Gold Price: ಬೆಲೆ ಏರಿದರೂ ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿ ಉತ್ಸಾಹ ಇಳಿಯದು!
ಏಪ್ರಿಲ್ 30ರಂದು ಅಕ್ಷಯ ತೃತೀಯ ಆಚರಣೆಯಾಗಲಿದ್ದು, ಬೆಲೆಯ ಹೊರತಾಗಿಯೂ ಭಾರತೀಯ ಗ್ರಾಹಕರು ಮತ್ತು ಹೂಡಿಕೆದಾರರಿಗೆ ಚಿನ್ನದ ಆಕರ್ಷಣೆ ಮತ್ತಷ್ಟು ಹೆಚ್ಚಿದೆ ಎಂದು ತಜ್ಞರು ಮತ್ತು ವಿಶ್ಲೇಷಕರು ತಿಳಿಸಿದ್ದಾರೆ.;
ಜಾಗತಿಕ ಆರ್ಥಿಕ ಅನಿಶ್ಚಿತತೆಗಳು, ವಿಶೇಷವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿರುವ ಸುಂಕದ ನೀತಿಗಳಿಂದ ಹೂಡಿಕೆ ಮಾರುಕಟ್ಟೆಗಳು ಅಲ್ಲೋಲಕಲ್ಲೋಲವಾಗಿದೆ. ಇಂಥ ಸಂದರ್ಭದಲ್ಲಿ ಸುರಕ್ಷಿತ ಹೂಡಿಕೆಯಾಗಿ ಕಂಡಿದ್ದು ಚಿನ್ನ. ಇದರ ಪರಿಣಾಮವಾಗಿ, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಒಂದು ಔನ್ಸ್‌ಗೆ 3,500 ಡಾಲರ್‌ನ ಗರಿಷ್ಠ ಪ್ರಮಾಣ ದಾಟಿ ಇದೀಗ 3,350 ಡಾಲರ್‌ನ ಸುತ್ತಮುತ್ತ ಸ್ಥಿರಗೊಂಡಿದೆ. ಒಟ್ಟಾರೆಯಾಗಿ ಈ ವರ್ಷ ಚಿನ್ನದ ಬೆಲೆಯಲ್ಲಿ ಸುಮಾರು ಶೇಕಡಾ 30ರಷ್ಟು ಏರಿಕೆ ಕಂಡಿದೆ. ಇವೆಲ್ಲದರ ನಡುವೆಯೂ ಭಾರತೀಯರಲ್ಲಿ ಚಿನ್ನದ ಖರೀದಿ ಉತ್ಸಾಹ ಇನ್ನೂ ಕುಗ್ಗಿಲ್ಲ ಎಂದು ತಜ್ಞರು ಹೇಳುತ್ತಾರೆ.
ಭಾರತದಲ್ಲಿ ಏಪ್ರಿಲ್ 25ರಂದು 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 9,824 ರೂಪಾಯಿ ಇದ್ದರೆ, 22 ಕ್ಯಾರಟ್ ಚಿನ್ನವು 9,005 ರೂಪಾಯಿಗೆ ಮಾರಾಟವಾಗಿದೆ. ಇದು 10 ಗ್ರಾಮ್‌ಗೆ ಕ್ರಮವಾಗಿ 98,240 ರೂ. ಮತ್ತು 90,050 ರೂಪಾಯಿಗಳು. ಒಟ್ಟಾರೆಯಾಗಿ ಗರಿಷ್ಠ ಮಟ್ಟ ದಾಟಿದೆ.
ಚಿಲ್ಲರೆ ಚಿನ್ನದ ಬೇಡಿಕೆ
ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕ ದೇಶವಾದ ಭಾರತದಲ್ಲಿ, ಅಕ್ಷಯ ತೃತೀಯದಂತಹ ಶುಭ ಸಂದರ್ಭಗಳಲ್ಲಿ ಖರೀದಿಯ ಬೇಡಿಕೆ ಗಗನಕ್ಕೇರುತ್ತದೆ. ಹೀಗಾಗಿ ಈ ವರ್ಷ ಏನಾಗಬಹುದು ಎಂಬ ಕೌತುಕ ಸೃಷ್ಟಿಯಾಗಿದೆ. ಆಧರೆ, ತಜ್ಞರರ ಪ್ರಕಾರ ಬೆಲೆ ಏರಿಕೆ ಹೊರತಾಗಿಯೂ ಈ ವರ್ಷವೂ ಬೇಡಿಕೆ ಕಡಿಮೆಯಾಗದು. ಅದರಲ್ಲೂ ಚಿಲ್ಲರೆ ವ್ಯಾಪಾರಿಗಳು ಸಿಕ್ಕಾಪಟ್ಟೆ ಬೇಡಿಕೆಯ ನಿರೀಕ್ಷೆ ಹೊಂದಿದ್ದಾರೆ.
