Actor Darshan : ಕೋರ್ಟ್​ಗೆ ಬರಲ್ಲ, ಸಿನಿಮಾ ಕಾರ್ಯಕ್ರಮದಲ್ಲಿ ಅವರೇ ಎಲ್ಲ... ಇದು ದರ್ಶನ್ ಸ್ಟೈಲ್​!

ಬೆಂಗಳೂರು ಸಿವಿಲ್​ ಮತ್ತು ಸೆಷನ್ಸ್ ನ್ಯಾಯಾಲಯ, ಈ ಕೊಲೆ ಪ್ರಕರಣದಲ್ಲಿ ದರ್ಶನ್ ಒಬ್ಬ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಆತನ ಗೈರು ಹಾಜರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.;

Update: 2025-04-10 11:47 GMT

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್​ ತೂಗುದೀಪ್​, ಪ್ರಕರಣ ವಿಚಾರಣೆ ನಡೆಯುತ್ತಿರುವ ಕೋರ್ಟ್​ಗೆ ಬೆನ್ನು ನೋವಿನ ಕಾರಣ ನೀಡಿ ಚಕ್ಕರ್ ಹೊಡೆದಿದ್ದಾರೆ. ಏಪ್ರಿಲ್ 8 ನಡೆದ ಕೋರ್ಟ್ ಮುಂದೆ ಹಾಜರಾಗದ ಅವರು ನ್ಯಾಯಾಧೀಶರಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಆದರೆ, ಏಪ್ರಿಲ್​ 9ರಂದು ನಡೆದ 'ವಾಮನ' ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಅವರು ಪಾಲ್ಗೊಂಡಿದ್ದಾರೆ. ಈ ಮೂಲಕ ಮತ್ತೊಂದು ಬಾರಿ ಅವರ ವರ್ತನೆ ಟೀಕೆಗೆ ಒಳಗಾಗಿದೆ.

ಬೆಂಗಳೂರು ಸಿವಿಲ್​ ಮತ್ತು ಸೆಷನ್ಸ್ ನ್ಯಾಯಾಲಯ, ಈ ಕೊಲೆ ಪ್ರಕರಣದಲ್ಲಿ ದರ್ಶನ್ ಒಬ್ಬ ಪ್ರಮುಖ ಆರೋಪಿಯಾಗಿರುವ ಹಿನ್ನೆಲೆಯಲ್ಲಿ ಆತನ ಗೈರು ಹಾಜರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು, ಮುಂದಿನ ವಿಚಾರಣೆ ವೇಳೆ ದರ್ಶನ್ ಬರಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ವಿನಾಯಿತಿಗಳು ಇಲ್ಲ ಎಂದಿದ್ದರು.

ಬೆನ್ನು ನೋವಿನ ಸಮಸ್ಯೆ

ದರ್ಶನ್‌ನ ಪರ ವಕೀಲರು, ದರ್ಶನ್​ಗೆ ಕಳೆದ ವರ್ಷ ಬಳ್ಳಾರಿ ಜೈಲಿನಲ್ಲಿದ್ದಾಗ ಕೆಳ ಬೆನ್ನು ನೋವು ಆರಂಭವಾಗಿತ್ತು ಎಂದು ಹೇಳಿದ್ದರು. ಆ ಸಮಯದಲ್ಲಿ ಆತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ನಿರಾಕರಿಸಿ ಬೆಂಗಳೂರಿಗೆ ಕರೆದೊಯ್ಯುವಂತೆ ಒತ್ತಾಯಿಸಿದ್ದ. ಬಳಿಕ ವೈದ್ಯಕೀಯ ಕಾರಣಗಳಿಗಾಗಿ ದರ್ಶನ್​ಗೆ ಜಾಮೀನು ದೊರಕಿತ್ತು. ಅಲ್ಲಿಂದ ಅವರು ಮೈಸೂರಿಗೆ ಹೋಗಿ ತಮ್ಮ ಫಾರ್ಮ್​ ಹೌಸ್​ನಲ್ಲಿಯೂ ಉಳಿದುಕೊಂಡಿದ್ದಾರೆ.

ಏಪ್ರಿಲ್​ 9ರಂದು ನಡೆದ ಧನ್ವೀರ್ ಅಭಿನಯದ ವಾಮನ ಚಿತ್ರದ ಮೂರು ಗಂಟೆಗಳ ವಿಶೇಷ ಪ್ರದರ್ಶನ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ದರ್ಶನ್​ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿದ್ದರು.

ಪ್ರಕರಣದ ಇತರೆ ಆರೋಪಿಗಳು ಹಾಜರಿ

ಈ ಪ್ರಕರಣದಲ್ಲಿ ದರ್ಶನ್‌ನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 16 ಆರೋಪಿಗಳು ಕೋರ್ಟ್‌ಗೆ ಹಾಜರಿದ್ದರು. ಕಳೆದ ವರ್ಷ ಆರೋಪಿಗಳಿಗೆ ಜಾಮೀನು ನೀಡಲಾಗಿದ್ದು, ಕೋರ್ಟ್​ಗೆ ಪ್ರತಿಬಾರಿಯೂ ಹಾಜರಾಗುವ ಷರತ್ತಿಗೆ ಒಪ್ಪಿಕೊಂಡಿದ್ದರು.

ರೇಣುಕಾ ಸ್ವಾಮಿಯ ಮೃತ ದೇಹವು 2024ರ ಜೂನ್ 9ರಂದು ವೃಷಾಭಾವತಿ ನಾಲೆಯಲ್ಲಿ ಸಿಕ್ಕಿತ್ತು. ಪ್ರಕರಣದಲ್ಲಿ 17 ಮಂದಿ ಆರೋಪಿಗಳಿದ್ದರು. ತನಿಖಾಧಿಕಾರಿಗಳ ಪ್ರಕಾರ, ದರ್ಶನ್ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿ ಈ ಅಪರಾಧದ ಯೋಜನೆ ಹಾಕಿದ್ದರು. ಚಿತ್ರದುರ್ಗದಿಂದ 200 ಕಿ.ಮೀ. ದೂರದ ಬೆಂಗಳೂರಿಗೆ ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬಂದು ಕೊಲೆ ಮಾಡಲಾಗಿದೆ. 

Tags:    

Similar News