‘ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲ್ಲ ಎಂದು ಯಾರೂ ಹೇಳಿಲ್ಲ’: ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಡಿಕೆಶಿ ತೆರೆ

ಸರ್ಕಾರ ಎರಡುವರೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಅಧಿಕಾರ ಹಂಚಿಕೆ ಒಪ್ಪಂದದ ಕುರಿತ ಪ್ರಶ್ನೆಗೆ ಉತ್ತರಿಸಲು ಶಿವಕುಮಾರ್ ನಿರಾಕರಿಸಿದರು. "ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಿಂದ ಹೊರಗಡೆ ಬಂದಿರಲಿಲ್ಲ. ಅನಾರೋಗ್ಯದ ಕಾರಣ ಸ್ನಾನವನ್ನೂ ಮಾಡಿಲ್ಲ," ಎಂದು ಹೇಳುವ ಮೂಲಕ ವಿವಾದಾತ್ಮಕ ಪ್ರಶ್ನೆಯಿಂದ ಜಾರಿಕೊಂಡರು.

Update: 2025-11-21 04:44 GMT

ಡಿ. ಕೆ ಶಿವಕುಮಾರ್‌ 

Click the Play button to listen to article

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಚರ್ಚೆಗಳು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. "ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಯಾರೂ ಹೇಳಿಲ್ಲ," ಎಂದು ಹೇಳುವ ಮೂಲಕ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ನಗರದ ಸದಾಶಿವನಗರದ ನಿವಾಸದ ಬಳಿ ಗುರುವಾರ ರಾತ್ರಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಾಯಕತ್ವದ ವಿಚಾರವಾಗಿ ಎದ್ದಿರುವ ಗೊಂದಲಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಐದು ವರ್ಷದ ಸಿಎಂ ಹೇಳಿಕೆಗೆ ಬೆಂಬಲ

ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ "ಐದೂ ವರ್ಷ ನಾನೇ ಮುಖ್ಯಮಂತ್ರಿ" ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಡಿಕೆಶಿ ಸಹಮತ ವ್ಯಕ್ತಪಡಿಸಿದರು. "ಅವರು ಹಾಗೆ ಹೇಳಿರುವುದು ಬಹಳ ಸಂತೋಷದ ವಿಷಯ. ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ಪಕ್ಷ ಅವರಿಗೆ ನೀಡಿದೆ. ನಾವೆಲ್ಲರೂ ಅವರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ," ಎಂದು ಹೇಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು.

ದೆಹಲಿ ಪ್ರವಾಸದ ಬಗ್ಗೆ ಅಜ್ಞಾನ

ರಾಜ್ಯದ ಹಲವು ಸಚಿವರು, ಶಾಸಕರು ಮತ್ತು ಎಂಎಲ್‌ಸಿಗಳು ಹಠಾತ್ ದೆಹಲಿ ಪ್ರವಾಸ ಕೈಗೊಂಡಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಡಿಸಿಎಂ ಅಚ್ಚರಿ ವ್ಯಕ್ತಪಡಿಸಿದರು. "ಸಚಿವರು ಅಥವಾ ಶಾಸಕರ ದೆಹಲಿ ಭೇಟಿ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಯಾರೂ ನನ್ನ ಬಳಿ ಈ ಬಗ್ಗೆ ಪ್ರಸ್ತಾಪಿಸಿಲ್ಲ ಅಥವಾ ಅನುಮತಿ ಕೇಳಿಲ್ಲ. ಈ ವಿಚಾರವೇ ನನಗೆ ಗೊತ್ತಿಲ್ಲ," ಎಂದು ಹಾರಿಕೆಯ ಉತ್ತರ ನೀಡಿದರು.

ಅಧಿಕಾರ ಹಂಚಿಕೆ ಪ್ರಶ್ನೆಗೆ ಅನಾರೋಗ್ಯದ ನೆಪ

ಸರ್ಕಾರ ಎರಡುವರೆ ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಅಧಿಕಾರ ಹಂಚಿಕೆ ಒಪ್ಪಂದದ ಕುರಿತ ಪ್ರಶ್ನೆಗೆ ಉತ್ತರಿಸಲು ಶಿವಕುಮಾರ್ ನಿರಾಕರಿಸಿದರು. "ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಿಂದ ಹೊರಗಡೆ ಬಂದಿರಲಿಲ್ಲ. ಅನಾರೋಗ್ಯದ ಕಾರಣ ಸ್ನಾನವನ್ನೂ ಮಾಡಿಲ್ಲ," ಎಂದು ಹೇಳುವ ಮೂಲಕ ವಿವಾದಾತ್ಮಕ ಪ್ರಶ್ನೆಯಿಂದ ಜಾರಿಕೊಂಡರು.

ಪರಿಷತ್ ಸಭಾಪತಿ ಸ್ಥಾನದ ಮೇಲೆ ಕಣ್ಣು

ಇದೇ ವೇಳೆ, ವಿಧಾನ ಪರಿಷತ್ ಸದಸ್ಯರು ತಮ್ಮನ್ನು ಭೇಟಿಯಾದ ಉದ್ದೇಶವನ್ನೂ ಡಿಕೆಶಿ ಬಹಿರಂಗಪಡಿಸಿದರು. "ಮೇಲ್ಮನೆಯಲ್ಲಿ ಸಭಾಧ್ಯಕ್ಷ ಹಾಗೂ ಉಪ ಸಭಾಧ್ಯಕ್ಷ ಸ್ಥಾನವನ್ನು ಈ ಬಾರಿ ಕಾಂಗ್ರೆಸ್ ಪಕ್ಷವೇ ಪಡೆಯಬೇಕು ಎಂದು ಸದಸ್ಯರು ಮನವಿ ಮಾಡಿದ್ದಾರೆ. ಸದ್ಯ ಮೇಲ್ಮನೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಬಲ ಸಮನಾಗಿದೆ. ಆದರೆ, ಗಾಯತ್ರಿ ಅವರ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಗೆಲುವು ಸಿಕ್ಕಿರುವುದರಿಂದ, ನ್ಯಾಯಾಲಯದ ಆದೇಶದ ಬಳಿಕ ನಮ್ಮ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಸಭಾಪತಿ ಸ್ಥಾನ ಪಡೆಯುವ ಬಗ್ಗೆ ಚರ್ಚೆ ನಡೆಸಲಾಗಿದೆ," ಎಂದು ತಿಳಿಸಿದರು

Tags:    

Similar News