ಕಲ್ಯಾಣ್ ಜ್ಯುವೆಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಕಲ್ಯಾಣರಾಮನ್, 'ದ ಫೆಡರಲ್' ಜತೆ ಮಾತನಾಡಿ: “ಕಳೆದ ವರ್ಷ, ಅಕ್ಷಯ ತೃತೀಯ ಸೇರಿದಂತೆ ಪ್ರಮುಖ ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಅತ್ಯುತ್ಸಾಹ ತೋರಿದ್ದರು.” ಭಾರತ, ಮಧ್ಯಪ್ರಾಚ್ಯ ಮತ್ತು ಅಮೆರಿಕದಲ್ಲಿ 388 ಶೋರೂಂಗಳನ್ನು ಹೊಂದಿರುವ ಕಲ್ಯಾಣ್ ಜ್ಯುವೆಲರ್ಸ್, ಈ ಅಕ್ಷಯ ತೃತೀಯಕ್ಕೂ ಜೋರು ಮಾರಾಟದ ನಿರೀಕ್ಷೆ ಇಟ್ಟುಕೊಂಡಿದೆ.
ಚಿಲ್ಲರೆ ಮಾರಾಟದ ಜೊತೆಗೆ, ಚಿನ್ನದ ಹೂಡಿಕೆಯ ಆಕರ್ಷಣೆಯೂ ಗಣನೀಯವಾಗಿ ಹೆಚ್ಚಿದೆ. ಕೇಂದ್ರೀಯ ಬ್ಯಾಂಕ್‌ಗಳು ಚಿನ್ನದ ಖರೀದಿ ತೀವ್ರಗೊಳಿಸಿವೆ ಮತ್ತು ಚಿನ್ನ-ಆಧಾರಿತ ಎಕ್ಸ್‌ಚೇಂಜ್-ಟ್ರೇಡೆಡ್ ಫಂಡ್‌ಗಳಿಗೆ (ETFs) ಹರಿವು ಗಮನಾರ್ಹವಾಗಿ ಹೆಚ್ಚಾಗಿದೆ.
ಗೋಲ್ಡ್‌ಮನ್ ಸ್ಯಾಕ್ಸ್ ವರದಿಯ ಪ್ರಕಾರ, ಕೇಂದ್ರೀಯ ಬ್ಯಾಂಕ್‌ಗಳು ಚಿನ್ನ ಖರೀದಿ ಧೋರಣೆಯನ್ನು ಇದೇ ರೀತಿ ಮುಂದುವರಿಸಿದರೆ, 2025ರ ಅಂತ್ಯದ ವೇಳೆಗೆ ಚಿನ್ನದ ಬೆಲೆ ಔನ್ಸ್‌ಗೆ 3,700 ಡಾಲರ್‌ಗಿಂತಲೂ ಮೀರಬಹುದು.
ಏಂಜಲ್ ಒನ್ ಲಿಮಿಟೆಡ್‌ನ ವಿಶ್ಲೇಷಕ (ಕೃಷಿಯೇತರ ಸರಕುಗಳು ಮತ್ತು ಕರೆನ್ಸಿಗಳು) ಪ್ರಥಮೇಶ್ ಮಲ್ಯಾ ಈ ಕುರಿತು ಮಾತನಾಡಿ “ಚಿನ್ನದ ಬೆಲೆಯ ಏರಿಕೆಯು ಮೇಲೆ ಭೌಗೋಳಿಕ ಒತ್ತಡಗಳು, ಹಣದುಬ್ಬರದ ಒತ್ತಡ ಮತ್ತು ಕರೆನ್ಸಿ ಏರಿಳಿತಗಳಂತಹ ಹಲವು ಅಂಶಗಳು ಪ್ರಭಾವ ಬೀರುತ್ತವೆ. ಗ್ರಾಹಕರು ಕೆಲವು ದಿನ ತಾತ್ಕಾಲಿಕ ಕುಸಿತ ಕಾಣಬಹುದಾದರೂ, ದೀರ್ಘಕಾಲೀನ ದೃಷ್ಟಿಕೋನದಲ್ಲಿ ಚಿನ್ನದ ಮೌಲ್ಯ ಏರಿಕೆಯ ಹಾದಿಯಲ್ಲಿದೆ ಎಂದು ಹೇಳಿದ್ದಾರೆ.
