಚಿತ್ರಮಂದಿರಗಳ ಅಭಾವವಾಗುತ್ತದೆ, ಈ ತರಹದ ಅನಾವಶ್ಯಕ ಸ್ಪರ್ಧೆಗಳೇಕೆ … ಎಂಬೆಲ್ಲಾ ಮಾತುಗಳು ಕೇಳಿ ಬಂದವು. ಅದರ ನಡುವೆಯೂ ಚಿತ್ರಗಳು ಬಿಡುಗಡೆಯಾದವು. ಚೆನ್ನಾಗಿದ್ದ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾದರೆ, ಚೆನ್ನಾಗಿಲ್ಲದ ಚಿತ್ರಗಳು ಕ್ರಮೇಣ ಮರೆಯಾದವು.

ಅದಾದ ಮೇಲೂ ಒಂದೇ ದಿನ ಒಂದಕ್ಕಿಂತ ಹೆಚ್ಚು ನಿರೀಕ್ಷಿತ, ದೊಡ್ಡ ಬಜೆಟ್‍ನ, ದೊಡ್ಡ ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗಿವೆ. ಅದಕ್ಕೂ ಮೊದಲು ಸಾಕಷ್ಟು ಬಾರಿ ಹೀಗಾಗಿದೆ. ಹಾಗೆ ನೋಡಿದರೆ, ಚಿತ್ರರಂಗದಲ್ಲಿ ಇದು ಸಾಮಾನ್ಯ ವಿಷಯ. ಒಂದೇ ದಿನ ದೊಡ್ಡ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುವುದು ಅನಾದಿಕಾಲದಿಂದ ನಡೆದುಬಂದಿದೆ. ಎಷ್ಟೋ ವರ್ಷಗಳ ಹಿಂದೆ ಡಾ. ರಾಜಕುಮಾರ್‍ ಅಭಿನಯದ ‘ಆಕಸ್ಮಿಕ’ ಮತ್ತು ವಿಷ್ಣುವರ್ಧನ್‍ ಅಭಿನಯದ ‘ವೈಶಾಖದ ದಿನಗಳು’ ಒಂದೇ ದಿನ ಬಿಡುಗಡೆಯಾಗಿತ್ತು. ಸುದೀಪ್‍ ಅಭನಯದ ‘ಮೈ ಆಟೋಗ್ರಾಫ್‍’ ಮತ್ತು ದರ್ಶನ್‍ ಅಭಿನಯದ ‘ಸುಂಟರಾಗಳಿ’, 2006ರ ಫೆಬ್ರವರಿ 17ರಂದು ಒಟ್ಟಿಗೆ ಬಿಡುಗಡೆಯಾಗಿತ್ತು. ಪುನೀತ್ ‍ರಾಜಕುಮಾರ್‍ ಅಭಿನಯದ ‘ಜಾಕಿ’ ಮತ್ತು ಸುದೀಪ್‍ ಅಭಿನಯದ ‘ಕಿಚ್ಚ ಹುಚ್ಚ’ ಚಿತ್ರಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗಿದ್ದವು. ಈ ತರಹದ ಉದಾಹರಣೆಗಳು ಹಲವು ಸಿಗುತ್ತವೆ. ಈ ಪೈಕಿ ಚೆನ್ನಾಗಿರುವ ಚಿತ್ರಗಳನ್ನಷ್ಟೇ ಪ್ರೇಕ್ಷಕರು ಮುನ್ನಡೆಸುತ್ತಾರೆ. ಚೆನ್ನಾಗಿಲ್ಲ ಎನ್ನುವ ಚಿತ್ರಗಳು ತನ್ನಿಂತಾನೇ ಮುರುಟಿಹೋಗುತ್ತವೆ.

ಸ್ಪರ್ಧಿಸಲು ಬಂದಿಲ್ಲ: ಸೂರ್ಯ ಸ್ಪಷ್ಟನೆ

ಹೀಗಿರುವಾಗಲೇ, ಮತ್ತೊಮ್ಮೆ ಅದೇ ಚರ್ಚೆ ಮುನ್ನೆಲೆಗೆ ಬಂದಿದೆ. ನವೆಂಬರ್‍ 14ರಂದು ‘ಕಂಗುವ’ ಬಿಡುಗಡೆಯಾದರೆ, ಮರುದಿನವೇ  ‘ಭೈರತಿ ರಣಗಲ್‍’ ಬಿಡುಗಡೆಯಾಗುತ್ತಿದ್ದು, ಎರಡು ದೊಡ್ಡ ಚಿತ್ರಗಳ ಅನಾವಶ್ಯಕ ಸ್ಪರ್ಧೆ ಏಕೆ? ಎಂಬ ಪ್ರಶ್ನೆ ಉದ್ಭವವಾಗಿದೆ. ಆದರೆ, ಇಲ್ಲಿ ಸ್ಪರ್ಧೆ ಎನ್ನುವುದೇ ಇಲ್ಲ, ಸತತವಾಗಿ ರಜಾದಿನಗಳು ಬಂದಿರುವುದರಿಂದ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಸೂರ್ಯ ಹೇಳಿದ್ದಾರೆ.

