ಯಶಸ್ವಿ ಸಿನೆಮಾಗಳ ʼಫ್ರುಟ್ ಸಲಾಡ್ʼ ಬಘೀರ

ದರ್ಶನ್, ಸುದೀಪ್, ಉಪೇಂದ್ರ, ಯಶ್ ರಂತಹ ನಾಯಕನಟರ ಚಿತ್ರಗಳ ಕೊರತೆಯ ನಡುವೆ ಒಂದು ರೀತಿಯಲ್ಲಿ ಕಂಗಾಲಾಗಿದ್ದ ಕನ್ನಡ ಚಿತ್ರೋದ್ಯಮ, ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀಮುರುಳಿಯಂತಹ ನಟರುಗಳ ಚಿತ್ರಗಳ ಬಿಡುಗಡೆಯ ಮೂಲಕ ಅಷ್ಟೋ ಇಷ್ಟೋ ಉಸಿರಾಡುವಂತಾಗಿದೆ.

Update: 2024-11-02 01:30 GMT

ಬೆಳಕಿನ‌ಹಬ್ಬ ದೀಪಾವಳಿಯ ಆರಂಭದ ದಿನವೇ ಥಿಯೇಟರ್ ಗೆ ಲಗ್ಗೆ ಇಟ್ಟಿರುವ ಬಹು ನಿರೀಕ್ಣಿತ ಕನ್ನಡ ಚಿತ್ರ ಬಘೀರ ಹಲವಾರು ಭಾಷೆಗಳ ಯಶಸ್ವಿ ಚಿತ್ರಗಳ‌ 'ಫ್ರುಟ್ ಸಲಾಡ್‌ʼನಂತೆ  ಕಾಣಿಸುತ್ತದೆ. ಫ್ರಿಡ್ಜ್ ನಲ್ಲಿರುವ ಹಳೆಯ ಹಣ್ಣುಗಳನ್ನೇ ಹೆಚ್ಚಿ  ಹೊಸ ಬೌಲ್‌ನಲ್ಲಿ ಹೊಸ ಫ್ಲೇವರ್‌ನಲ್ಲಿ ನೀಡಿದ್ದಾರೆ. ಆದರೆ, ಸ್ಟಾರ್‌ನಟರ ಕೊರತೆ ನಡುವೆ ಈ  "ಫ್ರುಟ್‌ ಸಲಾಡ್‌" ಅಗತ್ಯವಾಗಿ ಬೇಕಾಗಿತ್ತು.

ದರ್ಶನ್, ಸುದೀಪ್, ಉಪೇಂದ್ರ, ಯಶ್ ರಂತಹ  ನಾಯಕನಟರ ಚಿತ್ರಗಳ ಕೊರತೆಯ ನಡುವೆ  ಒಂದು ರೀತಿಯಲ್ಲಿ ಕಂಗಾಲಾಗಿದ್ದ ಕನ್ನಡ ಚಿತ್ರೋದ್ಯಮ,  ಧ್ರುವ ಸರ್ಜಾ, ಗೋಲ್ಡನ್ ಸ್ಟಾರ್ ಗಣೇಶ್, ಶ್ರೀಮುರುಳಿಯಂತಹ ನಟರುಗಳ ಚಿತ್ರಗಳ ಬಿಡುಗಡೆಯ ಮೂಲಕ ಅಷ್ಟೊ ಇಷ್ಟೊ ಉಸಿರಾಡುವಂತಾಗಿದೆ.

