HAL: ತೇಜಸ್ ಯುದ್ಧ ವಿಮಾನಗಳ ಪೂರೈಕೆ ವಿಳಂಬ; ಯುದ್ಧ ವಿಮಾನ ಕ್ಷೇತ್ರದಲ್ಲಿ ಭಾರತ ದುರ್ಬಲ
HAL : ಯುದ್ಧ ವಿಮಾನಗಳ ವಿತರಣಾ ವಿಳಂಬಗಳು ಕೇವಲ ಎಚ್ಎಎಲ್ನ ನಂಬಿಕೆ ಕುಗ್ಗಿಸುವ ಜತೆಗೆ ಭಾರತೀಯ ರಕ್ಷಣಾ ಉತ್ಪಾದನೆ ಮತ್ತು ಖರೀದಿ ವ್ಯವಸ್ಥೆಯಲ್ಲಿನ ಒಳಬೇಗುದಿಯನ್ನು ತೋರಿಸುತ್ತವೆ.;
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತೀಯ ಸೇನೆಗೆ ತೇಜಸ್ ಲಘು ಯುದ್ಧ ವಿಮಾನ (LCA) Mk1A ಸೂಕ್ತ ಸಮಯಕ್ಕೆ ವಿತರಿಸದಿರುವ ಬಗ್ಗೆ ಭಾರತೀಯ ವಾಯುಪಡೆ (IAF) ಮುಖ್ಯಸ್ಥ ಎಪಿ ಸಿಂಗ್ ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ. ಇದು ಭಾರತದ ದೇಶಿಯ ಯುದ್ಧ ವಿಮಾನ ಉತ್ಪಾದನಾ ಯೋಜನೆಯೊಳಗಿನ ದೌರ್ಬಲ್ಯವನ್ನು ಎತ್ತಿ ತೋರಿಸಿದೆ.
ಯುದ್ಧ ವಿಮಾನಗಳ ವಿತರಣಾ ವಿಳಂಬಗಳು ಕೇವಲ ಎಚ್ಎಎಲ್ನ ಕುರಿತು ವ್ಯವಸ್ಥೆಯ ಇಟ್ಟಿರುವ ನಂಬಿಕೆ ಕುಗ್ಗಿಸುವ ಜತೆಗೆ ಭಾರತೀಯ ರಕ್ಷಣಾ ಉತ್ಪಾದನೆ ಮತ್ತು ಖರೀದಿ ವ್ಯವಸ್ಥೆಯಲ್ಲಿನ ಒಳಬೇಗುದಿಯನ್ನು ಬಹಿರಂಗ ಮಾಡಿದೆ.
ಚೀನಾ ಈಗಾಗಲೇ ಆರನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನ (ರೇಡಾರ್ಗೆ ಪತ್ತೆಯಾಗದ ) ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸುತ್ತಿರುವಾಗ, ಭಾರತ ಸರಿಯಾದ ಸಮಯಕ್ಕೆ ವಿಮಾನಗಳನ್ನು ಉತ್ಪಾದಿಸಲು ಮತ್ತು ಗುಣಮಟ್ಟ ಖಚಿತಪಡಿಸಿಕೊಳ್ಳಲು ವಿಫಲವಾಗಿರುವುದು, ವಾಯುಪಡೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಎಚ್ಎಎಲ್ನ ಸಂಘಟನಾ ದೌರ್ಬಲ್ಯ
ಎಚ್ಎಎಲ್, ನೀಡಿರುವ ಭರವಸೆಗಳು ಹಾಗೂ ವಾಸ್ತವದ ಪ್ರಗತಿಯಲ್ಲಿ ಅಜಗಜಾಂತರವಿದೆ ಎಂದು ವಾಯುಸೇನೆಯ ಮುಖ್ಯಸ್ಥರು ಹೇಳಿದ್ದಾರೆ. ಎಚ್ಎಎಲ್ 2025ರ ಮೊದಲ ಭಾಗದಲ್ಲಿ 11 ತೇಜಸ್ Mk1A ವಿಮಾನಗಳನ್ನು ವಿತರಿಸುವುದಾಗಿ ಹೇಳಿತ್ತು. ಆದರೆ, ವಾಯುಪಡೆಯ ಪರಿಶೀಲನೆ ವೇಳೆ ಒಂದೇ ಒಂದು ವಿಮಾನ ಸಿದ್ಧಗೊಂಡಿರಲಿಲ್ಲ. ಅಂದರೆ, ಎಚ್ಎಎಲ್ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಮಿತಿಮೀರಿ ಅಂದಾಜಿಸಿದೆ. ಆದರೆ, ವಿತರಣಾ ವಿಳಂಬಗಳನ್ನು ಒಪ್ಪಿಕೊಳ್ಳುವುದಕ್ಕೂ ಹಿಂದೇಟು ಹಾಕಿದೆ ಹಾಕುವಂಥ ಪರಿಸ್ಥಿತಿ ಎದುರಾಗಿದೆ.
