Sandalwood Samachar | ಮೊದಲ ದಿನ ಭರ್ಜರಿ ಗಳಿಕೆ ಮಾಡಿದ ‘ಭೈರತಿ ರಣಗಲ್’
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಶುಕ್ರವಾರ ರಾಜ್ಯದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ.;
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ಶುಕ್ರವಾರ ರಾಜ್ಯದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಭರ್ಜರಿ ಗಳಿಕೆ ಮಾಡಿದೆ.
ಕೆಲವು ವರದಿಗಳ ಪ್ರಕಾರ ‘ಭೈರತಿ ರಣಗಲ್’ ಸಿನಿಮಾ ಮೊದಲ ದಿನ ಎರಡರಿಂದ ಐದು ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಎರಡು ಸಾವಿರ ಜನ ರೇಟಿಂಗ್ ನೀಡಿದ್ದು, 9.6 ರೇಟಿಂಗ್ ಸಿನಿಮಾಗೆ ಸಿಕ್ಕಿದೆ.
'ಭೈರತಿ ರಣಗಲ್' ಸಿನಿಮಾವನ್ನು ಕರ್ನಾಟಕದಲ್ಲಿ ಸುಮಾರು 365ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿಬಂದಿದೆ. ಶ್ರೀಮುರಳಿ ಮತ್ತು ಶಿವರಾಜ್‌ಕುಮಾರ್ ನಟನೆಯ ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದರು. ಆ ಸಿನಿಮಾದ ಸೆಕೆಂಡ್ ಹಾಫ್‌ನಲ್ಲಿ ಶಿವಣ್ಣ ಎಂಟ್ರಿ ಕೊಟ್ಟರೂ ಪಾತ್ರ ಬಿಗ್ ಇಂಪ್ಯಾಕ್ಟ್ ಮಾಡಿತ್ತು. ಹೀಗಾಗಿ ಇದೇ ಪಾತ್ರವನ್ನು ಇಟ್ಟುಕೊಂಡು ಭೈರತಿ ಯಾರು? ಹಿಂದಿನ ಕಥೆ ಏನು? ವೈಲೆಂಟ್ ಆಗಿದ್ದು ಯಾಕೆ? ಎಂಬುವುದನ್ನು ಈ ಭಾಗದಲ್ಲಿ ತೋರಿಸಲಾಗಿದೆ. ಸಿನಿಮಾ ಕೊನೆಯಲ್ಲಿ ‘ಮಫ್ತಿ’ ಚಿತ್ರದಲ್ಲಿ ಏನಾಗಿತ್ತು ಎಂಬುದರ ಝಲಕ್ ಕೂಡ ತೋರಿಸಲಾಗಿದೆ.
ನರ್ತನ್ ನಿರ್ದೇಶನದ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ನಿರ್ಮಿಸಿದ್ದಾರೆ. ರುಕ್ಮಿಣಿ ವಸಂತ್ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿದ್ದಾರೆ. ಸಿನಿಮಾಗೆ ರವಿ ಬಸ್ರೂರ್ ಸಂಗೀತ, ನವೀನ್ ಕುಮಾರ್ ಕ್ಯಾಮರಾ ವರ್ಕ್, ಗುಣ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜಾ ಸಾಹಸ ನಿರ್ದೇಶನವಿದೆ.
ಶುಕ್ರವಾರ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ 6 ಗಂಟೆಗೆ ಮುಂಜಾನೆಯ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸ್ಪೆಷಲ್ ಶೋಗೆ ಶಿವರಾಜ್ ಕುಮಾರ್ ಅವರ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಮತ್ತು ಪುತ್ರಿ ನಿವೇದಿತಾ ಹಾಜರಾಗಿದ್ದರು. ಕಲಾವಿದರಾದ ಡಾಲಿ ಧನಂಜಯ್, ನಾಗಭೂಷಣ್, ವಿಕ್ಕಿ ಸೇರಿ ಹಲವರು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದರು. ಈ ವೇಳೆ ಡಾಲಿ ಧನಂಜಯ್ ಮಾಡಿದ್ದ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಜ್ ಕುಟುಂಬದ ವಿನಯ್ ರಾಜ್ಕುಮಾರ್ ಮತ್ತು ಯುವ ರಾಜ್ಕುಮಾರ್ ಅವರೂ ಕೂಡಾ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿವರಾಜ್‌ಕುಮಾರ್ ಅಭಿನಯದ 'ಜನುಮದ ಜೋಡಿ' ಸಿನಿಮಾ 1996ರಲ್ಲಿ ನವೆಂಬರ್ 15ರಂದು ಬಿಡುಗಡೆಯಾಗಿ ಯಶಸ್ಸು ಕಂಡಿತ್ತು. 2024ರಲ್ಲಿ ಭೈರತಿ ರಣಗಲ್ ಕೂಡಾ ಅದೇ ದಿನಾಂಕದಂದು ಸಿನಿಮಾ ತೆರೆಕಂಡಿದ್ದು ಮತ್ತೊಂದು ವಿಶೇಷ.
ಇತ್ತೀಚೆಗಷ್ಟೇ ತೆರೆಕಂಡ ರೋರಿಂಗ್ ಸ್ಟಾರ್ ಶ್ರೀಮುರಳಿ ಮುಖ್ಯಭೂಮಿಕೆಯ ʼಬಘೀರʼ ಉತ್ತಮ ಪ್ರದರ್ಶನ ಕಂಡು ಸ್ಯಾಂಡಲ್ವುಡ್ಗೆ ಗೆಲುವು ತಂದುಕೊಟ್ಟಿತ್ತು. ಇದೀಗ 'ಭೈರತಿ ರಣಗಲ್' ಆ ಗೆಲುವನ್ನು ಮುಂದುವರಿಸಿದೆ.