Sensex | ಟ್ರಂಪ್ ಘೋಷಣೆಗಳ ಪರಿಣಾಮ, ಭಾರತದ ಷೇರು ಮಾರುಕಟ್ಟೆ ಪತನ
ಮೆಕ್ಸಿಕೋ ಮತ್ತು ಕೆನಡಾದಿಂದ ಆಗುವ ಆಮದುಗಳ ಮೇಲೆ ಮಂಗಳವಾರದಿಂದ 25% ತೆರಿಗೆ ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅಮೆರಿಕಾ ಷೇರು ಮಾರುಕಟ್ಟೆ ಕುಸಿದಿದೆ. ಅದರ ಪರಿಣಾಮ ಜಗತ್ತಿಗೆಲ್ಲ ತಟ್ಟಿದೆ.;
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿಯ ಪರಿಣಾಮ ಭಾರತದ ಷೇರು ಮಾರುಕಟ್ಟೆಗೆ ಬಲವಾಗಿ ತಟ್ಟಿದೆ. ಫೆಬ್ರವರಿ 4 (ಮಂಗಳವಾರ) ಬೆಳಗಿನ ಅವಧಿಯಲ್ಲಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರೀ ಕುಸಿತ ಕಂಡಿವೆ. ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ, ವಿದೇಶಿ ನಿಧಿ ಹರಿವಿನ ಕೊರತೆ ಮತ್ತು ಅಮೆರಿಕ ತೆರಿಗೆಗಳ ಕುರಿತ ಆತಂಕದ ಕಾರಣದಿಂದ ಮಾರುಕಟ್ಟೆಯಲ್ಲಿ ಭಾರೀ ಹಿನ್ನಡೆ ಉಂಟಾಗಿದೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 177.39 ಅಂಕಗಳು (0.24%) ಕುಸಿದು 72,908.55ಕ್ಕೆ ತಲುಪಿದ್ದು, ನಿಫ್ಟಿ, 59 ಅಂಕಗಳು (0.27%) ಇಳಿಕೆಯಾಗಿ 22,060.30ಕ್ಕೆ ತಲುಪಿತು. ಇಂಟ್ರಾಡೇ ವಹಿವಾಟಿನಲ್ಲಿ ನಿಫ್ಟಿ 144.85 ಅಂಕಗಳು (0.65%) ಇಳಿದು 21,974.45 ಅಂಕಗಳಿಗೆ ತಲುಪಿದೆ.
ಯಾವ ಕಂಪನಿಗಳಿಗೆ ನಷ್ಟ?
ನೆಸ್ಲೆ ಇಂಡಿಯಾ, ಎಚ್ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಟೈಟಾನ್, ಇನ್ಫೋಸಿಸ್, ಏಷಿಯನ್ ಪೇಂಟ್ಸ್ , ಎನ್ಟಿಪಿಸಿ, ಬಜಾಜ್ ಫಿನ್‌ಸರ್ವ್ ಮತ್ತು ಸನ್ ಫಾರ್ಮಾ ಕುಸಿತ ಕಂಡ ಪ್ರಮುಖ ಷೇರುಗಳಾಗಿವೆ.
ಸ್ಥಿರವಾಗಿರುವ ಷೇರುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಜೊಮ್ಯಾಟೊ , ಪವರ್ ಗ್ರೀಡ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಮಹೀಂದ್ರ & ಮಹೀಂದ್ರ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಅದಾನಿ ಪೋರ್ಟ್ ಷೇರುಗಳು ಸ್ಥಿರವಾಗಿವೆ.
ಏಷ್ಯಾ ಮಾರುಕಟ್ಟೆ ಸ್ಥಿತಿ
ಟೋಕಿಯೊ ಮತ್ತು ಹಾಂಗ್ ಕಾಂಗ್ ಮಾರುಕಟ್ಟೆಗಳು ಕುಸಿತದಲ್ಲಿ ವಹಿವಾಟು ಆರಂಭಿಸಿದರೆ, ಶಾಂಘೈ ಮತ್ತು ಸಿಯೋಲ್ ಸುಸ್ಥಿರವಾಗಿದೆ.
ಅಮೆರಿಕಾ ಮಾರುಕಟ್ಟೆ ಮತ್ತು ತೈಲ ಬೆಲೆಗಳ ಪರಿಣಾಮ
ಸೋಮವಾರದ ವಹಿವಾಟಿನಲ್ಲಿ ಅಮೆರಿಕಾ ಷೇರು ಮಾರುಕಟ್ಟೆ ಕುಸಿತ ಕಂಡಿತು. ಜಾಗತಿಕ ತೈಲ ಬೆಂಚ್ಮಾರ್ಕ್ ಬ್ರೆಂಟ್ ಕ್ರೂಡ್ 0.63% ಕುಸಿದು USD 71.17 ಪ್ರತಿ ಬ್ಯಾರಲ್‌ಗೆ ತಲುಪಿತು.
ಟ್ರಂಪ್ ಘೋಷಣೆಯಿಂದ ಜಾಗತಿಕ ಆರ್ಥಿಕತೆಗೆ ಹೊಡೆದ
ಮೆಕ್ಸಿಕೋ ಮತ್ತು ಕೆನಡಾದಿಂದ ಆಗುವ ಆಮದುಗಳಿಗೆ 25% ತೆರಿಗೆ ವಿಧಿಸುವ ಘೋಷಣೆಯು ಜಾಗತಿಕ ಆರ್ಥಿಕತೆ ಮತ್ತು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಈ ನಿರ್ಧಾರದಿಂದ ಅಮೆರಿಕದ ಮಾರುಕಟ್ಟೆ ಕುಸಿದಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಹಾಗೂ ಈ ದೇಶಗಳೊಂದಿಗೆ ದಶಕಗಳ ವಾಣಿಜ್ಯ ಪಾಲುದಾರಿಕೆಗೆ ಪೂರ್ತಿ ಹೊಡೆತ ಬೀಳುವ ಸಾಧ್ಯತೆ ಇದೆ.