ಏರೋ ಇಂಡಿಯಾ 2025 ಪ್ರದರ್ಶನದಲ್ಲಿ ಎಚ್ಎಎಲ್ ಪ್ರದರ್ಶಿಸುತ್ತಿರುವ Mk1A ಯುದ್ಧ ವಿಮಾನವು ವಾಸ್ತವದಲ್ಲಿ Mk1Aಕ್ಕೆ ಹತ್ತಿರವೂ ಇಲ್ಲ ಎಂಬ ಆರೋಗಳು ಕೇಳಿ ಬಂದಿವೆ. ಈ ಮೂಲಕ ಎಚ್ಎಎಲ್ನ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬಗ್ಗೆ ಅನುಮಾನ ಹೆಚ್ಚಾಗಿದೆ.
ಎಚ್ಎಎಲ್ನ ಹಿಂದಿನ ವೈಫಲ್ಯ
ಎಚ್ಎಎಲ್ ವಿಮಾನ ವಿತರಣಾ ವಿಳಂಬಗಳು ಹೊಸದೇನೂ ಅಲ್ಲ. ಭಾರತೀಯ ವಾಯುಪಡೆ ಜತೆ ಒಪ್ಪಂದ ಮಾಡಿರುವ 40 ತೇಜಸ್ ಯುದ್ಧ ವಿಮಾನಗಳನ್ನು ಇನ್ನೂ ವಿತರಣೆ ಮಾಡಿಲ್ಲ. ಈ ವಿಮಾನಗಳ ವಿತರಣಾ ಪ್ರಕ್ರಿಯೆ 2016ರಲ್ಲಿಯೇ ಆಗಬೇಕಾಗಿತ್ತು. ಇದು ಎಷ್ಟರ ಮಟ್ಟಿಗೆ ಹಾನಿ ಮಾಡಿದೆ ಎಂದರೆ ಎಚ್ಎಎಲ್ನ ಭವಿಷ್ಯದ ರಕ್ಷಣಾ ಒಪ್ಪಂದಗಳು ನಂಬಿಕೆಗಳನ್ನು ಕಳೆದುಕೊಂಡಿವೆ.
ಎಚ್ಎಎಲ್ನ ಕಾರ್ಯಕ್ಷಮತೆ ಹಾಗೂ ಪೂರೈಕೆ ಶಕ್ತಿ ಬಗ್ಗೆ ಅಂತಾರಾಷ್ಟ್ರೀಯ ರಕ್ಷಣಾ ತಜ್ಞರೂ ಅನುಮಾನ ವ್ಯಕ್ತಪಡಿಸಿದ್ದಾರೆ. ಉದಾಹರಣೆಗೆ, ಫ್ರೆಂಚ್ ಏರೋನಾಟಿಕ್ಸ್ ಕಂಪನಿ ಡಸ್ಸೊ ಏವಿಯೇಷನ್, ರಫೇಲ್ ಯುದ್ಧವಿಮಾನ ಉತ್ಪಾದನೆಯಲ್ಲಿ ಎಚ್ಎಎಲ್ ಜತೆ ಕೈಜೋಡಿಸಲು ಹಿಂಜರಿದಿದೆ.
ಎಚ್ಎಎಲ್ನ ಪ್ರತಿಕ್ರಿಯೆ ಏನು?
