‘ಪುಷ್ಪ 2’ ಚಿತ್ರದ 100ಕ್ಕೂ ಹೆಚ್ಚು ಬೆಳಗಿನ ಜಾವದ ಪ್ರದರ್ಶನ ರದ್ದು; ಜಿಲ್ಲಾಧಿಕಾರಿ ಆದೇಶ
ರದ್ದಾಗಿರುವ ಶೋಗಳ ಟಿಕೆಟ್ ದರವನ್ನು ಹಿಂದಿರುಗಿಸಲಾಗತ್ತದೆ ಅಥವಾ ಮುಂದಿನ ಪ್ರದರ್ಶನಗಳಿಗೆ ಆ ಟಿಕೆಟ್‍ಗಳನ್ನು ಮುಂದುವರೆಸಲಾಗುತ್ತದೆ.;
m‘ಪುಷ್ಪ 2’ ಚಿತ್ರವು ಗುರುವಾರ (ಡಿ. 05) ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಚಿತ್ರಕ್ಕೆ ಬೆಂಗಳೂರಿನಲ್ಲಿ ಭಾರೀ ಹಿನ್ನೆಡೆ ಉಂಟಾಗಿದೆ. ಚಿತ್ರಕ್ಕೆ ಬೆಂಗಳೂರಿನಲ್ಲಿ ಬೆಳಗಿನ ಜಾವದ 100ಕ್ಕೂ ಹೆಚ್ಚು ಪ್ರದರ್ಶನಗಳು ಆಯೋಜಿತವಾಗಿದ್ದವು. ಈ ಪ್ರದರ್ಶನಗಳನ್ನು ರದ್ದು ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲಿಗೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 3ಕ್ಕೆ ಪ್ರಾರಂಭವಾಗಬೇಕಿದ್ದ ಪ್ರದರ್ಶನ ರದ್ದಾಗಿ, ಆರನ ನಂತರ ಪ್ರಾರಂಭವಾಗಲಿದೆ. ಇದರಿಂದ ವಿತರಕರಿಂದ ಕೋಟ್ಯಂತರ ನಷ್ಟವಾಗಿದೆ.
‘ಪುಷ್ಪ 2’ ಚಿತ್ರವು ಡಿಸೆಂಬರ್ 05ರಂದು ಜಗತ್ತಿನಾದ್ಯಂತ 12 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲೇ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಪೈಕಿ ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದ ಮೂರು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗುತ್ತಿದೆ. ಬೆಂಗಳೂರಿನಲ್ಲಿ 1000ಕ್ಕೂ ಹೆಚ್ಚು ಪ್ರದರ್ಶನಗಳು ನೆಡೆಯುತ್ತಿದ್ದು, ಬೆಳಗಿನ ಜಾವ ಮೂರು ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗುತ್ತಿದೆ ಎಂದು ‘ದಿ ಫೆಡರಲ್ ಕರ್ನಾಟಕ’ ವೆಬ್‍ಸೈಟ್ ಭಾನುವಾರವೇ ವರದಿ ಮಾಡಿತ್ತು. ಅಷ್ಟೇ ಅಲ್ಲ, ಯಾವ್ಯಾವ ಚಿತ್ರಮಂದಿರಗಳಲ್ಲಿ ಹೀಗೆ ನಿಯಮಬಾಹಿರವಾಗಿ ಚಿತ್ರಪ್ರದರ್ಶನ ನಡೆಯುತ್ತಿದೆ ಮತ್ತು ಟಿಕೆಟ್ ಬೆಲೆ ಏರಿಕೆಯ ಕುರಿತು ಸಹ ವಿಸ್ತೃತವಾಗಿ ಬರೆದಿತ್ತು.
