ಕಂಪನಿಗಳ ದಿವಾಳಿತನ ಪರಿಹರಿಸುವಿಕೆ ಏಕೆ ಕಠಿಣ?

ವೃತ್ತಿಪರರ ತರಬೇತಿ ಕೊರತೆ ನಿವಾರಿಸಬೇಕು ಮ‌ತ್ತು ಎನ್ಸಿಎಲ್‌ಟಿ ಯಲ್ಲಿ ಸಿಬ್ಬಂದಿ ನೇಮಿಸಬೇಕೆಂದು ಸಂಸದೀಯ ಸಮಿತಿ ಹೇಳಿದೆ.;

Update: 2024-02-10 10:16 GMT

ದೇಶದಲ್ಲಿ ದಿವಾಳಿತನದ ನಿರ್ಣಯ ಪ್ರಕ್ರಿಯೆ ವಿಳಂಬವಾಗುತ್ತಿದೆ. ಇದರಿಂದ ಈ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ ಭಾರಿ ಸಂಖ್ಯೆಯ ಉದ್ಯಮಗಳು ಬಾಗಿಲು ಮುಚ್ಚುತ್ತಿವೆ. ಪ್ರಕರಣಗಳು 2016ರ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ನಿಗದಿಪಡಿಸಿದ ಸಮಯದ ಮಿತಿಯಲ್ಲಿಇತ್ಯರ್ಥವಾಗದೆ, ವರ್ಷಾನು ಗಟ್ಟಲೆ ಕಾಲ ಎಳೆಯಲ್ಪಡುತ್ತವೆ. 

ಸೆಪ್ಟೆಂಬರ್ 2016 ರಿಂದ ಸೆಪ್ಟೆಂಬರ್ 2023 ರ ಅವಧಿಯಲ್ಲಿ ದಿವಾಳಿಯಾದ ಕಂಪನಿಗಳಿಗೆ ಸಾಲ ನೀಡಿದವರು ಕೇಳಿದ ಮೊತ್ತದ ಮೂರನೇ ಒಂದು ಭಾಗ ಮಾತ್ರ ನೀಡಲಾಗಿದೆ ಮತ್ತು 1/3 ವ್ಯವಹಾರಗಳನ್ನು ಮುಚ್ಚಲಾಗಿದೆ. ಅಂದರೆ, ಏಳು ವರ್ಷಗಳಲ್ಲಿ ದಿವಾಳಿಯಾದ ಮತ್ತು ಪರಿಹಾರ ಕೋರಿದ 7,058 ವ್ಯವಹಾರಗಳಲ್ಲಿ 2,249 ಮುಚ್ಚುವ ಸಾಧ್ಯತೆಯನ್ನು ಎದುರಿಸುತ್ತಿವೆ ಮತ್ತು 2,000 ಅಂದಾಜು 6 ವರ್ಷಗಳಿಂದ ಪರಿಹಾರಕ್ಕಾಗಿ ಕಾಯುತ್ತಿವೆ. ಪರಿಹಾರ ಪ್ರಕ್ರಿಯೆಗೆ ಐಬಿಸಿ ಅನುಮತಿಸಿದ ಅವಧಿ ಕೇವಲ 270 ದಿನ ಮಾತ್ರ. 

ಇಂಥ ಸನ್ನಿವೇಶದಲ್ಲಿ ಸಂಸದೀಯ ಸ್ಥಾಯಿ ಸಮಿತಿ ಎರಡು ಸಮಸ್ಯೆಗಳನ್ನು ಮು‌ನ್ನೆಲೆಗೆ ತಂದಿದೆ-ಪರಿಹಾರ ವೃತ್ತಿಪರರ ಗುಣಮಟ್ಟ ಮತ್ತು ಅನುಭವ ಹಾಗೂ ಮತ್ತು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ)ಯಲ್ಲಿ ಸಿಬ್ಬಂದಿ ಕೊರತೆ. ಇವುಗಳನ್ನು ಸರಿಪಡಿಸುವುದರಿಂದ ಐಬಿಸಿ ಅಡಿಯಲ್ಲಿ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸಬಹುದು. 

ಅನನುಭವಿಗಳ ನೇಮಕ: ನಿರ್ಣಾಯಕರು ಅಥವಾ ದಿವಾಳಿತನದ ವೃತ್ತಿಪರರು (ಆರ್ಪಿ/ಐಪಿ) ವಹಿವಾಟನ್ನು ಮರಳಿ ದಾರಿಗೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಅವರು ಲಿಕ್ವಿಡೇಟರ್‌ಗಳು ಅಥವಾ ಟ್ರಸ್ಟಿಗಳಾಗಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಆರ್‌ಪಿಗಳು ದೊಡ್ಡ ಕಂಪನಿ ಮತ್ತು ಸಂಕೀರ್ಣ ವ್ಯವಹಾರಗಳನ್ನು ನಿಭಾಯಿಸುವಷ್ಟು ಅನುಭವ ಹೊಂದಿರುವರೇ? 

