ಸಿದ್ದು ಸರ್ಕಾರಕ್ಕೆ 2.5 ವರ್ಷ: Part-2| ಎಷ್ಟೊಂದು ಘೋಷಣೆಗಳು! ಅನುಷ್ಠಾನಗೊಳ್ಳದ ಯೋಜನೆಗಳು...
ಕೃಷಿ ಕ್ಷೇತ್ರದ ಪುನಶ್ಚೇತನದಿಂದ ಹಿಡಿದು ಆಧುನೀಕರಣದವರೆಗೆ, ಶಿಕ್ಷಣದ ಗುಣಮಟ್ಟ ಸುಧಾರಣೆಯಿಂದ ಆರೋಗ್ಯ ವ್ಯವಸ್ಥೆಯ ಬಲವರ್ಧನೆಯವರೆಗೆ ವಿವಿಧ ಕ್ಷೇತ್ರಗಳಿಗೆ ಗಮನ ನೀಡಿದರೂ ಎಲ್ಲಾ ಘೋಷಿತ ಯೋಜನೆಗಳ ಯಶಸ್ಸು, ಅವುಗಳ ಪರಿಣಾಮಕಾರಿ ಅನುಷ್ಠಾನವು ಸಂಪನ್ಮೂಲಗಳ ಕ್ರೋಢೀಕರಣವನ್ನು ಅವಲಂಬಿಸಿದೆ.
ಯಾವುದೇ ಸರ್ಕಾರದ ಯಶಸ್ಸು ಕೇವಲ ಜನಪ್ರಿಯ ಯೋಜನೆಗಳ ಘೋಷಣೆ, ಅನುಷ್ಠಾನವನ್ನಷ್ಟೇ ಅವಲಂಬಿಸಿರುವುದಿಲ್ಲ. ಬದಲಿಗೆ ರಾಜ್ಯದ ಆರ್ಥಿಕ ಆರೋಗ್ಯವನ್ನು ಕಾಪಾಡಿಕೊಂಡು, ದೀರ್ಘಕಾಲೀನ ಅಭಿವೃದ್ಧಿಗೆ ಬುನಾದಿ ಹಾಕುವುದರಲ್ಲೂ ಅಡಗಿರುತ್ತದೆ.
ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳು, ವಿಶೇಷವಾಗಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಂತರ ರಾಜ್ಯದ ಬಜೆಟ್ ಹಂಚಿಕೆ, ವೆಚ್ಚದ ಆದ್ಯತೆಗಳು ಮತ್ತು ಅಭಿವೃದ್ಧಿ ವೆಚ್ಚದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ಗಂಭೀರ ಚರ್ಚೆ ಹುಟ್ಟುಹಾಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ಗಳು, ಪ್ರಮುಖವಾಗಿ "ಸಾಮಾಜಿಕ ನ್ಯಾಯ" ಮತ್ತು "ಜನಕಲ್ಯಾಣ" ತತ್ವಗಳ ಮೇಲೆ ಕೇಂದ್ರೀಕೃತವಾಗಿವೆ. ಐದು ಗ್ಯಾರಂಟಿ ಯೋಜನೆಗಳು ಈ ಬಜೆಟ್‌ಗಳ ಆಧಾರಸ್ತಂಭವಾಗಿದ್ದರೂ, ಕೃಷಿ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕೆಯಂತಹ ಇತರ ನಿರ್ಣಾಯಕ ಕ್ಷೇತ್ರಗಳ ಅಭಿವೃದ್ಧಿಗಾಗಿಯೂ ಹಲವಾರು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಆರ್ಥಿಕ ಕ್ರೋಢೀಕರಣದ ಸಂಕಷ್ಟದಿಂದಾಗಿ ಬಹುತೇಕ ಯೋಜನೆಗಳು ಬಜೆಟ್‌ನ ಕಾಗದ ಪತ್ರದಲ್ಲಿಯೇ ಉಳಿಯುವಂತಾಗಿವೆ.
