ಸಾಮಾಜಿಕ ಕಳಕಳಿಯುಳ್ಳ 'ಮಹಾನ್' ಚಿತ್ರದಲ್ಲಿ ವಿಜಯ ರಾಘವೇಂದ್ರ, ಮಿತ್ರ

ಸಾಮಾಜಿಕ ಕಳಕಳಿಯುಳ್ಳ ಕಥಾಹಂದರ ಹೊಂದಿರುವ 'ಮಹಾನ್' ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ಹೇಳಿ ಮಾಡಿಸಿದ ಪಾತ್ರವಿದೆ. ಮಿತ್ರ ಅವರ ಪಾತ್ರವು ನಾಯಕನ ಪಾತ್ರದ ಜೊತೆಗೆ ಸಾಗಲಿದೆ.;

Update: 2025-07-02 06:16 GMT

ಖ್ಯಾತ ನಿರ್ದೇಶಕ ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ 'ಮಹಾನ್' ಚಿತ್ರವು ಸಾಮಾಜಿಕ ಕಳಕಳಿಯುಳ್ಳ ಕಥಾಹಂದರವನ್ನು ಹೊಂದಿದ್ದು, ಅದರಲ್ಲಿ ಜನಪ್ರಿಯ ನಟ ವಿಜಯ ರಾಘವೇಂದ್ರ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ಅವರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟ ಮಿತ್ರ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಮಹಾನ್' ಚಿತ್ರದಲ್ಲಿ ವಿಜಯ ರಾಘವೇಂದ್ರ ಅವರಿಗೆ ಹೇಳಿ ಮಾಡಿಸಿದಂತಹ ಪಾತ್ರವಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಅವರ ಅಭಿನಯ ನಿರ್ಣಾಯಕವಾಗಲಿದೆ. ನಟ ಮಿತ್ರ ಅವರ ಪಾತ್ರವು ನಾಯಕನ ಪಾತ್ರದ ಜೊತೆಗೆ ಸಾಗಲಿದ್ದು, ಇಬ್ಬರ ಕಾಂಬಿನೇಶನ್ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲಿದೆ ಎಂದು ಮಿತ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ರಾಗ' ಚಿತ್ರದ ಯಶಸ್ಸಿನ ನಂತರ ಮಿತ್ರ ಅವರು ಮತ್ತೆ ಪಿ.ಸಿ.ಶೇಖರ್ ಅವರ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. ತಮ್ಮ ಪಾತ್ರದ ಕುರಿತು ಪ್ರತಿಕ್ರಿಯಿಸಿದ ಮಿತ್ರ, "'ರಾಗ' ಚಿತ್ರದಲ್ಲಿ ನನ್ನ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಮಹಾನ್' ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದೇನೆ. ನಿರ್ದೇಶಕರು ಕಥೆ ಹೇಳಿದ ತಕ್ಷಣ ನನಗೆ ಇಷ್ಟವಾಯಿತು. ಪ್ರಕಾಶ್ ಬುದ್ದೂರು ಅವರು ಇಂತಹ ಉತ್ತಮ ಕಥಾಹಂದರ ಇರುವ ಚಿತ್ರವನ್ನು ನಿರ್ಮಿಸುತ್ತಿರುವುದು ಮತ್ತು ವಿಜಯ ರಾಘವೇಂದ್ರ ಅವರಂತಹ ಅದ್ಭುತ ನಟನ ಜೊತೆ ನಟಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ" ಎಂದು ತಿಳಿಸಿದ್ದಾರೆ.

ನಿರ್ದೇಶಕ ಪಿ.ಸಿ.ಶೇಖರ್ ಅವರು ಮಿತ್ರ ಅವರ ಪಾತ್ರದ ಮಹತ್ವವನ್ನು ವಿವರಿಸಿದ್ದಾರೆ. "ನನ್ನ ಮತ್ತು ಮಿತ್ರ ಅವರ ಕಾಂಬಿನೇಶನ್‌ನಲ್ಲಿ ಬಂದ 'ರಾಗ' ಚಿತ್ರ ಇಂದಿಗೂ ಜನಪ್ರಿಯವಾಗಿದೆ. 'ರಾಗ' ಚಿತ್ರದಲ್ಲಿ ಮಿತ್ರ ಅವರ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯೂ ಬಂದಿತ್ತು. ಮಿತ್ರ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ನನ್ನ ನಿರ್ದೇಶನದ ಚಿತ್ರಗಳಲ್ಲಿ ನಟಿಸುವುದು ನನಗೆ ಇಷ್ಟವಿಲ್ಲ. 'ಮಹಾನ್' ಚಿತ್ರದಲ್ಲಿ ಮಿತ್ರ ಅವರಿಗೆ ಎಲ್ಲರ ನೆನಪಿನಲ್ಲಿ ಉಳಿಯುವಂತಹ ಪಾತ್ರವಿದೆ. ಚಿತ್ರಕಥೆ ಬರೆಯುವಾಗ ಈ ಪಾತ್ರಕ್ಕೆ ಮಿತ್ರ ಅವರೇ ಸೂಕ್ತವೆನಿಸಿತು. ಕುರುಕ್ಷೇತ್ರದಲ್ಲಿ ಅರ್ಜುನನ ಜೊತೆಗೆ ಶ್ರೀಕೃಷ್ಣ ಸದಾ ಇರುವಂತೆ, ಈ ಚಿತ್ರದಲ್ಲಿಯೂ ನಾಯಕನ ಪಾತ್ರದ ಜೊತೆಗೆ ಮಿತ್ರ ಅವರ ಪಾತ್ರ ಸಾಗಲಿದೆ. 'ಮಹಾನ್' ಚಿತ್ರದ ಮಿತ್ರ ಅವರ ಪಾತ್ರ ಎಲ್ಲರ ಮನಸ್ಸಿಗೂ ಇಷ್ಟವಾಗುತ್ತದೆ" ಎಂದು ಹೇಳಿದ್ದಾರೆ.

ತಮ್ಮ ಸಂಸ್ಥೆಯ ಮೊದಲ ನಿರ್ಮಾಣದ ಚಿತ್ರದಲ್ಲಿ ಮಿತ್ರ ಅವರಂತಹ ಅನುಭವಿ ನಟರು ಅಭಿನಯಿಸುತ್ತಿರುವುದಕ್ಕೆ ನಿರ್ಮಾಪಕ ಪ್ರಕಾಶ್ ಬುದ್ದೂರು ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಈ ಚಿತ್ರವು ಪ್ರೇಕ್ಷಕರನ್ನು ತಲುಪುವ ನಿರೀಕ್ಷೆಯಿದೆ. 

Tags:    

Similar News