ಮತ್ತೊಂದು ‘ಡರ್ಟಿ ಪಿಕ್ಚರ್’; ಸಿಲ್ಕ್‌ ಸ್ಮಿತಾ ಬಯೋಪಿಕ್‌ ಘೋಷಣೆ

Update: 2024-12-03 13:29 GMT

ದಕ್ಷಿಣ ಭಾರತದ ಖ್ಯಾತ ನಟಿ ಮತ್ತು ಹಲವು ಚಿತ್ರಗಳಲ್ಲಿ ಐಟಂ ಡ್ಯಾನ್ಸ್‌ಗಾಗಿ ಜನಪ್ರಿಯವಾಗಿದ್ದ ಸಿಲ್ಕ್ ಸ್ಮಿತಾ ಜೀವನದಿಂದ ಸ್ಫೂರ್ತಿ ಪಡೆದು ಈಗಾಗಲೇ ಹಿಂದಿಯಲ್ಲಿ ‘ದಿ ಡರ್ಟಿ ಪಿಕ್ಚರ್’ ನಿರ್ಮಾಣವಾಗಿದೆ. ಈಗ ಸಿಲ್ಕ್ ಸ್ಮಿತಾ ಅವರ ಅಧಿಕೃತ ಬಯೋಪಿಕ್‍ ಆಗಿ ‘ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌’ ಎಂಬ ಚಿತ್ರ ಘೋಷಣೆಯಾಗಿದೆ.

ಸೋಮವಾರ, ಸಿಲ್ಕ್ ಸ್ಮಿತಾ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ‘ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌’ ಚಿತ್ರದ ಟೀಸರ್ ಬಿಡುಗಡೆಯಾಗುವುದರ ಜೊತೆಗೆ ಘೋಷಣೆಯಾಗಿದೆ. ಈ ಹಿಂದೆ ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಚಂದ್ರಿಕಾ ರವಿ, ಈ ಚಿತ್ರದಲ್ಲಿ ಸ್ಮಿತಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್‍ಸ್ಟಾಗ್ರಾಂ ಮೂಲಕ ಚಿತ್ರದ ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ, ‘ಸಿಲ್ಕ್ ಸ್ಮಿತಾ ಎಂಬ ಕಾಲಾತೀತ ಸುಂದರಿಗೆ ಜನ್ಮದಿನದ ಶುಭಾಶಯಗಳು. ಅವರ ಕುಟುಂಬದವರ ಆಶೀರ್ವಾದದೊಂದಿಗೆ, ಸಿಲ್ಕ್ ಸ್ಮಿತಾ ಅವರ ಬಯೋಪಿಕ್‍ನ್ನು ಸಾದರಪಡಿಸುತ್ತಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಈ ಟೀಸರ್ ಪ್ರಾರಂಭವಾಗುವುದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಆಫೀಸ್‍ನಲ್ಲಿ ಕುಳಿತು ದಿನಪತ್ರಿಕೆಗಳನ್ನು ಮತ್ತು ನಿಯತಕಾಲಿಕೆಗಳನ್ನು ಓದುವ ಮೂಲಕ. ಪ್ರತಿ ದಿನಪತ್ರಿಕೆಯಲ್ಲೂ ನಟಿ ಸಿಲ್ಕ್ ಸ್ಮಿತಾ ಕುರಿತು ಲೇಖನಗಳಿರುತ್ತವೆ. ಇದನ್ನು ಓದಿ ಅವರು ತಮ್ಮ ಕಾರ್ಯದರ್ಶಿಗೆ ಈ ಸಿಲ್ಕ್ ಯಾರೆಂದು ವಿಚಾರಿಸುತ್ತಾರೆ. ಅದಕ್ಕೆ ಉತ್ತರಿಸುವ ಆತ, ‘ನೀವು ಐರನ್‍ ಲೇಡಿ ಆದರೆ, ಆಕೆ ಮ್ಯಾಗ್ನೆಟಿಕ್‍ ಲೇಡಿ’ ಎಂದು ಉತ್ತರಿಸುತ್ತಾರೆ. ಆ ನಂತರ ಸಿಲ್ಕ್ ಸ್ಮಿತಾ ಯಾರೆಂದು ಪರಿಚಯಿಸಲಾಗುತ್ತದೆ.

ಸಿಲ್ಕ್ ಸ್ಮಿತಾ ಅವರ ಮೂಲ ಹೆಸರು ವಿಜಯಲಕ್ಷ್ಮೀ ವಡ್ಲಪಾಟಿ. ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಡ್ಯಾನ್ಸರ್ ಆಗಿ ಕಾಣಿಸಿಕೊಳ್ಳುವ ಮೂಲಕ ಪರಿಚಿತರಾದ ಅವರು, ನಂತರದ ವರ್ಷಗಳಲ್ಲಿ ಬಹುಬೇಡಿಕೆಯ ಬಹುಭಾಷಾ ನಟಿಯಾಗಿ ಬೆಳೆದರು. ಬರೀ ತೆಲುಗು ಮತ್ತು ತಮಿಳಷ್ಟೇ ಅಲ್ಲ, ಕನ್ನಡ, ಹಿಂದಿ ಮತ್ತು ಮಲಯಾಳಂನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಒಂದೂವರೆ ದಶಕದ ವೃತ್ತಿಜೀವನದಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಸಿಲ್ಕ್ ಸ್ಮಿತಾ ಅವರ ವೈಯಕ್ತಿಕ ಜೀವನ ದುರಂತಮಯವಾಗಿತ್ತು. ಜೀವನದಲ್ಲಿ ಸಾಕಷ್ಟು ನೊಂದಿದ್ದ ಅವರು 90ರ ದಶಕದಲ್ಲಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌’ ಸಿನಿಮಾವನ್ನು ಜಯರಾಮ್‌ ಸಂಕರನ್‌ ನಿರ್ದೇಶನ ಮಾಡಲಿದ್ದು, ಎಸ್‌.ಬಿ ವಿಜಯ್‌ ಅಮೃತ್‌ರಾಜ್‌ ನಿರ್ಮಾಣ ಮಾಡಲಿದ್ದಾರೆ. 2025ರ ಆರಂಭದಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರ ವಿವರ ಇನ್ನಷ್ಟೇ ಹೊರಬೀಳಬೇಕಿದೆ.

Tags:    

Similar News