ಗ್ಯಾರಂಟಿಗೆ 51,034 ಕೋಟಿ ರೂ. ಮೀಸಲು
ಗ್ಯಾರಂಟಿ ಯೋಜನೆಗಳಿಗೆ ಈವರೆಗೆ 90 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 51,034 ಕೋಟಿ ರೂ. ಮೀಸಲಿಡಲಾಗಿದೆ. ಕಳೆದ ಎರಡು ವರ್ಷಗಳ ಆಡಳಿತದಲ್ಲಿ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿಎಸ್‌ಡಿಪಿಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ಆರ್ಥಿಕ ಶಿಸ್ತು ಪಾಲಿಸಿಕೊಂಡು ಬಂದಿರುವುದು ರಾಜ್ಯ ಸರ್ಕಾರದ ಗಮನಾರ್ಹ ಸಾಧನೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ವಾರ್ಷಿಕ 50ರಿಂದ 55 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ.
ಗ್ಯಾರಂಟಿಗಳ ಯಶಸ್ವಿ ಜಾರಿ ಜೊತೆಗೆ ಸುಮಾರು 1 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳನ್ನೂ ಸರ್ಕಾರ ಕೈಗೊಂಡಿದೆ. 2023ರ ಮೇ 20ರಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮೊದಲ ಕ್ಯಾಬಿನೆಟ್‌ನಲ್ಲೇ ಕೆಲ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಆ ವರ್ಷದ ಒಂಬತ್ತು ತಿಂಗಳ ಆಡಳಿತದಲ್ಲೇ 21,168 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಿತು. ನಂತರ 2024ರಲ್ಲಿ ಕೂಡ ಲೋಕೋಪಯೋಗಿ, ನಗರಾಭಿವೃದ್ಧಿ, ಬೆಂಗಳೂರು ಅಭಿವೃದ್ಧಿ ಇಲಾಖೆಗಳ ಮೂಲಕ 30 ಸಾವಿರ ಕೋಟಿ ರೂ. ಮೊತ್ತದ ರಸ್ತೆ, ಚರಂಡಿ, ಸೇತುವೆ ನಿರ್ಮಾಣ,ದುರಸ್ತಿ ಮತ್ತಿತರ ಮೂಲ ಸೌಕರ್ಯ ಕಾಮಗಾರಿಗಳಿಗೆ ಅನುಮೋದನೆ ನೀಡಿತು. ಇವುಗಳಲ್ಲಿ ಕೆಲವು ಪೂರ್ಣಗೊಂಡಿದ್ದು, ಇನ್ನು ಕೆಲವು ಪ್ರಗತಿಯಲ್ಲಿವೆ.
2025ನೇ ಸಾಲಿನ ಬಜೆಟ್‌ನಲ್ಲಿ ಕೂಡ ಅಭಿವೃದ್ಧಿ ಕಾರ್ಯಗಳಿಗೆ 35 ಸಾವಿರ ಕೋಟಿ ರೂ.ನಷ್ಟು ಅನುದಾನ ಒದಗಿಸಲಾಗಿದೆ. ಈ ವರ್ಷ ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಹೊಸ ಯೋಜನೆ ಜಾರಿಗೊಳಿಸಿ 8 ಸಾವಿರ ಕೋಟಿ ರೂ. ಒದಗಿಸಲಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಸಂಪರ್ಕ ಜಾಲ ಅಭಿವೃದ್ಧಿಗೆ 5200 ಕೋಟಿ ರೂ. ಒದಗಿಸಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 2024-25ನೇ ಸಾಲಿನಲ್ಲಿ 8400 ಕೋಟಿ ರೂ. ಮತ್ತು ಪ್ರಸಕ್ತ ಸಾಲಿನಲ್ಲಿ 6050 ಕೋಟಿ ರೂ. ಒದಗಿಸಿದೆ. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ 7000 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಅನುದಾನ ಘೋಷಣೆಯಾದರೂ ಸಮರ್ಪಕವಾಗಿ ಅನುಷ್ಠಾನ ಇಲ್ಲ
