'ಮಫ್ತಿ' ಶಿವಣ್ಣನೇ ನನಗೆ ಸ್ಫೂರ್ತಿ: ಚಿಂತಾಮಣಿಯಲ್ಲಿ ಘರ್ಜಿಸಿದ 'ಅಖಂಡ 2', ಬಾಲಯ್ಯ

ಚಿತ್ರದ ಫಸ್ಟ್‌ಲುಕ್‌ ನಂದಮೂರಿ ಬಾಲಕೃಷ್ಣ ಅವರು ಅದ್ಭುತ ಮತ್ತು ಶಕ್ತಿಶಾಲಿ ಅಘೋರ ಅವತಾರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಬೆರಗುಗೊಳಿಸಿದ್ದರು.

Update: 2025-11-22 06:14 GMT

ಬಾಲಯ್ಯ

Click the Play button to listen to article

ಟಾಲಿವುಡ್‌ನ 'ನಟಸಿಂಹ' ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ 'ಅಖಂಡ 2' ಚಿತ್ರದ ಅದ್ದೂರಿ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಸಾಕ್ಷಿಯಾಯಿತು. ಸಾವಿರಾರು ಅಭಿಮಾನಿಗಳ ಕರತಾಡನದ ನಡುವೆ ನಡೆದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ 'ಕರುನಾಡ ಚಕ್ರವರ್ತಿ' ಡಾ. ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.

ಈ ವೇದಿಕೆಯು ಬಾಲಯ್ಯ ಮತ್ತು ಶಿವಣ್ಣ ಅವರ ಗಾಢವಾದ ಸ್ನೇಹಕ್ಕೆ ಸಾಕ್ಷಿಯಾಗಿದ್ದಲ್ಲದೆ, ಸ್ವಾರಸ್ಯಕರ ಸಂಗತಿಯೊಂದರ ಬಹಿರಂಗಪಡಿಸುವಿಕೆಗೂ ವೇದಿಕೆಯಾಯಿತು.

ಶಿವಣ್ಣನ 'ಮಫ್ತಿ' ಲುಕ್ ನೋಡಿ ಸ್ಫೂರ್ತಿ ಪಡೆದಿದ್ದೆ!

ವೇದಿಕೆಯಲ್ಲಿ ಮಾತನಾಡಿದ ನಂದಮೂರಿ ಬಾಲಕೃಷ್ಣ ಅವರು ಅಭಿಮಾನಿಗಳೇ ಹುಬ್ಬೇರಿಸುವಂತಹ ಅನಿರೀಕ್ಷಿತ ಸಂಗತಿಯೊಂದನ್ನು ಬಿಚ್ಚಿಟ್ಟರು. 2023ರಲ್ಲಿ ತೆರೆಕಂಡ ಬಾಲಯ್ಯ ಅವರ ಸೂಪರ್ ಹಿಟ್ ಸಿನಿಮಾ 'ವೀರ ಸಿಂಹ ರೆಡ್ಡಿ'ಯಲ್ಲಿನ ಅವರ ಕಾಸ್ಟ್ಯೂಮ್ ಬಗ್ಗೆ ಸ್ವತಃ ಬಾಲಯ್ಯ ಅವರೇ ಸ್ಪಷ್ಟನೆ ನೀಡಿದರು. "ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ನಾನು ಧರಿಸಿದ್ದ ಕಪ್ಪು ಶರ್ಟ್ ಮತ್ತು ಲುಂಗಿಯ ಗೆಟಪ್‌ಗೆ ಕನ್ನಡದ ಬ್ಲಾಕ್‌ಬಸ್ಟರ್ 'ಮಫ್ತಿ' ಚಿತ್ರದಲ್ಲಿ ಶಿವಣ್ಣ ಧರಿಸಿದ್ದ ಕಾಸ್ಟ್ಯೂಮ್‌ ಸ್ಫೂರ್ತಿಯಾಗಿತ್ತು," ಎಂದು ಬಾಲಕೃಷ್ಣ ಮುಕ್ತವಾಗಿ ಒಪ್ಪಿಕೊಂಡರು. ಒಬ್ಬ ಕಲಾವಿದನನ್ನು ನೋಡಿ ಮತ್ತೊಬ್ಬ ಕಲಾವಿದ ಸ್ಫೂರ್ತಿ ಪಡೆಯುವುದು ಸಹಜ ಪ್ರಕ್ರಿಯೆ ಎಂದು ಹೇಳುವ ಮೂಲಕ ಶಿವರಾಜ್‌ಕುಮಾರ್ ಮೇಲಿನ ತಮ್ಮ ಅಭಿಮಾನ ಮತ್ತು ಗೌರವವನ್ನು ವ್ಯಕ್ತಪಡಿಸಿದರು.