ಹೊಸಬರ ಖರೀದಿಗೆ ಉತ್ತಮ ಸಮಯವಲ್ಲ
ವೇ2ವೆಲ್ತ್ ಬ್ರೋಕರ್ಸ್ (ಶ್ರೀರಾಮ್ ಗ್ರೂಪ್) ವಿಶ್ಲೇಷಕರ ಪ್ರಕಾರ, ಚಿನ್ನ ದರವು ಬಲವಾದ ಏರಿಕೆ ಗತಿಯನ್ನು ತೋರುತ್ತಿದ್ದು, ಭವಿಷ್ಯದಲ್ಲಿ ಈ ಏರಿಕೆ ಮುಂದುವರಿಯಬಹುದು. ಆದರೆ, ಹೊಸ ಹೂಡಿಕೆದಾರರಿಗೆ ಈಗ ಚಿನ್ನ ಖರೀದಿಸಲು ಉತ್ತಮ ಸಮಯವಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ, ಏಕೆಂದರೆ ಈ ಸಂದರ್ಭದಲ್ಲಿ ಲಾಭದ ಸಾಧ್ಯತೆ ಕಡಿಮೆಯಿದ ಎಂದು ಹೇಳಿದ್ದಾರೆ..
ಚಿನ್ನದ ಬೆಲೆ ಕುಸಿಯದೆ ಏರಿಕೆಗೆ ತಿರುಗುವ ಮಟ್ಟವನ್ನು ‘ಸಪೋರ್ಟ್’ ಎಂದು ಕರೆಯಲಾಗಿದ್ದು, ಏರಿಕೆಯ ನಂತರ ಕುಸಿಯುವ ಮಟ್ಟವನ್ನು ‘ರೆಸಿಸ್ಟೆನ್ಸ್’ ಎಂದು ಕರೆಯಲಾಗುತ್ತದೆ. ವೇ2ವೆಲ್ತ್ ಪ್ರಕಾರ, ಚಿನ್ನದ ಪ್ರಸ್ತುತ ಸಪೋರ್ಟ್ ಮಟ್ಟಗಳು 93,750 ರೂಪಾಯಿಗಳಿಂದ 94,850 ರೂಪಾಯಿಳಾಗಿದ್ದರೆ, ರೆಸಿಸ್ಟೆನ್ಸ್ 97,000 ರೂ.ನಿಂದ 97,500 ರೂ. ನಡುವೆ ಇರಲಿದೆ.
ಬೆಲೆ ಗಗನಕ್ಕೇರಲಿದೆ
ಜೆಪಿ ಮಾರ್ಗನ್ ವರದಿಯ ಪ್ರಕಾರ, ಆರ್ಥಿಕ ಮಂದಗತಿ ಮತ್ತು ಅಮೆರಿಕ-ಚೀನಾ ವಾಣಿಜ್ಯ ಯುದ್ಧದ ಅಪಾಯಗಳಿಂದಾಗಿ, 2026ರ ಎರಡನೇ ತ್ರೈಮಾಸಿಕದ ವೇಳೆಗೆ ಚಿನ್ನದ ಬೆಲೆ ಔನ್ಸ್‌ಗೆ 4,000 ಡಾಲರ್‌ಗಿಂತಲೂ ಮೀರಲಿದೆ. 2025ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಚಿನ್ನದ ಬೆಲೆ 3,675 ಡಾಲರ್‌ಗೆ ಏರಲಿದೆ. ಕೆಲವೊಮ್ಮೆ ಇದಕ್ಕಿಂತ ಮೊದಲೇ 4,000 ಡಾಲರ್ ಗಡಿ ಮುಟ್ಟಬಹುದು ಎಂದು ತಿಳಿಸಿದೆ.
ಜಾಗತಿಕ ಅಂಶಗಳಿಂದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಚಿನ್ನದ ಹೂಡಿಕೆಯ ಆಕರ್ಷಣೆ ಮತ್ತಷ್ಟು ಬಲವಾಗಬಹುದು.
ಭಾರತದಲ್ಲಿ ಚಿನ್ನದ ಪ್ರೀತಿ
ಕಲ್ಯಾಣರಾಮನ್ ಮಾತನಾಡುತ್ತಾ, “ಭಾರತದಲ್ಲಿ ಚಿನ್ನವನ್ನು ಕೇವಲ ಹೂಡಿಕೆಯ ದೃಷ್ಟಿಯಿಂದ ಮಾತ್ರ ನೋಡಲಾಗುವುದಿಲ್ಲ. ಬೆಲೆಯಲ್ಲಿ ಏರಿಳಿತವಾದಾಗ ಗ್ರಾಹಕರು ಕೆಲವು ದಿನಗಳವರೆಗೆ ಕಾಯುತ್ತಾರೆ. ಆದರೆ, ಬೆಲೆ ಸ್ಥಿರವಾದ ಬಳಿಕ ವ್ಯವಹಾರ ಸಾಮಾನ್ಯವಾಗಿ ಮುಂದುವರಿಯುತ್ತದೆ,” ಎಂದು ಹೇಳಿದ್ದಾರೆ.