ಬಜೆಟ್‌ನಲ್ಲಿ ಘೋಷಣೆಯಾದ ಹಲವು ಯೋಜನೆಗಳು ಜಾರಿಯಾಗದಿರಲು ಮೂಲ ಕಾರಣ, ರಾಜ್ಯದ ಆರ್ಥಿಕ ಸಂಪನ್ಮೂಲಗಳ ಸಿಂಹಪಾಲು ಗ್ಯಾರಂಟಿ ಯೋಜನೆಗಳ ಕಡೆಗೆ ಹರಿದು ಹೋಗುತ್ತಿರುವುದು. ಐದು ಗ್ಯಾರಂಟಿ ಯೋಜನೆಗಳ ವಾರ್ಷಿಕ ವೆಚ್ಚ ಅಂದಾಜು 50 ಸಾವಿರ ಕೋಟಿಯಿಂದ 60 ಸಾವಿರ ಕೋಟಿ. ಇದು ರಾಜ್ಯದ ಒಟ್ಟು ಬಜೆಟ್‌ನ ಗಣನೀಯ ಭಾಗವಾಗಿದ್ದು, ಸರ್ಕಾರದ ವಿವೇಚನಾ ನಿಧಿಯನ್ನು ಬಹುತೇಕ ಬರಿದು ಮಾಡಿದೆ. ಸರ್ಕಾರದ ಬಳಿ ಲಭ್ಯವಿರುವ ಅನುದಾನವು ಗ್ಯಾರಂಟಿಗಳಂತಹ ಕಂದಾಯ ವೆಚ್ಚಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿರುವುದರಿಂದ, ಹೊಸ ಆಸ್ತಿಗಳನ್ನು ಸೃಷ್ಟಿಸುವ ಬಂಡವಾಳ ವೆಚ್ಚಕ್ಕೆ ಹಣದ ಕೊರತೆ ಎದುರಾಗಿದೆ. ಇದರ ನೇರ ಪರಿಣಾಮ ಹೊಸ ಯೋಜನೆಗಳ ಮೇಲಾಗಿದೆ ಎಂದು ಹೇಳಲಾಗಿದೆ.
ಅನುಷ್ಠಾನಗೊಳ್ಳದ ಪ್ರಮುಖ ಯೋಜನೆಗಳು
ಮೂಲಸೌಕರ್ಯ
ಈ ವಲಯದ ಯೋಜನೆಗಳಿಗೆ ಬೃಹತ್ ಹೂಡಿಕೆಯ ಅಗತ್ಯವಿರುವುದರಿಂದ, ಅತಿ ಹೆಚ್ಚು ಹಿನ್ನಡೆ ಇಲ್ಲಿಯೇ ಅನುಭವಿಸಲಾಗುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರವಾಗಿ, ನಗರದ ಪ್ರಮುಖ ಭಾಗಗಳಲ್ಲಿ ಸುರಂಗ ರಸ್ತೆ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಇದರ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅಗತ್ಯವಿದೆ. ಯೋಜನೆಗೆ ಪರಿಸರವಾದಿಗಳಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಹೀಗಾಗಿ ಇದು ಅನುಷ್ಠಾನಗೊಳ್ಳುವುದು ಕಷ್ಟಕರ ಎಂಬ ಮಾತುಗಳು ಕೇಳಿಬರುತ್ತಿವೆ.
ಪೆರಿಫೆರಲ್ ರಿಂಗ್ ರಸ್ತೆ ಘೋಷಣೆಯಾಗಿ ದಶಕಗಳೇ ಕಳೆದಿವೆ. ನನೆಗುದಿಗೆ ಬಿದ್ದಿರುವ ಈ ಯೋಜನೆಗೆ ಪುನಃ ಚಾಲನೆ ನೀಡಿ, ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಭೂಸ್ವಾಧೀನಕ್ಕೆ ಬೇಕಾದ ಅಗಾಧ ಪ್ರಮಾಣದ ಪರಿಹಾರದ ಮೊತ್ತವನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಯೋಜನೆಯು ಕಾನೂನಾತ್ಮಕ ಮತ್ತು ಆರ್ಥಿಕ ಗೊಂದಲಗಳಲ್ಲಿ ಸಿಲುಕಿಕೊಂಡಿದೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವಿಕೆಗೂ ಹಿನ್ನೆಡೆಯಾಗಿದೆ. ಹಲವಾರು ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಘೋಷಣೆ ಮಾಡಲಾಗಿತ್ತು. ಗ್ಯಾರಂಟಿಗಳ ಹೊರತಾಗಿ, ಲೋಕೋಪಯೋಗಿ ಇಲಾಖೆಗೆ ಹೊಸ ಯೋಜನೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಿಡುಗಡೆಯಾಗುತ್ತಿಲ್ಲ. ಇದರಿಂದಾಗಿ, ಅನೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಅಥವಾ ಪ್ರಾರಂಭವೇ ಆಗಿಲ್ಲ ಎನ್ನಲಾಗಿದೆ.