ಡೈಲಾಗ್ ವಾರ್ ಮೂಲಕ ರಂಜಿಸಿದ ದಿಗ್ಗಜರು

ಕಾರ್ಯಕ್ರಮದುದ್ದಕ್ಕೂ ಇಬ್ಬರು ಸ್ಟಾರ್ ನಟರ ನಡುವಿನ ಸೌಹಾರ್ದತೆ ಎದ್ದು ಕಾಣುತ್ತಿತ್ತು. ಮೈಕ್ ಹಿಡಿದು ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು, ತಮ್ಮದೇ ಆದ ಖಡಕ್ ಶೈಲಿಯಲ್ಲಿ ಕನ್ನಡದ ಪಂಚಿಂಗ್ ಡೈಲಾಗ್‌ಗಳನ್ನು ಹೇಳುವ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. ಇದಕ್ಕೆ ಪ್ರತಿಯಾಗಿ ಬಾಲಕೃಷ್ಣ ಅವರು ಕೂಡ ತಮ್ಮ ಸಿಂಹದಂತಹ ಕಂಠದಲ್ಲಿ ವಿಶಿಷ್ಟ ಶೈಲಿಯ ಸಂಭಾಷಣೆಗಳನ್ನು ಹೇಳಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. ತೆಲುಗು ಮತ್ತು ಕನ್ನಡದ ಇಬ್ಬರು ದಿಗ್ಗಜರು ಒಂದೇ ವೇದಿಕೆಯಲ್ಲಿ ಮಿಂಚಿದ್ದು ಸಿನಿಪ್ರಿಯರಿಗೆ ಹಬ್ಬದೂಟ ಬಡಿಸಿದಂತಿತ್ತು.

ಈ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಬಾಲಕೃಷ್ಣ ಅವರ ಪ್ರಬಲ ಮತ್ತು ಉಗ್ರ ಅವತಾರವನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ.

ಚಿತ್ರದ ಫಸ್ಟ್‌ಲುಕ್‌ ನಂದಮೂರಿ ಬಾಲಕೃಷ್ಣ ಅವರು ಅದ್ಭುತ ಮತ್ತು ಶಕ್ತಿಶಾಲಿ ಅಘೋರ ಅವತಾರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಬೆರಗುಗೊಳಿಸಿದ್ದರು. ಎರಡನೇ ಲುಕ್‌ನಲ್ಲಿ ಅವರ ಮತ್ತೊಂದು ಪಾತ್ರವನ್ನು ಪೂರ್ಣ ಪ್ರಮಾಣದ 'ಮಾಸ್ ಲುಕ್'ನಲ್ಲಿ ಪ್ರಸ್ತುತ ಪಡಿಸಲಾಗಿತ್ತು. 

Full View

ಧರ್ಮ ರಕ್ಷಣೆಗೆ ಅಖಂಡನ ಅಬ್ಬರ: ಟ್ರೈಲರ್ ವಿಮರ್ಶೆ

ಇದೇ ವೇಳೆ ಬಿಡುಗಡೆಯಾದ 'ಅಖಂಡ 2' ಟ್ರೈಲರ್, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಟ್ರೈಲರ್ ಆರಂಭವೇ ಒಂದು ಅಶುಭ ಧ್ವನಿಯೊಂದಿಗೆ ತೆರೆದುಕೊಳ್ಳಲಿದ್ದು, ದೇವರ ಮೇಲಿನ ನಂಬಿಕೆಯನ್ನು ಛಿದ್ರಗೊಳಿಸುವ ದುಷ್ಟ ಶಕ್ತಿಗಳ ಕಾರ್ಯಾಚರಣೆಯ ಸುಳಿವು ನೀಡುತ್ತದೆ. ಕತ್ತಲೆ ಆವರಿಸಿದಾಗ ಸನಾತನ ಹೈಂದವ ಧರ್ಮ ಮತ್ತು ರಾಷ್ಟ್ರದ ರಕ್ಷಣೆಗಾಗಿ ಅಖಂಡನಾಗಿ ಬಾಲಯ್ಯ ಎಂಟ್ರಿ ಕೊಡಲಿದ್ದಾರೆ. ರುದ್ರರಮಣೀಯವಾದ ಅಘೋರ ಅವತಾರ ಮತ್ತು ಪೂರ್ಣ ಪ್ರಮಾಣದ ಮಾಸ್ ಲುಕ್‌ನಲ್ಲಿ ಬಾಲಯ್ಯ ಅವರ ಉಗ್ರ ನಟನೆಯನ್ನು ಟ್ರೈಲರ್‌ನಲ್ಲಿ ಕಾಣಬಹುದು.

ತಾರಾಗಣ ಮತ್ತು ತಾಂತ್ರಿಕ ವೈಭವ

ಬಾಲಯ್ಯ ಎದುರು ಖಳನಾಯಕನಾಗಿ ಆದಿ ಪಿನಿಸೆಟ್ಟಿ ಅಬ್ಬರಿಸಿದ್ದರೆ, ನಾಯಕಿಯಾಗಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ದೃಶ್ಯಗಳಿಗೆ ಸಿ. ರಾಂಪ್ರಸಾದ್ ಮತ್ತು ಸಂತೋಷ್ ಡಿ. ದೇಟಕೆ ಅವರ ಛಾಯಾಗ್ರಹಣ ಶ್ರೀಮಂತಿಕೆ ತಂದುಕೊಟ್ಟಿದ್ದರೆ, ಎಸ್. ಥಮನ್ ಅವರ ಹಿನ್ನೆಲೆ ಸಂಗೀತ ರೋಮಾಂಚನಕಾರಿಯಾಗಿದೆ. 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿ ಅಚಂತ ನಿರ್ಮಿಸಿರುವ ಈ ಬಿಗ್ ಬಜೆಟ್ ಚಿತ್ರವು ಇದೇ ಡಿಸೆಂಬರ್ 5 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

Tags:    

Similar News