ಸಂಸದ ಜಯಂತ್ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿ ಈ ಅಂಶವನ್ನು ಎತ್ತಿ ಹಿಡಿದಿದೆ. ʻಯಾವುದೇ ಅನುಭವವಿಲ್ಲದ ಹೊಸ ಪದವೀಧರರನ್ನು ನಿರ್ಣಾಯಕರು/ದಿವಾಳಿತನದ ವೃತ್ತಿಪರರಾಗಿ ನೇಮಕ ಮಾಡುತ್ತಿದ್ದು, ಅಂಥವರ ಸಾಮರ್ಥ್ಯದ ಬಗ್ಗೆ ಅನುಮಾನವಿದೆ" ಎಂದು ಹಣಕಾಸು ಸ್ಥಾಯಿ ಸಮಿತಿಯ 67 ನೇ ವರದಿ ಹೇಳಿದೆ. 2021ರಲ್ಲಿ ಈ ಸಮಿತಿ ಆರ್‌ಪಿಗಳ ಬಗ್ಗೆ ಇದೇ ಅಂಶವನ್ನು ಎತ್ತಿ ಹಿಡಿದಿತ್ತು. ಕಾಲಮಿತಿಯೊಳಗೆ ನಿರ್ಣಯ ತೆಗೆದುಕೊಳ್ಳುವಲ್ಲಿ ಆರ್‌ಪಿಗಳ ಸಾಮರ್ಥ್ಯದ ಬಗ್ಗೆ ಸಮಿತಿ ಆತಂಕ ವ್ಯಕ್ತಪಡಿಸಿತ್ತು.

ನಿಯಂತ್ರಕರಿಂದ ಶಿಸ್ತು ಕ್ರಮ: ಆರ್‌ಪಿಗಳ ನಡವಳಿಕೆ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿರುವುದರಿಂದ, ದಿವಾಳಿ ಮತ್ತು ದಿವಾಳಿತನ ಮಂಡಳಿ (ಐಬಿಬಿಐ) ಮತ್ತು ದಿವಾಳಿತನ ವೃತ್ತಿಪರ ಏಜೆನ್ಸಿ(ಐಪಿಎ), 203 ತಪಾಸಣೆ ಪ್ರಕರಣಗಳಲ್ಲಿ 123 ಆರ್‌ಪಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಂಡಿವೆ. ಸಂಸದೀಯ ಮಂಡಳಿ ಕೂಡ ಸದಸ್ಯ ಆರ್‌ಪಿ ಗಳ ಕಾರ್ಯನಿರ್ವಹಣೆಯನ್ನು ಒಬ್ಬರ ಬದಲು ಹಲವು ಏಜೆನ್ಸಿಗಳು ಮೇಲ್ವಿಚಾರಣೆ ಮಾಡುವಿಕೆಯ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದೆ. ಸಂಸದೀಯ ಸಮಿತಿ ಮಾತ್ರವಲ್ಲದೆ ಇನ್ನಿತರರು ಕೂಡ ಆರ್‌ಪಿಗಳ ವರ್ತನೆ ಹಾಗೂ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. 

ಆಗಸ್ಟ್‌ 2023ರಲ್ಲಿ ಪ್ರಕಟವಾದ ಐಐಎಂ ಅಹಮದಾಬಾದ್ ಪ್ರಾಧ್ಯಾಪಕರ ವರದಿ ಪ್ರಕಾರ, ಬಹುತೇಕ ವೃತ್ತಿಪರ ನಿರ್ಣಾಯಕರಿಗೆ ವ್ಯವಹಾರ/ವ್ಯವಸ್ಥಾಪಕ ಹಿನ್ನೆಲೆ ಇಲ್ಲದಿರುವುದರಿಂದ, ಅನುಭವದ ಕೊರತೆಯಿದೆ ಮತ್ತು ಅವರ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಆಂತರಿಕ ನಿಯಂತ್ರಣ ವ್ಯವಸ್ಥೆ ಅಗತ್ಯವಿದೆ. ʻಉದ್ಯಮಿಗಳು ವೃತ್ತಿಪರರ ಕಾರ್ಯಕ್ಷಮತೆಯಿಂದ ತೃಪ್ತರಾಗಿದ್ದರೂ, ಸೂಕ್ತ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಡೊಮೇನ್‌ ನಿರ್ದಿಷ್ಟ ಜ್ಞಾನ ಕುರಿತು ತರಬೇತಿ ಅಗತ್ಯವಿದೆʼ ಎಂದು ವರದಿ ಹೇಳಿತ್ತು.

