ಸಿನಿಮಾ ಅಪ್‍ಲೋಡ್‍ ಮಾಡಲು ಇನ್ನು ಚೆನ್ನೈಗೆ ಹೋಗಬೇಕಿಲ್ಲ; ಈಡೇರಿತು ಚಿತ್ರರಂಗದ ಹಳೆಯ ಬೇಡಿಕೆ

ಈಗಲೂ ಚಿತ್ರವನ್ನು ಅಪ್‍ಲೋಡ್‍ ಮಾಡುವುದಕ್ಕೆ ಕನ್ನಡದ ನಿರ್ಮಾಪಕರು ಮತ್ತು ನಿರ್ದೇಶಕರು ಚೆನ್ನೈಗೆ ಹೋಗಿ, ಅಲ್ಲಿ ಸರದಿಯಲ್ಲಿ ಕಾಯ್ದು, ಚಿತ್ರವನ್ನು ಅಪ್‍ಲೋಡ್‍ ಮಾಡಿ ಬರಬೇಕಿದೆ. ಬೆಂಗಳೂರಿನಲ್ಲಿ ಕ್ಯೂಬ್‌ ಕಚೇರಿ ಆರಂಭ ಮಾಡಬೇಕು ಎಂದು ಕನ್ನಡ ಚಿತ್ರರಂಗವು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇತ್ತು.;

Update: 2025-04-26 00:30 GMT

ಚೆನೈನಿಂದ (ಮೊದಲು ಮದರಾಸು) ಚಿತ್ರರಂಗ, ಬೆಂಗಳೂರಿಗೆ ಬಂದು ನಾಲ್ಕು ದಶಕಗಳಾದರೂ ಚೆನ್ನೈನಿಂದ ಸಂಪೂರ್ಣವಾಗಿ ದೂರವಾಗುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗಲೂ ಚಿತ್ರವನ್ನು ಅಪ್‍ಲೋಡ್‍ ಮಾಡುವುದಕ್ಕೆ ಕನ್ನಡದ ನಿರ್ಮಾಪಕರು ಮತ್ತು ನಿರ್ದೇಶಕರು ಚೆನ್ನೈಗೆ ಹೋಗಿ, ಅಲ್ಲಿ ಸರದಿಯಲ್ಲಿ ಕಾಯ್ದು, ಚಿತ್ರವನ್ನು ಅಪ್‍ಲೋಡ್‍ ಮಾಡಿ ಬರಬೇಕಿದೆ. ಬೆಂಗಳೂರಿನಲ್ಲಿ ಕ್ಯೂಬ್‌ ಕಚೇರಿ ಆರಂಭ ಮಾಡಬೇಕು ಎಂದು ಕನ್ನಡ ಚಿತ್ರರಂಗವು ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇತ್ತು. ಆದರೆ, ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ.

ಈಗ ಕ್ಯೂಬ್‌ ಸಿನಿಮಾ ಟೆಕ್ನಾಲಜೀಸ್‌ನ ಡಿಜಿಟಲ್‌ ಸಿನಿಮಾ ಮಾಸ್ಟರಿಂಗ್‌ ಸೌಲಭ್ಯ ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರಾರಂಭವಾಗಿದೆ. ಈ ಮೂಲಕ ಕನ್ನಡ ಚತ್ರರಂಗ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ. ಇತ್ತೀಚೆಗೆ ನಟ ಶಿವರಾಜಕುಮಾರ್, ಬೆಂಗಳೂರಿನಲ್ಲಿ ಕ್ಯೂಬ್‍ ಕಚೇರಿಯನ್ನು ಉದ್ಘಾಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಮಗಳು ನಿವೇದಿತಾ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ದಯಾಳ್‍ ಪದ್ಮನಾಭನ್‍, ಸಾ.ರಾ. ಗೋವಿಂದು ಮುಂತಾದವರು ಹಾಜರಿದ್ದರು.