ಎಚ್ಎಎಲ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಸುನೀಲ್ ಈ ಕುರಿತು ಮಾತನಾಡಿ, 1998ರ ಭಾರತ ಪರಮಾಣು ಪರೀಕ್ಷೆ ನಂತರ ಎಚ್ಎಎಲ್ ಎಲ್ಲವನ್ನೂ ಹೊಸದಾಗಿ ತಯಾರು ಮಾಡಬೇಕಾಗಿ ಬಂತು. ಇದರಿಂದಾಗಿ ವಿಳಂಬಗಳು ಸಂಭವಿಸುತ್ತಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ಅವರು ಮಾರ್ಚ್ ಅಂತ್ಯದೊಳಗೆ ಕನಿಷ್ಠ 11 ತೇಜಸ್ Mk1A ವಿಮಾನಗಳನ್ನು ವಾಯುಪಡೆಗೆ ವಿತರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಚ್ಎಎಲ್ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವುದರ ಜೊತೆಗೆ ತನ್ನ ವಿಶ್ವಾಸಾರ್ಹತೆಯನ್ನೂ ಮರುಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಸೇನಾ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಎಚ್ಎಎಲ್ ಯೋಜನೆಗಳಲ್ಲಿ ಸ್ಥಿತಿಸ್ಥಾಪಕತ್ವ ಹೊಂದದೇ ಇರುವುದು ಹಾಗೂ ಸಂರಚನೆಯ ಕೊರತೆಯೇ ಕಾರ್ಯಾಚರಣಾ ವೈಫಲ್ಯಕ್ಕೆ ಹಾಗೂ ವಿತರಣಾ ವಿಳಂಬಕ್ಕೆ ಕಾರಣ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎಚ್ಎಎಚ್ ನಿರ್ವಹಣಾ ಸಮಸ್ಯೆಗಳು
ಎಚ್ಎಎಲ್ ನಿರ್ವಹಣಾ ವ್ಯವಸ್ಥೆಯು ಕಾರ್ಯಕ್ಷಮತೆಯನ್ನು ತೀವ್ರವಾಗಿ ಕುಗ್ಗಿಸುತ್ತಿದ್ದು, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ನಿಧಾನಗೊಳಿಸುತ್ತಿದೆ. ನಿರ್ವಹಣಾ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಮತ್ತು ಕಾಗದ ಪತ್ರಗಳ ವಹಿವಾಟನ್ನುಕಡಿಮೆ ಮಾಡುವುದು ಅತ್ಯಗತ್ಯ.
ಎಚ್ಎಎಲ್ನಲ್ಲಿ ಗುಣಮಟ್ಟ ನಿಯಂತ್ರಣ ಸಮಸ್ಯೆಗಳು ಬಹಳ ಹಿಂದಿನಿಂದಲೂ ಕಂಡುಬರುತ್ತಿವೆ. ವರ್ಷಾಂತ್ಯದಲ್ಲಿ ಒತ್ತಡದಲ್ಲಿ ವಿಮಾನಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಉತ್ಪಾದನಾ ದೋಷಗಳು, ಅಪಘಾತಗಳು ಮತ್ತು ವೈಫಲ್ಯಗಳು ಎದುರಾಗುತ್ತವೆ.
ಎಚ್ಎಎಲ್ ತನ್ನ ಪ್ರಮುಖ ಭಾಗಗಳಿಗಾಗಿ ವಿದೇಶಿ ಪೂರೈಕೆದಾರರ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ, GE F404 ಎಂಜಿನ್‌ಗಳನ್ನು ಪಡೆಯುವಲ್ಲಿ ವಿಳಂಬಗಳು ತೇಜಸ್ ಉತ್ಪಾದನಾ ಗಡುವಿನ ಮೇಲೆ ನೇರ ಪರಿಣಾಮ ಬೀರಿವೆ.
ಎಚ್ಎಎಲ್ ಮತ್ತು ವಾಯುಪಡೆಯ ನಡುವಿನ ಸಂಯೋಜನೆಯ ಕೊರತೆ ಕೂಡ ಪ್ರಮುಖ ಸಮಸ್ಯೆಯಾಗಿದ್ದು, ಎಚ್ಎಎಲ್ನಲ್ಲಿ ಐಎಎಫ್ ಅಧಿಕಾರಿಗಳನ್ನು ನಿಯೋಜಿಸುವುದರಿಂದ ಕಾರ್ಯಕ್ಷಮತೆ ಹೆಚ್ಚಿಸಲಿದೆ.
