ತೆಲಂಗಾಣದಲ್ಲಿ ಸುರಂಗ ಕುಸಿತ: ಆರು ಮಂದಿ ಸಿಕ್ಕಿಹಾಕಿಕೊಂಡ ಭೀತಿ
ನಿರ್ಮಾಣ ಕಂಪನಿಯ ತಂಡ ಸ್ಥಳಕ್ಕೆ ಹೋಗಿ, ಆಪತ್ತು ಎಷ್ಟು ಪ್ರಮಾಣದಲ್ಲಿ ಸಂಭವಿಸಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದೆ.;
ತೆಲಂಗಾಣದ ನಾಗರಕರ್ಣೂಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀಶೈಲಂ ಎಡದಂಡೆ ಕಾಲುವೆ (Srisailam Left Bank Canal) ಮಾರ್ಗದ ಒಳಗೆ ಒಂದು ಭಾಗ ಕುಸಿದು, ಕನಿಷ್ಠ ಆರು ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಶನಿವಾರ ಘಟನೆ ಸಂಭವಿಸಿದ್ದು, ಹಾದಿಯೊಳಗೆ 12-13 ಕಿಲೋಮೀಟರ್ ದೂರದಲ್ಲಿ ಕುಸಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿರ್ಮಾಣ ಕಂಪನಿಯ ತಂಡ ಸ್ಥಳಕ್ಕೆ ಹೋಗಿ, ಆಪತ್ತು ಎಷ್ಟು ಪ್ರಮಾಣದಲ್ಲಿ ಸಂಭವಿಸಿದೆ ಎಂಬುದನ್ನು ಪರಿಶೀಲನೆ ನಡೆಸುತ್ತಿದೆ.
"ಕೆಲವರು ಸುರಂಗದೊಳಗೆ ಕೆಲಸಕ್ಕೆ ಹೋಗಿದ್ದ ವೇಳೆ ಈ ಘಟನೆ ಸಂಭವಿಸಿದೆ. 12-13 ಕಿಲೋಮೀಟರ್ ಒಳಭಾಗದಲ್ಲಿ ಮೇಲಿನಿಂದ ಮಣ್ಣು ಕುಸಿದಿದೆ," ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರಿಹಾರ ಕ್ರಮಕ್ಕೆ ಸಿಎಂ ಸೂಚನೆ
ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚಿಸಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿರುವ ಸಾಧ್ಯತೆಗಳಿವೆ.
ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಮಾತನಾಡಿ ""ಸರ್ಕಾರದ ಸಲಹೆಗಾರ ಆದಿತ್ಯನಾಥ್ ದಾಸ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಹೆಲಿಕಾಪ್ಟರ್ ಮೂಲಕ ತೆರಳಿದ್ದಾರೆ. ಅಲ್ಲಿಗೆ ಹೋಗಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ,'' ಎಂದು ಹೇಳಿದ್ದಾರೆ.