ಹಿರಿಯ ವಕೀಲ ಫಾಲಿ ನಾರಿಮನ್ ನಿಧನ: ಯಾರು ಈ ʼವಕೀಲರ ಭೀಷ್ಮʼ?

ಖ್ಯಾತ ಸುಪ್ರೀಂ ಕೋರ್ಟ್ ನ್ಯಾಯವಾದಿ, ಫಾಲಿ ಎಸ್ ನಾರಿಮನ್ ಅವರು ಅಲ್ಪಕಾಲದ ಅಸೌಖ್ಯದಿಂದ‌ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. 95 ವರ್ಷ ಪ್ರಾಯವಾಗಿದ್ದ ಅವರಿಗೆ ವಯೋಸಹಜ ಕಾಯಿಲೆಗಳಿದ್ದವು.

Update: 2024-02-21 05:40 GMT
ಫಾಲಿ ಸ್ಯಾಮ್ ನಾರಿಮನ್ ಅವರು 2007 ರಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ಪದ್ಮವಿಭೂಷಣವನ್ನು ಪಡೆದ ಸಂದರ್ಭ | ಕೃಪೆ: ವಿಕಿಮೀಡಿಯಾ ಕಾಮನ್ಸ್

ನವದೆಹಲಿ: ಕಾವೇರಿ ವಿವಾದ ಪ್ರಕರಣದಲ್ಲಿ ಅನೇಕ ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಖ್ಯಾತ ಸುಪ್ರೀಂ ಕೋರ್ಟ್ ನ್ಯಾಯವಾದಿ, ಫಾಲಿ ಎಸ್ ನಾರಿಮನ್ ಅವರು ಅಲ್ಪಕಾಲದ ಅಸೌಖ್ಯದಿಂದ‌ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. 95 ವರ್ಷ ಪ್ರಾಯವಾಗಿದ್ದ ಅವರಿಗೆ ವಯೋಸಹಜ ಕಾಯಿಲೆಗಳಿದ್ದವು.

ಜನವರಿ 10, 1929 ರಂದು ಜನಿಸಿದ ನಾರಿಮನ್ ಅವರು ಮುಂಬೈ ವಿಶ್ವವಿದ್ಯಾನಿಲಯದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್ಎಲ್ ಬಿ ಮಾಡಿದರು. ನವೆಂಬರ್, 1950 ರಲ್ಲಿ ಬಾಂಬೆ ಬಾರ್‌ ಕೌನ್ಸಿಲ್‌ಗೆ ಸೇರಿದ ನಂತರ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1971 ರಲ್ಲಿ ಅವರನ್ನು ಹಿರಿಯ ವಕೀಲರಾಗಿ ನೇಮಿಸಲಾಯಿತು. ನಾರಿಮನ್ ಅವರನ್ನು ಮೇ 1972 ರಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ನೇಮಿಸಿದ ಬಳಿಕ ಅವರು ಮುಂಬೈನಿಂದ ದೆಹಲಿಗೆ ಸ್ಥಳಾಂತರವಾದರು. ಆದರೆ ತುರ್ತುಪರಿಸ್ಥಿತಿ ಹೇರಿಕೆಯನ್ನು ವಿರೋಧಿಸಿ ಜೂನ್ 1975 ರಲ್ಲಿ ಅವರು ರಾಜೀನಾಮೆ ನೀಡಿದರು.

ವಕೀಲರಾಗಿ ಖ್ಯಾತಿ

ಸಾಂವಿಧಾನಿಕ ವಕೀಲರಾಗಿ ಮತ್ತು ಭಾರತದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ ತಮ್ಮ ಛಾಪು ಮೂಡಿಸಿದ್ದ ನಾರಿಮನ್‌ ಅವರು, ಸಾಂವಿಧಾನಿಕ ಕಾನೂನು ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಅವರ ಪರಿಣತಿಗಾಗಿ ಅವರು ಖ್ಯಾತಿ ಪಡೆದಿದ್ದರು.

1971 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ಹಿರಿಯ ವಕೀಲರಾಗಿ ನೇಮಕಗೊಂಡ ಬಳಿಕ ನಾರಿಮನ್ ಅವರ ವೃತ್ತಿಜೀವನವು ಗಮನಾರ್ಹ ಪ್ರಗತಿಯನ್ನು ಸಾಧಿಸಿತು.

ಪ್ರಶಸ್ತಿಗಳು

ಅವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 1999- 2005ರ ಅವಧಿಗೆ ರಾಷ್ಟ್ರಪತಿ ಅವರಿಂದ ರಾಜ್ಯಸಭೆ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು. 2002 ರಲ್ಲಿ ನ್ಯಾಯಕ್ಕಾಗಿ ಗ್ರೂಬರ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.

ನಾರಿಮನ್ ಅವರು ಹಲವಾರು ಸಾಂವಿಧಾನಿಕ ಪೀಠದ ನಿರ್ಧಾರಗಳ ಭಾಗವಾಗಿದ್ದಾರೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡಿನೊಂದಿಗಿನ ವಿವಾದದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಅವರ ಪುತ್ರ ರೋಹಿನ್ಟನ್‌ ನಾರಿಮನ್‌ ಕೂಡಾ ಸುಪ್ರೀಂ ಕೋರ್ಟ್‌ನಲ್ಲಿ ಸಾಲಿಸಿಟರ್‌ ಜನರಲ್‌ ಆಗಿ ಹಾಗೂ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.

