ಮತ್ತೆ ನಿರ್ದೇಶನದತ್ತ ಅನೀಶ್ ತೇಜೇಶ್ವರ್; ಕನ್ನಡ ಮತ್ತು ತೆಲುಗಿನಲ್ಲಿ ಹೊಸ ಚಿತ್ರ
ಭಾವಪ್ರೀತ ಪ್ರೊಡಕ್ಷನ್ಸ್ ಸಂಸ್ಥೆಯಡಿ ಈ ಚಿತ್ರವನ್ನು ವಿಜಯ್ ಎಂ. ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಮಿಕ್ಕ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.;
ಅನೀಶ್ ತೇಜೇಶ್ವರ್, ‘ನಮ್ ಏರಿಯಾಲ್ ಒಂದಿನ’ ಚಿತ್ರದ ಮೂಲಕ ಹೀರೋ ಆದರು. ಅವಕಾಶಗಳು ಕಡಿಮೆಯಾದಾಗ ತಾವೇ ನಿರ್ಮಾಪಕರಾಗಿ ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರ ನಿರ್ಮಿಸಿದರು. ಒಳ್ಳೆಯ ಕಥೆ ಸಿಗಲಿಲ್ಲ ಎಂದು ‘ರಾಮಾರ್ಜುನ’ ಚಿತ್ರದ ಕಥೆ ಬರೆದು ತಾವೇ ನಿರ್ದೇಶಕರಾದರು. ಆದರೆ, ಅದರಿಂದ ದೊಡ್ಡ ಪವಾಡವೇನೂ ಆಗಲಿಲ್ಲ.
ಹೀಗಿರುವಾಗಲೇ, ಅನೀಶ್ ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ಈ ಬಾರಿ ‘ರಾಮಾರ್ಜುನ’ ಚಿತ್ರದ ತರಹವೇ, ಅವರು ಬರೀ ನಟನಷ್ಟೇ ಅಲ್ಲ, ಚಿತ್ರದ ನಿರ್ದೇಶನವನ್ನು ಸಹ ಮಾಡುತ್ತಿದ್ದಾರೆ. ಜೊತೆಗೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಅನೀಶ್, ‘’ಆರಾಮ್ ಅರವಿಂದಸ್ವಾಮಿ’ ನಂತರ, ನನ್ನ ಮುಂದಿನ ಹೆಜ್ಜೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ‘ರಾಮಾರ್ಜುನ’ ಚಿತ್ರದ ನಂತರ ನಾನು ಮತ್ತೆ ನಿರ್ದೇಶನ ಮಾಡುತ್ತಿದ್ದು, ಈ ಬಾರಿ ಚಿತ್ರ ಇನ್ನೂ ದೊಡ್ಡದಾಗಿ ಮತ್ತು ಉತ್ತಮವಾಗಿರಲಿದೆ. ನಿಮ್ಮ ನಿರೀಕ್ಷೆಗಳನ್ನು ತಲುಪಲು ನಮ್ಮ ತಂಡವು ಶ್ರಮಿಸುತ್ತಿದೆ. ನೀವು ನನ್ನನ್ನು ಮತ್ತೊಂದು ಭರವಸೆಯ ಮತ್ತು ವಿಶಿಷ್ಟ ಪಾತ್ರದಲ್ಲಿ ನೋಡುತ್ತೀರಿ ಎಂದು ಭಾವಿಸುತ್ತಾ, ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ನಾವು ಏಕಕಾಲದಲ್ಲಿ ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರೀಕರಣ ಮಾಡುತ್ತಿದ್ದೇವೆ. ಶೀರ್ಷಿಕೆ, ತಾರಾಗಣ ಮತ್ತು ಇನ್ನಿತರ ವಿವರಗಳಿಗಾಗಿ ನಿರೀಕ್ಷಿಸಿ’ ಎಂದು ಅನೀಶ್ ಪೋಸ್ಟ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅನೀಶ್ ಚಿತ್ರದ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ. ಫ್ಲೈಓವರ್ ಮೇಲೆ ಯುವತಿಯೊಬ್ಬಳು ನಿಂತಿದ್ದು, ಅಲ್ಲಿಂದ ಕೆಳಗೆ ಜಿಗಿಯುವುದಕ್ಕೆ ತಯಾರಿ ನಡೆಸಿದ್ದಾಳೆ. ಕೆಳಗೆ ಒಬ್ಬ ಪೊಲೀಸ್ ಅಧಿಕಾರಿ ಗನ್ ಹಿಡಿದು ನಿಂತಿದ್ದಾನೆ. ಹಿನ್ನೆಲೆಯಲ್ಲಿ ಕ್ರಿಕೆಟ್ ಸ್ಟೇಡಿಯಂ ಇದ್ದು, ಇಂದು RCB vs CSK ಪಂದ್ಯವಿದೆ ಎಂಬ ಬರಹವಿದೆ.
ಭಾವಪ್ರೀತ ಪ್ರೊಡಕ್ಷನ್ಸ್ ಸಂಸ್ಥೆಯಡಿ ಈ ಚಿತ್ರವನ್ನು ವಿಜಯ್ ಎಂ. ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು, ಮಿಕ್ಕ ವಿಷಯಗಳು ಇನ್ನಷ್ಟೇ ಹೊರಬೀಳಬೇಕಿವೆ.
ಈ ಮಧ್ಯೆ, ಅನೀಶ್ ತೇಜೇಶ್ವರ್ ಅಭಿನಯದ ‘ಆರಾಮ್ ಅರವಿಂದಸ್ವಾಮಿ’ ಮತ್ತು ‘ಫಾರೆಸ್ಟ್’ ಚಿತ್ರಗಳು ಕೆಲವೇ ತಿಂಗಳುಗಳ ಅಂತರದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿವೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಒಂದಿಷ್ಟು ಒಳ್ಳೆಯ ಮಾತುಗಳು ಕೇಳಿ ಬಂದಿವೆಯಾದರೂ, ಚಿತ್ರ ದೊಡ್ಡ ಯಶಸ್ಸು ಕಾಣಲಿಲ್ಲ.