ಕೆಜಿಎಫ್ ನಂತರ ಕನ್ನಡ ಚಿತ್ರರಂಗ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿರುವುದೇನೊ ನಿಜ, ಆದರೆ, ಇಡೀ ಚಿತ್ರರಂಗ ಉತ್ತುಂಗದ ಸ್ಥಿತಿಯಲ್ಲಿದೆ ಎನ್ನುವಂತಿಲ್ಲ. ಎಷ್ಟೇ‌ ಖರ್ಚು ಮಾಡಿ ಚಿತ್ರ ಮಾಡಿ, ಕೋಟ್ಯಂತರ ರೂಪಾಯಿ ಪ್ರಚಾರಕ್ಕಾಗಿಯೇ ಸುರಿದರೂ ಪ್ರೇಕ್ಷಕ ಪ್ರಭುವನ್ನು ಚಿತ್ರ ಮಂದಿರದ ಕಡೆಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಅನ್ಯ ಭಾಷೆಗಳ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅವಕಾಶ ಕಲ್ಪಿಸಿರುವುದರಿಂದ ಹಿಂದಿ, ತೆಲಗು, ತಮಿಳು, ಮಲಯಾಳಿ ಸ್ಟಾರ್ ನಟರುಗಳ ಚಿತ್ರಗಳು ನೇರವಾಗಿ ಕನ್ನಡದಲ್ಲಿ ಡಬ್ ಆಗಿ ಬರುತ್ತಿರುವುದರಿಂದ ಹೊರ ಭಾಷೆಯ ಚಿತ್ರಗಳ ಸವಾಲುಗಳನ್ನು ನೇರವಾಗಿಯೇ ಎದುರಿಸಿ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳನ್ನು ಉಳಿಯುವುದು ಕನ್ನಡ ಚಿತ್ರ ನಿರ್ಮಾಪಕರಿಗೆ ದೊಡ್ಡ ಸವಾಲಾಗಿದೆ.

ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ಬಿಡುಗಡೆಯಾಗಿ ಒಂದು ತಿಂಗಳ ಅಂತರದಲ್ಲಿ ಶ್ರೀಮುರುಳಿ ಅಭಿನಯದ ಬಘೀರ ಚಿತ್ರ ಹಬ್ಬದ ಸಂದರ್ಭದಲ್ಲಿಯೇ ಬಂದಿರುವುದು ಮುರುಳಿ ಅಭಿಮಾನಿಗಳಿಗೆ ಹಬ್ಬದೂಟ ಮಾಡುವಂತೆ ಮಾಡಿದೆ.

ಬಘೀರನ‌ ಚಿತ್ರಕಥೆಯ ವಿಷಯಕ್ಕೆ ಬಂದರೆ, ಚಿತ್ರವನ್ನು ಆರಂಭದಿಂದ ಮುಗಿಯುವವರೆಗೂ ನೋಡುತ್ತ ಕುಳಿತರೆ ಮುಂದೇನಾಗುತ್ತದೆ ಎನ್ನುವ ಕುತೂಹಲಕ್ಕಿಂತ ಈ ಸೀನ್ ಯಾವ ಚಿತ್ರದ್ದು, ಈ ಥರದ ಸೀನ್ ಯಾವುದೊ ಚಿತ್ರದಲ್ಲಿ ನೋಡಿದ್ದೇನಲ್ಲಾ ಎನ್ನುವ ಪ್ರಶ್ನೆ ಮನಸೊಳಗೆ ಮೂಡ ತೊಡಗುತ್ತದೆ.

ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಯಶಸ್ವಿ ಚಿತ್ರ ಅಂತ ಚಿತ್ರದಿಂದ ಹಿಡಿದು, ಹಿಂದಿ, ತಮಿಳು, ತೆಲಗು ಭಾಷೆಗಳಲ್ಲಿ ಬಂದಿರುವ ಖಡಕ್ ಪೊಲಿಸ್ ಆಫೀಸರ್ ಗಳ ಕಥೆಯುಳ್ಳ ಅನೇಕ ಚಿತ್ರಗಳು ಕಣ್ಣ ಮುಂದೆ ಬಂದು ಹೋಗುತ್ತವೆ. ಖಡಕ್ ಎಸಿಪಿ ವೇದಾಂತ ಆಗಿ ರಗಡ್ ಲುಕ್ ನಲ್ಲಿರುವ ಶ್ರೀಮುರುಳಿಯನ್ನು ಪೊಲಿಸ್ ವೇಷದಲ್ಲಿ ನೋಡಿದಾಗ ತಮಿಳಿನ ಸೂರ್ಯ ಅಭಿನಯದ ಸಿಂಗಂ, ತೆಲುಗಿನ ರವಿತೇಜ ಅಭಿನಯದ ವಿಕ್ರಮಾರ್ಕುಡು ಕಣ್ಣ ಮುಂದೆ ಬಂದು ಹೋಗುತ್ತವೆ.