ನೀರಾವರಿ ಯೋಜನೆಗಳು
ರಾಜ್ಯದ ಜೀವಾಳವಾದ ನೀರಾವರಿ ಯೋಜನೆಗಳು ಸಹ ಅನುದಾನದ ಕೊರತೆಯಿಂದ ಬಳಲುತ್ತಿವೆ. ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆ ಮಂದಗತಿಯಲ್ಲಿ ಸಾಗಿದೆ. ಇತ್ತೀಚೆಗೆ ಸರ್ಕಾರವು ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಭೂ ಸ್ವಾಧೀನ ಪ್ರಕ್ರಿಯೆಯ ತೀರ್ಮಾನ ಕೈಗೊಂಡಿವೆ. ಆದರೆ, ಈ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳ ಅಗತ್ಯವಿದೆ. ಆದರೆ, ಬಜೆಟ್‌ನಲ್ಲಿ ಮೀಸಲಿಡುತ್ತಿರುವ ಅನುದಾನವು ಕೇವಲ ಸಾಂಕೇತಿಕವಾಗಿದ್ದು, ಯೋಜನೆಗಳ ಅನುಷ್ಠಾನ ಆಮೆಗತಿಯಲ್ಲಿ ಸಾಗುತ್ತಿದೆ. ರಾಜ್ಯದಾದ್ಯಂತ ಕೆರೆಗಳ ಪುನಶ್ಚೇತನ, ಚೆಕ್ ಡ್ಯಾಂಗಳ ನಿರ್ಮಾಣದಂತಹ ಸಣ್ಣ ನೀರಾವರಿ ಯೋಜನೆಗಳಿಗೆ ಮೀಸಲಿಟ್ಟ ಅನುದಾನ ಸಂಪೂರ್ಣವಾಗಿ ಬಳಕೆಯಾಗುತ್ತಿಲ್ಲ.
ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿ
ಬೆಂಗಳೂರನ್ನು ಹೊರತುಪಡಿಸಿ, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಂತಹ ಪ್ರದೇಶಗಳಲ್ಲಿ ಹೊಸ ಕೈಗಾರಿಕಾ ಟೌನ್‌ಶಿಪ್‌ಗಳನ್ನು ಸ್ಥಾಪಿಸಿ, ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಲಾಗಿತ್ತು. ಹೊಸ ಟೌನ್‌ಶಿಪ್‌ಗಳಿಗೆ ಭೂಸ್ವಾಧೀನ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಬಂಡವಾಳ ಬೇಕು. ಸದ್ಯಕ್ಕೆ, ಈ ಯೋಜನೆಗಳು ಕೇವಲ ಕಾಗದದ ಮೇಲಿವೆ.
ಶಿಕ್ಷಣ ಮತ್ತು ಆರೋಗ್ಯ
ಈ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಯೋಜನೆಗಳು ಮುಂದುವರಿದರೂ, ಹೊಸ ಬಂಡವಾಳ ಹೂಡಿಕೆಯ ಯೋಜನೆಗಳು ವಿಳಂಬವಾಗಿವೆ. ಪ್ರತಿ ತಾಲ್ಲೂಕಿನಲ್ಲಿ ಅತ್ಯುತ್ತಮ ಸೌಲಭ್ಯಗಳೊಂದಿಗೆ ಮಾದರಿ ಶಾಲೆಗಳನ್ನು ನಿರ್ಮಿಸುವ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ. ಇನ್ನು, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೊಸ ವಿಭಾಗಗಳನ್ನು ತೆರೆಯುವುದು, ಹೊಸ ವೈದ್ಯಕೀಯ ಉಪಕರಣಗಳನ್ನು ಅಳವಡಿಸುವಂತಹ ಯೋಜನೆಗಳಿಗೆ ಸಂಪೂರ್ಣ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಹೇಳಲಾಗಿದೆ.
