'ಲೋಕಃ' ಯಶಸ್ಸಿನ ಬಳಿಕ 'ಲೋಕಃ 2' ಘೋಷಣೆ; ಟೋವಿನೋ - ದುಲ್ಕರ್ ಹೊಸ ಸೂಪರ್ ಹೀರೋ
ಈ ಬಗ್ಗೆ ಸಿನಿತಂಡವು 'ಲೋಕಃ 2' ಚಿತ್ರದ ಶೀರ್ಷಿಕೆಯ ಪೋಸ್ಟರ್ ಮತ್ತು ಸುಮಾರು ಮೂರು ನಿಮಿಷಗಳ ಪ್ರೋಮೋ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವೀಡಿಯೊಗೆ ʻವೆನ್ ಲೆಜೆಂಡ್ಸ್ ಚಿಲ್ʼ ಎಂಬ ಶೀರ್ಷಿಕೆ ನೀಡಲಾಗಿದೆ.
ಲೋಕಃ 2
ಕಲ್ಯಾಣಿ ಪ್ರಿಯದರ್ಶನ್ ನಟನೆಯ, ಭಾರತದ ಮೊದಲ ಮಹಿಳಾ ಸೂಪರ್‌ಹೀರೋ ಸಿನಿಮಾ 'ಲೋಕಃ ಚಾಪ್ಟರ್ 1: ಚಂದ್ರ' ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಯಶಸ್ಸು ಗಳಿಸಿದ ಬೆನ್ನಲ್ಲೇ, ಚಿತ್ರತಂಡವು ಮಲಯಾಳಂ ಚಿತ್ರರಂಗದ ಅತಿದೊಡ್ಡ ಸೂಪರ್‌ಹೀರೋ ಸರಣಿಯ ಎರಡನೇ ಅಧ್ಯಾಯವನ್ನು ಅಧಿಕೃತವಾಗಿ ಘೋಷಿಸಿದೆ. 'ಲೋಕಃ ಚಾಪ್ಟರ್ 2' ರಲ್ಲಿ, ಸ್ಟಾರ್ ನಟರಾದ ಟೋವಿನೋ ಥಾಮಸ್ ಮತ್ತು ದುಲ್ಕರ್ ಸಲ್ಮಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ 'ಲೋಕಃ ಯೂನಿವರ್ಸ್' ಮತ್ತಷ್ಟು ವಿಸ್ತಾರಗೊಳ್ಳಲಿದೆ.
'ಲೋಕಃ' ಚಿತ್ರವನ್ನು ನಿರ್ಮಿಸಿರುವ ವೇಫೇರರ್ ಫಿಲ್ಮ್ಸ್, ಶನಿವಾರದಂದು 'ಲೋಕಃ 2' ಚಿತ್ರದ ಅಧಿಕೃತ ಪೋಸ್ಟರ್ ಮತ್ತು "ವೆನ್ ಲೆಜೆಂಡ್ಸ್ ಚಿಲ್" ಎಂಬ ಶೀರ್ಷಿಕೆಯಡಿ ಸುಮಾರು ಮೂರು ನಿಮಿಷಗಳ ಪ್ರೋಮೋ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ 'ಲೋಕಃ' ಯೂನಿವರ್ಸ್‌ನ ಎರಡು ಪ್ರಮುಖ ಪೌರಾಣಿಕ ಪಾತ್ರಗಳಾದ 'ಚಾತನ್' (Chathan) ಮತ್ತು 'ಒಡಿಯನ್' (Odiyan) ಮುಖಾಮುಖಿಯಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಚಾತಿಯಾನ್' ಮತ್ತು 'ಒಡಿಯನ್' ಮುಖಾಮುಖಿ
'ಲೋಕಃ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದ ಟೋವಿನೋ ಥಾಮಸ್, ಸೀಕ್ವೆಲ್‌ನಲ್ಲಿ 'ಮೈಕೆಲ್ ಚಾತನ್' ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೊತೆಯಾಗಿ, ಚಿತ್ರದ ನಿರ್ಮಾಪಕರೂ ಆಗಿರುವ ದುಲ್ಕರ್ ಸಲ್ಮಾನ್, ಆಕಾರ ಬದಲಿಸಬಲ್ಲ (shapeshifter) ಪೌರಾಣಿಕ ಜೀವಿ 'ಚಾರ್ಲಿ ಒಡಿಯನ್' ಪಾತ್ರದಲ್ಲಿ ನಟಿಸಲಿದ್ದಾರೆ.
