ಮಲ್ಟಿಪ್ಲೆಕ್ಸ್‌ನವರು ಕೊಡುವ ಪ್ರದರ್ಶನಗಳನ್ನು ಪ್ರಸಾದ ರೂಪದಲ್ಲಿ ನಾವು ಸ್ವೀಕರಿಸಬೇಕಾ? ಅಜೇಯ್ ರಾವ್ ಪ್ರಶ್ನೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡಪರ ಹೋರಾಟಗಾರರು ನನ್ನ ಪ್ರಶ್ನೆಗೆ ಕೈಜೋಡಿಸಿ, ಉತ್ತರ ಮತ್ತು ಪರಿಹಾರ ಸಿಗುವ ರೀತಿಯಲ್ಲಿ ವಿಚಾರ ಮಾಡಬೇಕೆಂದು ನನ್ನ ಕಳಕಳಿಯ ಮನವಿ ಎಂದು ಅಜಯ್‌ರಾವ್ ಹೇಳಿದ್ದಾರೆ.;
ಅಜೇಯ್ ರಾವ್ ಅಭಿನಯದ ಮತ್ತು ನಿರ್ಮಾಣದ ‘ಯುದ್ಧಕಾಂಡ’ ಚಿತ್ರವು ಏಪ್ರಿಲ್ 18ರಂದು ಬಿಡುಗಡೆಯಾಗಿ, ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದೆ. ಚಿತ್ರ ಸೂಪರ್ ಹಿಟ್ ಅಲ್ಲದಿದ್ದರೂ, ಬಾಯ್ಮಾತಿನ ಪ್ರಚಾರದಿಂದ ಪ್ರದರ್ಶನಗಳನ್ನು ಕಾಣುತ್ತಿದೆ. ಹೀಗಿರುವಾಗಲೇ, ಚಿತ್ರಕ್ಕೆ ಸಮಸ್ಯೆ ಎದುರಾಗಿದೆಯಂತೆ. ಈ ವಾರದಿಂದ ಪ್ರದರ್ಶನ ಸಂಖ್ಯೆ ಕಡಿಮೆ ಮಾಡುವುದಾಗಿ ಕೆಲವು ಮಲ್ಟಿಪ್ಲೆಕ್ಸ್‌ನವರು ಹೇಳಿದ್ದಾರಂತೆ.
ಈ ಕುರಿತು ಇನ್‍ಸ್ಟಾಗ್ರಾಂನಲ್ಲಿ ವೀಡಿಯೋ ಮಾಡಿ ತಮ್ಮ ಅಳಲು ತೋಡಿಕೊಮಡಿರುವ ಅಜೇಯ್ ರಾವ್, ಮಲ್ಟಿಪ್ಲೆಕ್ಸ್ನವರು ಕೊಡುವ ಪ್ರದರ್ಶನಗಳನ್ನು ಪ್ರಸಾದದ ರೂಪದಲ್ಲಿ ನಾವು ಸ್ವೀಕರಿಸಬೇಕಾ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘‘ಯುದ್ಧಕಾಂಡ’ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಸಿಗುತ್ತಿದೆ. ಆದರೆ, ಒಂದು ಎಚ್ಚರಿಗೆ ಬಂದಿರುವ ವಿಷಯದಲ್ಲಿ ಬಹಳ ಬೇಸರವಾಗಿದೆ. ನಮ್ಮ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಒಳ್ಳೆಯ ಪ್ರದರ್ಶನ ಸಮಯ ಕೊಡಿ ಎಂದು ಭಿಕ್ಷೆ ಬೇಡುತ್ತಲೇ ಇದ್ದೇವೆ ಮತ್ತು ಅವರು ಸಹ ಪ್ರದರ್ಶನ ಸಮಯ ಕೊಡದೆ ಇರುವುದು ಮುಂಚಿನಿಂದಲೂ ನಡೆದುಕೊಂಡು ಬಂದಿದೆ. ‘ಯುದ್ಧಕಾಂಡ’ ಚಿತ್ರಕ್ಕೂ ಸಾಕಷ್ಟು ಅನಾನುಕೂಲಗಳು ಎದುರಾದವು. ಅದರ ಮಧ್ಯೆಯೂ, ಪ್ರೇಕ್ಷಕರು ಚಿತ್ರವನ್ನು ನೊಡಿ ಯಶಸ್ವಿಗೊಳಿಸಿದ್ದಾರೆ’ ಎಂದು ಹೇಳಿದ್ದಾರೆ.
ಹೀಗಿರುವಾಗಲೇ, ಮಲ್ಟಿಪ್ಲೆಕ್ಸ್ನವರಿಂದ ಅವರಿಗೆ ಒಂದು ಎಚ್ಚರಿಕೆ ಬಂದಿದೆಯಂತೆ. ‘ಇದೇ ಗುರುವಾರದಿಂದ ಕರ್ನಾಟಕದಲ್ಲಿ ಬಹುಬೇಡಿಕೆಯ ಪರಭಾಷಾ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ‘ಯುದ್ಧಕಾಂಡ’ ಚಿತ್ರದ ಪ್ರದರ್ಶನಗಳನ್ನು ಕಡಿಮೆ ಮಾಡುವುದಾಗಿ ಹೇಳಿದ್ದಾರೆ. ಕೆಲವು ಕಡೆ ಪ್ರದರ್ಶನಗಳು ಹಾಗೆಯೇ ಮುಂದುವರೆಯುತ್ತದೆಂತೆ. ಅವರು ಕೊಡುವ ಪ್ರದರ್ಶನಗಳನ್ನು ನಾವು ಪ್ರಸಾದದ ರೂಪದಲ್ಲಿ ಸ್ವೀಕರಿಸುವ ಕಾಲದಲ್ಲಿ ನಾವು ಇನ್ನೂ ಇದ್ದೀವಾ? ಇದಕ್ಕೆ ಪರಿಹಾರ ಏನು? ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡಪರ ಹೋರಾಟಗಾರರು ನನ್ನ ಪ್ರಶ್ನೆಗೆ ಕೈಜೋಡಿಸಿ, ಉತ್ತರ ಮತ್ತು ಪರಿಹಾರ ಸಿಗುವ ರೀತಿಯಲ್ಲಿ ವಿಚಾರ ಮಾಡಬೇಕೆಂದು ನನ್ನ ಕಳಕಳಿಯ ಮನವಿ’ ಎಂದು ಹೇಳಿದ್ದಾರೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿದೆ ಎಂಬ ವಿಷಯ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಆದರೆ, ಇದುವರೆಗೂ ಈ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಅಜೇಯ್ ಅವರ ಮುಂದಿನ ನಡೆ ಏನು ಎಂಬ ಕುತೂಹಲ ಎಲ್ಲರಲ್ಲೂ ಇದೆ.