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
ಗ್ಯಾರಂಟಿಗಳು ಗ್ರಾಮೀಣ ಜನರಿಗೆ ನೇರ ಆರ್ಥಿಕ ನೆರವು ನೀಡುತ್ತಿದ್ದರೂ, ಕೃಷಿ ಕ್ಷೇತ್ರದ ದೀರ್ಘಕಾಲೀನ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಹಿನ್ನಡೆ ಅನುಭವಿಸಿವೆ.
ರೈತರಿಗೆ ಹೊಸ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ನೀಡುವ ಸಬ್ಸಿಡಿ ಯೋಜನೆಗಳಿಗೆ ಅನುದಾನದ ಕೊರತೆಯಿಂದಾಗಿ, ಅನೇಕ ರೈತರು ಇದರ ಪ್ರಯೋಜನದಿಂದ ವಂಚಿತರಾಗಿದ್ದಾರೆ. ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಲು ತಾಲ್ಲೂಕು ಮಟ್ಟದಲ್ಲಿ ಸ್ಥಾಪಿಸುವುದಾಗಿ ಘೋಷಿಸಲಾದ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ಯೋಜನೆ ಕೇವಲ ಕಾಗದದ ಮೇಲಿದೆ.
ಸರ್ಕಾರಕ್ಕೆ ಆರ್ಥಿಕ ಸವಾಲುಗಳು
ಗ್ಯಾರಂಟಿಗಳ ಬೃಹತ್ ವೆಚ್ಚವನ್ನು ಭರಿಸಲು ಸರ್ಕಾರವು ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕಾಗಿದೆ. ಇದಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಆಸ್ತಿ ನೋಂದಣಿ ಶುಲ್ಕ, ಅಬಕಾರಿ ಸುಂಕವನ್ನು ಹೆಚ್ಚಿಸುವಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಜನಸಾಮಾನ್ಯರ ಮೇಲೆ ಪರೋಕ್ಷ ಹೊರೆಯಾಗುತ್ತಿದೆ. ಅಲ್ಲದೇ, ಹೆಚ್ಚುತ್ತಿರುವ ಸಾಲವು ಸಹ ಹೊರೆಯಾಗಿದೆ. ಆದಾಯ ಮತ್ತು ವೆಚ್ಚದ ನಡುವಿನ ಅಂತರ ಹೆಚ್ಚಾದಾಗ, ಸರ್ಕಾರವು ಹೆಚ್ಚಿನ ಸಾಲ ಮಾಡಬೇಕಾಗುತ್ತದೆ. ರಾಜ್ಯದ ಸಾಲದ ಹೊರೆ ಹೆಚ್ಚಾದರೆ, ಅದರ ಬಡ್ಡಿ ಪಾವತಿಗಾಗಿಯೇ ಬಜೆಟ್‌ನ ದೊಡ್ಡ ಪಾಲು ವ್ಯಯವಾಗುತ್ತದೆ. ಇದು ಅಭಿವೃದ್ಧಿ ಕಾರ್ಯಗಳಿಗೆ ಲಭ್ಯವಿರುವ ಹಣವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಅಡಿಯಲ್ಲಿ ನಿಗದಿಪಡಿಸಲಾದ ವಿತ್ತೀಯ ಗುರಿಗಳನ್ನು ತಲುಪುವುದು ಸರ್ಕಾರಕ್ಕೆ ಸವಾಲಾಗಬಹುದು.
