ಬೆಂಗಳೂರು ದರೋಡೆ ಪ್ರಕರಣಕ್ಕೆ ತಿರುವು: 7.11 ಕೋಟಿ ದರೋಡೆಯ ‘ಮಾಸ್ಟರ್ ಮೈಂಡ್’ ಪೊಲೀಸ್ ಪೇದೆ!
ದರೋಡೆಯ ಹಣದಲ್ಲಿ ಪಾಲು ಸಿಗುತ್ತದೆ ಎಂಬ ಆಸೆಗೆ ಬಿದ್ದ ಏಜೆನ್ಸಿಯ ಸಿಬ್ಬಂದಿ ವಾಹನದ ಚಲನವಲನ ಮತ್ತು ಹಣ ಸಾಗಿಸುವ ಸಮಯದ ಮಾಹಿತಿಯನ್ನು ಕಾನ್‌ಸ್ಟೆಬಲ್ ಅಣ್ಣಪ್ಪ ಮತ್ತು ತಂಡಕ್ಕೆ ರವಾನಿಸಿದ್ದರು.
ಬೆಂಗಳೂರಿನ ಹೃದಯಭಾಗದಲ್ಲಿ ಹಾಡುಹಗಲೇ ನಡೆದಿದ್ದ ಸಿಎಂಎಸ್ ಏಜೆನ್ಸಿಯ ವಾಹನ ಅಡ್ಡಗಟ್ಟಿ 7.11 ಕೋಟಿ ರೂಪಾಯಿ ದರೋಡೆ ಮಾಡಿದ ಪ್ರಕರಣವು ಇದೀಗ ಊಹೆಗೂ ನಿಲುಕದ ತಿರುವು ಪಡೆದುಕೊಂಡಿದೆ. ಇಡೀ ಪ್ರಕರಣದ ಬೆನ್ನೇರಿ ಹೊರಟಿರುವ ತನಿಖಾಧಿಕಾರಿಗಳಿಗೆ ಸಿಕ್ಕಿರುವ ಸ್ಫೋಟಕ ಮಾಹಿತಿಯ ಪ್ರಕಾರ, ಈ ಹೈಟೆಕ್ ದರೋಡೆಯ ಸೂತ್ರಧಾರ ಬೇರಾರೂ ಅಲ್ಲ, ಇಲಾಖೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್.
ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಣ್ಣಪ್ಪ ನಾಯ್ಕ್ ಎಂಬುವವರೇ ಈ ಮಹಾ ದರೋಡೆಯ ರೂವಾರಿ ಎಂದು ತನಿಖೆಯಲ್ಲಿ ದೃಢಪಟ್ಟಿದೆ. ತನಿಖಾಧಿಕಾರಿಗಳು ಈಗಾಗಲೇ ಅಣ್ಣಪ್ಪ ನಾಯ್ಕ್ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಣ್ಣಪ್ಪ ನಾಯ್ಕ್ ಹಿಂದೆ ಕುಂಬಳಗೋಡು ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಇಲಾಖೆಯ ಆಂತರಿಕ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಅರಿವಿದ್ದ ಇವರು, ತಮ್ಮ ಅನುಭವವನ್ನೇ ಬಂಡವಾಳವಾಗಿಸಿಕೊಂಡು ಈ ಕೃತ್ಯಕ್ಕೆ ಸ್ಕೆಚ್ ಹಾಕಿದ್ದರು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಳ್ಳತನ ನಡೆದ ನಂತರ ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಾರೆ, ಮೊಬೈಲ್ ಟವರ್ ಲೊಕೇಶನ್ ಹೇಗೆ ಟ್ರ್ಯಾಕ್ ಮಾಡುತ್ತಾರೆ ಮತ್ತು ಪೊಲೀಸರ ಬಲೆಯಲ್ಲಿ ಬೀಳದಂತೆ ಹೇಗೆ ತಪ್ಪಿಸಿಕೊಳ್ಳಬೇಕು ಎನ್ನುವ ಎಲ್ಲಾ ತಾಂತ್ರಿಕ ವಿಚಾರಗಳನ್ನು ಅಣ್ಣಪ್ಪ ತನ್ನ ಸಹಚರರಿಗೆ ಮನದಟ್ಟು ಮಾಡಿಕೊಟ್ಟಿದ್ದರು.