ಸರ್ಕಾರದ ನಿಲುವು: ಆದರೆ, ಕಾರ್ಯದಕ್ಷತೆಯನ್ನು ಹೆಚ್ಚಿಸಲು ಐಪಿಎಗಳ ನಡುವೆ ಸ್ಪರ್ಧೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ʻಐಪಿಎಗಳ ನಡುವಿನ ಸ್ಪರ್ಧೆಯಿಂದ ಸ್ಪರ್ಧಾತ್ಮಕತೆ ಹೆಚ್ಚುತ್ತದೆ; ಉತ್ತಮ ಮಾನದಂಡಗಳು, ನಿಯಮಗಳ ಜಾರಿಗೊಳಿಸುವಿಕೆಗೆ ನೆರವಾಗುತ್ತದೆ. ಒಂದೇ ಐಪಿಎ ಅಥವಾ ವೃತ್ತಿಪರ ಸಂಸ್ಥೆಗಳ ನಿಯಂತ್ರಣದಿಂದ ಏಕಸ್ವಾಮ್ಯ ಉಂಟಾಗುತ್ತದೆʼ ಎಂದು ಹೇಳಿದೆ. ಆದರೆ, ಅನುಭವವಿಲ್ಲದ ಪದವೀಧರರು ಆರ್‌ಪಿ ಆಗುತ್ತಿರುವ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಐಪಿಎ ಮತ್ತು ಐಬಿಬಿಐ ಒಳಗೊಂಡ ಎರಡು ಹಂತದ ನಿಯಂತ್ರಕ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ʻಈ ವ್ಯವಸ್ಥೆ ಶುಲ್ಕ ಮತ್ತು ವೆಚ್ಚಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತಿದ್ದು, ತಮ್ಮ ವಿವರ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುತ್ತಿದೆʼ ಎಂದು ಹೇಳಿದೆ. ಆದರೆ,ವೃತ್ತಿಪರರ ಸುಧಾರಣೆಗೆ ಸಂಬಂಧಿಸಿದಂತೆ ಯಾವುದೇ ಕ್ರಮದ ಉಲ್ಲೇಖವಿಲ್ಲ. 

ಎನ್‌ಸಿಎಲ್‌ಟಿ ಬಲಪಡಿಸುವಿಕೆ: ಸಂಸದೀಯ ಸಮಿತಿಯು ಎನ್‌ಸಿಎಲ್‌ಟಿಗೆ ಸಿಬ್ಬಂದಿ ನೇಮಕಗೊಳಿಸಿ, ಬಲವನ್ನು ಹೆಚ್ಚಿಸಲು ಸೂಚಿಸಿದೆ. 2021 ರಲ್ಲಿ ನ್ಯಾಯಮಂಡಳಿಯಲ್ಲಿ ಮಂಜೂರಾದ ಅರ್ಧದಷ್ಟು ಸಿಬ್ಬಂದಿ ಮಾತ್ರ ಇದ್ದರು. ಕಳೆದ ವರ್ಷ ಹುದ್ದೆಗಳ ಭರ್ತಿ ಬಳಿಕ ಸಿಬ್ಬಂದಿ ಸಾಮರ್ಥ್ಯ ಶೇ. 90 ಕ್ಕೆ ಏರಿತು. ಆಗಸ್ಟ್‌ನಲ್ಲಿ 21 ಸದಸ್ಯರ ನೇಮಕ ಪ್ರಸ್ತಾವ ಇರಿಸಲಾಯಿತು. ಇದರಿಂದ ಮಂಜೂರಾದ 62 ಸದಸ್ಯರಲ್ಲಿ 57 ಸದಸ್ಯರ ಸ್ಥಾನ ಭರ್ತಿ ಮಾಡಿದಂತೆ ಆಗಲಿದೆ. ʻಆದರೆ, ಪ್ರತಿ ವರ್ಷದ ಕೊನೆಯಲ್ಲಿ ಎನ್‌ಸಿಎಲ್‌ಟಿಯಲ್ಲಿ 20,000 ಕ್ಕೂ ಹೆಚ್ಚು ಪ್ರಕರಣಗಳ ಬೃಹತ್ ಬಾಕಿಯನ್ನು ನಿಭಾಯಿಸಲು ಎನ್‌ಸಿಎಲ್‌ಟಿಯ ಬಲವನ್ನು ಹೆಚ್ಚಿಸುವ ಅಗತ್ಯವಿದೆʼ ಎಂದು ಸಮಿತಿ ಹೇಳಿದೆ.

ಹೀಗಿದ್ದರೂ, ದಿವಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿರುವುದರಿಂದ, ಬಾಕಿ ಉಳಿದ ದಿವಾಳಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ.

Tags:    

Similar News