ಸ್ಟಾರ್ ನಟರ ಪರಭಾಷಾ ಚಿತ್ರಗಳಿಗೆ ಬೇರೆ ರಾಜ್ಯಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಪ್ರದರ್ಶನ ಪ್ರಾರಂಭವಾದರೆ, ಬೆಂಗಳೂರಿನಲ್ಲಿ ಪ್ರದರ್ಶನ ಬೆಳಿಗ್ಗೆ 5ಕ್ಕೆ ಶುರುವಾಗುವುದರ ಜೊತೆಗೆ ಮೊದಲ ದಿನ ಆರು ಪ್ರದರ್ಶನಗಳನ್ನು ಮಾಡಲಾಗುತ್ತಿತ್ತಿದೆ. ಮೇಲಾಗಿ, ಸ್ಟಾರ್ ನಟರ ಪರಭಾಷಾ ಚಿತ್ರಗಳು ಬಿಡುಗಡೆ ಆದಾಗಲೆಲ್ಲಾ ಟಿಕಟ್ ಬೆಲೆಯಲ್ಲಿ ಭಾರಿ ಏರುಪೇರಾಗುತ್ತದೆ. ಬೇರೆ ರಾಜ್ಯಗಳಲ್ಲಿ 200 ರೂ. ಗರಿಷ್ಠ ಬೆಲೆಯಾದರೆ, ಬೆಂಗಳೂರಿನ ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ 2000 ರೂ. ಟಿಕೆಟ್ ನಿಗದಿ ಮಾಡಲಾಗುತ್ತಿದೆ. ‘ಪುಷ್ಪ 2’ ಚಿತ್ರದ ಬೆಳಗಿನ ಪ್ರದರ್ಶನಗಳಿಗೂ ಎಗ್ಗಿಲ್ಲದೆ ಟಿಕೆಟ್ ಬೆಲೆಯನ್ನು ಏರಿಸಲಾಗಿತ್ತು. ಏಕಪರದೆಯ ಕೆಲವು ಚಿತ್ರಮಂದಿರಗಳಿಗೆ ಟಿಕೆಟ್ ಬೆಲ 1000 ರೂ. ನಿಗದಿಯಾದರೆ, ಮಲ್ಟಿಪ್ಲೆಕ್ಸ್ಗಳಲ್ಲಿ ಅದು ಒಂದೂವರೆಯಿಂದ ಎರಡು ಸಾವಿರದವರೆಗೂ ಏರಿಸಲಾಗಿತ್ತು.
‘ಪುಷ್ಪ 2’ ಚಿತ್ರದ ಟಿಕೆಟ್ ದರ ಹೆಚ್ಚಾದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕುವುದಾಗಿ ಕನ್ನಡಪರ ಹೋರಾಟಗಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಒಂದು ತಿಂಗಳ ಹಿಂದೆಯೇ ಹೇಳಿದ್ದರು. ಆದರೆ, ಚಿತ್ರ ಬಿಡುಗಡೆಗೆ ಕೆಲವೇ ದಿನಗಳ ಹಿಂದೆ, ಈ ವಿಷಯದಲ್ಲಿ ವಾಣಿಜ್ಯ ಮಂಡಳಿ ಏನೂ ಮಾಡದ ಅಸಾಹಯಕ ಪರಿಸ್ಥಿತಿಯಲ್ಲಿದೆ ಎಂದು ಹೇಳಿದ್ದರು. ಹೀಗಿರುವಾಗಲೇ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಸಹ ಇದರ ವಿರುದ್ಧ ಇಂದು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಸಿತ್ತು. ಚಲನಚಿತ್ರ ಪ್ರದರ್ಶನದ ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಮುಂಜಾನೆ ಆರು ಗಂಟೆಯ ಒಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂಬ ರಾಜ್ಯ ಸರ್ಕಾರ ಅದೇಶವಿದ್ದರೂ ಸಹ ಕರ್ನಾಟಕದ ಕೆಲ ಚಿತ್ರಮಂದಿರಗಳಲ್ಲಿ ಅವಧಿಗೂ ಮುನ್ನ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ ಎಂದು ಗಮನಕ್ಕೆ ತಂದಿತ್ತು. ಅಂತಹ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಚಿತ್ರಮಂದಿರಗಳಲ್ಲಿ ಟಿಕೆಟ್ ದರವನ್ನು ಮನಸೋ ಇಚ್ಛೇ ಏರಿಸುತ್ತಿರುವ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿತ್ತು.
ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು, ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯಡಿ ನಿಯಮ 41ರಂತೆ, ನಿಗಧಿತ ಸಮಯಕ್ಕಿಂತ ಮುನ್ನ ಡಿಸೆಂಬರ್ 05ರಂದು ಚಿತ್ರವನ್ನು ನಿಯಮಬಾಹಿರವಾಗಿ ಪ್ರದರ್ಶಿಸುತ್ತಿದ್ದರೆ, ಅಂತಹ ಚಿತ್ರಮಂದಿರದ ಅವಧಿಪೂರ್ವ ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಲು ಸೂಚಿಸಿದೆ. ಅಷ್ಟೇ ಅಲ್ಲ, ಯಾವುದಾದರೂ ಚಿತ್ರಮಂದಿರದಲ್ಲಿ ಅವಧಿ ಪೂರ್ವ ಚಲನಚಿತ್ರ ಪ್ರದರ್ಶಿಸಿದರೆ, ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಅಧೀನ ಆರಕ್ಷಕರಿಗೆ ಸೂಚಿಸಿದೆ.