ಬಿಡುಗಡೆಯಾಗಿರುವ ಪ್ರೋಮೋದಲ್ಲಿ, ಮೈಕೆಲ್ ಮತ್ತು ಚಾರ್ಲಿ ಮದ್ಯಪಾನ ಮಾಡುತ್ತಾ ಮಾತನಾಡುತ್ತಾರೆ. ಈ ವೇಳೆ, ಮೈಕೆಲ್ ತನಗೆ 389 ಮಂದಿ ಸಹೋದರರಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸುತ್ತಾನೆ. "ಮೊದಲ ಚಾಪ್ಟರ್ ಕಲ್ಲಿಯಂಕಾಟ್ಟು ನೀಲಿಯದ್ದಾದರೆ (ಕಲ್ಯಾಣಿ ಪ್ರಿಯದರ್ಶನ್ ಪಾತ್ರ), ಎರಡನೇ ಚಾಪ್ಟರ್ ನನ್ನದು" ಎಂದು ಹೇಳುತ್ತಾನೆ. ಅಲ್ಲದೆ, "ನನ್ನ ಅಣ್ಣ ಬಿಡುಗಡೆಯಾಗಿದ್ದಾನೆ, ಅವನು ಹಿಂಸಾತ್ಮಕ. ಅವನನ್ನು ಎದುರಿಸಲು ನೀನು ಬರಲೇಬೇಕು" ಎಂದು ಚಾರ್ಲಿಯನ್ನು ಕೇಳುತ್ತಾನೆ. ಇದಕ್ಕೆ ಚಾರ್ಲಿ ನಿರಾಕರಿಸಿದರೂ, ಮೈಕೆಲ್ ಅವನನ್ನು ಕರೆತಂದೇ ತರುತ್ತೇನೆ ಎಂದು ಹೇಳುವ ಮೂಲಕ, ಮುಂಬರುವ ಸಂಘರ್ಷದ ಸುಳಿವು ನೀಡುತ್ತಾನೆ.
'ಲೋಕಃ' ಸೃಷ್ಟಿಸಿದ ದಾಖಲೆ
ಕೇವಲ 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ 'ಲೋಕಃ ಚಾಪ್ಟರ್ 1: ಚಂದ್ರ', ಆಗಸ್ಟ್ 28ರಂದು ಬಿಡುಗಡೆಯಾಗಿ ವಿಶ್ವಾದ್ಯಂತ ₹280 ಕೋಟಿಗೂ ಅಧಿಕ ಗಳಿಕೆ ಮಾಡಿ, ಮಲಯಾಳಂ ಚಿತ್ರರಂಗದ ಸಾರ್ವಕಾಲಿಕ ಅತಿದೊಡ್ಡ ಹಿಟ್ ಎನಿಸಿಕೊಂಡಿದೆ. ಸ್ಥಳೀಯ ಜಾನಪದ ಕಥೆಗಳನ್ನು ಆಧರಿಸಿ ನಿರ್ಮಿಸಲಾದ ಈ ಫ್ಯಾಂಟಸಿ ಆಕ್ಷನ್ ಸಿನಿಮಾ, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸಿದೆ.
ವಿಸ್ತಾರಗೊಳ್ಳುತ್ತಿರುವ 'ಲೋಕಃ ಯೂನಿವರ್ಸ್'
ಡೊಮಿನಿಕ್ ಅರುಣ್ ನಿರ್ದೇಶನದ ಈ ಸರಣಿಯು ಕೇವಲ ಎರಡು ಚಿತ್ರಗಳಿಗೆ ಸೀಮಿತವಾಗಿಲ್ಲ. 'ಲೋಕಃ' ಯೂನಿವರ್ಸ್‌ನಲ್ಲಿ ಒಟ್ಟು ಐದು ಅಧ್ಯಾಯಗಳಿದ್ದು, ಈಗಾಗಲೇ ಎಲ್ಲಾ ಐದು ಚಿತ್ರಗಳ ಮೂಲ ಕಥೆಯನ್ನು ಸಿದ್ಧಪಡಿಸಲಾಗಿದೆ ಎಂದು ಚಿತ್ರತಂಡ ಖಚಿತಪಡಿಸಿದೆ. ಸದ್ಯದಲ್ಲೇ 'ಲೋಕಃ 2' ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, 2026ರ ಆರಂಭದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಕಲ್ಯಾಣಿ ಪ್ರಿಯದರ್ಶನ್ ಕೂಡ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.