ಇತ್ತೀಚೆಗೆ ‘ಕಂಗುವ’ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದಾಗ ಮಾತನಾಡಿರುವ ಅವರು, ‘ಶಿವರಾಜಕುಮಾರ್‍ ನಮ್ಮಣ್ಣನ ತರಹ. ಯಾವುದೇ ಕಾರಣಕ್ಕೂ ನಾನು ಅವರ ಜೊತೆಗೆ ಸ್ಪರ್ಧೆ ಮಾಡುವುದಕ್ಕೆ ಬಂದಿಲ್ಲ. ಪ್ರತೀ ಹಬ್ಬ ಅಥವಾ ರಜಾದಿನಗಳ ಸಂದರ್ಭದಲ್ಲಿ ಒಟ್ಟೊಟ್ಟಿಗೆ ಹಲವು ಚಿತ್ರಗಳು ಬಿಡುಗಡೆಯಾಗುತ್ತವೆ. ಅದೇ ರೀತಿ ಒಟ್ಟಿಗೆ ರಜೆ ಬಂದಿರುವುದರಿಂದ, ನಮ್ಮಿಬ್ಬರ ಚಿತ್ರಗಳು ಬಿಡುಗಡೆಯಾಗುತ್ತಿವೆ. ಮಿಕ್ಕಂತೆ ನಮ್ಮ ನಡುವೆ ಯಾವುದೇ ಸ್ಪರ್ಧೆ ಇಲ್ಲ’ ಎಂದು ಸಷ್ಪಪಡಿಸಿದ್ದಾರೆ.

ಹಬ್ಬದ ಸೀಸನ್‍ನಲ್ಲಿ ದೊಡ್ಡ ಚಿತ್ರಗಳು ಒಟ್ಟಿಗೆ ಬರುವುದು ಸಹಜ ಎನ್ನುವ ಸೂರ್ಯ, ‘‘ಕಂಗುವ’ ಬಹುಭಾಷೆಗಳಲ್ಲಿ, ಒಟ್ಟಿಗೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ‘ಭೈರತಿ ರಣಗಲ್‍’ ಚಿತ್ರದ ಜೊತೆಗೆ ಸ್ಪರ್ಧಿಸುವುದಕ್ಕೆ ನಾನು ಬಂದಿಲ್ಲ. ದೀಪಾವಳಿಗೆ ‘ಸಿಂಗಂ ಅಗೇನ್‍’ ಮತ್ತು ‘ಭೂಲ್‍ ಭುಲಯ್ಯ’ ಚಿತ್ರಗಳು ಒಟ್ಟಿಗೆ ಬಿಡಗುಡೆಯಾಗಿ 100 ಕೋಟಿ ರೂ. ಹೆಚ್ಚು ಗಳಿಕೆ ಮಾಡಿವೆ. ಜನ ಯಾವತ್ತೂ ಒಂದೇ ಸಿನಿಮಾ ನೋಡಬೇಕು ಎನ್ನುವುದಿಲ್ಲ. ಹಾಗೆಯೇ, ಒಂದು ಚಿತ್ರದಿಂದ ಇನ್ನೊಂದು ಚಿತ್ರಕ್ಕೆ ಸಮಸ್ಯೆಯಾಗುವುದಿಲ್ಲ. ನಾವು ಈ ಚಿತ್ರವನ್ನು ಅಕ್ಟೋಬರ್ 10ರಂದೇ ಬಿಡುಗಡೆ ಮಾಡಬಹುದಿತ್ತು. ಆದರೆ, ಚಿತ್ರ ಪೂರ್ತಿಯಾಗಿರಲಿಲ್ಲ. ಚಿತ್ರದ ಕೆಲಸಗಳು 3ಡಿ ಕೆಲಸಗಳು ಮುಗಿದಿರಲಿಲ್ಲ. ಹಾಗಾಗಿ, ಚಿತ್ರವನ್ನು ಮುಂದೂಡಲಾಯಿತು’ ಎಂದು ಹೇಳಿದ್ದಾರೆ.

