ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬಗ್ಗೆ ಸ್ಪಷ್ಟೀಕರಣ ಬಯಸುವುದಾಗಿ ಚುನಾವಣೆ ಆಯೋಗದ ಹಿರಿಯ ಅಧಿಕಾರಿಗೆ ಸುಪ್ರೀಂ ಕೋರ್ಟ್ ಬುಧವಾರ ಸಮನ್ಸ್ ನೀಡಿದೆ.
ವೋಟರ್ ವೆರಿಫಿಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮತ್ತು ಇವಿಎಂ ಬಳಸಿ ಚಲಾವಣೆಯಾದ ಮತಗಳ ಸಂಪೂರ್ಣ ಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಗಳ ತೀರ್ಪು ಕಾಯ್ದಿರಿಸಿರುವ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ, ಇವಿಎಂಗಳ ಬಗ್ಗೆ ಸ್ಪಷ್ಟೀಕರಣ ಅಗತ್ಯವಿದೆ ಎಂದು ಹೇಳಿದ್ದಾರೆ.
ಇವಿಎಂ ಗೊಂದಲ: ಇವಿಎಂಗಳಲ್ಲಿ ʻಪದೇ ಪದೇ ಕೇಳಲಾಗುವ ಪ್ರಶ್ನೆಗಳು (ಎಫ್‌ಎಕ್ಯು)ʼ ನಲ್ಲಿ ನೀಡಿದ ಉತ್ತರಗಳಲ್ಲಿ ಕೆಲವು ಗೊಂದಲಗಳಿವೆ ಎಂದು ನ್ಯಾಯಾಧೀಶರು ಹೇಳಿದರು.
ʻನಾವು ತಪ್ಪು ಮಾಡಲು ಬಯಸುವುದಿಲ್ಲ. ಆದರೆ, ನಮಗೆ ದುಪ್ಪಟ್ಟು ಖಾತ್ರಿ ಬೇಕಿದೆ. ಆದ್ದರಿಂದ ನಾವು ಸ್ಪಷ್ಟೀಕರಣ ಪಡೆಯಲು ಯೋಚಿ ಸಿದ್ದೇವೆʼ ಎಂದು ಚುನಾವಣಾ ಆಯೋಗದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರಿಗೆ ತಿಳಿಸಿದೆ.
ಇಸಿ ಅಧಿಕಾರಿಗೆ ಕರೆ: ಮಧ್ಯಾಹ್ನ 2 ಗಂಟೆಗೆ ಹಿರಿಯ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರನ್ನು ಕರೆಯುವಂತೆ ಭಾಟಿ ಅವರಿಗೆ ನ್ಯಾಯಾಲಯ ತಿಳಿಸಿದೆ. ವ್ಯಾಸ್ ಅವರು ಈ ಹಿಂದೆ ಇವಿಎಂಗಳ ಕಾರ್ಯನಿರ್ವಹಣೆ ಕುರಿತು ನ್ಯಾಯಾಲಯಕ್ಕೆ ವಿವರಣೆ ನೀಡಿದ್ದರು. ಇವಿಎಂಗಳ ಸಂಗ್ರಹ, ನಿಯಂತ್ರಣ ಘಟಕದಲ್ಲಿನ ಮೈಕ್ರೋಚಿಪ್ ಮತ್ತು ಇತರ ಅಂಶಗಳ ಬಗ್ಗೆ ನ್ಯಾಯಾಲಯ ಸ್ಪಷ್ಟೀಕರಣವನ್ನು ಕೇಳಿದೆ.
ವಿವಿಪ್ಯಾಟ್ ಎಂದರೇನು?: ವಿವಿಪ್ಯಾಟ್ ಸ್ವತಂತ್ರ ಮತ ಪರಿಶೀಲನೆ ವ್ಯವಸ್ಥೆಯಾಗಿದ್ದು, ಮತದಾರರು ತಮ್ಮ ಮತಗಳನ್ನು ಸರಿಯಾಗಿ ಚಲಾವಣೆಯಾಗಿದೆಯೇ ಎಂದು ನೋಡಲು ಅನುವು ಮಾಡಿಕೊಡುತ್ತದೆ. ವಿವಿಪ್ಯಾಟ್ ಚೀಟಿಗಳೊಂದಿಗೆ ಇವಿಎಂ ಮತಗಳ ಸಂಪೂರ್ಣ ಪರಿಶೀಲನೆ ಕೋರಿ ಸಲ್ಲಿಸಿದ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 18 ರಂದು ಕಾಯ್ದಿರಿಸಿದೆ.