ಬಿಗ್ ಬಾಸ್ ಮಲಯಾಳಂ ಸೀಸನ್ 7: ಅನುಮೋಲ್‌ಗೆ ವಿಜಯದ ಕಿರೀಟ
ಈ ಬಾರಿಯ ಬಿಗ್‌ಬಾಸ್‌ನ ಮತ್ತೊಂದು ಪ್ರಮುಖ ಆಕರ್ಷಣೆಯ ವಿಷಯವೆಂದರೆ, ಸಾಮಾನ್ಯ ವರ್ಗದ ಸ್ಪರ್ಧಿ ಅನೀಶ್ ಅವರು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿರುವುದು.
ಅನುಮೋಲ್
ರೋಚಕ ಸ್ಪರ್ಧೆ, ಅನಿರೀಕ್ಷಿತ ತಿರುವುಗಳಿಂದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ಬಿಗ್ ಬಾಸ್ ಮಲಯಾಳಂ ಸೀಸನ್ 7ಕ್ಕೆ ಅದ್ದೂರಿ ತೆರೆಬಿದ್ದಿದೆ. ಸೂಪರ್‌ಸ್ಟಾರ್ ಮೋಹನ್‌ಲಾಲ್ ನಿರೂಪಣೆಯ ಗ್ರ್ಯಾಂಡ್ ಫಿನಾಲೆಯಲ್ಲಿ, ನಟಿ ಹಾಗೂ ನಿರೂಪಕಿ ಅನುಮೋಲ್ ಅವರು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ, ಅವರು ಬಿಗ್ ಬಾಸ್ ಮಲಯಾಳಂ ಇತಿಹಾಸದಲ್ಲಿ ಟ್ರೋಫಿ ಗೆದ್ದ ಎರಡನೇ ಮಹಿಳಾ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಜೇತರಾದ ಅನುಮೋಲ್, 42.55 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇತಿಹಾಸ ನಿರ್ಮಿಸಿದ ಸಾಮಾನ್ಯ ಸ್ಪರ್ಧಿ
ಈ ಬಾರಿಯ ಸೀಸನ್‌ನ ಮತ್ತೊಂದು ಪ್ರಮುಖ ವಿಶೇಷತೆಯೆಂದರೆ, ಸಾಮಾನ್ಯ ವರ್ಗದಿಂದ ಸ್ಪರ್ಧಿಯಾಗಿ ಬಂದಿದ್ದ ಅನೀಶ್ ಅವರು ಮೊದಲ ರನ್ನರ್ ಅಪ್ ಸ್ಥಾನ ಗಳಿಸಿರುವುದು. ಬಿಗ್ ಬಾಸ್ ಮಲಯಾಳಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾಮಾನ್ಯ ಸ್ಪರ್ಧಿಯೊಬ್ಬರು ಫೈನಲ್ ಹಂತಕ್ಕೇರಿ ರನ್ನರ್ ಅಪ್ ಆಗಿ ಹೊರಹೊಮ್ಮಿರುವುದು ಐತಿಹಾಸಿಕ ಸಾಧನೆಯಾಗಿದೆ. ಇನ್ನುಳಿದಂತೆ, ಫೈನಲ್ ಹಂತದಲ್ಲಿದ್ದ ಶಾನವಾಸ್, ನೆವಿನ್ ಮತ್ತು ಅಕ್ಬರ್ ಅವರು ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ರನ್ನರ್ ಅಪ್ ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರು.
ವೈವಿಧ್ಯಮಯ ಸ್ಪರ್ಧಿಗಳು, ಕಠಿಣ ಸವಾಲುಗಳು
ಬಿಗ್ ಬಾಸ್ ಮಲಯಾಳಂ ಸೀಸನ್ 7, ಒಟ್ಟು 20 ವೈವಿಧ್ಯಮಯ ಸ್ಪರ್ಧಿಗಳ ಭಾಗವಹಿಸುವಿಕೆಯಿಂದ ಗಮನ ಸೆಳೆದಿತ್ತು. ಕಠಿಣವಾದ ಟಾಸ್ಕ್‌ಗಳು, ನಾಟಕೀಯ ತಿರುವುಗಳು ಮತ್ತು ಸ್ಪರ್ಧಿಗಳ ಪರವಾಗಿ ಹೊರಗೆ ನಡೆಯುತ್ತಿದ್ದ ಪಿಆರ್ ಅಭಿಯಾನಗಳ ಬಗೆಗಿನ ಚರ್ಚೆಗಳು ಈ ಬಾರಿಯ ಶೋನಲ್ಲಿ ಹೆಚ್ಚು ಸದ್ದು ಮಾಡಿದ್ದವು. ರೇಣು ಸುಧಿ, ಅಪ್ಪಾನಿ ಶರತ್, ಶೈತ್ಯ ಸಂತೋಷ್, ಗಿಜೆಲೆ ಥಕ್ರಾಲ್, ಆರ್ಯನ್ ಕಥುರಿಯಾ ಸೇರಿದಂತೆ ಹಲವು ಸ್ಪರ್ಧಿಗಳು ತಮ್ಮ ಆಟದ ಮೂಲಕ ಗಮನ ಸೆಳೆದಿದ್ದರು.
ನಟ ಮೋಹನ್‌ಲಾಲ್ ಅವರು ತಮ್ಮ ವಿಶಿಷ್ಟ ನಿರೂಪಣೆಯ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ನವೆಂಬರ್ 9ರಂದು ಭಾನುವಾರ ಸಂಜೆ 7 ಗಂಟೆಗೆ ಏಷ್ಯಾನೆಟ್ ವಾಹಿನಿಯಲ್ಲಿ ಈ ಅದ್ದೂರಿ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಿತ್ತು. ಅಂದಹಾಗೆ, ಬಿಗ್ ಬಾಸ್ ನಿರೂಪಣೆಯ ಜೊತೆಗೆ, ಮೋಹನ್‌ಲಾಲ್ ತಮ್ಮ ಜನಪ್ರಿಯ ಸಿನಿಮಾ 'ದೃಶ್ಯಂ'ನ ಮೂರನೇ ಭಾಗದ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. 'ದೃಶ್ಯಂ-3' ಚಿತ್ರದ ಚಿತ್ರೀಕರಣ ಸೋಮವಾರ ಆರಂಭವಾಗಿದ್ದು, ಇದೇ ವರ್ಷ ಅಕ್ಟೋಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.