Stock Market : ಬಿಎಸ್ಇ, ನಿಫ್ಟಿಯಲ್ಲಿ ಭಾರೀ ಚೇತರಿಕೆ, ಷೇರು ಮಾರುಕಟ್ಟೆಯಲ್ಲಿ ಆಶಾದಾಯಕ ವಹಿವಾಟು
ಬಿಎಸ್ಇ ಸೆನ್ಸೆಕ್ಸ್ ಬರೋಬ್ಬರಿ 1,793.73 ಅಂಕಗಳ ಏರಿಕೆಯೊಂದಿಗೆ 81,248.20 ಕ್ಕೆ ತಲುಪಿತು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ನಿಫ್ಟಿಯು ಸಹ 553.25 ಅಂಕಗಳ ಜಿಗಿತದೊಂದಿಗೆ 24,561.25 ಕ್ಕೆ ಏರಿತು.;
ಭಾರತ ಮತ್ತು ಪಾಕಿಸ್ತಾನ ಶನಿವಾರ (ಮೇ 10) ತಮ್ಮ ನಡುವಿನ ಸೈನಿಕ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಲು ಒಪ್ಪಂದಕ್ಕೆ ಬಂದಿರುವುದರಿಂದ ಸೋಮವಾರ (ಮೇ 12) ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಆರಂಭಿಕ ವಹಿವಾಟಿನಲ್ಲಿ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿಯು ಗಣನೀಯ ಚೇತರಿಕೆ ಕಂಡಿವೆ.
ವಹಿವಾಟು ಆರಂಭಗೊಳ್ಳುತ್ತಿದ್ದಂತೆ, ಬಿಎಸ್ಇ ಸೆನ್ಸೆಕ್ಸ್ ಬರೋಬ್ಬರಿ 1,793.73 ಅಂಕಗಳ ಏರಿಕೆಯೊಂದಿಗೆ 81,248.20 ಕ್ಕೆ ತಲುಪಿತು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ನಿಫ್ಟಿಯು ಸಹ 553.25 ಅಂಕಗಳ ಜಿಗಿತದೊಂದಿಗೆ 24,561.25 ಕ್ಕೆ ಏರಿತು. ವಹಿವಾಟು ಮುಂದುವರಿದಂತೆ ಸೂಚ್ಯಂಕಗಳು ಮತ್ತಷ್ಟು ಏರಿಕೆ ಕಂಡವು.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತವು 'ಆಪರೇಷನ್ ಸಿಂದೂರ್' ಆರಂಭಿಸಿದ ನಂತರ ಉಂಟಾದ ಉದ್ವಿಗ್ನತೆಯಿಂದಾಗಿ ಶುಕ್ರವಾರ (ಮೇ 9, 2025) ಷೇರು ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡುಬಂದಿತ್ತು. ಸೆನ್ಸೆಕ್ಸ್ 880.34 ಅಂಕಗಳು ಮತ್ತು ನಿಫ್ಟಿಯು 265.80 ಅಂಕಗಳು ಕುಸಿದು ವಹಿವಾಟು ಮುಗಿಸಿದ್ದವು.
ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಪ್ರಶಾಂತ್ ತಾಪ್ಸೆ ಅವರು, ಭಾರತ ಮತ್ತು ಪಾಕಿಸ್ತಾನದ ಸಂಬಂಧದಲ್ಲಿನ ಸೌಹಾರ್ದತೆಯು ನಿಫ್ಟಿಯ ಚೇತರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಆದರೆ, ಪಾಕಿಸ್ತಾನದಿಂದ ಸಂಧಾನ ಒಪ್ಪಂದದ ಯಾವುದೇ ಉಲ್ಲಂಘನೆಯಾದರೆ ಮಾರುಕಟ್ಟೆಯ ಆಶಾದಾಯಕ ಭಾವನೆ ದುರ್ಬಲವಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸೆನ್ಸೆಕ್ಸ್ ಕಂಪನಿಗಳಲ್ಲಿ ಅದಾನಿ ಪೋರ್ಟ್ಸ್, ಎಟರ್ನಲ್, ಬಜಾಜ್ ಫೈನಾನ್ಸ್, ಆಕ್ಸಿಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ಗಮನಾರ್ಹ ಲಾಭ ಗಳಿಸಿದರೆ, ಸನ್ ಫಾರ್ಮಾ ಕುಸಿತ ಕಂಡಿದೆ. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಮಿಶ್ರ ಫಲಿತಾಂಶ ಕಂಡುಬಂದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ ನಿವ್ವಳ ಮಾರಾಟಗಾರರಾಗಿದ್ದರು ಎಂದು ವರದಿಯಾಗಿದೆ.