ಇದೇ ರೀತಿ ಶಿವರಾಜಕುಮಾರ್‍ ಸಹ ಕೆಲವು ತಿಂಗಳುಗಳ ಹಿಂದೆ ಇದೇ ವಿಷಯವಾಗಿ ಮಾತನಾಡಿದ್ದರು. ಇಲ್ಲಿ ಸ್ಪರ್ಧೆ ಎಂಬುದೇ ಇಲ್ಲ, ಇದೆಲ್ಲವೂ ಮಾಧ್ಯಮಗಳ ಊಹಾಪೋಹ, ಯಾರಿಗೆ ಯಾವಾಗ ಅನುಕೂಲವಾಗುತ್ತದೋ ಆಗ ಬಿಡುಗಡೆ ಮಾಡುತ್ತಾರೆ, ಯಾರಿಗೆ ಯಾವುದು ಅನುಕೂಲವಾಗುತ್ತದೋ ಅದನ್ನು ನೋಡುತ್ತಾರೆ ಎಂದು ಹೇಳಿದ್ದರು. ಅದಕ್ಕೆ ಕಾರಣವೂ ಇದೆ. ಆಗಸ್ಟ್ ‍15ರಂದು ರೋಹಿತ್‍ ಶೆಟ್ಟಿ ನಿರ್ದೇಶನದ, ಅಜಯ್‍ ದೇವಗನ್‍ ಅಭಿನಯದ ‘ಸಿಂಗಂ ಅಗೇನ್‍’, ಅಲ್ಲು ಅರ್ಜುನ್‍ ಅಭಿನಯದ ಬಹುನಿರೀಕ್ಷೆಯ ಚಿತ್ರವಾದ ‘ಪುಷ್ಪ 2’ ಮತ್ತು ಶಿವರಾಜಕುಮಾರ್‍ ಅಭಿನಯದ ‘ಭೈರತಿ ರಣಗಲ್‍’ ಚಿತ್ರಗಳು ಬಿಡುಗಡೆಯಾಗಬೇಕಿತ್ತು. ಅಂದುಕೊಂಡಂತೆ ಮೂರು ಚಿತ್ರಗಳ ಕೆಲಸಗಳು ಮುಗಿಯದ ಹಿನ್ನೆಲೆಯಲ್ಲಿ ಮೂರು ಚಿತ್ರಗಳು ಮುಂದೂಡಲ್ಪಟ್ಟವು ಎನ್ನಿ. ಆದರೆ, ಆಗಲೂ ಈ ಸ್ಪರ್ಧೆ ಬೇಕಾ? ಎಂಬ ಪ್ರಶ್ನೆ ಬಂದಿತ್ತು.

ಸಮಸ್ಯೆ ಇಲ್ಲ ಎಂದು ಶಿವಣ್ಣ

ಈ ಕುರಿತು ಮಾತನಾಡಿದ್ದ ಶಿವರಾಜಕುಮಾರ್, ‘ಲಾಂಗ್‍ ವೀಕೆಂಡ್‍ ಇರುವುದರಿಂದ ಪ್ರೇಕ್ಷಕರನ್ನು ದೊಡ್ಡ ಮಟ್ಟದಲ್ಲಿ ತಲುಪಬಹುದು ಎಂಬ ನಿರೀಕ್ಷೆ ಎಲ್ಲ ಚಿತ್ರತಂಡಗಳದ್ದು. ಅದೇ ಕಾರಣಕ್ಕೆ ಅಂದು ಬಹಳಷ್ಟು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿವೆ. ಇದರಲ್ಲಿ ಯಾವುದೇ ಪೈಪೋಟಿ ಇಲ್ಲ. ಹಾಗೆಯೇ, ಇದರಲ್ಲಿ ಯಾರಿಗೂ ಸಮಸ್ಯೆ ಇಲ್ಲ. ಪ್ರೇಕ್ಷಕರು ತಾವ್ಯಾವ ಚಿತ್ರ ನೋಡಬೇಕೆಂದು ತೀರ್ಮಾನಿಸಿರುತ್ತಾರೆ. ಅದಕ್ಕನುಗುಣವಾಗಿ ಚಿತ್ರಗಳನ್ನು ನೋಡುತ್ತಾರೆ’ ಎಂದು ಹೇಳಿದ್ದರು.

ಈ ತರಹದ್ದೊಂದು ತಿಳವಳಿಕೆ ಚಿತ್ರರಂಗದಲ್ಲಿ ಮೊದಲಿನಿಂದಲೂ ಇದ್ದೇ ಇದೆ. ಹಾಗಾಗಿ, ಒಂದು ದಿನ ಎಷ್ಟೇ ಚಿತ್ರಗಳು ದೊಡ್ಡ ಮತ್ತು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾದರೂ, ಅದನ್ನು ಪೈಪೋಟಿ ಎಂದು ಪರಿಗಣಿತವಾಗುವುದಿಲ್ಲ. ಸ್ಟಾರ್‍ ನಟರು ಚೆನ್ನಾಗಿಯೇ ಇರುತ್ತಾರೆ. ಆದರೆ, ಪೈಪೋಟಿ ಹೆಸರಿನಲ್ಲಿ ಅಭಿಮಾನಿಗಳು ಅನಾವಶ್ಯಕವಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಆದರೆ, ಯಾರಿಗೆ ಎಷ್ಟು ಸಿಗಬೇಕೋ, ಅದು ಖಂಡಿತಾ ಸಿಕ್ಕೇಸಿಗುತ್ತದೆ.

ಹೀಗಿರುವಾಗಲೇ, ಮುಂದಿನ ಸಂಕ್ರಾಂತಿಗೆ ಒಂದಿಷ್ಟು ನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ನಿಂತಿವೆ. ಆಗ ಮತ್ತೊಮ್ಮೆ ಸ್ಟಾರ್‍ ಚಿತ್ರಗಳ ಪೈಪೋಟಿ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದರೆ ಆಶ್ಚರ್ಯವಿಲ್ಲ.

Tags:    

Similar News