ವಕೀಲ ಸಮುದಾಯದ ಗಣ್ಯರ ಸಂತಾಪ

ನಾರಿಮನ್‌ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಹಿರಿಯ ವಕೀಲ ಎ ಎಂ ಸಿಂಘ್ವಿ ಅವರು ಈ ಕುರಿತು ಸಂತಾಪ ಹಂಚಿಕೊಂಡಿದ್ದು, ʼಇದು ಒಂದು ಯುಗದ ಅಂತ್ಯವಾಗಿದೆʼ ಎಂದಿದ್ದಾರೆ.

ಜೀವಂತ ದಂತಕಥೆಯಾಗಿರುವ ಅವರು (ನಾರಿಮನ್) ಕಾನೂನು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅವರ ಎಲ್ಲಾ ವೈವಿಧ್ಯಮಯ ಸಾಧನೆಗಳ ಮೇಲೆ, ಅವರು ತಮ್ಮ ತತ್ವಗಳಿಗೆ ಅಚಲವಾಗಿ ಅಂಟಿಕೊಂಡಿದ್ದರು ಎಂದು ಸಿಂಘ್ವಿ ಬರೆದಿದ್ದಾರೆ.

"ನ್ಯಾಯಾಂಗದ ಸ್ವಾತಂತ್ರ್ಯಕ್ಕಾಗಿ, ಜಾತ್ಯತೀತ ಮೌಲ್ಯಗಳ ಪರವಾಗಿ, ಭಾರತದ ಸಾಂವಿಧಾನಿಕ ಕಾನೂನಿನ ಇತಿಹಾಸವನ್ನು ರೂಪಿಸಿದ ಬಾಂಬೆಯ ಒಂದು ತಲೆಮಾರಿನ ವಕೀಲರಲ್ಲಿ ನಾರಿಮನ್ ಕೊನೆಯವರು" ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಹೇಳಿದ್ದಾರೆ.

“ವಕೀಲ ಸಮುದಾಯದ ಭೀಷ್ಮ ಪಿತಾಮಹ” ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ನಾರಿಮನ್‌ರಿಗೆ ಅರ್ಪಿಸಿದ ನುಡಿನಮನದಲ್ಲಿ ಬಣ್ಣಿಸಿದ್ದಾರೆ.

ಪ್ರಮುಖ ಪ್ರಕರಣಗಳು

ಭಾರತೀಯ ಕಾನೂನನ್ನು ರೂಪಿಸಿದ ಹಲವಾರು ಪ್ರಮುಖ ಪ್ರಕರಣಗಳಲ್ಲಿ ನಾರಿಮನ್ ಭಾಗಿಯಾಗಿದ್ದರು.

  • ಕಾವೇರಿ ವಿವಾದ: ತಮಿಳುನಾಡಿನೊಂದಿಗಿನ ಕಾವೇರಿ ವಾಜ್ಯದಲ್ಲಿ ನಾರಿಮನ್‌ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅದಾಗ್ಯೂ, ನಾರಿಮನ್‌ ಅವರು ಕರ್ನಾಟಕದ ಪರ ಸರಿಯಾಗಿ ವಾದ ಮಂಡಿಸುತ್ತಿಲ್ಲ ಎಂಬ ಆರೋಪಗಳು ಕೂಡಾ ಕೇಳಿ ಬಂದಿದ್ದವು. ನಂತರದ ಬೆಳವಣಿಗೆಯಲ್ಲಿ ನಾರಿಮನ್‌ ಅವರು ಕರ್ನಾಟಕವನ್ನು ಪ್ರತಿನಿಧಿಸುವುದರಿಂದ ಹಿಂದೆ ಸರಿದಿದ್ದರು.
  • ಭೋಪಾಲ್‌ ಅನಿಲ ದುರಂತ ಪ್ರಕರಣ: ಭೋಪಾಲ್ ಅನಿಲ ದುರಂತ ಪ್ರಕರಣದಲ್ಲಿ ಯೂನಿಯನ್ ಕಾರ್ಬೈಡ್ ಪರವಾಗಿ ನಾರಿಮನ್ ವಾದ ಮಂಡಿಸಿದ್ದರು. ಸಂತ್ರಸ್ತರು ಮತ್ತು ಕಂಪೆನಿ ನಡುವೆ ನ್ಯಾಯಾಲಯದ ಹೊರಗೆ ಒಪ್ಪಂದವನ್ನು ಮಾಡಲು ಅವರು ಸಹಾಯ ಮಾಡಿದರು. ಈ ಕುರಿತು ನಂತರದ ದಿನಗಳಲ್ಲಿ ಅವರಿಗೆ ಪಶ್ಚಾತ್ತಾಪವಿತ್ತು.
  • ಜಯಲಲಿತಾ ಪ್ರಕರಣ: 2014ರಲ್ಲಿ ಅವರು ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಅವರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸಿ ಜಾಮೀನು ಪಡೆಯಲು ಯಶಸ್ವಿಯಾಗಿದ್ದರು.
  • ನರ್ಮದಾ ಪುನರ್ವಸತಿ ಪ್ರಕರಣ: ನಾರಿಮನ್ ಅವರು ನರ್ಮದಾ ಪುನರ್ವಸತಿ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಪರ ವಕೀಲರಾಗಿದ್ದರು. ಆದಾಗ್ಯೂ, ಕ್ರೈಸ್ತರ ಮೇಲೆ ದಾಳಿ, ಬೈಬಲ್‌ ಸುಟ್ಟ ಪ್ರಕರಣದ ನಂತರ ಗುಜರಾತ್‌ ಸರ್ಕಾರವನ್ನು ಪ್ರತಿನಿಧಿಸುವುದನ್ನು ತೊರೆದಿದ್ದರು.
Tags:    

Similar News