ಚೀನಾ ಜತೆಗಿನ ಸ್ಪರ್ಧೆಯಲ್ಲಿ ಹಿನ್ನಡೆ
ತೇಜಸ್ ಉತ್ಪಾದನೆಯಲ್ಲಿ ವಿಳಂಬಗಳು ಭಾರತೀಯ ವಾಯುಪಡೆಗೆ ತೀವ್ರ ಸಂಕಷ್ಟ ಉಂಟುಮಾಡುತ್ತಿವೆ. ವಿಶೇಷವಾಗಿ ಚೀನಾ ತನ್ನ ಯುದ್ಧವಿಮಾನ ಅಭಿವೃದ್ಧಿಯನ್ನು ವೇಗವಾಗಿ ನಡೆಸುತ್ತಿರುವುದರಿಂದ. ಚೀನಾ ತನ್ನ ಆರನೇ ತಲೆಮಾರಿನ ಸ್ಟೆಲ್ತ್ ಯುದ್ಧವಿಮಾನ (J-36)ವನ್ನು ಘೋಷಿಸಿದ್ದು, ಭಾರತಕ್ಕಿಂತ ಹಲವು ಪಟ್ಟು ಮುಂದಕ್ಕೆ ಸಾಗಿದೆ.
ವಾಯುಪಡೆಗೆ ಹೊಸ ಯುದ್ಧವಿಮಾನಗಳ ಲಭ್ಯತೆ ತಡವಾಗುತ್ತಿರುವುದರಿಂದ, ಭಾರತದ ಪ್ರತಿರೋಧ ಸಾಮರ್ಥ್ಯಕ್ಕೆ ಹಿನ್ನಡೆಯಾಗುತ್ತಿದೆ. ಈಗಾಗಲೇ, IAFನ ಸು-30MKI ವಿಮಾನಗಳ ಸೇವಾ ದಕ್ಷತೆ ಶೇಕಡಾ 55ರಷ್ಟಿದೆ. ಇದು ಶೇಕಡಾ 70ರಷ್ಟುಇರಬೇಕಾಗಿತ್ತು.
ಆರ್ಥಿಕ ಸವಾಲುಗಳು
ಭಾರತದ ರಕ್ಷಣಾ ಬಜೆಟ್ 2025-26ರಲ್ಲಿ 6,81,210 ಕೋಟಿ ರೂಪಾಯಿಯಾಗಿದ್ದು ಇದರಲ್ಲಿ ಶೇಕಡಾ 50 ವೇತನ ಮತ್ತು ಪಿಂಚಣಿಗೆ ಮೀಸಲಾಗಿರುವುದರಿಂದ, ಹೊಸ ಯುದ್ಧವಿಮಾನ ಉತ್ಪಾದನೆ ಮತ್ತು ಆಧುನೀಕರಣಕ್ಕೆ ಸಿಗುವ ಮೊತ್ತ ಕಡಿಮೆಯಾಗುತ್ತಿದೆ.
ಅದೇ ರೀತಿ, ಡಾಲರ್ ಎದುರು ರೂಪಾಯಿ ಮೌಲ್ಯ ಶೇಕಡಾ 4 ಕುಸಿದಿರುವುದರಿಂದ, ವಿದೇಶಿ ಖರೀದಿಗಳ ವೆಚ್ಚ ಹೆಚ್ಚಿದೆ. ಇದರಿಂದ ಭಾರತ ಪ್ರಮುಖ ಯುದ್ಧವಿಮಾನಗಳ ಭಾಗಗಳನ್ನು ಪಡೆಯಲು ತಡವಾಗಬಹುದು.
ಎಚ್ಎಎಲ್ ಇತರ ಸಂಸ್ಥೆಗಳ ಕಾರ್ಯಪದ್ಧತಿಯಲ್ಲಿ ಮೂಲಭೂತ ಸುಧಾರಣೆಗಳನ್ನು ಮಾಡದ ಹೊರತು, ಭಾರತದ ಸ್ಥಳೀಯ ಯುದ್ಧವಿಮಾನ ನಿರ್ಮಾಣ ಯೋಜನೆ ನಿರಂತರ ವಿಳಂಬ ಮತ್ತು ಗುಣಮಟ್ಟ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.