ಸಿಎಂ ಕನಸು ಭಗ್ನ? ‘ಅಸಮಾಧಾನ’ದ ನಡುವೆ ಡಿಕೆಶಿ ‘ವಿಶ್ರಾಂತಿ’ ರಾಜಕಾರಣ!

ಹೈಕಮಾಂಡ್ ಮತ್ತು ಹಾಲಿ ಸಿಎಂ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿರುವುದು ಹಾಗೂ ಅಂದುಕೊಂಡಂತೆ ರಾಜಕೀಯ ನಡೆಗಳು ಸಾಗದಿರುವುದು ಡಿಸಿಎಂ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Update: 2025-11-21 04:46 GMT

ಸಾಂದರ್ಭಿಕ ಚಿತ್ರ

Click the Play button to listen to article

ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಸಂದರ್ಭದಲ್ಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದಿಢೀರ್ ಆಗಿ ತಮ್ಮೆಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ‘ವಿಶ್ರಾಂತಿ’ಗೆ ಜಾರಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಮೇಲ್ನೋಟಕ್ಕೆ ಅನಾರೋಗ್ಯದ ಕಾರಣ ನೀಡಲಾಗಿದ್ದರೂ, ಇದರ ಹಿಂದೆ ನಾಯಕತ್ವ ಬದಲಾವಣೆಯ ಅಸಮಾಧಾನದ ಹೊಗೆಯಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಮ್ಮ ಆಪ್ತ ವಲಯದ ಮೂಲಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ನವೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯಾಗಬಹುದು ಎಂಬ ಬಲವಾದ ನಿರೀಕ್ಷೆಯಲ್ಲಿದ್ದರು. ಆದರೆ, ಹೈಕಮಾಂಡ್ ಮತ್ತು ಹಾಲಿ ಸಿಎಂ ಕಡೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿರುವುದು ಹಾಗೂ ಅಂದುಕೊಂಡಂತೆ ರಾಜಕೀಯ ನಡೆಗಳು ಸಾಗದಿರುವುದು ಡಿಸಿಎಂ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸರ್ಕಾರಿ ಕಾರ್ಯಕ್ರಮಗಳಿಂದ ದೂರ ಉಳಿಯುವ ಮೂಲಕ ಪರೋಕ್ಷವಾಗಿ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ದೆಹಲಿಯಲ್ಲಿ ಶಾಸಕರ ಲಾಬಿ, ಖರ್ಗೆ ಗರಂ

ಇತ್ತ ಡಿಕೆಶಿ ಬೆಂಗಳೂರಿನಲ್ಲಿ ಮೌನಕ್ಕೆ ಶರಣಾಗಿದ್ದರೆ, ಅತ್ತ ಅವರ ಬಣದ ಮೂರ್ನಾಲ್ಕು ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ವಿಫಲ ಯತ್ನ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಶಾಸಕರು ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಲು ಮುಂದಾಗಿದ್ದರು. ಆದರೆ, ಶಾಸಕರ ಈ ಹಠಾತ್ ದೆಹಲಿ ಭೇಟಿಯ ಬಗ್ಗೆ ಖರ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷವೆಂದರೆ, ಈ ಬೆಳವಣಿಗೆಗಳ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿರುವುದು ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಕಾರ್ಯಕ್ರಮಗಳಿಗೆ ಗೈರು, ಮನೆಯಲ್ಲೇ ಉಳಿದ ಡಿಸಿಎಂ

ಅಸಮಾಧಾನದ ಸೂಚನೆ ಎಂಬಂತೆ, ನಿನ್ನೆ (ಬುಧವಾರ) ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಡಿ.ಕೆ. ಶಿವಕುಮಾರ್ ವೇದಿಕೆ ಹಂಚಿಕೊಂಡಿರಲಿಲ್ಲ. ಇಂದು ಕೂಡ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಕ್ಕೆಜೋಳ ಖರೀದಿ ಕುರಿತ ಮಹತ್ವದ ಸಭೆ ನಡೆಸುತ್ತಿದ್ದರೂ, ಡಿಕೆಶಿ ಅದರಲ್ಲಿ ಭಾಗವಹಿಸದೆ ಅಂತರ ಕಾಯ್ದುಕೊಂಡಿದ್ದಾರೆ. ಆರೋಗ್ಯ ಸರಿಯಿಲ್ಲ ಎಂಬ ಕಾರಣ ನೀಡಿ ಎಲ್ಲಾ ಸಾರ್ವಜನಿಕ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಅವರು ಮನೆಯಲ್ಲೇ ಉಳಿದಿದ್ದಾರೆ.

ಒಟ್ಟಿನಲ್ಲಿ, "ಐದು ವರ್ಷವೂ ನಾನೇ ಸಿಎಂ" ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಡಿಕೆಶಿ ಅವರ ಈ 'ವಿಶ್ರಾಂತಿ ರಾಜಕಾರಣ' ಮತ್ತು ದೆಹಲಿ ಮಟ್ಟದ ಬೆಳವಣಿಗೆಗಳು ಕಾಂಗ್ರೆಸ್ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸೂಚಿಸುತ್ತಿವೆ.

Tags:    

Similar News