ಯುವಕರ ತಂಡಕ್ಕೆ ‘ದರೋಡೆ’ ತರಬೇತಿ
ಈ ಪ್ರಕರಣದಲ್ಲಿ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ನೇರವಾಗಿ ಭಾಗಿಯಾಗದೆ, ಕೃತ್ಯ ಎಸಗಲು ಬೇರೊಂದು ತಂಡವನ್ನು ತಯಾರು ಮಾಡಿದ್ದರು. ಕಮ್ಮನಹಳ್ಳಿ ಮತ್ತು ಕಲ್ಯಾಣನಗರ ಭಾಗದ ಸ್ಥಳೀಯ ಯುವಕರ ತಂಡವೊಂದನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ದರೋಡೆ ಮಾಡುವುದು ಹೇಗೆ, ವಾಹನವನ್ನು ಎಲ್ಲಿ ಅಡ್ಡಗಟ್ಟಬೇಕು ಮತ್ತು ದರೋಡೆಯ ನಂತರ ಯಾವ ಮಾರ್ಗದಲ್ಲಿ ಪರಾರಿಯಾಗಬೇಕು ಎಂಬ ಬಗ್ಗೆ ಈ ಯುವಕರಿಗೆ ಅಣ್ಣಪ್ಪ ವಿಶೇಷ ತರಬೇತಿ ನೀಡಿದ್ದರು. ಇವರ ಸೂಚನೆಯಂತೆಯೇ ಕಾರ್ಯಾಚರಣೆಗಿಳಿದ ಯುವಕರ ತಂಡವು, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಬಂದು ಹಣದ ವಾಹನವನ್ನು ಲೂಟಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಕದ್ದ ಹಣವನ್ನು ಬೆಂಗಳೂರು ನಗರದ ಗಡಿಭಾಗದ ನಿರ್ದಿಷ್ಟ ಸ್ಥಳವೊಂದರಲ್ಲಿ ಬಚ್ಚಿಟ್ಟು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಂಸ್ಥೆಯ ಒಳಗಿನವರ ಸಾಥ್ ಮತ್ತು ಸಿಸಿಟಿವಿ ರಹಸ್ಯ
ಕೇವಲ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಹೊರಗಿನ ಯುವಕರಿಂದಷ್ಟೇ ಇಷ್ಟು ದೊಡ್ಡ ಮಟ್ಟದ ದರೋಡೆ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದ ತನಿಖಾ ತಂಡ, ಸಿಎಂಎಸ್ ಏಜೆನ್ಸಿಯ ಒಳಗಿನವರ ಮೇಲೂ ಕಣ್ಣಿಟ್ಟಿತ್ತು. ಇದೀಗ ಆ ಅನುಮಾನ ನಿಜವಾಗಿದ್ದು, ದರೋಡೆಗೆ ಬೆಂಬಲ ನೀಡಿದ ಮತ್ತು ಸಂಸ್ಥೆಯ ಗೌಪ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಡಿ ಸಿಎಂಎಸ್ ಏಜೆನ್ಸಿಯ ಹತ್ತು ಮಂದಿ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ತಾಂತ್ರಿಕ ವಿಭಾಗ, ಭದ್ರತಾ ವಿಭಾಗದ ಅಧಿಕಾರಿಗಳು ಹಾಗೂ ಇಬ್ಬರು ಕಸ್ಟೋಡಿಯನ್‌ಗಳು ಸೇರಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಸಾಮಾನ್ಯವಾಗಿ ಸಿಎಂಎಸ್ ಸಂಸ್ಥೆಯ ವಾಹನಗಳ ಎರಡು ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ. ಆದರೆ, ದರೋಡೆಗೊಳಗಾದ ನಿರ್ದಿಷ್ಟ ವಾಹನದಲ್ಲಿನ ಸಿಸಿಟಿವಿ ಕ್ಯಾಮೆರಾವನ್ನು ಮೊದಲೇ ತೆಗೆದುಹಾಕಲಾಗಿತ್ತು. ಇದು ಸಂಸ್ಥೆಯ ಒಳಗಿನವರು ದರೋಡೆಕೋರರೊಂದಿಗೆ ಶಾಮೀಲಾಗಿರುವುದಕ್ಕೆ ಬಲವಾದ ಸಾಕ್ಷಿಯಾಗಿದೆ.
ಹಣದ ಆಸೆ
ದರೋಡೆಯ ಹಣದಲ್ಲಿ ಪಾಲು ಸಿಗುತ್ತದೆ ಎಂಬ ಆಸೆಗೆ ಬಿದ್ದ ಏಜೆನ್ಸಿಯ ಸಿಬ್ಬಂದಿ ವಾಹನದ ಚಲನವಲನ ಮತ್ತು ಹಣ ಸಾಗಿಸುವ ಸಮಯದ ಮಾಹಿತಿಯನ್ನು ಕಾನ್‌ಸ್ಟೆಬಲ್ ಅಣ್ಣಪ್ಪ ಮತ್ತು ತಂಡಕ್ಕೆ ರವಾನಿಸಿದ್ದರು. ಸದ್ಯ ಪೊಲೀಸರು ಅಣ್ಣಪ್ಪ ನಾಯ್ಕ್ ನೀಡಿದ ಸುಳಿವಿನ ಮೇರೆಗೆ ತನಿಖೆಯನ್ನು ಚುರುಕುಗೊಳಿಸಿದ್ದು, ಕೃತ್ಯ ಎಸಗಿದ ಯುವಕರ ತಂಡ ಮತ್ತು ಬಚ್ಚಿಟ್ಟಿರುವ ಹಣವನ್ನು ಪತ್ತೆಹಚ್ಚಲು ಬಲೆ ಬೀಸಿದ್ದಾರೆ. ತಿರುಪತಿಯಲ್ಲಿ ದರೋಡೆಗೆ ಬಳಸಲಾದ ಇನೋವಾ ಕಾರು ಪತ್ತೆಯಾಗಿದ್ದು, ಆರೋಪಿಗಳ ಬಂಧನಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಲಾಖೆಯಲ್ಲಿದ್ದುಕೊಂಡೇ ಇಂತಹದೊಂದು ಬೃಹತ್ ಸಂಚು ರೂಪಿಸಿದ ಕಾನ್‌ಸ್ಟೆಬಲ್ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.