ನಿರ್ದೆಶಕ ಸೂರಿ ರಿಯಲಿಸ್ಟಿಕ್ ಚಿತ್ರಗಳ ಜಾಡಿನಿಂದ ಹೊರ ಬಂದು ಸೂಪರ್ ಹಿರೋ ಕಲ್ಪನೆಯ ಕಥೆಯನ್ನು ರಸವತ್ತಾಗಿ ಉಣಬಡಿಸುವ ಕಸರತ್ತು ಮಾಡಿದ್ದಾರೆ‌. ಶ್ರೀಮುರುಳಿ ಬಘೀರನಾಗಿ ಮುಖವಾಡ ಹಾಕಿಕೊಂಡು ಸೂಪರ್ ಹಿರೋ ಆಗಿ ಕಷ್ಟದಲ್ಲಿರುವವರನ್ನು ಕಾಪಾಡುವುದು ಹೃತಿಕ್ ರೋಷನ್ ಅಭಿನಯದ ಕ್ರಿಶ್, ಬೈಕ್ ಓಡಿಸುವಾಗ ಧೂಮ್ ಚಿತ್ರದ ನೆರಳು ಕಾಣಿಸುತ್ತದೆ. ಆದರೆ, ಕೆಜಿಎಫ್ ನಿರ್ದೇಶಕ ಪ್ರಸಾಂತ್ ನೀಲ್ ಅವರ ಕಥೆ, ಹೊಂಬಾಳೆ ಸಂಸ್ಥೆ ನಿರ್ಮಾಣದ ಬಿಗ್ ಬಜೆಟ್ ನ ಚಿತ್ರವಾದರೂ ಕೆಜಿಎಫ್ ಛಾಯೆಯಿಂದ ಹೊರ ಬಂದಿರುವುದು ಸಮಾಧಾನಕರ ವಿಷಯ.


ಚಿತ್ರಕಥೆಯಲ್ಲಿ ಯಾವುದೇ ಹೊಸತನವಿಲ್ಲ, ಡ್ರಗ್ ಮಾಫಿಯಾ, ವುಮೆನ್ ಟ್ರಾಫಿಕಿಂಗ್ ದಂಧೆ ಕೋರರನ್ನು ಮಟ್ಟ ಹಾಕುವುದೇ ಚಿತ್ರದ ಒಂದೆಳೆ. ಅದನ್ನು ತಂತ್ರಜ್ಞಾನ ಬಳಸಿ ಈಗಿನ ಕಾಲಕ್ಕೆ ಮಾರ್ಪಾಡು ಮಾಡಲು ನಿರ್ದೇಶಕ ಸೂರಿ ಪ್ರಯತ್ನಿಸಿದ್ದಾರೆ. ಆದರೆ, ಚಿತ್ರದ ಎಡಿಟಿಂಗ್ ನಲ್ಲಿ ಆಟ ಆಡಿದ್ದರೆ, ಇರುವ ಕಥೆಯಲ್ಲಿಯೇ ಇನ್ನಷ್ಟು ರೋಚಕತೆ ಮೂಡುವಂತೆ ಮಾಡಿ ಪ್ರೇಕ್ಷರನ್ನು ಕುತೂಲಹಕ್ಕೆ ಹಚ್ಚಿ ಕುರ್ಚಿಯ ತುದಿಗೆ ಕೂಡುವಂತೆ ಮಾಡಲು ಎಲ್ಲ ಅವಕಾಶಗಳು ಇದ್ದವು, ಆದರೆ, ಚಿತ್ರಕಥೆಯನ್ನು ಸಮಾನಾಂತರ ರೇಖೆಯ ಥರ ನೇರವಾಗಿ ಹೇಳಿಕೊಂಡು ಹೋಗಿರುವುದು ಚಿತ್ರದ ಮುಂದಿನ ಕಥೆಯ ಬಗ್ಗೆ ಕುತೂಹಲ ಕಡಿಮೆಯಾಗುವಂತೆ ಮಾಡಿದೆ.