ಸರ್ಕಾರದ ಸಾಧನೆಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರಿಗೆ ರಾಜ್ಯ ಸಹಕಾರಿ ಸಂಘಗಳ ಮೂಲಕ ನೀಡುತ್ತಿದ್ದ 3 ಲಕ್ಷ ರೂ. ವರೆಗಿನ ಶೂನ್ಯ ಬಡ್ಡಿದರದ ಅಲ್ಪಾವಧಿ ಸಾಲವನ್ನು 5 ಲಕ್ಷ ರೂ. ಗಳಿಗೆ ಹೆಚ್ಚಿಸಿತು. ಅದೇ ರೀತಿ ದೀರ್ಘಾವಧಿ ಸಾಲದ ಮೊತ್ತವನ್ನು 10ರಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಿತು. 2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28 ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ ಹೊಂದಿದೆ. 2023-24ನೇ ಸಾಲಿನ ಬೆಳಗಾವಿ ಅಧಿವೇಶನಲ್ಲಿ ಘೋಷಿಸಿದಂತೆ ಡಿಸಿಸಿ ಹಾಗೂ ಪಿಕಾಡ್ ಬ್ಯಾಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿ ಮನ್ನಾ ಮಾಡಲಾಗಿದೆ. ಸಹಕಾರಿ ಸಂಘಗಳ ಮೂಲಕ ಯಶಸ್ವಿನಿ ಯೋಜನೆ ಪುನರ್‌ಜಾರಿಗೊಳಿಸಿ ಇಲ್ಲಿಯವರೆಗೆ 700 ನೆಟ್‌ವರ್ಕ್ ಆಸ್ಪತ್ರೆಗಳನ್ನು ನೋಂದಾಯಿಸಲಾಗಿದೆ.
ಈ ಆಸ್ಪತ್ರೆಗಳಲ್ಲಿ ಈವರೆಗೆ 59 ಸಾವಿರ ಫಲಾನುಭವಿಗಳು 103 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದಿದ್ದಾರೆ. ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಲ್‌ಗೆ 7500 ರೂ. ಜತೆಗೆ ರಾಜ್ಯ ಸರ್ಕಾರದಿಂದ 450 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಿದೆ.
ಏಳನೇ ವೇತನ ಆಯೋಗ ಜಾರಿ
ಏಳನೇ ರಾಜ್ಯ ವೇತನ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಜಾರಿ ಮಾಡಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 20 ಸಾವಿರ ಕೋಟಿ ರೂ. ಹೊರೆಯಾಗಲಿದೆ. ಸರ್ಕಾರಿ ನೌಕರರ ವೇತನ, ವೇತನ ಸಂಬಂಧಿತ ಭತ್ಯೆಗಳು ಮತ್ತು ಪಿಂಚಣಿಗಳನ್ನು 2024ರ ಆ.1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ. ಇದರಿಂದ ನೌಕರರ ಕನಿಷ್ಠ ಮೂಲ ವೇತನ 17 ಸಾವಿರ ರೂ.ನಿಂದ 27 ಸಾವಿರ ರೂ.ಗೆ ಕ್ಕೆ ಏರಿಕೆಯಾಗಿದೆ. ಗರಿಷ್ಠ ವೇತನ 1,50,600 ರೂ.ನಿಂದ 2,41,200 ರೂ. ವರೆಗೆ ಪರಿಷ್ಕರಣೆಯಾಗಿದೆ. ನೌಕರರ ಕನಿಷ್ಠ ಪಿಂಚಣಿ ಕೂಡ 8,500 ರೂ. ನಿಂದ 13,500 ರೂ.ಗೆ ಏರಿಕೆಯಾಗಿದೆ. ಗರಿಷ್ಠ ಪಿಂಚಣಿ 75,300 ರೂ.ನಿಂದ 120,600 ರೂ.ಗೆ ಏರಿಕೆಯಾಗಿದೆ.
ಹಗ್ಗದ ಮೇಲೆ ಸಿದ್ದು ನಡಿಗೆ
ಸರ್ಕಾರವು ಜನಪರ ಯೋಜನೆಗಳನ್ನು ಘೋಷಣೆ ಮಾಡಿದರೂ ರಾಜ್ಯದ ಹಣಕಾಸಿನ ವಾಸ್ತವವು ಒಂದು ರೀತಿಯಲ್ಲಿ "ಹಗ್ಗದ ಮೇಲಿನ ನಡಿಗೆ"ಯಾಗಿದೆ.