ಬೆಂಗಳೂರಿನಲ್ಲಿ ಕ್ಯೂಬ್‍ ಶಾಖೆ ಪ್ರಾರಂಭವಾಗಿರುವುದರಿಂದ, ಇನ್ನು ಮುಂದೆ ಚಿತ್ರದ ಹಾರ್ಡ್ ಡಿಸ್ಕ್ ತೆಗೆದುಕೊಂಡು ನಿರ್ಮಾಪಕರು ಮತ್ತು ನಿರ್ದೇಶಕರು ಚೆನ್ನೈಗೆ ಹೋಗಬೇಕಿಲ್ಲ. ಅಲ್ಲಿ ಮೂರು ದಿನ ಕೂತು ಚಿತ್ರವನ್ನು ಅಪ್‍ಲೋಡ್‍ ಮಾಡಿಸಬೇಕಿಲ್ಲ. ಇಲ್ಲಿಂದಲೇ ನೇರವಾಗಿ ಚಿತ್ರವನ್ನು ಅಪ್‍ಲೋಡ್‍ ಮಾಡಿಸಬಹುದು.

ಈ ವೇಳೆ ಮಾತನಾಡಿದ ಕ್ಯೂಬ್‌ ಸಿನಿಮಾ ಕಂಟೆಂಟ್‌ ಸರ್ವೀಸಸ್‌ ದಕ್ಷಿಣ ವಿಭಾಗದ ಸಹಾಯಕ ಉಪಾಧ್ಯಕ್ಷ ಸತೀಶ್‌ ತುಳಸಿ, ‘ಕ್ಯೂಬ್‌ ಬೆಂಗಳೂರಿಗೆ ಬರಬೇಕೆಂಬ ಬೇಡಿಕೆ 15 ವರ್ಷಗಳಿಂದಲೇ ಇತ್ತು. ಆದರೆ ಸೂಕ್ತ ಬಂಡವಾಳದ ಕೊರತೆ, ಅಗತ್ಯ ತಂತ್ರಜ್ಞಾನಗಳಿರುವ ಸ್ಟುಡಿಯೋಗಳ ಕೊರತೆಯಿಂದ ವಿಳಂಬವಾಯಿತು. ಸದ್ಯ ಕರ್ನಾಟಕದಲ್ಲಿ 600 ಸ್ಕ್ರೀನ್‌ಗಳಲ್ಲಿ ಕ್ಯೂಬ್‌ ಮೂಲಕ ಸಿನಿಮಾ ತೆರೆ ಕಾಣುತ್ತಿದೆ. ಈಗ ಕಾಲ ಕೂಡಿಬಂದಿದ್ದು, ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿರುವ ಕಚೇರಿ ಪ್ರಾರಂಭಿಸಿದ್ದು, ಇನ್ನು ಮುಂದೆ ಚಿತ್ರತಂಡದವರು ಇಲ್ಲಿಂದಲೇ ತಮ್ಮ ಚಿತ್ರಗಳನ್ನು ಅಪ್‍ಲೋಡ್‍ ಮಾಡಬಹುದು’ ಎಂದರು.


ಕ್ಯೂಬ್‌ ಬೆಂಗಳೂರಿಗೆ ಬಂದಿದ್ದರಿಂದ ನಿರ್ಮಾಪಕರಿಗೆ ದೊಡ್ಡ ಮಟ್ಟದ ಪ್ರಯೋಜನವಾಗಿದೆ. ಪ್ರಮುಖವಾಗಿ, ಸಿನಿಮಾ ಡಿಜಿಟಲ್‌ ಮಾಸ್ಟರಿಂಗ್‌ ಕೆಲಸಗಳನ್ನೆಲ್ಲಾ ಬೆಂಗಳೂರಿನಲ್ಲೇ ಮಾಡಿ ಮುಗಿಸಬಹುದು. ಮೂರು ನಾಲ್ಕು ದಿನ ತೆಗೆದುಕೊಳ್ಳುತ್ತಿದ್ದ ಕೆಲಸ ಒಂದೇ ದಿನದಲ್ಲಿ ಆಗುತ್ತದೆ. ಸಮಯ, ಹಣ, ಶ್ರಮ ಉಳಿತಾಯವಾಗುತ್ತದೆ. ಕನ್ನಡ ಸಿನಿಮಾ ಪ್ರಚಾರಕ್ಕೂ ಅವಕಾಶ ನೀಡುವುದಾಗಿ ಹೇಳಿದೆ.

Similar News