ಬೆಂಗಳೂರಿನ ಕತ್ತರಿಗುಪ್ಪೆಯ ಕಾಮಾಕ್ಯ, ಯಶವಂತಪುರದ ಗೋವರ್ಧನ್, ಸುಂಕದಕಟ್ಟೆ ಮೋಹನ್, ಕದಿರೇನಹಳ್ಳಿಯ ಮಹದೇಶ್ವರ, ಕೋನಪ್ಪನ ಅಗ್ರಹಾರದ ವೆಂಕಟೇಶ್ವರ, ರಾಜಾಜಿನಗರದ ನವರಂಗ್, ಕಾಡುಗೋಡಿಯ ಶ್ರೀನಿವಾಸ, ಮಾಗಡಿ ರಸ್ತೆಯ ಪ್ರಸನ್ನ, ಸಂಜಯ್ ನಗರದ ವೈಭವ್, ತಾವರೆಕೆರೆಯ ಬಾಲಾಜಿ, ಅಗರದ ತಿರುಮಲ, PNR ಫೆಲಿಸಿಟಿ ಮಾಲ್‍ನ ಸಿನಿಫೈಲ್ ಮುಂತಾದ ಏಕಪರದೆಯ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ಗಳಲ್ಲಿ ಬೆಳಿಗ್ಗೆ 3ರಿಂದ 4 ಗಂಟೆಗೆ ಆಯೋಜಿಸಲಾಗಿದ್ದ ಬೆಳಗಿನ ಜಾವದ ಪ್ರದರ್ಶನಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ಅಲ್ಲಿಗೆ, ಬೆಂಗಳೂರಿನಲ್ಲಿ ‘ಪುಷ್ಪ 2’ ಚಿತ್ರದ ಬೆಳಗಿನ ಜಾವದ ಪ್ರದರ್ಶನಗಳೆಲ್ಲಾ ರದ್ದಾಗಿವೆ. ಬೆಳಿಗ್ಗೆ ಆರರ ನಂತರ ಪ್ರದರ್ಶನ ಮುಂದುವರೆಯಲಿದೆ. ರದ್ದಾಗಿರುವ ಶೋಗಳ ಟಿಕೆಟ್ ದರವನ್ನು ಹಿಂದಿರುಗಿಸಲಾಗತ್ತದೆ ಅಥವಾ ಮುಂದಿನ ಪ್ರದರ್ಶನಗಳಿಗೆ ಆ ಟಿಕೆಟ್‍ಗಳನ್ನು ಮುಂದುವರೆಸಲಾಗುತ್ತದೆ.
ಬರೀ ಬೆಂಗಳೂರಷ್ಟೇ ಅಲ್ಲ, ಚಿತ್ರದುರ್ಗದಲ್ಲೂ ‘ಪುಷ್ಪ 2’ ಚಿತ್ರಕ್ಕೆ ಸಮಸ್ಯೆ ಆಗಿದೆ. ಡಿಸೆಂಬರ್ 6ರಂದು ಕನ್ನಡದ ‘ಧೀರ ಭಗತ್ ರಾಯ್’ ಚಿತ್ರ ಬಿಡುಗಡೆ ಆಗುತ್ತಿದ್ದು, ಚಿತ್ರದುರ್ಗದಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಚಿತ್ರದುರ್ಗದಲ್ಲಿ ಪ್ರಸನ್ನ, ಛೋಟಾ ಮಹಾರಾಜ್ ಮತ್ತು ವೆಂಕಟೇಶ್ವರ ಚಿತ್ರಮಂದಿರಗಳಲ್ಲಿ ‘ಪುಷ್ಪ-2’ ಪ್ರದರ್ಶನ ನಿಗದಿಯಾಗಿತ್ತು. ಇದರಿಂದ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿದೆ, ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕು ಎಂದು ಚಿತ್ರದುರ್ಗದ ಜಿಲ್ಲಾಧಿಕಾರಿಗಳಿಗೆ ಸಹ ನಿರ್ಮಾಪಕ ಕರಿಯಪ್ಪ ಎಸ್ ಮನವಿ ಪತ್ರ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕೆಂದು ಆದೇಶ ಹೊರಡಿಸಿದ್ದಾರೆ.