Actor Upendra| ತೆಲುಗಿನಲ್ಲಿ ಹೊಸ ಸಿನಿಮಾ ಘೋಷಿಸಿದ ನಟ ಉಪೇಂದ್ರ

ತೆಲುಗಿನಲ್ಲಿ ಇನ್ನೂ ಹೆಸರಿಡದ ಸಿನಿಮಾನಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಸಿನಿಮಾನಲ್ಲಿ ಅವರ ಪಾತ್ರದ ಹೆಸರು ಸೂರ್ಯ ಕುಮಾರ್. ಸಿನಿಮಾ ಅನ್ನು ಸದ್ಯಕ್ಕೆ ‘RAPO22’ ಎಂದು ಕರೆಯಲಾಗುತ್ತಿದೆ.;

Update: 2025-05-13 10:45 GMT

ನಟ ಉಪೇಂದ್ರ 

ರಿಯಲ್ ಸ್ಟಾರ್ ಉಪೇಂದ್ರ ಅವರು ರಜನಿಕಾಂತ್ ಅವರೊಂದಿಗೆ ತಮಿಳಿನ 'ಕೂಲಿ' ಸಿನಿಮಾದಲ್ಲಿ ನಟಿಸುತ್ತಿರುವುದು ಈಗಾಗಲೇ ತಿಳಿದಿರುವ ವಿಷಯ. ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಬಿಡುಗಡೆ ದಿನಾಂಕವು ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಉಪೇಂದ್ರ ಅವರು ತೆಲುಗು ಚಿತ್ರರಂಗದಲ್ಲಿ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ಇನ್ನೂ ಹೆಸರಿಡದ ತೆಲುಗು ಸಿನಿಮಾದಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಸೂರ್ಯ ಕುಮಾರ್ ಎಂದು ತಿಳಿದುಬಂದಿದೆ. ಸದ್ಯಕ್ಕೆ ಈ ಚಿತ್ರವನ್ನು 'RAPO22' ಎಂದು ಕರೆಯಲಾಗುತ್ತಿದೆ. ಈ ಸಿನಿಮಾದಲ್ಲಿ ರಾಮ್ ಪೋತಿನೇನಿ ನಾಯಕನಾಗಿ ನಟಿಸುತ್ತಿದ್ದು, ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿರುವ ಈ ಸಿನಿಮಾದ ತಂಡವನ್ನು ನಟ ಉಪೇಂದ್ರ ಇದೀಗ ಸೇರಿಕೊಂಡಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಹೇಶ್ ಬಾಬು ಪಿ ನಿರ್ದೇಶನ ಮಾಡುತ್ತಿದ್ದಾರೆ.

ಉಪೇಂದ್ರ ಅವರಿಗೆ ತೆಲುಗು ಚಿತ್ರರಂಗ ಹೊಸದೇನಲ್ಲ. 1997 ರಲ್ಲಿ ಅವರು 'ಓಂಕಾರ' ಎಂಬ ತೆಲುಗು ಸಿನಿಮಾವನ್ನು ನಿರ್ದೇಶಿಸಿದ್ದರು. ಇದು ಅವರದೇ ಕನ್ನಡದ ಸೂಪರ್ ಹಿಟ್ ಸಿನಿಮಾ 'ಓಂ' ನ ರಿಮೇಕ್ ಆಗಿತ್ತು. ನಂತರ 1998 ರಲ್ಲಿ ಶ್ರೀಕಾಂತ್ ಅವರೊಂದಿಗೆ 'ಕನ್ಯಾದಾನಂ' ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ 'ಒಕೇ ಮಾಟ', 'ನೀತೋನೆ ಉಂಟಾ' ಮತ್ತು 'ರಾ' ಎಂಬ ತೆಲುಗು ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ್ದರು.

ತೆಲುಗಿನ 'ಟಾಸ್' ಸಿನಿಮಾದಲ್ಲಿ ಉಪೇಂದ್ರ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ 'ಸೆಲ್ಯೂಟ್' ಮತ್ತು 2015 ರಲ್ಲಿ ಅಲ್ಲು ಅರ್ಜುನ್ ಅವರೊಂದಿಗೆ 'ಸನ್ ಆಫ್ ಸತ್ಯಮೂರ್ತಿ' ಸಿನಿಮಾದಲ್ಲಿಯೂ ಪೋಷಕ ಪಾತ್ರದಲ್ಲಿ ನಟಿಸಿದ್ದರು. 2022 ರಲ್ಲಿ ತೆರೆಕಂಡ 'ಗನಿ' ಚಿತ್ರದಲ್ಲೂ ಅವರು ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ ತಮಿಳಿನಲ್ಲಿ ರಜನಿಕಾಂತ್ ಜೊತೆ 'ಕೂಲಿ' ಹಾಗೂ ತೆಲುಗಿನಲ್ಲಿ ಹೆಸರಿಡದ ಹೊಸ ಸಿನಿಮಾದಲ್ಲಿ ಉಪೇಂದ್ರ ಬ್ಯುಸಿಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿಯೂ ಉಪೇಂದ್ರ ಸಕ್ರಿಯರಾಗಿದ್ದಾರೆ. ಅವರು 'ಕಬ್ಜ 2' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದು, ಶಿವರಾಜ್‌ಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ ನಟಿಸಿರುವ '45' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಅವರ ನಿರ್ದೇಶನದ 'ಬುದ್ಧಿವಂತ 2' ಸಿನಿಮಾದ ಚಿತ್ರೀಕರಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ.

Tags:    

Similar News