ನಾಯಕ ಶ್ರೀಮುರಳಿ ಎಸಿಪಿ ಹಾಗೂ ಬಘೀರ ಎರಡೂ ಪಾತ್ರಗಳಲ್ಲಿಯೂ ಜಬರದಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಬ್ಬರೇನಾ ಅಥವಾ ಬೇರೆ ಬೇರೆನಾ ಎನ್ನುವು ಕುತೂಹಲವನ್ನು ಕಾಯ್ದುಕೊಳ್ಳದೇ ನೇರವಾಗಿಯೇ ಆರಂಭದಲ್ಲಿಯೇ ಪ್ರೇಕ್ಷಕರ ಮುಂದೆ ತೆರೆದಿಟ್ಟಿರುವುದು, ಪ್ರೇಕ್ಷಕನ ಕುತೂಹಲ ಕಡಿಮೆಯಾಗುವಂತೆ ಮಾಡಿದೆ.

ನಾಯಕಿ ರುಕ್ಮಿಣಿ ವಸಂತ್ ಪಾತ್ರಕ್ಕೆ ಹೆಚ್ಚಿನ ಅವಕಾಶವೇನು ಇಲ್ಲ. ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು, ನಾಯಕನಿಗೆ ಗಾಯವಾದಾಗ ಚಿಕಿತ್ಸೆ ನೀಡಲು ಮಾತ್ರ ಅವರ ಸೇವೆ ಬಳಕೆಯಾಗಿದೆ. ಒಂದು ಹಾಡು ಮೆಲೋಡಿಯಾಗಿ ಕೇಳುವಂತಿದೆ. ದೇವರ ರೂಪದಲ್ಲಿ ಬರುವ ಬಘೀರನಿಗಾಗಿ ಮಗು ಪಠಿಸುವ ಶಿವನ ಮಂತ್ರವೂ ಮನಸಲ್ಲಿ ದೈವತ್ವ ಮೂಡುವಂತೆ ಮಾಡುತ್ತದೆ. ಪೊಲೀಸ್ ಪೇದೆಯಾಗಿ ರಂಗಾಯಣ ರಘು ಅವರ ಅಭಿನಯ ಚಿತ್ರದ ಹೈಲೈಟ್. ಸಿಬಿಐ ಅಧಿಕಾರಿಗಳಾಗಿ ಅವಿನಾಶ್ , ಪ್ರಕಾಶ್ ರೈ ಅವರ ಪಾತ್ರಗಳು ಸಪ್ಪೆಯನಿಸುತ್ತವೆ. ಪ್ರಮೋದ ಶೆಟ್ಟಿ ಅವರ ಪಾತ್ರ ಚಿತ್ರಕ್ಕೆ ಪೂರಕವಾಗಿವೆ. ಮೇನ್ ವಿಲನ್ ಆಗಿ ಗರುಡ ರಾಮ್ ಮಿಂಚಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಒಂದು ಚಿತ್ರ ನೋಡಬೇಕೆನ್ನುವವರು, ಹೊರಗಡೆ ಮಳೆ ಇದೆ, ಖಾಲಿ ಕುಂತು ಏನು ಮಾಡೋದು ಎನ್ನುವವರು ಥೇಟರ್ ಗೆ ಒಂದು ಬಾರಿ ಬಘೀರನ ದರ್ಶನ ಪಡೆಯಬಹುದು.

Tags:    

Similar News