ಒಂದೆಡೆ, ಕೋಟ್ಯಂತರ ಜನರಿಗೆ ತಕ್ಷಣದ ಆರ್ಥಿಕ ನೀಡುವ ಜನಕಲ್ಯಾಣ ಯೋಜನೆಗಳ ಸಾಮಾಜಿಕ ಜವಾಬ್ದಾರಿಯಿದೆ. ಮತ್ತೊಂದೆಡೆ, ರಾಜ್ಯದ ಭವಿಷ್ಯವನ್ನು ರೂಪಿಸುವ ದೀರ್ಘಕಾಲೀನ ಅಭಿವೃದ್ಧಿ ಯೋಜನೆಗಳಿಗೆ ಹೂಡಿಕೆ ಮಾಡುವ ಆರ್ಥಿಕ ಅನಿವಾರ್ಯತೆಯಿದೆ. ಪ್ರಸ್ತುತ, ಸರ್ಕಾರದ ಆದ್ಯತೆಯು ಸ್ಪಷ್ಟವಾಗಿ ಜನಕಲ್ಯಾಣದ ಕಡೆಗಿದೆ. ಆದರೆ, ಈ ಆದ್ಯತೆಯು ಅಭಿವೃದ್ಧಿ ವೆಚ್ಚದ ಮೇಲೆ ಬೀರುತ್ತಿರುವ ಪರಿಣಾಮವನ್ನು ನಿರ್ಲಕ್ಷಿಸುವಂತಿಲ್ಲ. ಈ ಎರಡರ ನಡುವೆ ಸಮತೋಲನವನ್ನು ಸಾಧಿಸುವುದೇ ಸರ್ಕಾರದ ಮುಂದಿರುವ ಅತಿ ದೊಡ್ಡ ಮತ್ತು ಕಠಿಣ ಸವಾಲಾಗಿದೆ. ಈ ಸಮತೋಲನವನ್ನು ಹೇಗೆ ನಿಭಾಯಿಸಲಾಗುತ್ತದೆ ಎಂಬುದರ ಮೇಲೆ ರಾಜ್ಯದ ಭವಿಷ್ಯದ ಆರ್ಥಿಕ ಪಥವು ನಿಂತಿದೆ.
ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ಗಳು, ಗ್ಯಾರಂಟಿಗಳ ಮೂಲಕ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿವೆ. ಆದರೆ, ಅದೇ ಸಮಯದಲ್ಲಿ, ರಾಜ್ಯದ ಭವಿಷ್ಯದ ಬೆಳವಣಿಗೆಗೆ ಅಡಿಪಾಯ ಹಾಕಬೇಕಾದ ನೀರಾವರಿ , ಕೈಗಾರಿಕಾ ಸೇರಿದಂತೆ ಇತರೆ ಯೋಜನೆಗಳು ಕೇವಲ ಘೋಷಣೆಗಳಾಗಿಯೇ ಉಳಿದಿವೆ. ಕೃಷಿ ಕ್ಷೇತ್ರದ ಪುನಶ್ಚೇತನದಿಂದ ಹಿಡಿದು ನಗರಗಳ ಆಧುನೀಕರಣದವರೆಗೆ, ಶಿಕ್ಷಣದ ಗುಣಮಟ್ಟ ಸುಧಾರಣೆಯಿಂದ ಆರೋಗ್ಯ ವ್ಯವಸ್ಥೆಯ ಬಲವರ್ಧನೆಯವರೆಗೆ ವಿವಿಧ ಕ್ಷೇತ್ರಗಳಿಗೆ ಗಮನ ನೀಡಿದರೂ ಈ ಎಲ್ಲಾ ಘೋಷಿತ ಯೋಜನೆಗಳ ಯಶಸ್ಸು, ಅವುಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣವನ್ನು ಅವಲಂಬಿಸಿದೆ. ಗ್ಯಾರಂಟಿಗಳ ಬೃಹತ್ ಆರ್ಥಿಕ ಹೊರೆಯನ್ನು ನಿಭಾಯಿಸಿಕೊಂಡು, ಈ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದೇ ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.